ಹಿಂಸೆಯನ್ನು ನಿರಾಕರಿಸುವ ರಾಜಕೀಯ
ದಂಗೆಕೋರರಿಂದಲೇ ಆದ ನಷ್ಟಗಳನ್ನು ವಸೂಲಿ ಮಾಡಬೇಕು ಎಂಬ ವಿಶಿಷ್ಟ ತರ್ಕವನ್ನು ಮುಂದುವರಿಸಿ ದಲಿತರ ಮೇಲೆ ದೌರ್ಜನ್ಯಗಳನ್ನು ಎಸಗುವವರ ಮೇಲೆಯೂ ‘ದೌರ್ಜನ್ಯ ತೆರಿಗೆ’ಯನ್ನು ವಸೂಲಿ ಮಾಡಬೇಕಲ್ಲವೇ? ಉತ್ತರ ಪ್ರದೇಶ, ಹರ್ಯಾಣ ಅಥವಾ ಇನ್ಯಾವುದೇ ರಾಜ್ಯಗಳು ಇಂತಹ ಸಾಮಾಜಿಕ ಹಿಂಸಾಚಾರಗಳು ನಡೆಯುವಾಗ ಮೂಕ ಪ್ರೇಕ್ಷಕರಾಗಿ ಕುಮ್ಮಕ್ಕು ಕೊಡುವವರ ಮೇಲೆ ದೌರ್ಜನ್ಯ ತೆರಿಗೆಯನ್ನು ಹಾಕುವುದರ ಬಗ್ಗೆ ಯೋಚಿಸಲಾದರೂ ಸಿದ್ಧವಿದ್ದಾರೆಯೇ?
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರಗಳ ನಂತರ ಕೇಂದ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಆಳುವ ಪಕ್ಷದ ವಕ್ತಾರರು ಹಿಂಸಾಚಾರವನ್ನು ಖಂಡಿಸುವುದರಲ್ಲಿ ಮುಂಚೂಣಿಯಲ್ಲಿರುವುದು ಕುತೂಹಲಕಾರಿಯಾಗಿದೆ. ಹಿಂಸಾಚಾರವನ್ನು ಖಂಡಿಸುವುದು ತನ್ನಿಂದ ತಾನೇ ಸಮಸ್ಯಾತ್ಮಕವೇನೂ ಅಲ್ಲ. ಏಕೆಂದರೆ ಅದರ ಉದ್ದೇಶ ಶಾಂತಿಯನ್ನು ಸ್ಥಾಪಿಸುವುದು ಅಥವಾ ಅಹಿಂಸೆಯ ಸಾಧ್ಯತೆಗಳನ್ನು ತಡೆಗಟ್ಟುವ ಶಕ್ತಿಗಳನ್ನು ನಿರ್ಬಂಧಿಸುವಂತಹ ಸರ್ವರ ಒಳಿತಿನ ಉದ್ದೇಶವನ್ನು ಹೊಂದಿರುವ ಸಾಧ್ಯತೆಯೂ ಇರುತ್ತದೆ. ಉದಾಹರಣೆಗೆ ಮಹಿಳೆಯರು ಮತ್ತು ದಲಿತರ ಮೇಲಿನ ಹಿಂಸಾಚಾರಗಳನ್ನು ಖಂಡಿಸುವುದು ಮಾನವ ಜೀವಗಳಿಗೆ ಹಾಗೂ ಭೌತಿಕ ಆಸ್ತಿಗಳಿಗೆ ಹಾನಿಕಾರಕ ಪರಿಣಾಮಗಳನ್ನುಂಟು ಮಾಡಬಲ್ಲ ಸಂಭಾವ್ಯತೆಗಳ ಬಗ್ಗೆ ಜನರಲ್ಲಿ ಸಾಮಾಜಿಕ ಎಚ್ಚರವನ್ನು ಮೂಡಿಸುವ ಸಾಧನವಾಗಬಹುದು. ಹೀಗಾಗಿ ಹಿಂಸಾಚಾರಗಳ ಖಂಡನೆಯಂತಹ ಅಭ್ಯಾಸವು ಹಿಂಸೆಯ ಬಗ್ಗೆ ಒಂದು ನಿರಂತರವಾದ ವಿಮರ್ಶೆಯನ್ನು ಹುಟ್ಟುಹಾಕಬಹುದಾದ ಸಾಮಾಜಿಕ ಸಂದರ್ಭವನ್ನು ಸೃಷ್ಟಿಸಬಲ್ಲ ನೈತಿಕ ಶಕ್ತಿಯನ್ನು ಒಳಗೊಂಡಿರುತ್ತದೆ. ಹೀಗಾಗಿ ಎಲ್ಲಾ ಬಗೆಯ ಹಿಂಸೆಗಳನ್ನು ನಿರಂತರವಾಗಿ ಖಂಡಿಸುವುದು ಹಿಂಸೆಯ ಮೇಲಿನ ವಿಮರ್ಶೆಯನ್ನು ಪರಿಣಾಮಕಾರಿಯಾಗಿಸುತ್ತದೆ. ಆದರೆ ಸಾರ್ವಜನಿಕ ಒಳಿತಿನ ಹೆಸರಿನಲ್ಲಿ ಮಾಡುವ ಹಿಂಸೆಯ ಖಂಡನೆಗಳು ಸಮಸ್ಯೆಗಳಿಂದ ಹೊರತಾಗೇನೂ ಇರುವುದಿಲ್ಲ.
ಉದಾಹರಣೆಗೆ ದಲಿತರ ಮತ್ತು ಮಹಿಳೆಯರ ಮೇಲಿನ ಹಿಂಸಾಚಾರಗಳ ಹಾಗೂ ಲಿಂಚಿಂಗ್ ಹಿಂಸಾಚಾರಗಳ ಖಂಡನೆಯು ಪ್ರಮಾಣ ಮತ್ತು ತೀವ್ರತೆಗಳಲ್ಲಿ ಬೇರೆಬೇರೆ ಅಭಿವ್ಯಕ್ತಿಯನ್ನು ಪಡೆದುಕೊಳ್ಳುತ್ತದೆ. ಉದಾಹರಣೆಗೆ ಭಾರತೀಯ ಸಮಾಜದ ಸಂವೇದನಾಶೀಲರಾದ ಮತ್ತು ನೈತಿಕವಾಗಿ ಪ್ರೇರಿತರಾದ ಸಾರ್ವಜನಿಕರು ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ತೀವ್ರವಾಗಿ ಖಂಡಿಸುತ್ತಾರೆ. ಆದರೆ ಲಿಂಚಿಂಗ್ ಹಿಂಸಾಚಾರಗಳ ಖಂಡನೆಯು ನೈತಿಕ ಸಮುದಾಯದ ಕೆಲವೇ ಸದಸ್ಯರಿಂದ ಮಾತ್ರ ಅಭಿವ್ಯಕ್ತವಾಗುತ್ತದೆ. ಭಾರತದಲ್ಲಿ ಹಿಂಸಾಚಾರಗಳ ಖಂಡನೆಯ ಪ್ರಮಾಣವು ಮಹಿಳೆಯರ ವಿಷಯದಲ್ಲಿ ಅತಿ ಹೆಚ್ಚು ವ್ಯಕ್ತವಾದರೆ, ಜಾತಿ ದೌರ್ಜನ್ಯಗಳು ಮತ್ತು ಲಿಂಚಿಂಗ್ ದೌರ್ಜನ್ಯಗಳ ವಿಷಯಕ್ಕೆ ಬಂದಂತೆ ಕಡಿಮೆಯಾಗುತ್ತಾ ಹೋಗುತ್ತದೆ. ಉತ್ತರ ಪ್ರದೇಶ ಹಾಗೂ ಕೇಂದ್ರದ ಆಳುವ ಪಕ್ಷದ ಬೆಂಬಲಿಗರು ಮಾಡುತ್ತಿರುವ ಹಿಂಸಾಚಾರದ ಖಂಡನೆಗಳಲ್ಲಿ ಒಂದು ಸಾರ್ವಜನಿಕ ಒಳಿತಿದೆಯೆಂದುಕೊಳ್ಳಬಹುದಾದರೂ ಅದಕ್ಕೆ ಬೇರೆಯದೇ ಆದ ಮತ್ತೊಂದು ಅರ್ಥವೂ ಇರಬಹುದು.
ಈ ನಿರ್ದಿಷ್ಟ ಸಂದರ್ಭದಲ್ಲಿ ಹಿಂಸಾಚಾರಗಳ ಖಂಡನೆಯ ಹಿಂದೆ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದವರ ಮೇಲೆ ಆಕ್ರಮಣಕಾರಿಯಾಗಿ ಮುಗಿಬಿದ್ದು ಪ್ರತೀಕಾರ ತೆಗೆದುಕೊಳ್ಳಬೇಕೆಂಬ ಮನೋಭಾವವೂ ಇದ್ದಿರಬಹುದು; ಶಾಂತಿ ಭಂಗ ಮಾಡಿದವರು ಯಾರು ಎಂದು ಪತ್ತೆ ಹಚ್ಚಲುಬೇಕಾದ ತಂತ್ರಜ್ಞಾನಗಳು ಲಭ್ಯವಿದ್ದರೂ ಈ ಸನ್ನಿವೇಶದಲ್ಲಿ ಮಾತ್ರ ಅದು ಪತ್ತೆ ಆಗುವುದಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಸಾರ್ವಜನಿಕ ಆಸ್ತಿಪಾಸ್ತಿಗೆ ಆಗಿರುವ ನಷ್ಟವನ್ನು ದಂಗೆಕೋರರಿಂದಲೇ ವಸೂಲಿ ಮಾಡುವ ಯೋಚನೆಯಲ್ಲಿದ್ದಾರೆ. ಈ ಯೋಚನೆಯೇ ಅಸ್ವಾಭಾವಿಕವಾಗಿದೆ. ಈ ಪ್ರಸ್ತಾಪವು ಒಂದು ಮುಖ್ಯವಾದ ಕಾರಣಕ್ಕಾಗಿ ಅತ್ಯಂತ ಸಮಸ್ಯಾತ್ಮಕವಾಗಿದೆ. ಅದು ಆಕ್ರಮಣಕಾರನ ಚರ್ಯೆಯನ್ನು ಐತಿಹಾಸಿಕವಾಗಿ ಅರ್ಥೈಸುವ ನೈತಿಕತೆಯನ್ನು ಹಿಂಸಾಚಾರವನ್ನು ಖಂಡಿಸುವ ಈ ‘ನೈತಿಕ ಕ್ರಿಯೆ’ ಕಳೆದುಕೊಂಡಿದೆ. ಅಂದರೆ ಪ್ರಭುತ್ವವು ಒಂದು ಬಗೆಯ ಹಿಂಸಾಚಾರದ ಕಾರಣಕರ್ತರನ್ನು ಶಿಕ್ಷಿಸಲು ತೋರುವ ಅತ್ಯುತ್ಸಾಹವನ್ನು ದಲಿತರ ಮೇಲೆ ಸಾಮಾಜಿಕ ಬಹಿಷ್ಕಾರ ಘೋಷಿಸುವ ಅಥವಾ ಲಿಂಚಿಂಗ್‌ಕೋರರ ಬಗ್ಗೆ ತೋರುವುದಿಲ್ಲ.
ಹೀಗಾಗಿ ಪ್ರಭುತ್ವದ ಅಧಿಕಾರಿಗಳ ಬಳಿ ಇರುವ ಕಾನೂನು ಮುರಿಯುವವರು ಯಾರು ಎಂಬ ವ್ಯಾಖ್ಯಾನ ತುಂಬಾ ಸಂಕುಚಿತವಾಗಿದೆ. ಉದಾಹರಣೆಗೆ ಹರ್ಯಾಣ ರಾಜ್ಯದ ಒಂದು ಹಳ್ಳಿಯಲ್ಲಿ 500 ದಲಿತ ಕುಟುಂಬಗಳ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿರುವವರ ಮೇಲೆ ಕ್ರಮತೆಗೆದುಕೊಳ್ಳುವಲ್ಲೂ ಆ ಸರಕಾರವು ಇದೇ ರೀತಿಯ ತುರ್ತನ್ನು ತೋರಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ದಂಗೆಕೋರರಿಂದಲೇ ಆದ ನಷ್ಟಗಳನ್ನು ವಸೂಲಿ ಮಾಡಬೇಕು ಎಂಬ ವಿಶಿಷ್ಟ ತರ್ಕವನ್ನು ಮುಂದುವರಿಸಿ ದಲಿತರ ಮೇಲೆ ದೌರ್ಜನ್ಯಗಳನ್ನು ಎಸಗುವವರ ಮೇಲೆಯೂ ‘ದೌರ್ಜನ್ಯ ತೆರಿಗೆ’ಯನ್ನು ವಸೂಲಿಮಾಡಬೇಕಲ್ಲವೇ? ಉತ್ತರ ಪ್ರದೇಶ, ಹರ್ಯಾಣ ಅಥವಾ ಇನ್ಯಾವುದೇ ರಾಜ್ಯಗಳು ಇಂತಹ ಸಾಮಾಜಿಕ ಹಿಂಸಾಚಾರಗಳು ನಡೆಯುವಾಗ ಮೂಕ ಪ್ರೇಕ್ಷಕರಾಗಿ ಕುಮ್ಮಕ್ಕು ಕೊಡುವವರ ಮೇಲೆ ದೌರ್ಜನ್ಯ ತೆರಿಗೆಯನ್ನು ಹಾಕುವುದರ ಬಗ್ಗೆ ಯೋಚಿಸಲಾದರೂ ಸಿದ್ಧವಿದ್ದಾರೆಯೇ? ಈ ರಾಜ್ಯಗಳು ಅಲ್ಪಸಂಖ್ಯಾತ ಸಮುದಾಯದ ಮೇಲೆ ಲಿಂಚಿಂಗ್ ನಡೆಯುವುದನ್ನು ನೋಡುತ್ತಾ ಸಮರ್ಥಿಸುವ ಅಥವಾ ದಲಿತರ ಮೇಲೆ ದೌರ್ಜನ್ಯ ನಡೆಸುವವರ ಮೇಲೆ ದೌರ್ಜನ್ಯ ತೆರಿಗೆ ಹಾಕಬಹುದೇ? ಸಾಮಾಜಿಕ ಬಹಿಷ್ಕಾರದಂತಹ ಕ್ರಮಗಳಲ್ಲಿ ಅಂತರ್ಗತವಾಗಿರುವ ‘ನಾಗರಿಕತಾ ಹಿಂಸೆ’ಯನ್ನು ಗುರುತಿಸಿ, ಅದರಿಂದ ಪರಿಹಾರ ಪಡೆಯಲು ಕಳೆದೆರಡು ವರ್ಷಗಳಿಂದ ಹೋರಾಟ ಮಾಡುತ್ತಿರುವ ಆ ಕುಟುಂಬಗಳಿಗೆ ಹರ್ಯಾಣ ಸರಕಾರ ಪರಿಹಾರ ಒದಗಿಸಬಹುದೇ? ಆ ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾದ ಕುಟುಂಬಗಳು ಮುಂದಿಡುತ್ತಿರುವ ನೋವಿನ ಕಥನಗಳ ಪ್ರಕಾರ ಅವರಿಗೆ ಅವರ ದೈನಂದಿನ ಅಗತ್ಯಗಳನ್ನು ಪಡೆದುಕೊಳ್ಳುವುದನ್ನೂ ನಿರಾಕರಿಸಲಾಗಿದೆಯಲ್ಲದೆ ಸಹಜ ಮತ್ತು ಸ್ವಾಭಾವಿಕವಾದ ಮಾನವೀಯ ಹಾಗೂ ಸಾಂಸ್ಕೃತಿಕ ಸಂವಹನದ ಹಕ್ಕುಗಳನ್ನೂ ನಿರಾಕರಿಸಲಾಗಿದೆ.
ದಲಿತರ ಬಳಿ ಇರುವ ಕಸಿಯಲಾಗದ ಏಕೈಕ ಅಮೂಲ್ಯವಾದ ಆಸ್ತಿಯೆಂದರೆ ಅವರ ಸ್ವಾಭಿಮಾನ-ಘನತೆ. ಈಗ ಅದನ್ನೂ ಕಸಿಯಲಾಗಿದೆ. ಹೀಗಾಗಿ ಅಹಿಂಸೆಯ ಮೇಲೆ ದಾಳಿ ಮಾಡುವವರ ಬಗ್ಗೆ ಖಂಡನೆಗಳನ್ನು ಮಾಡುವಾಗ ಸಾರ್ವತ್ರಿಕವಲ್ಲದ ವ್ಯಕ್ತಿನಿಷ್ಟ ಆಯ್ಕೆಯನ್ನು ಪ್ರದರ್ಶಿಸುವುದು ಅಹಿಂಸೆಯ ಬಗೆಗಿನ ಬದ್ಧತೆಯನ್ನೇ ಪ್ರಶ್ನಿಸುತ್ತದೆ. ಬುದ್ಧನ ತತ್ವವಾದ ಸಮ್ಯಕ್ ದೃಷ್ಟಿ ಅರ್ಥಾತ್ ಸಮಾನ ದೃಷ್ಟಿಯಿಂದ ಹಿಂಸೆಯ ಸಮಸ್ಯೆಯ ಬಗ್ಗೆ ಒಳಒಡಕಿಲ್ಲದ ದೃಷ್ಟಿಯಿಂದ ನೋಡಿದಲ್ಲಿ, ಆಳುವ ಪಕ್ಷದ ಅಹಿಂಸೆಯ ಬಗೆಗಿನ ಮಾತುಗಳನ್ನು ಮೇಲ್ನೋಟಕ್ಕೆ ಒಪ್ಪಿಕೊಳ್ಳಲಾಗದು. ಬದಲಿಗೆ ಅದು ಗಂಭೀರವಾದ ಪರಿಶೀಲನೆಯನ್ನು ಕೇಳುತ್ತದೆ. ಅಂತಹ ತತ್ವವು ಅದರ ಆಚರಣೆಗೆ ಹೊಸಬರಾಗಿರುವವರು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದದ ಪರಿಸ್ಥಿತಿಯನ್ನು ನಿರ್ಮಿಸಲು ಬೇಕಾದ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವುದನ್ನು ನಿರೀಕ್ಷಿಸುತ್ತದೆ.
ಕೃಪೆ: Economic and Political Weekly