ಸತತ ಕಷ್ಟ ಪಡುವುದರಿಂದ ಯಶ ಪ್ರಾಪ್ತಿಯಾಗುತ್ತದೆ

Update: 2020-01-16 18:24 GMT

ಭಾಗ-1

‘ಪುಣೆಯ ಅಸ್ಪಶ್ಯ ವಿದ್ಯಾರ್ಥಿಗಳ 11ನೇ ಸಮ್ಮೇಳನವನ್ನು ರವಿವಾರ 11 ಸೆಪ್ಟಂಬರ್ 1938ರಂದು, ಪುಣೆಯ ಡಿ.ಸಿ. ಮಿಶನ್ ಹಾಲ್‌ನಲ್ಲಿ ಏರ್ಪಡಿಸಲಾಯಿತು. ಸಮ್ಮೇಳನದ ಅಧ್ಯಕ್ಷ ಮತ್ತು ಮುಖ್ಯ ಭಾಷಣಕಾರರಾಗಿ ಡಾ.ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಲಾಗಿತ್ತು.
ಸಮ್ಮೇಳನಕ್ಕಿಂತ ಹಿಂದಿನ ಶನಿವಾರ ಮತ್ತು ರವಿವಾರ ವಿದ್ಯಾರ್ಥಿಗಳ ಕುಸ್ತಿ ಸ್ಪರ್ಧೆ, ಕ್ರೀಡೆ, ನಾಟಕ ಪ್ರಯೋಗ, ಭಾಷಣ ಕಲೆ ಬಳಿಕ ಭೋಜನದಂತಹ ಹಲವು ಕಾರ್ಯಕ್ರಮಗಳು ಉತ್ಸಾಹದಿಂದ ನೆರವೇರಿತು. ಸಮ್ಮೇಳನದ ಸೆಕ್ರೆಟರಿಗಳಾದ ಟಿ.ಬಿ.ಭೋಸಲೆ ಮತ್ತು ಅವರ ಸಹಕಾರಿಗಳು ತುಂಬ ಶ್ರಮವಹಿಸಿದ್ದರು. ಸಮ್ಮೇಳನದ ಚೇರ್‌ಮನ್‌ರೂ ಶಾಸಕರೂ ಆದ ಶ್ರೀ ರಾಜಾರಾಮ ಭೋಳೆ ಅವರು ಸಂಘಟಕರಿಗೆ ತುಂಬು ಬೆಂಬಲ, ಉತ್ತೇಜನ ನೀಡಿದ್ದರಿಂದ ಸಮ್ಮೇಳನದ ಕಾರ್ಯದರ್ಶಿಗಳ ಜೊತೆಗೆ ಕಾಲೇಜಿನ ಮೊದಲ ವಿದ್ಯಾರ್ಥಿನಿಯಾದ ಕು.ಘಟಕಾಂಬಳೆ ಎಂಬವರು ತುಂಬಾ ಸಹಕಾರ ನೀಡಿದರು.

ಸಮ್ಮೇಳನ ಮುಖ್ಯಕಾರ್ಯದರ್ಶಿಗಳಾದ ಮಿ.ಭೋಸಲೆಯವರು 10 ಸಮ್ಮೇಳನಗಳ ಮಹತ್ವವನ್ನು ವಿವರಿಸಿದ್ದರು. ಈ ಸಮ್ಮೇಳನಕ್ಕೆ ಭಾವೂರಾವ ಗಾಯಕವಾಡ, ಡಿ.ಜಿ.ಜಾಧವ, ಕೆ.ಎಸ್.ಸಾವಂತ, ರೋಹಮ್, ವರಾಳೆ, ಕಾಳೆ, ಬ್ಯಾಕ್‌ವರ್ಡ್‌ಕ್ಲಾಸ್ ಆಫೀಸರ್ ದೇವಧರ, ಭಾ.ರಾ. ಕದ್ರೆಕರ, ಗೀತಾಬಾಯಿ ಗಾಯಕವಾಡ, ಬಾಬೂರಾವ ಭಾತನಕರ, ಗಂಗಾಧರ ಘಾಟಗೆ, ಸುಪರ್‌ವೈಸರ್ ಢಿಖಳೆ, ಕೆ.ಆರ್. ಮಧಾಳೆ ಮುಂತಾದವರು ಪ್ರಮುಖವಾಗಿ ಹಾಜರಿದ್ದರು.
ಈ 11ನೇ ಅಸ್ಪಶ್ಯ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಡಾ.ಅಂಬೇಡ್ಕರ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದ್ದು ಹೀಗೆ:

‘‘ಇಂದಿನ ಸಮ್ಮೇಳನವು ವಿದ್ಯಾರ್ಥಿಗಳದ್ದಾಗಿದ್ದರೂ, ಇಲ್ಲಿ ಆಗಮಿಸಿರುವ ಸಭಿಕರ ಸಮೂಹವನ್ನು ನೋಡಿದಾಗ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿಯೇತರರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಾರೆ. ಕಿಚಡಿಯಲ್ಲಿ ಅಕ್ಕಿಗಿಂತ ಬೇಳೆಯೇ ಹೆಚ್ಚಾಗಿರುವಂತೆ ಈ ಸಮ್ಮೇಳನದ ಸ್ಥಿತಿಯಾಗಿದೆ. ಇದು ವಿದ್ಯಾರ್ಥಿಗಳ ಸಮ್ಮೇಳನವಾಗಿರುವುದರಿಂದ ಅವರಿಗೆ ಒಂದೆರಡು ಉಪದೇಶದ ಮಾತು ಹೇಳುವುದು ನನ್ನ ಕರ್ತವ್ಯ. ಏಕೆಂದರೆ ನಾನಿಲ್ಲಿಗೆ ಬಂದಿರುವುದು ವಿದ್ಯಾರ್ಥಿಗಳಿಗಾಗಿ. ಇಂದಿನ ಸಮ್ಮೇಳನದ ಅಧ್ಯಕ್ಷ ಪದವನ್ನು ಸ್ವೀಕರಿಸುವಾಗ ನಾನು ಕಾರ್ಯ ಮಂಡಳಿಯವರಿಗೆ ಕೆಲವು ಷರತ್ತು ಹಾಕಿದೆ. ಅದನ್ನೆಲ್ಲ ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದರಿಂದ ಇಂದಿನ ಸಮ್ಮೇಳನದ ವೈಭವ ಮತ್ತು ಶೋಭೆ ಸ್ವಲ್ಪ ಕಡಿಮೆಯಾಗಿರಬೇಕು. ನನ್ನ ಭಾಷಣ ವಿದ್ಯಾರ್ಥಿಗಳಿಗಾಗಿಯೇ ಇರುವುದರಿಂದ ಉಳಿದವರಿಗದು ನೀರಸವೆನಿಸುವ ಸಾಧ್ಯತೆಯಿದೆ. ಆದಾಗ್ಯೂ ವಿದ್ಯಾರ್ಥಿಗಳಿಗದು ಇಷ್ಟವಾಗಬಹುದು. ವಿದ್ಯಾರ್ಥಿಗಳು ಈ ಅವಕಾಶ ನೀಡಿದ್ದರಿಂದ ಅವರಿಗೆ ಧನ್ಯವಾದ ಹೇಳುವುದೂ ನನ್ನ ಕರ್ತವ್ಯವೆಂದು ಭಾವಿಸುತ್ತೇನೆ. ನನ್ನ ಆಯುಷ್ಯವು ಸದ್ಯ ಹಳ್ಳಿಗಾಡಿನ ಅಶಿಕ್ಷಿತ, ಅಜ್ಞಾನಿಗಳಾದ, ದೌರ್ಜನ್ಯದಿಂದ ತೃಪ್ತರಾದ ಜನರ ಪ್ರಾರ್ಥನೆಯನ್ನು ಆಲಿಸಿ ಅದರ ನಿವಾರಣೆಗಾಗಿ ಪ್ರಯತ್ನ ಮಾಡುವುದರಲ್ಲಿ ಮತ್ತು ಅವರ ಚಿಂತೆಯಲ್ಲಿ ಕಳೆಯುತ್ತಿದೆ. ಅದರಿಂದ ವಿದ್ಯಾರ್ಥಿಗಳ ಕಡೆಗೆ ನಿರ್ಲಕ್ಷಿಸುತ್ತಿದ್ದೇನೆ ಎಂಬ ಭಾವನೆ ಬೆಳೆದಿದ್ದು, ಅಂತಹ ಮಾತೂ ಕೇಳಿಬರುತ್ತಿದೆ. ಆದರೆ ನಾನು ಮೊದಲಿಗೆ ಹೇಳ ಬಯಸುವ ಮಾತೆಂದರೆ, ಒಬ್ಬನೇ ವ್ಯಕ್ತಿಯು ಜೀವನದ ವಿವಿಧ ಬಗೆಯ ಕಾರ್ಯವನ್ನು ಉತ್ತಮವಾಗಿ ಮಾಡಿ ಮುಗಿಸುವುದು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಒಬ್ಬ ಲೇಖಕನ ಸುಭಾಷಿತ ನೆನಪಾಗುತ್ತಿದೆ. If you want success you must be narrow minded.

ಈ ಮಾತಿನಲ್ಲಿ ವಿಶಾಲ ಅರ್ಥ ಹುದುಗಿದೆ. ಏಕೆಂದರೆ ಒಬ್ಬ ವ್ಯಕ್ತಿಯು ಎಲ್ಲ ಕೆಲಸ ಮಾಡಬೇಕೆಂದುಕೊಂಡರೂ ಹಾಗೆ ಮಾಡುವುದು ಅಸಾಧ್ಯ. ಸರಿಯಾಗಿ ಒಂದೇ ಮಾಡದೆ ಹೊರತು ಚಿಂದಿ ಎಂಬಂತೆ, ಯಾವುದೇ ಒಂದು ಕಾರ್ಯವನ್ನು ಸರಿಯಾಗಿ ಮಾಡದೆ, ಹಲವು ಕೆಲಸಗಳಿಗೆ ಕೈ ಹಾಕುವುದು ಯೋಗ್ಯವಲ್ಲ. ನಮ್ಮ ಸಮಾಜದ ಬಗ್ಗೆ ಯೋಚಿಸಿದರೆ, ನಮಗೆ ಉಪಲಬ್ದವಿರುವ ಸಾಧನ ಸಾಮಗ್ರಿಯು ತೀರ ಅಲ್ಪ. ಆದ್ದರಿಂದ ಮನುಷ್ಯನು ಚಿಕ್ಕಪುಟ್ಟ ಕಾರ್ಯವನ್ನು ಕೈಗೆತ್ತಿಕೊಂಡು ಮುಗಿಸುವುದು ಉತ್ತಮ. ಆದ್ದರಿಂದಲೇ ದೀನದಲಿತ, ಸ್ಪಶ್ಯ ಸಮಾಜದ ದೌರ್ಜನ್ಯದಿಂದ ರೋಸಿಹೋದ ಅಜ್ಞಾನಿ ಸಮಾಜದ ಕಾರ್ಯದ ಹೊರೆಯನ್ನು ನಾನು ಹೊತ್ತಿದ್ದೇನೆ. ಆ ಕಾರಣಕ್ಕಾಗಿ ವಿದ್ಯಾರ್ಥಿಗಳ ಕಡೆಗೆ ಸಾಕಷ್ಟು ಗಮನ ಕೊಡುವುದು ಸಾಧ್ಯವಾಗಲಿಲ್ಲ. ಅದರರ್ಥ ನಾನು ವಿದ್ಯಾರ್ಥಿಗಳ ವಿರುದ್ಧ ಇದ್ದೇನೆ ಎಂದಾಗುವುದಿಲ್ಲ. ಅದರ ಬದಲು ನಾನು ರಾಜಕಾರಣ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡರೂ, ಆಜನ್ಮ ವಿದ್ಯಾರ್ಥಿಯಾಗಿಯೇ ಇರುತ್ತೇನೆ. ಹೀಗಿರುವಾಗ ವಿದ್ಯಾರ್ಥಿಯು ವಿದ್ಯಾರ್ಥಿಗಳ ವಿರುದ್ಧ ಹೋಗುವುದು ಹೇಗೆ ಸಾಧ್ಯ? ನಾನು ಈವರೆಗೆ ಖರೀದಿಸಿದ ಪುಸ್ತಕದ ಸಾವಿರ ರೂಪಾಯಿ ಬಾಕಿ ಸಾಲ ತೀರಿಸಬೇಕಾಗಿದೆ. ಆದರೂ ನನಗೆ ಸಾಕಷ್ಟು ಗೌರವವಿದೆ. ಮುಂಬೈಯಲ್ಲಿಯ ಯಾವುದೇ ಪುಸ್ತಕದ ಅಂಗಡಿಯಿಂದ ಪುಸ್ತಕವನ್ನು ಸಾಲವಾಗಿ ತರಬಲ್ಲೆ, ಆದರೆ ನನ್ನ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ. ಏಕೆಂದರೆ ವ್ಯಾಸಂಗವೇ ನನ್ನ ಅತೀ ದೊಡ್ಡ ಹವ್ಯಾಸ. ಹೀಗಿರುವಾಗ ನಾನು ವಿದ್ಯಾರ್ಥಿಗಳ ವಿರುದ್ಧ ಹೇಗೆ ಹೋಗಬಲ್ಲೆ?

ವಿದ್ಯಾರ್ಜನೆಯ ಬಳಿಕ ವಿದ್ಯಾರ್ಥಿಗಳು ಗೃಹಸ್ಥಾಶ್ರಮ ಪ್ರವೇಶಿಸಿದ ನಂತರ ಹೇಗೆ ವರ್ತಿಸಬೇಕೆಂದು ಉಪದೇಶ ಮಾಡಲು ನಾನು ಅಪಾತ್ರನಾಗಿದ್ದೇನೆ. ಅವರಿಗೆ ಎಂತಹ ಉಪದೇಶ ಮಾಡಲಿ ಎಂಬ ವಿಷಯದಲ್ಲಿ ನಾನು ಗಲಿಬಿಲಿಗೊಂಡಿದ್ದೇನೆ. ಏಕೆಂದರೆ ನನ್ನ ಗೃಹಸ್ಥಾಶ್ರಮ ವ್ಯರ್ಥವಾಗಿ ಕಳೆದಿದೆ. ಆದರೂ ಅವರು ವಿದ್ಯಾರ್ಥಿದಿಶೆಯಲ್ಲಿ ಹೇಗೆ ವರ್ತಿಸಬೇಕೆಂಬ ಬಗ್ಗೆ ಸ್ವಾನುಭವದಿಂದ ಏನಾದರೂ ಹೇಳಬಲ್ಲೆ. ಯಾವ ಸಮಾಜದವರಿಗೆ ಸಾವಿರಾರು ವರ್ಷಗಳಿಂದ ಯಾವ ಬಗೆಯ ಶಿಕ್ಷಣವೂ ಇರಲಿಲ್ಲವೋ ಅಂತಹ ಸಮಾಜದ ಹಲವರು ಬಿ.ಎ., ಎಂ.ಎ., ಮುಂತಾದ ವಿಶ್ವವಿದ್ಯಾನಿಲಯದ ಪದವಿಯನ್ನು ಪಡೆದು ಹೊರಬರುವುದನ್ನು ಕಾಣುತ್ತಿದ್ದೇವೆ. ಮೊದಲು ಬಿ.ಎ. ಪದವೀಧರರು ಔಷಧಿಗೂ ಸಿಗುತ್ತಿರಲಿಲ್ಲ. ಹಿಂದೆ ಕೃಷ್ಣಾ ಜಿಲ್ಲೆಯಲ್ಲಿ ನಮ್ಮ ಸಮಾಜದ ಒಬ್ಬ ಅಸಾಮಿ ಬಿ.ಎ. ಆಗಿದ್ದ. ಅವನು ಅದೆಷ್ಟು ಪ್ರಸಿದ್ಧನಾಗಿದ್ದನೆಂದರೆ ಬರೇ ಹೆಸರು ಬರೆದು, ಅದರ ಮುಂದೆ ಬಿ.ಎ. ಎಂದು ಬರೆದರೂ ಸಾಕಿತ್ತು. ಆ ಪತ್ರವನ್ನು ಅಂಚೆಯವನು ಅವನಿಗೇ ತಂದು ಕೊಡುತ್ತಿದ್ದ.

ಇವತ್ತಂತೂ ನಮ್ಮ ಸಮಾಜದಲ್ಲಿ ಹಲವರು ಬಿ.ಎ. ಪಡೆದವರಿದ್ದಾರೆ. ಹಾಸ್ಯಕ್ಕೆ ಹೇಳಬೇಕೆಂದರೆ, ಇಲ್ಲಿ ನೆರೆದ ಸಭಿಕರಲ್ಲಿ ಕಲ್ಲು ಎಸೆದರೂ, ಅದು ಬಿ.ಎ. ಆದವನಿಗೆ ತಾಗುತ್ತದೆ. ಬಿ.ಎ. ಆದವರು ಹಲವರಿದ್ದರೂ, ಅವರು ಗಮನದಲ್ಲಿರಿಸಬೇಕಾದ ಒಂದು ಸಂಗತಿ ಎಂದರೆ, ನಾವು ಎದುರಿಸಬೇಕಾದ ಜನರು ತುಂಬ ಮುಂದುವರಿದವರು. ಇಂದಿನ ಜೀವನದ ಸಂಘರ್ಷದಲ್ಲಿ ಮುಂದುವರಿದ ಜನರಿಗಿಂತ ನಾವು ನೀರಸವೆನಿಸಿದರೆ ನಾವು ಬಂಡೆಕಲ್ಲಾಗಿ ಉಳಿದು ಬಿಡುತ್ತೇವೆ. ಏಕೆಂದರೆ ಈಗ ಸತ್ತಾಧಾರಿಗಳೆಲ್ಲ ಮುಂದುವರಿದ ವರ್ಗದವರೇ ಆಗಿದ್ದಾರೆ. ನೌಕರಿ ಬೇಡಲು ಯಾವ ಆಫೀಸಿಗೆ ಹೋದರೂ ಅಲ್ಲಿದ್ದ ವರಿಷ್ಠ ಅಧಿಕಾರಿಯೂ ತನ್ನ ಬಳಗದ ಜನರನ್ನೇ ಸೇರಿಸಿಕೊಳ್ಳುತ್ತಾರೆನ್ನುವುದು ಬಹಿರಂಗ ಸತ್ಯ. ಕೇವಲ ಬಿ.ಎ. ಮುಗಿಸಿದ ಮಾತ್ರಕ್ಕೆ ನಿಮಗೆ ಉದ್ಯೋಗ ಸಿಗಲಾರದು. ಮುಂದುವರಿದ ಜಾತಿಯವರೊಂದಿಗೆ ಸ್ಪರ್ಧಿಸಿ, ಅಲ್ಲಿ ಬುದ್ಧಿಯ ಪ್ರಭಾವ ಬೀರದ ಹೊರತು ಶಿಕ್ಷಣದಿಂದ ಏನೂ ಉಪಯೋಗವಿಲ್ಲ. ಒಂದು ವೇಳೆ ಮುಂದುವರಿದ ಜಾತಿಯವರು ನಮ್ಮನ್ನು ಹತ್ತಿಕ್ಕದಿದ್ದರೂ, ಬದಲಿಗೆ ನೂರಾರು ವರ್ಷಗಳಿಂದ ನಮ್ಮನ್ನು ನಮ್ಮ ಅಪ್ಪ ಅಜ್ಜಂದಿರನ್ನು ಹೇಗೆ ಹತ್ತಿಕ್ಕಿದರೋ, ಹಾಗೇ ನಿಮ್ಮನ್ನು ತುಳಿಯದೆ ಇರಲಾರರು. ಆದ್ದರಿಂದ ನೀವೀಗ ಎಂತಹ ಶಿಕ್ಷಣ ಪಡೆಯಿರಿ ಎಂದರೆ ಅದರಿಂದ ನಮ್ಮ ಎಲ್ಲ ವಿದ್ಯಾರ್ಥಿಗಳು ಮುಂದೆ ಬರುವಂತಾಗಬೇಕು. ಅಜ್ಞಾನಿ ತಾಯಿ ತಂದೆಗಳ ಉದರದಲ್ಲಿ ಜನಿಸಿ ಬಿ.ಎ. ಆದ ಮಾತ್ರಕ್ಕೆ ಅಹಂಕಾರ ಪಡಬೇಡಿ. ನಿಮ್ಮ ಕರ್ತವ್ಯದ ಅರಿವನ್ನಿರಿಸಿಕೊಂಡೇ ಬಹಳ ಅಭ್ಯಾಸಮಾಡಿ, ನಾನು ಮೊದಲಿಗೆ ಬ್ಯಾರಿಸ್ಟರ್ ಆಗಿ ಬಂದಾಗ ಮಹಾರ ಬ್ಯಾರಿಸ್ಟರ್ ಎಂದೇ ನನ್ನನ್ನು ಮುಂದುವರಿದ ಬ್ಯಾರಿಸ್ಟರ್‌ಗಳು ಹಂಗಿಸುತ್ತಿದ್ದರು. ಆದರೆ ನಾನು ಕರ್ತೃತ್ವ ಶಕ್ತಿಯಿಂದ ಅವರ ಬಾಯಿಯನ್ನು ಮುಚ್ಚಿಬಿಟ್ಟೆ.

ನಾವು ಕಠಿಣ ಪರೀಕ್ಷೆಯನ್ನು ಎದುರಿಸದ ಹೊರತು ಮಹತ್ವ ಬರುವುದಿಲ್ಲ ಉಳಿದ ಜಾತಿಯವರ ವಿಷಯ ಹಾಗಲ್ಲ. ನಾವು ಚಿನ್ನದ ಬೆಲೆಯ ಕಾರ್ಯ ಮಾಡಿದಾಗ ಉಳಿದವರು ತವರದ ಬೆಲೆ ನೀಡುತ್ತಾರೆ. ಉಳಿದವರು ತವರದ ಕೆಲಸ ಮಾಡಿದರೂ ಚಿನ್ನದ ಬೆಲೆ ಬರುತ್ತದೆ. ಇದಂತೂ ಇಂದಿನ ವ್ಯವಹಾರವೇ ಆಗಿಬಿಟ್ಟಿದೆ ನೋಡಿ. ಒಂದು ವೇಳೆ ಹೊಲೆ ಮಾದಿಗ ಸಮಗಾರ ಹೆಂಗಸರು ಚಿನ್ನದ ಆಭರಣ ಧರಿಸಿದರೂ ಅದು ನಕಲಿ ಎಂದು ಉಚ್ಚ ವರ್ಣದವರು ಭಾವಿಸುತ್ತಾರೆ. ಅದೇ ರೀತಿ ಮುಂದುವರಿದ ಮಹಿಳೆಯರು ಹಿತ್ತಾಳೆ ಆಭರಣ ಧರಿಸಿದರೂ ಅದು ಚಿನ್ನದ್ದಿರ ಬೇಕೆಂದು ಅಂದುಕೊಳ್ಳುತ್ತಾರೆ. ಉಳಿದ ವಿಷಯದಲ್ಲೂ ಹೀಗೇ ಆಗಿದೆ. ನಾವು ಯಾವುದೇ ಕಾರ್ಯವನ್ನು ಅವರಿಗಿಂತಲೂ ನೂರು ಪಟ್ಟು ಚೆನ್ನಾಗಿ ಮಾಡಿದಾಗಲೇ ನಾವು ಅವರಿಗೆ ಸರಿಸಮಾನ ಎಂದು ಪರಿಗಣಿಸಲ್ಪಡಬಹುದು. ಇದನ್ನೆಲ್ಲ ಮಾಡಲು ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು.

ಆತ್ಮವಿಶ್ವಾಸದಂತಹ ದೈವೀ ಶಕ್ತಿ ಬೇರೊಂದಿಲ್ಲ. ನಾವು ನಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಉದಾಹರಣೆಗೆ ಕುಸ್ತಿ ಆಡಲು ಅಖಾಡಕ್ಕಿಳಿದ ಮಲ್ಲನು ತೋಳುತಟ್ಟುವ ಎದುರಾಳಿಯನ್ನು ನೋಡಿ ಉಡುಗಿ ಹೋಗಬಾರದು. ಅದರಿಂದೇನು ಪ್ರಯೋಜನ? ನಾನು ಏನು ಮಾಡುತ್ತೇನೆ ಅದು ಅದೇ ಆಗುತ್ತದೆ ಎಂದೇ ಸದಾ ನಾನು ಅಂದುಕೊಳ್ಳುತ್ತಿರುತ್ತೇನೆ. ಅರ್ಥಾತ್ ನಾನು ಇದನ್ನೆಲ್ಲ ಆತ್ಮವಿಶ್ವಾಸವನ್ನು ಅವಲಂಬಿಸಿ ಹೇಳುತ್ತಿರುತ್ತೇನೆ. ನನ್ನ ಈ ಮಾತು ಕೇಳಿ ಕೆಲವರು ನನ್ನನ್ನು ಸೊಕ್ಕಿನ ಮನುಷ್ಯ, ಧಿಮಾಕಿನವನು ಎಂದೆಲ್ಲ ಆರೋಪ ಹೊರಿಸಬಹುದು. ಆದರೆ ಅದು ಸೊಕ್ಕಿನ ಮಾತಾಗಿರದೆ ಆತ್ಮವಿಶ್ವಾಸದ ಮಾತಾಗಿರುತ್ತದೆ. ನಾನು ಮನಸ್ಸು ಮಾಡಿದರೆ ಸಾವಿರ ವಿಷಯವನ್ನು ಸಹಜವಾಗಿ ಮಾಡುಬಲ್ಲೆ. ನಾನು ಸಹ ನಿಮ್ಮಂತೆ ಒಬ್ಬ ಹೊಲತಿಯ ಉದರದಲ್ಲಿ ಜನಿಸಿದ್ದೇನೆ. ಬಡತನದ ದೃಷ್ಟಿಯಿಂದ ನೋಡಿದರೆ ಇಂದಿನ ಕಡು ಬಡ ಹುಡುಗನ ಪರಿಸ್ಥಿತಿಗಿಂತ ನನ್ನದು ಚೆನ್ನಾಗಿತ್ತು ಎಂದೇನಲ್ಲ.

ಮುಂಬೈಯ ಡೆವಲಪ್‌ಮೆಂಟ್ ಡಿಪಾರ್ಟ್‌ಮೆಂಟ್‌ನ ಚಾಳಿನ 10್ಡ10 ಉದ್ದಗಲದ ಖೋಲಿಯಲ್ಲಿ ತಾಯಿ ತಂದೆ, ಸಹೋದರರ ಸಹಿತ ವಾಸ ಮಾಡಿ ಒಂದೇ ದುಡ್ಡಿನ ಸೀಮೆಎಣ್ಣೆ ದೀಪದ ಮುಂದೆ ಕೂತು ಓದಿದ್ದೇನೆ. ಅಷ್ಟೇ ಅಲ್ಲ, ಆ ಕಾಲದ ಹಲವು ಸಂಕಟ ಸಮಸ್ಯೆಗಳನ್ನು ಎದುರಿಸಿ ನಾನು ಇಷ್ಟು ಮಾಡಿರುವಾಗ ನೀವು ಎಲ್ಲ ಸುಸಜ್ಜಿತ ಅನುಕೂಲತೆ ಇರುವಾಗ ಏಕೆ ಮಾಡುವುದು ಸಾಧ್ಯವಿಲ್ಲ? ಪ್ರತಿಯೊಬ್ಬನೂ ಸತತ ಉದ್ಯೋಗದಿಂದ ಪರಾಕ್ರಮಿ ಬುದ್ಧಿವಂತನೂ ಆಗಬಲ್ಲ. ಯಾರೇ ಆಗಲಿ ಹುಟ್ಟಿನಿಂದಲೇ ಜಾಣ ಇಲ್ಲವೇ ಪರಾಕ್ರಮಿಯಾಗಲು ಸಾಧ್ಯವಿಲ್ಲ. ನಾನು ವಿದ್ಯಾರ್ಥಿ ದಿಸೆಯಲ್ಲಿ ಇಂಗ್ಲೆಂಡಿನಲ್ಲಿದ್ದಾಗ ಯಾವ ಪಠ್ಯಕ್ರಮಕ್ಕೆ ಎಂಟು ವರ್ಷ ಬೇಕಾಗಿತ್ತೂ ಅದನ್ನು ನಾನು ಎರಡು ವರ್ಷ ಮೂರೇ ತಿಂಗಳಲ್ಲಿ ಯಶಸ್ವಿಯಾಗಿ ಪೂರ್ತಿ ಮಾಡಿದೆ. ಇದನ್ನು ಮಾಡಲು ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಇಪ್ಪತ್ತೊಂದು ಗಂಟೆ ಅಧ್ಯಯನ ಮಾಡಬೇಕಾಯಿತು. ನನಗಿಂದು ನಲವತ್ತು ವರ್ಷ ದಾಟಿದ್ದರೂ ಇಪ್ಪತ್ನಾಲ್ಕು ಗಂಟೆಗಳಲ್ಲಿ ಹದಿನೆಂಟು ಗಂಟೆ ಕುರ್ಚಿಯಲ್ಲಿ ಕೂತು ಕೆಲಸ ಮಾಡುತ್ತೇನೆ. ಈಗಿನ ವಿದ್ಯಾರ್ಥಿಗಳಿಗೆ ಅರ್ಧ ಗಂಟೆ ಕೂತರೂ ಚಮಚೆಯಷ್ಟು ನಸ್ಯ ಮೂಗಿಗೆ ತುರುಕ ಬೇಕಾಗುತ್ತದೆ. ಇಲ್ಲವೇ ಸಿಗರೇಟು ಸೇದಿ ಕಾಲು ಚಾಚಿ ಕೆಲವು ಕಾಲ ತೂಕಡಿಸದ ವಿನಃ ಉತ್ಸಾಹ ಬರುವುದಿಲ್ಲ ನನಗೆ ಈ ವಯಸ್ಸಿನಲ್ಲೂ ಸಹ ಇವುಗಳ ಯಾವುದರ ಅಗತ್ಯವೂ ಎನಿಸುವುದಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News