ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ
ಮರೀಚಿಕೆಯಾದ ಸೇತುವೆ
ಚಿಕ್ಕಮಗಳೂರು, ಜ.21: ಕಳಸ ಹಾಗೂ ಎನ್.ಆರ್.ಪುರ ತಾಲೂಕು ವ್ಯಾಪ್ತಿಯ ಬಾಳೆಹೊನ್ನೂರು ಪಟ್ಟಣಗಳ ಸಂಪರ್ಕ ರಸ್ತೆಯ ಮಧ್ಯೆ ಇರುವ ಕಗ್ಗನಳ್ಳ ಗ್ರಾಮದಲ್ಲಿ ಹರಿಯುವ ಭದ್ರಾ ನದಿಯು ಗ್ರಾಮವೊಂದರ ಜನರ ಪಾಲಿಗೆ ಶತಮಾನದಿಂದ ಮುಳ್ಳಾಗಿ ಕಾಡುತ್ತಿದೆ. ಈ ಗ್ರಾಮದ ಪಕ್ಕದಲ್ಲೇ ಹರಿಯುವ ಭದ್ರಾ ನದಿಗೆ ಸೇತುವೆ ಭಾಗ್ಯ ಇಲ್ಲದ ಪರಿಣಾಮ ಗ್ರಾಮದ ಕೂಲಿ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ತುಂಬಿ ಹರಿಯುವ ನದಿಯಲ್ಲಿ ತೆಪ್ಪದ ಮೂಲಕ ಸರ್ಕಸ್ ಮಾಡುತ್ತಾ ನದಿ ದಾಟಬೇಕಿದೆ.
ಮೂಡಿಗೆರೆ ತಾಲೂಕಿನ ಬಾಳೆಹೊಳೆ ಗ್ರಾಮದಿಂದ 4 ನಾಲ್ಕು ಕಿ.ಮೀ. ದೂರದಲ್ಲಿರುವ ಕಗ್ಗನಳ್ಳ ಗ್ರಾಮದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿ ಹೊಳಲು ಗ್ರಾಮವಿದ್ದು, ಕಗ್ಗನಳ್ಳ ಹಾಗೂ ಹೊಳಲು ಗ್ರಾಮಗಳನ್ನು ಸದಾ ತುಂಬಿ ಹರಿಯುವ ಭದ್ರಾ ನದಿ ಬೇರ್ಪಡಿಸಿದೆ. ಭದ್ರಾ ನದಿಯ ಒಂದು ಬದಿಯಲ್ಲಿ ಕಗ್ಗನಳ್ಳ ಗ್ರಾಮವಿದ್ದರೇ, ಮತ್ತೊಂದು ಬದಿಯಲ್ಲಿ ಹೊಳಲು ಗ್ರಾಮವಿದೆ. ಹೊಳಲು ಗ್ರಾಮದಲ್ಲಿ ಸುಮಾರು 35ರಿಂದ 40 ಕೂಲಿ ಕಾರ್ಮಿಕರ ಕುಟುಂಬಗಳಿದ್ದು, ಈ ಕುಟುಂಬಗಳು ತಮ್ಮ ದಿನ ನಿತ್ಯದ ಅಗತ್ಯಗಳಾದ ಆರೋಗ್ಯ, ಶಿಕ್ಷಣ, ಗ್ರಾಪಂ, ಕಂದಾಯ ಇಲಾಖೆ ಸೇವೆಗಳೂ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಕೂಗಳತೆ ದೂರದಲ್ಲಿರುವ ಕಗ್ಗನಳ್ಳ ಅಥವಾ ಬಾಳೆಹೊಳೆ ಗ್ರಾಮಕ್ಕೆ ಬರಬೇಕಿದೆ. ವಿಪರ್ಯಾಸ ಎಂದರೆ ಈ ಎಲ್ಲ ಸೌಕರ್ಯಗಳನ್ನು ಹೊಳಲು ಗ್ರಾಮದ ಜನರು ಪಡೆಯಬೇಕಿದ್ದರೇ ವರ್ಷ ಪೂರ್ತಿ ತುಂಬಿ ಹರಿಯುವ ಭದ್ರಾ ನದಿಯನ್ನು ದಾಟಿ ಬರಬೇಕಿದ್ದು, ಭದ್ರಾ ನದಿ ದಾಟಲು ಸುಸಜ್ಜಿತವಾದ ಸೇತುವೆಯಾಗಲೀ, ತೂಗು ಸೇತುವೆಯಾಗಲೀ ಇಲ್ಲದ ಪರಿಣಾಮ ಹೊಳಲು ಗ್ರಾಮದ ಜನರು ಇಂದಿಗೂ ಪ್ರಾಣಭೀತಿಯಲ್ಲಿ ತೆಪ್ಪದ ಮೂಲಕ ನದಿ ದಾಟುತ್ತಿದ್ದಾರೆ.
ಈ ಗ್ರಾಮದಲ್ಲಿ ಕೂಲಿ ಕಾರ್ಮಿಕರು, ಗಾರಿ ಕೆಲಸದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರೆಲ್ಲರೂ ಕಗ್ಗನಳ್ಳ ಸುತ್ತಮುತ್ತ ಇರುವ ಕಾಫಿ ಎಸ್ಟೇಟ್‌ಗಳಿಗೆ, ಬಾಳೆಹೊಳೆ, ಕಳಸ, ಬಾಳೆಹೊನ್ನೂರು ಪಟ್ಟಣಗಳಿಗೆ ಪ್ರತಿದಿನ ಕೆಲಸಕ್ಕೆ ಬರಬೇಕಿದೆ. ಇನ್ನು ಇದೇ ಗ್ರಾಮದಲ್ಲಿ ಹತ್ತಾರು ಶಾಲಾ ಕಾಲೇಜು ವಿದ್ಯಾರ್ಥಿಗಳಿದ್ದು, ಅವರು ಬಾಳೆಹೊಳೆ, ಕಳಸ, ಬಾಳೆಹೊನ್ನೂರು ಪಟ್ಟಣಗಳಿಗೆ ವಿದ್ಯಾಭ್ಯಾಸಕ್ಕೆ ತೆರಳಬೇಕಿದೆ. ಇದಕ್ಕಾಗಿ ಗ್ರಾಮಸ್ಥರು ಪ್ರತಿದಿನ ತೆಪ್ಪದಲ್ಲಿ ಕುಳಿತು ಜೀವಭಯದಲ್ಲೇ ನದಿ ದಾಟಬೇಕಿದೆ. ನದಿ ದಾಟಲು ಪ್ರತಿದಿನ ಗಂಟೆಗಟ್ಟಲೆ ಕಾಯಬೇಕಾಗಿದ್ದು, ನಿಗದಿತ ಸಮಯದಲ್ಲಿ ತೆಪ್ಪ ನಡೆಸುವವರು ಬಾರದಿದ್ದಲ್ಲಿ ದೂರದ ಊರುಗಳಿಗೆ ಹೋಗುವ ಬಸ್‌ಗಳು ಸಿಗದೇ ಕಾರ್ಮಿಕರಿಗೆ ಕೆಲಸಕ್ಕೆ ರಜೆ, ಶಾಲಾ ಕಾಲೇಜು ಮಕ್ಕಳು ಚಕ್ಕರ್ ಹಾಕುವುದು ಇಲ್ಲಿ ಸಾಮಾನ್ಯವಾಗಿದೆ.
ಹೊಳಲು ಗ್ರಾಮದ ಜನರು ಬೇಸಿಗೆಯಲ್ಲಿ ನದಿ ದಾಟಲು ಹೀಗೆ ತೆಪ್ಪವನ್ನು ಅಲವಂಬಿಸಿದ್ದರೇ, ಮಳೆಗಾಲದಲ್ಲಿ ಆರು ತಿಂಗಳುಗಳ ಕಾಲ ಇಲ್ಲಿ ಹರಿಯುವ ನದಿ ಅಪಾಯದ ಮಟ್ಟ ಮೀರಿ ಹರಿಯುವುದರಿಂದ ತೆಪ್ಪದ ಸೇವೆ ಲಭ್ಯ ಇರುವುದಿಲ್ಲ. ಆದ್ದರಿಂದ ಮಳೆಗಾಲದ ಆರು ತಿಂಗಳೂ ಹೊಳಲು ಗ್ರಾಮದ ಜನರು ಸುಮಾರು 15 ಕಿ.ಮೀ. ದೂರದ ಕೆಳಭಾಗ ಎಂಬ ರಸ್ತೆಯಲ್ಲಿ ಸಾಗಿ ಬಾಳೆಹೊಳೆ ಸಂಪರ್ಕದ ಸೇತುವೆ ಮೂಲಕ ಬಾಳೆಹೊಳೆ, ಕಳಸ, ಬಾಳೆಹೊನ್ನೂರು ಪಟ್ಟಣಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ.
ಮಳೆಗಾಲದಲ್ಲಿ ಮಕ್ಕಳಿಗೂ ಈ ಸಂಕಟದ ತಪ್ಪುವುದಿಲ್ಲ. ಹೊಳಲು-ಬಾಳೆಹೊಳೆ ಸಂಪರ್ಕದ ಈ ರಸ್ತೆ ಸುಮಾರು ಕಿ.ಮೀ. ದೂರವಿದ್ದು, ರಸ್ತೆ ದುರಸ್ತಿ ಕಾಣದ ಪರಿಣಾಮ ಆಟೊ ರಿಕ್ಷಾಗಳಂತಹ ಬಾಡಿಗೆ ವಾಹನಗಳು ಈ ರಸ್ತೆಯತ್ತ ತಲೆಹಾಕುವುದಿಲ್ಲ. ಆದ್ದರಿಂದ ನಿವಾಸಿಗಳಿಗೆ ಪ್ರತಿದಿನ ನಟರಾಜ ಸರ್ವಿಸ್ಸು ಮಾಮೂಲಿಯಾಗಿದೆ. ಹೊಳಲು ಗ್ರಾಮಸ್ಥರು ತೆಪ್ಪದ ಮೂಲಕ ನದಿ ದಾಟಿ ಕಗ್ಗನಳ್ಳ ಹೋಗಲು 10 ನಿಮಿಷ ಸಾಕು, ಮಳೆಗಾಲದಲ್ಲಿ ಕೆಳಭಾಗ ರಸ್ತೆ ಮಾರ್ಗದಲ್ಲಿ ಹೋಗಬೇಕಾದರೆ ಸುಮಾರು 1 ಗಂಟೆ ಬೇಕಾಗುತ್ತದೆ. ಹೊಳಲು ಗ್ರಾಮಕ್ಕೆ ಸೂಕ್ತ ರಸ್ತೆ, ಸೇತುವೆ ಸಂಪರ್ಕದ ವ್ಯವಸ್ಥೆ ಇಲ್ಲವಾಗಿದ್ದು, ಈ ಒಂದು ಅನನುಕೂಲದಿಂದಾಗಿ ಗ್ರಾಮಕ್ಕೆ ಸರಕಾರದ ಬೇರೆ ಸೌಲಭ್ಯಗಳೂ ಸಿಗುತ್ತಿಲ್ಲ ಎಂಬುದು ನಿವಾಸಿಗಳ ದೂರಾಗಿದೆ. ನಮಗೆ ಕಗ್ಗನಳ್ಳ-ಹೊಳಲು ಗ್ರಾಮಗಳ ಮಧ್ಯೆ ಹರಿಯುವ ಭದ್ರಾನದಿಗೊಂದು ಸೇತುವೆ, ಇಲ್ಲವೇ ತೂಗು ಸೇತುವೆಯನ್ನಾದರೂ ನಿರ್ಮಿಸಿಕೊಡಿ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದೇವೆ, ಆದರೆ ಅವರು ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದು ಹೊಳಲು ಗ್ರಾಮದ ನಿವಾಸಿಗಳ ಆಕ್ರೋಶವಾಗಿದೆ.
ಮಳೆಗಾಲ ಆರಂಭವಾದರೆ ಸಾಕು ನಮ್ಮನ್ನು ಜೈಲಿಗೆ ಹಾಕಿದಂತೆ ಆಗುತ್ತದೆ. ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಮಕ್ಕಳಿಗೆ ಶಾಲೆಗೆ ಹೋಗಲೂ ಆಗುವುದಿಲ್ಲ. ಸೇತುವೆ, ರಸ್ತೆ ಸಂಪರ್ಕದ ಅವ್ಯವಸ್ಥೆಯಿಂದಾಗಿ ನಮಗೆ ಯಾವುದೇ ಮೂಲಭೂತ ಸೌಕರ್ಯ ಸಿಗುತ್ತಿಲ್ಲ. ಅನೇಕ ವರ್ಷಗಳಿಂದ ತೆಪ್ಪವೇ ನಮ್ಮ ಸಾರಿಗೆಯಾಗಿದೆ. ಸುಸಜ್ಜಿತ ಸೇತುವೆ ನಿರ್ಮಿಸಿಕೊಡದಿದ್ದರೂ ಪರವಾಗಿಲ್ಲ, ತೂಗು ಸೇತುವೆಯನ್ನಾದರೂ ನಿರ್ಮಿಸಿಕೊಡಿ, ತೆಪ್ಪದ ಮೂಲಕ ನದಿ ದಾಟುವುದು ಕಷ್ಟವಾಗುತ್ತಿದೆ. ಈ ಹಿಂದೆ ತೆಪ್ಪ ಮಗುಚಿ ಇಬ್ಬರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
ಶ್ರೀಧರ,
ಹೊಳಲು ಗ್ರಾಮದ ನಿವಾಸಿ
ಈ ಗ್ರಾಮಕ್ಕೆ ಸೇತುವೆ ನಿರ್ಮಿಸಿ ಕೊಡುವುದಾಗಿ ಅನೇಕ ರಾಜಕಾರಣಿಗಳು, ಅಧಿಕಾರಿಗಳು ಆಶ್ವಾಸನೆ ನೀಡುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಯಾರು ಸೇತುವೆ ನಿರ್ಮಿಸಿ ಕೊಟ್ಟಿಲ್ಲ. ಚುನಾವಣೆ ವೇಳೆಗೆ ಎಲ್ಲಾ ಪಕ್ಷದವರು ನಾ ಮುಂದು ತಾ ಮುಂದು ಎಂದು ಬರುತ್ತಾರೆ. ಆದರೆ ಚುನಾವಣೆ ಮುಗಿದ ಬಳಿಕ ಇಲ್ಲಿ ಒಂದು ಗ್ರಾಮವಿದೆ ಎಂಬುದನ್ನೇ ಮರೆಯುತ್ತಿದ್ದಾರೆ. ಓಟಿಗೆ ನಾವು ಬೇಕು, ನಮ್ಮ ಕಷ್ಟಕ್ಕೆ ಅವರಿಲ್ಲ. ಕಳೆದ ಬಾರಿ ತೂಗು ಸೇತುವೆ ನಿರ್ಮಿಸಿ ಕೊಡುವುದಾಗಿ ಹೇಳಿ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳ ಪರಿಶೀಲಿಸಿ ಹೋಗಿದ್ದರು. ವರ್ಷ ಕಳೆದರೂ ಅವರು ಇದುವರೆಗೂ ಪತ್ತೆಯಿಲ್ಲ.
ರಾಜು,
ಹೊಳಲು ಗ್ರಾಮದ ನಿವಾಸಿ