ಪ್ರಮಾಣಬದ್ಧ ಸಾಂವಿಧಾನಿಕತೆ

Update: 2020-02-05 17:53 GMT

ಸಂವಿಧಾನಕ್ಕೆ ಮಾಡುವ ಪ್ರಮಾಣವು ಸಾಂವಿಧಾನಿಕ ಪ್ರಜ್ಞೆಯ ಮೇಲೆ ಭರವಸೆಗಳ ಹೊಣೆಗಾರಿಕೆಯನ್ನು ಸ್ಥಾಪಿಸುತ್ತದೆ. ವಾಸ್ತವವಾಗಿ ಈ ಹೊಸ ಪ್ರಯತ್ನಗಳು ಪ್ರಮಾಣಕ್ಕೆ ಬದ್ಧವಾಗಿರುವ ಸಂವಿಧಾನವಾದದ ಅಭಿವ್ಯಕ್ತಿಗಳಾಗಿವೆ. ಹೀಗಾಗಿ ಉತ್ತಮ ಭವಿಷ್ಯದ ಭರವಸೆಗಾಗಿ ಪ್ರಮಾಣ ಸ್ವೀಕರಿಸುವತ್ತ ಹೆಚ್ಚು ಒತ್ತಿರುವ ಸಂವಿಧಾನದ ಬಗೆಗಿನ ಈ ಹೊಸ ಸಂಕಥನಗಳು ಕಾನೂನು ಮಿತಿಯೊಳಗಿನ ವ್ಯಾಖ್ಯಾನಗಳಿಗಿಂತ ಹೆಚ್ಚಿನ ಅರ್ಥವನ್ನು ಪಡೆದುಕೊಳ್ಳುತ್ತದೆ.


ಭಾರತದ ಸಂವಿಧಾನವೆಂಬುದು ಒಂದು ಪ್ರಮುಖವಾದ ನಿಯಮ-ನಿಯಂತ್ರಣಗಳ ದಾಖಲೆಯೆಂಬುದು ತೀರಾ ಇತ್ತೀಚಿನವರೆಗೂ ಒಂದು ಸಾಮಾನ್ಯ ಜ್ಞಾನವೇ ಆಗಿತ್ತು. 1950ರ ಜನವರಿ 26ರ ನಂತರ ಅದಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವವೂ ಸೇರಿಕೊಂಡಿತ್ತು. ಅದೇ ದಿನದಂದು ಪ್ರತಿವರ್ಷ ದಿಲ್ಲಿಯ ವಿಜಯ್ ಪಥ್‌ನಲ್ಲಿ ನಡೆಯುವ ನಮ್ಮ ಸೈನಿಕ ಶಕ್ತಿಯ ಪ್ರದರ್ಶನವು ನಮ್ಮ ಶಕ್ತಿಶಾಲಿ ಪ್ರಭುತ್ವವು ಬಾಹ್ಯ ಆಕ್ರಮಣಗಳಿಂದ ನಮ್ಮನ್ನು ರಕ್ಷಿಸುವುದೆಂಬ ಭಾವನೆಯನ್ನು ದೇಶದ ನಾಗರಿಕರಲ್ಲಿ ಹುಟ್ಟಿಸುವುದೂ ಸಹ ವಾಸ್ತವವೇ ಆಗಿದೆ. ಇದಕ್ಕೆ ಹೋಲಿಸಿದಲ್ಲಿ ನಮ್ಮ ಸಾಂವಿಧಾನಿಕ ತತ್ವಗಳು ಕೆಲವರಿಗೆ ಅಷ್ಟು ಆಕರ್ಷಣೀಯವಾಗಿ ಕಾಣದಿರಬಹುದು. ಅದರರ್ಥ ನಾವು ಸಂವಿಧಾನವನ್ನು ಅರ್ಥಮಾಡಿಕೊಂಡಿಲ್ಲವೆಂದೇನೂ ಅಲ್ಲ. ನಮಗೆ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಬೋಧನೆಗಳ ಮೂಲಕ ಸಂವಿಧಾನದ ಪರಿಚಯವಾಗುತ್ತದೆ. ಅದೇರೀತಿ ರಾಜ್ಯ ಹಾಗೂ ಕೇಂದ್ರಗಳಲ್ಲಿ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನವನ್ನು ಉಲ್ಲೇಖಿಸುವುದನ್ನು ಗಮನಿಸಿರುತ್ತೇವೆ. ಹೀಗೆ ಸರಕಾರದಲ್ಲಿ ಉನ್ನತ ಹಂತದ ಸೇವೆಯಲ್ಲಿರುವವರಿಗೆ ಸಂವಿಧಾನ ಮತ್ತು ಪ್ರಮಾಣವಚನ ಸ್ವೀಕಾರಗಳೆಂಬುವುದು ಪ್ರಮುಖವಾದ ಅಂಶಗಳಾಗಿವೆ.

ಅಗತ್ಯ ಬಿದ್ದಾಗಲೆಲ್ಲಾ ಪ್ರಮಾಣವನ್ನು ನೀಡಲಾಗುತ್ತದೆ ಹಾಗೂ ತೆಗೆದುಕೊಳ್ಳಲಾಗುತ್ತದೆ. ಈ ಬಗೆಯಲ್ಲಿ ಸಂವಿಧಾನಕ್ಕೆ ನಮ್ಮ ನೈತಿಕ ಬದ್ಧತೆಯನ್ನು ಪ್ರದರ್ಶಿಸುವ ಸಮಾರಂಭಗಳು ವ್ಯಕ್ತಿಗತ ಹಾಗೂ ಕಾನೂನಾತ್ಮಕ ನೆಲೆಗಳಲ್ಲಿ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ, ದೇಶದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನಾ ಪ್ರದರ್ಶನಗಳಲ್ಲಿ ಮಾಡುತ್ತಿರುವ ಸಾಮೂಹಿಕ ಪ್ರಮಾಣವಚನ ಸ್ವೀಕಾರಗಳತ್ತ ನಮ್ಮ ಗಮನಹರಿಸಬೇಕಿದೆ. ನಾಗರಿಕರು ಈ ರೀತಿ ಪ್ರಮಾಣವಚನ ಸ್ವೀಕರಿಸುವ ಪವಿತ್ರ ಮಾರ್ಗವನ್ನು ಹಿಡಿಯುವ ಮೂಲಕ ಸಂವಿಧಾನದಲ್ಲಿ ಘೋಷಿಸಲಾಗಿರುವ ಸಾರ್ವತ್ರಿಕ ತತ್ವಗಳಿಗೆ ತಮ್ಮ ಬದ್ಧತೆಯನ್ನು ಘೋಷಿಸುತ್ತಿದ್ದಾರೆ. ಈ ದೇಶದ ಪ್ರಜಾತಾಂತ್ರಿಕ ಸಂಪ್ರದಾಯಗಳನ್ನು ಬಲಗೊಳಿಸುವ ತಮ್ಮ ಸಾಂವಿಧಾನಿಕ ಕರ್ತವ್ಯದಿಂದ ವಿಮುಖರಾಗಿರುವ ಸರಕಾರಿ ಸಂಸ್ಥೆಗಳನ್ನು ಎಚ್ಚರಿಸುವ ದಿಕ್ಕಿನಲ್ಲಿಯೂ ಈ ಪ್ರಮಾಣವಚನ ಸಮಾರಂಭಗಳು ನಡೆಯುತ್ತಿವೆ. ತಮಗೆ ಸಂವಿಧಾನವು ಹೊರಿಸಿರುವ ಜವಾಬ್ದಾರಿಗಳನ್ನು ನಿಜಕ್ಕೂ ಪೂರೈಸುತ್ತಿದ್ದೀರಾ ಎಂದು ಕೇಳಿದರೆ ಸರಕಾರದ ಯಾವ ವಕ್ತಾರರೂ ಸಕಾರಾತ್ಮಕವಾಗಿ ಉತ್ತರಿಸಲಾರರು. ಆದರೂ ತಾವು ಸಂವಿಧಾನದಂತೆ ನಡೆಯಲು ಬದ್ಧರಾಗಿದ್ದೇವೆ ಎಂದು ಮಾತ್ರ ಅವರು ಹೇಳುವುದನ್ನು ಬಿಡುವುದಿಲ್ಲ. ತಾವು ಸಂವಿಧಾನವನ್ನು ಅನುಸರಿಸುವುದಾಗಿಯೇ ಪ್ರಮಾಣ ಸ್ವೀಕರಿಸಿರುವುದಾಗಿಯೂ ಅವರು ಹೇಳುತ್ತಾರೆ. ಪ್ರಮಾಣವಚನ ಸ್ವೀಕರಿಸುವುದೆಂದರೆ ಸಂವಿಧಾನದ ನಿರ್ದೇಶನವನ್ನು ಪಾಲಿಸುವುದು ಮತ್ತು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇವೆಂದು ಭರವಸೆ ನೀಡುವುದೇ ಆಗಿದೆ. ಆದರೆ ಇಂದು ಆ ಪ್ರಕ್ರಿಯೆ ಸರಕಾರದ ಕಲ್ಲುಕೋಟೆಯ ಹಿಂದಿನ ಸಾಂಸ್ಥಿಕ ಗಡಿಗಳನ್ನು ಮೀರಿ ಭಾರತ ದೇಶದ ಹಲವಾರು ನಗರಗಳ ಬೀದಿಗಳನ್ನು ಪ್ರವೇಶಿಸಿದೆ. ಈ ಪವಿತ್ರ ಕಾರ್ಯವು ಒಂದು ಸಾಮೂಹಿಕ ಸ್ವಭಾವವನ್ನು ಪಡೆದುಕೊಂಡುಬಿಟ್ಟಿದೆ.

ಮೂರು ಮುಖ್ಯ ಕಾರಣಗಳಿಗಾಗಿ ಸಾಮೂಹಿಕ ಪ್ರಮಾಣ ವಚನ ಸ್ವೀಕಾರವು ಭಿನ್ನವಾಗುತ್ತದೆ. ಮೊದಲನೆಯದಾಗಿ ಅದು ಸಾಂವಿಧಾನಿಕ ತತ್ವಗಳನ್ನು ಪಾಲಿಸಲಾಗದ ಅಧಿಕಾರಸ್ಥರ ನೆಪಗಳನ್ನು ಬಯಲು ಮಾಡುವಂತಹ ಒಂದು ನೈತಿಕ ಹೇಳಿಕೆಯಾಗಿ ಅಥವಾ ತಾತ್ವಿಕ ಚುಚ್ಚುಮದ್ದಾಗಿ ಬಳಕೆಯಾಗುತ್ತಿದೆ. ಹೀಗಾಗಿ ಪ್ರಮಾಣ ಸ್ವೀಕಾರ ಎಂಬುದು ಅಂತಹ ಅಧಿಕಾರಸ್ಥರಿಗೆ ನೆನಪು ಮಾಡುವ ಪ್ರಕ್ರಿಯೆಯಾಗಿದೆ. ಎರಡನೆಯದಾಗಿ ಯಾವುದೇ ಧಾರ್ಮಿಕ ಶರತ್ತನ್ನೊಡ್ಡದೆ ಎಲ್ಲರನ್ನೂ ಒಳಗೊಳ್ಳುವ ಪೌರತ್ವವನ್ನು ಜಾರಿಗೆ ತರಬೇಕೆಂಬ ಹೋರಾಟ ಯಾರಿಗೂ ಕಾಯದೆ ಪ್ರಾರಂಭವಾಗಿದೆ ಎಂಬುದನ್ನು ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಅದು ಆತ್ಮ ಘನತೆಯ ನೈತಿಕ ಶಕ್ತಿಯ ಆಧಾರದ ಮೇಲೆ ನಿಂತಿದೆ. ಮೂರನೆಯದಾಗಿ, ಈ ಸಾಮೂಹಿಕ ಪ್ರಮಾಣ ವಚನ ಸ್ವೀಕಾರದ ನೈತಿಕ ಸ್ಫೂರ್ತಿಯು ಒಂದು ಬಗೆಯ ಸಾಂವಿಧಾನಿಕ ಸಮುದಾಯಗಳನ್ನು ಸೃಷ್ಟಿ ಮಾಡುತ್ತಿವೆ. ಸಂವಿಧಾನಕ್ಕೆ ಬದ್ಧರೆಂಬುದಾಗಿ ಸಾಮೂಹಿಕವಾಗಿ ತೆಗೆದುಕೊಳ್ಳುವ ಪ್ರಮಾಣವಚನಗಳು ಜನರಲ್ಲಿ ಪ್ರಜಾತಾಂತ್ರಿಕ ಪ್ರಜ್ಞೆಯನ್ನು ಹುಟ್ಟಿಸುತ್ತದೆ ಮತ್ತು ಬಲಗೊಳಿಸುತ್ತದೆ.

ಸಾಂವಿಧಾನಿಕ ಸಮುದಾಯಗಳು ಹುಟ್ಟಿಕೊಳ್ಳುವ ಸಾಧ್ಯತೆಗಳು ಸಂವಿಧಾನ ಜೀವಿಗಳನ್ನು ಅಥವಾ ಸಂವಿಧಾನದ ಬೆಂಬಲಿಗರನ್ನು ಮತ್ತಷ್ಟು ಗಟ್ಟಿಯಾಗಿ ಒಂದುಗೂಡಿಸಬಲ್ಲದು ಹಾಗೂ ಪ್ರಮಾಣ ಸ್ವೀಕರಿಸುವುದರ ಹಿಂದಿರುವ ಪಾವಿತ್ರ್ಯ ಮತ್ತು ಸಾರವನ್ನು ಹಾಳುಮಾಡುವ ಆಷಾಢಭೂತಿತನದಿಂದಲೂ ಅದನ್ನು ಪಾರುಮಾಡಬಹುದಾಗಿದೆ. ಪ್ರಮಾಣವಚನಗಳು ಆಷಾಢಭೂತಿತನಕ್ಕೆ ಪಕ್ಕಾಗುವಂತಿರುತ್ತವೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಈ ಮಧ್ಯೆ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಸಾಂವಿಧಾನಿಕ ಆಶೋತ್ತರಗಳನ್ನು ನಂಬಿಕೊಂಡಿರುವ ಸಮುದಾಯಗಳ ಹೇಳಿಕೆಯಾಗಿದೆ ಎಂದರೆ ತಪ್ಪಾಗಲಾರದು. ಸಂವಿಧಾನಕ್ಕೆ ಮಾಡುವ ಪ್ರಮಾಣವು ಸಾಂವಿಧಾನಿಕ ಪ್ರಜ್ಞೆಯ ಮೇಲೆ ಭರವಸೆಗಳ ಹೊಣೆಗಾರಿಕೆಯನ್ನು ಸ್ಥಾಪಿಸುತ್ತದೆ. ವಾಸ್ತವವಾಗಿ ಈ ಹೊಸ ಪ್ರಯತ್ನಗಳು ಪ್ರಮಾಣಕ್ಕೆ ಬದ್ಧವಾಗಿರುವ ಸಂವಿಧಾನವಾದದ ಅಭಿವ್ಯಕ್ತಿಗಳಾಗಿವೆ. ಹೀಗಾಗಿ ಉತ್ತಮ ಭವಿಷ್ಯದ ಭರವಸೆಗಾಗಿ ಪ್ರಮಾಣ ಸ್ವೀಕರಿಸುವತ್ತ ಹೆಚ್ಚು ಒತ್ತಿರುವ ಸಂವಿಧಾನದ ಬಗೆಗಿನ ಈ ಹೊಸ ಸಂಕಥನಗಳು ಕಾನೂನು ಮಿತಿಯೊಳಗಿನ ವ್ಯಾಖ್ಯಾನಗಳಿಗಿಂತ ಹೆಚ್ಚಿನ ಅರ್ಥವನ್ನು ಪಡೆದುಕೊಳ್ಳುತ್ತದೆ.

ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News