ಪಕ್ಷ ರಾಜಕಾರಣದ ವ್ಯಾಕರಣ

Update: 2020-02-25 18:33 GMT

ಸಮಾಜದ, ಜನತೆಯ ಅಥವಾ ದೇಶದ ಹಿತವನ್ನು ಮಾಡುವ ರೀತಿಗಳು ಮುಖ್ಯವಾಗಿ ಎರಡು. ಒಂದು ವೈಯಕ್ತಿಕ; ಇನ್ನೊಂದು ಸಾರ್ವಜನಿಕ, ಇಲ್ಲವೆ ಸಾಮುದಾಯಿಕ. ವೈಯಕ್ತಿಕ ರೀತಿಯೆಂದರೆ, ತಮಗೆ ಯುಕ್ತ ಕಂಡ ರೀತಿಯಲ್ಲಿ ಇಷ್ಟವೆನಿಸಿದ ಧ್ಯೇಯದಂತೆ ಏಕಾಕಿಯಾಗಿ ಇಲ್ಲವೇ ತನ್ನಂತೆಯೇ ಧ್ಯೇಯ ಧೋರಣೆಗಳುಳ್ಳ ಇನ್ನೂ ಕೆಲವರ ಗುಂಪು ಕಟ್ಟಿಕೊಂಡು-ಅದನ್ನೇ ಸಂಘವೆನ್ನಿ ಸಂಸ್ಥೆ ಎನ್ನಿ ದಳವೆನ್ನಿ ಜನಹಿತದ ಕಾರ್ಯಕ್ಕಾಗಿ ದುಡಿಯುವುದು ಇದು ಸೇವೆಯ ಮಾರ್ಗ.

‘ಸಾರ್ವಜನಿಕ’ದ ವ್ಯಾಖ್ಯೆ
ಸಾರ್ವಜನಿಕವೆಂದರೆ ಒಟ್ಟು ಜನತೆಯ ಆದಷ್ಟು ಹೆಚ್ಚು ಸಂಖ್ಯೆಯ ಹಿತವನ್ನು ಆದಷ್ಟು ಶೀಘ್ರವಾಗಿ ತೀವ್ರವಾಗಿ ಸಾಮೂಹಿಕವಾಗಿ ಸಾಧಿಸಬೇಕೆಂದು ಅದರ ನಿಶ್ಚಿತ ಕಾರ್ಯಯೋಜನೆಯನ್ನು ಕಣ್ಣಮುಂದೆ ಇಟ್ಟುಕೊಂಡು ಶಕ್ಯವಿದ್ದಷ್ಟು ಬಹುಸಂಖ್ಯ ಜನರನ್ನು ಧೋರಣೆಗೆ ಒಲಿಸಿ ಅದರ ಒತ್ತಾಯಕ್ಕೆ ಒಡಂಬಡಿಸಿ ಎಲ್ಲರ ಸಾಹಸ ಸಹಕಾರ ಹಾಗೂ ಸಾಧನೆಯಿಂದ ದೇಶದ ಆಡಳಿತವನ್ನೇ ವಶಪಡಿಸಿಕೊಂಡು ಅದರ ಮುಖಾಂತರ ವ್ಯಾಪಕವಾಗಿ ತನ್ನ ಉದ್ದೇಶವನ್ನು ಆಚರಣೆಗೆ ತರುವುದು. ಇದು ಸತ್ತೆಯ ಮಾರ್ಗ.

‘ಪಕ್ಷ’ಗಳ ಹುಟ್ಟು
ರಾಜಕೀಯ ಪಕ್ಷ ಹುಟ್ಟುವುದೂ ಬೆಳೆಯುವುದೂ ಈ ಮಾರ್ಗದಲ್ಲಿ. ರಾಜಕೀಯ ಚಟುವಟಿಕೆಯೆಂದರೆ ಸತ್ತೆಗಾಗಿ ಅಧಿಕಾರಕ್ಕಾಗಿ ನಡೆಸಿದ ಇಲ್ಲವೇ ನಡೆಯುವ ವಿಶಿಷ್ಟ ಮಾದರಿಯ ಚಟುವಟಿಕೆ. ಇದಕ್ಕೆ ವೈಯಕ್ತಿಕ ಅಂಗವಿಲ್ಲ, ‘ಖಾಸಗಿ ರಂಗ’ವಿಲ್ಲ. ವ್ಯಕ್ತಿಗತ ಗುಣದೋಷಗಳ ಹೇತು-ಹೇವಗಳ, ರಾಗ-ದ್ವೇಷಗಳ ಸ್ಪರ್ಶವಿಲ್ಲ, ಲಕ್ಷವಿಲ್ಲ.ಅಂದರೆ ರಾಜಕಾರಣಕ್ಕೆ ಅದೂ ಪಕ್ಷೀಯ ರಾಜಕೀಯಕ್ಕೆ ಸತ್ತೆಯೊಂದೇ ಗುರಿ. ""Power politics'' ಎಂಬ ಮಾತೇ ಒಂದು ರೀತಿ ಪುನರುಕ್ತಿ. All politics is for power. ರಾಜಕಾರಣವೆಲ್ಲ ರಾಜ್ಯಸತ್ತೆಗಾಗಿಯೇ, ಆದರೆ ಇಲ್ಲಿ ಒಂದು ವಿವೇಕವೆಂದರೆ, ಈ ಸತ್ತೆ ಒಂದು ತಾತ್ಕಾಲಿಕ ಸಾಧ್ಯ, ಆನಂತರದ ಸಾಧನ-ಜನತೆಯ ಕಲ್ಯಾಣಕ್ಕಾಗಿ.

ಎಲ್ಲರೂ ‘ಪತಿ’ಗಳಾಗರು!

ಒಂದು ಪಕ್ಷವೆಂದರೇನು? ಪಕ್ಷವೆಂದರೆ ಡಚ್ ಸೈನ್ಯದಂತೆ ಎಲ್ಲರೂ ಸೇನಾಪತಿಗಳು- ಯಾರೂ ಸೈನಿಕರಲ್ಲ- ಎಂಬಂತೆ ಅಲ್ಲ. ಬಹುಸಂಖ್ಯಾತ ಸದಸ್ಯರು ಕೂಡಿದಾಗಲೇ ಅದೊಂದು ಪಕ್ಷ. ಆ ಪಕ್ಷದ ತತ್ವಪ್ರಣಾಲಿಯಲ್ಲಿ, ಕಾರ್ಯಕ್ರಮದಲ್ಲಿ ಸಾಧ್ಯ-ಸಾಧನಗಳ ಹೊಂದಾಣಿಕೆಯಲ್ಲಿ ಮತ್ತು ಒಟ್ಟು ಸಾಧನೆಯ ಸಮರ್ಪಕತೆಯಲ್ಲಿ ನಂಬಿಗೆ ಇರುವ ಇಡುವ ಪ್ರೌಢರೆಲ್ಲರೂ ಒಂದಾಗಿ ಕೂಡಿ ಮುಂದಾಗಿ ಮಾಡಿದ ಸಂಘಟನೆ. ಈ ಸಂಘಟನೆಗಾಗಿ ಸದಸ್ಯರೋ? ಸದಸ್ಯರಿಗಾಗಿ ಸಂಘಟನೆಯೋ? ಇದನ್ನು ಸಂದರ್ಭೋಚಿತವಾಗಿಯೇ ನಿರ್ಣಯಿಸಬೇಕಾಗುತ್ತದೆ. ಅನೇಕ ಸಲ ತಾನು ಸಾಧಿಸಲು ಹೊರಟ ಧ್ಯೇಯಕ್ಕೆ ತಕ್ಕ ಧೋರಣೆ ಪಕ್ಷದ ಕೈಗೆ ಮೀರಿದ ಸಾಹಸವಾಗುತ್ತದೆ. ರಾಷ್ಟ್ರದ ಬಾಳಿನ ಒತ್ತಾಯ ಐತಿಹಾಸಿಕ ಅನಿವಾರ್ಯತೆ ಭರದಿಂದ ಸಾಗಿ ಅದರ ದಾಪಿಗೆ ತಕ್ಕ ಹೆಜ್ಜೆ ಹೊಂದಿಕೊಳ್ಳಲು ಪಕ್ಷದ ಮುಖಂಡರಿಗೋ ಕೆಲವೊಂದು ಗುಂಪುಗಳಿಗೋ ಶಕ್ಯವಾಗದೆ ಇಷ್ಟವಾಗದೇ ಹೋಗಬಹುದು. ಕಾಂಗ್ರೆಸ್‌ನ ಸ್ಥಿತ್ಯಂತರ
ಉದಾಹರಣೆಗೆ ಡೇವ್ಹಿಡ್‌ಹ್ಯೂಮ್ ಸ್ಥಾಪನೆ ಮಾಡಿದ ಕಾಂಗ್ರೆಸ್‌ನ ಗುರಿ ದಾರಿಗಳು ಯಾವುವಿದ್ದವು? ಲೋಕಮಾನ್ಯರ ಕಾಲದಲ್ಲಿ ಅವು ಏನಾದವು, ಗಾಂಧೀಜಿಯ ಯುಗದಲ್ಲಿ ಈ ಪಕ್ಷದ ಸ್ವರೂಪವೇನಾಯಿತು? ನೆಹರೂ ಪರ್ವದಲ್ಲಿ ಯಾವುದು, ಈಗ 1967ರ ಮಹಾ ಚುನಾವಣೆಗಳ ನಂತರದ ಸಂದರ್ಭದಲ್ಲಿ ಅದರ ನೋಟ-ನಿಟ್ಟು ನಡೆ ನಂಬಿಕೆಗಳೇನಾಗಿವೆ?

ಪಕ್ಷ ಒಂದು ಪ್ರವಾಹ. ಅದು ಒಂದೇ ಕಂಡರೂ ಅಲ್ಲಲ್ಲಿ ಅದರ ತಿರುವು ಮುರುವು ಆಳ ಅಗಲ, ವೇಗ ಓಘ ಎಲ್ಲ ಬೇರೆ. ಅಲ್ಲಿ ಪ್ರತಿ ಕ್ಷಣಕ್ಕೂ ಅದರ ನೀರೇ ಬೇರೆ. ಆದರೂ ಅದೊಂದು ಪ್ರವಾಹ. ಹಾಗೆಯೇ ಒಂದು ಪಕ್ಷ. ಸಿಡುಕು-ಒಡಕು ಸುರತ ಕಾಂಗ್ರೆಸ್‌ನಲ್ಲಿ ಕಾಂಗ್ರೆಸ್ ಇಬ್ಭಾಗವಾಯಿತು. ರೋಷಾವೇಷದ ವಿಕಾರಗೆಟ್ಟ ಪ್ರಸಂಗಗಳು ಬಹಳವಾದವು. ಅಧ್ಯಕ್ಷ ಸರ್ ಸುರೇಂದ್ರನಾಥ ಬ್ಯಾನರ್ಜಿಯು ವೇದಿಕೆಯಲ್ಲಿ ನಿಂತಾಗ ಅವರ ಕಡೆಗೆ ಚಪ್ಪಲಿಗಳನ್ನೂ ಕೊಳೆತ ತತ್ತಿಗಳನ್ನೂ ಎಸೆದರು. ತಿಲಕರ ಗುಂಪು ಕಾಂಗ್ರೆಸನ್ನು ಒಡೆಯಿತು. ತೀವ್ರವಾದಿಗಳು ಬೇರೆ ಆದರು. ಮಂದಗಾಮಿಗಳು ಹಿಂದೆ ಬಿದ್ದರು. ಮರುವರ್ಷ ತೀವ್ರವಾದಿಗಳೇ ಕಾಂಗ್ರೆಸನ್ನು ವಶಪಡಿಸಿಕೊಂಡರು. ಕಾಂಗ್ರೆಸು ಒಡೆದರೂ ಬಲಶಾಲಿಯಾಗಿ ಬೆಳೆದು ಒಡೆತನವನ್ನೇ ಪಡೆಯಿತು.
ಮುಂದೆ ತಿಲಕರ ಗುಂಪು-ತಿಲಕರ ನಂತರ- ಹಿಂದೆ ಬಿದ್ದಿತು. ಗಾಂಧೀಜಿಯ ಕೈಯಲ್ಲಿ ಕಾಂಗ್ರೆಸ್‌ನ ಸೂತ್ರಗಳು ಬಂದವು. ಹಳಬರೆಲ್ಲ ಹಾಹಾಕಾರ ಮಾಡಿದರು. ತಿಲಕ ಪಂಥಿಗಳು ಹೊಸ ಪಕ್ಷದ ಪಂಥ ತೊಟ್ಟರು. ಆದರೆ ಕಾಂಗ್ರೆಸ್ ಉತ್ತರೋತ್ತರ ಶಕ್ತಿಯಲ್ಲಿಯೂ ವ್ಯಾಪ್ತಿಯಲ್ಲಿಯೂ ಪ್ರಚಂಡವಾಗಿಯೇ ಬೆಳೆಯಿತು.

ನೆಹರೂ ಯುಗದಲ್ಲಿ
ಮುಂದೆ ನೆಹರೂಜಿ ಲಾಹೋರ್ ಕಾಂಗ್ರೆಸ್‌ನ ಅಧ್ಯಕ್ಷರಾದರು. ಆ ತನಕ ಗುರಿ ವಸಾಹತು ಸ್ವರಾಜ್ಯವಿತ್ತು. ನೆಹರೂ ರಿಪೋರ್ಟನ್ನೂ ‘ಸ್ವರಾಜ್ಯ ಪಕ್ಷ’ದವರು ಸಿದ್ಧಮಾಡಿದ್ದರು. ಆದರೆ ಅಂದಿನ ‘ತರುಣ ತರ್ಕ’ ನೆಹರೂ, ಸುಭಾಸ ಪ್ರಭೃತಿಗಳು ಒಪ್ಪಲಿಲ್ಲ. ಕಾಂಗ್ರೆಸ್ ಆಗಲೂ ಇಬ್ಭಾಗವಾಗುವುದರಲ್ಲಿ ಇತ್ತು. ಆದರೆ ಗಾಂಧೀಜಿ ತುಂಬ ದೂರದರ್ಶಿಗಳು. ಅವರು ಮೋತಿಲಾಲರಿಗೆ ಪತ್ರ ಬರೆದರು- ನಮ್ಮ ಕಾಲ ಮುಗಿಯುತ್ತ ಬಂದಿದೆ. ತರುಣರ ದಾರಿಯಲ್ಲಿ ನಾವು ತೊಡಕಾಗುವುದು ಬೇಡ. ಕೊನೆಗೂ ದೇಶ ಅವರದು. ಅವರ ಮುಂದಾಳುತನಕ್ಕೆ ಮಾರ್ಗ ಮಾಡಿಕೊಡೋಣ. ಆಯಿತು ಅಂದಿನಿಂದ ಪೂರ್ಣ ಸ್ವರಾಜ್ಯ ನಮ್ಮ ಗುರಿ ಆಯಿತು. ಮುಂದೆ ಗಾಂಧೀಜಿಯ ಉತ್ತರಾಧಿಕಾರಿ ಯಾರು? ರಾಜಾಜಿಯೋ ನೆಹರೂಜಿಯೋ? ಎಂಬ ಪ್ರಶ್ನೆ ಎದ್ದಾಗ ಗಾಂಧೀಜಿಯವರೇ ನಿಸ್ಸಂದಿಗ್ಧ ಉತ್ತರವಿತ್ತರು.- ರಾಜಾಜಿ ಅಲ್ಲ ನೆಹರೂಜಿ ಎಂದು.

ಹಳೆಯದರ ಬದಲು....
ಈ ಕೆಲವು ಮೈಲುಗಲ್ಲುಗಳತ್ತ ಬೆರಳಿಟ್ಟು ತೋರಿಸಿದ್ದೇಕೆ? ಬೆಳೆಯುವ ಪಕ್ಷ ಬಲಿಯುತ್ತದೆ, ಒಳ ಒತ್ತಡಕ್ಕೆ ಬಿರಿಯುತ್ತದೆ. ಅದರಿಂದ ಶಕ್ತಿ ಸಂವರ್ಧನೆಯೇ ಆಗುತ್ತದೆ-ತಾತ್ಕಾಲಿಕವಾಗಿ ಭಂಗವೋ ಭಯವೋ ಸೋಲು ನೋವುಗಳೋ ಏನೇನೋ ಅನುಭವಕ್ಕೆ ಬಂದಾಗ್ಯೂ.
""Old order changeth
Yielding place to new
And God fulfills Himself in many ways
Lest one good Custom should corrupt the world.''

ಅಂದಿಲ್ಲವೇ ಮಹಾ ಕವಿ ಟೆನಿಸಸ್? ದೈವೇಚ್ಛೆ ಈಶ ಸಂಕೇತ ಹಲವು ಪರಿಯಾಗಿ ಪೂರೈಸಲ್ಪಡುವುದುಂಟು. ಒಂದು ಒಳ್ಳೆಯ ಸಂಪ್ರದಾಯವಾದರೂ ಬದಲಾಗದಿದ್ದರೆ ಅದರಿಂದ ಹಾನಿ ಹಾಳೇ ಆಗುತ್ತದೆ. ಆದ್ದರಿಂದ ಹಳೆಯ ವ್ಯವಸ್ಥೆ ಸಂಘಟನೆ ಹೋಗಿ ಹೊಸತು ಬರುತ್ತದೆ- ಬಂದರೆ ಅದು ಅನಾಹುತವಲ್ಲ.

ಸತ್ತೆ ಗುರಿಯ ಸಾಧನೆಗೆ
ಕೆಲವು ಜೀವಾಣುಗಳು ಇಬ್ಭಾಗವಾಗಿಯೇ ವೃದ್ಧಿ ಹೊಂದುತ್ತವೆ.
ಕೆಲವು ಪ್ರಚಂಡ ರಾಜಕೀಯ ಪಕ್ಷಗಳೂ ಹಾಗೆಯೇ ಸರಿ.
ಒಂದು ಪಕ್ಷದ ಮುಂದಾಳು ವರ್ಗಸತ್ತೆಗಾಗಿಯೇ ಹೋರಾಡುತ್ತದೆ. ಬಹುಮತದಿಂದ ಸರಕಾರ ಕಟ್ಟುತ್ತದೆ- ಸರಕಾರದ ಬಲದಿಂದ ತನ್ನ ಯೋಜನೆ ಕಾರ್ಯಗತಗೊಳಿಸಲಿಕ್ಕೆ. ಸತ್ತೆಗಾಗಿ ಅದರ ಪಾಲುಗಾರಿಕೆಗಾಗಿ ಹೆಣಗಾಡುವುದು ಯಾವ ಪಾಪವೂ ಅಲ್ಲ. ಆದರೆ ಅದರ ಗುರಿ ದಾರಿ ಅದರ ಜವಾಬ್ದಾರಿ ಇವು ಮಹತ್ವದವು.
ಎಲ್ಲರಿಗೂ ಒಂದೇ ತಾರೆ
ಜಾನ್ ಕೆನಡಿ ಅಮೆರಿಕದ ಅಧ್ಯಕ್ಷನಾಗಲು ಹೆಣಗಾಡಿದನು. ಅವನಿಗೆ ಯಾರೋ ಕೇಳಿದರು. ‘‘ನೀನು ಶ್ವೇತಭವನಕ್ಕೆ ಹೋಗಲು ಯಾಕೆ ಬಯಸುತ್ತೀ?’’ ಆತ ಒಂದೇ ಮಾತಿನಲ್ಲಿ ಉತ್ತರವಿತ್ತನು. ""There is power there'' (ಅಲ್ಲಿ ಅಧಿಕಾರ ಸತ್ತೆ ಇದೆ!) ಅಂದಾಗ ಕಾಂಗ್ರೆಸ್ ಏನು, ಜನಸಂಘವೇನು, ಕಮ್ಯುನಿಸ್ಟರೇನು, ಸೋಶಲಿಸ್ಟರೇನು. ಯಾವ ನಿಷ್ಠರೇನು- ಎಲ್ಲರೂ ಕಣ್ಣಿಟ್ಟ ಧ್ರುವತಾರೆ ಅಧಿಕಾರ ಸತ್ತೆ. ತಾನು ಅದನ್ನು ಬಯಸುವುದು ಸೇವೆಗಾಗಿ, ತನ್ನ ಇದಿರಾಳಿ ಬಯಸುವುದೋ- ಛೇ ಅದು ಅಧಿಕಾರ ಲಾಲಸೆ! ಇಷ್ಟೇ ವ್ಯತ್ಯಾಸ!

ಜನೇಚ್ಛೆಗೆ ಒಡ್ಡು ಸಲ್ಲ
ಜನತೆ ಒಂದು ವಿಚಾರ ಮನದಟ್ಟು ಮಾಡಿಕೊಳ್ಳಬೇಕು. ಒಂದು ಪಕ್ಷದ ಸ್ವಾರ್ಥ-ಅದರ ಅಧಿಕಾರ ಪ್ರಯೋಜನದ ಕಲ್ಪನೆ-ದೇಶದ ಬಹುಸಂಖ್ಯ ಪ್ರಜೆಗೆ ಅಥವಾ ವರ್ಚಸ್ವಿಯಾದ ವರ್ಗಕ್ಕೆ ಹಿತಕಾರಿ ಆಗುವತನಕ ಆ ಪಕ್ಷವನ್ನು ಆ ವರ್ಗಕ್ಕೆ ಆ ಪ್ರಜೆ ಎತ್ತಿ ಹಿಡಿದು ಹಿಂಬಾಲಿಸುತ್ತದೆ. ಆದರೆ ಪಕ್ಷದ ಮೂಲಕ ಒಂದು ವರ್ಗದ ಹಿತ ತೃಪ್ತಿ ಆದೊಡನೆ ಆ ವರ್ಗ ಹಿಂದೆ ಬೀಳುತ್ತದೆ. ಹಾಗೆಯೇ ಪಕ್ಷದ ಪ್ರಯೋಜನ ಮುಗಿದು ಅದೂ ಕಾಲನ ಕಸದ ಬುಟ್ಟಿಯನ್ನು ಸೇರುತ್ತದೆ. ಆಗ ಅತೃಪ್ತ ಜನತೆ ಇನ್ನೊಂದು, ತನ್ನ ಆಶೋತ್ತರಗಳಿಗೆ ಸಮರಸವಾಗಬಹುದೆಂದು ಭಾವಿಸಿದ ಪಕ್ಷವನ್ನು ಎತ್ತಿ ಹಿಡಿಯುತ್ತದೆ.

‘ನಾಯಕತ್ವ’ ಏನು?
ಒಂದು ಪಕ್ಷದಲ್ಲಿಯೂ ಹಾಗೆಯೇ ಅದರ ಕೈಗೆ ಸತ್ತೆ ಬಂದಾಗ ಈ ಸತ್ತೆಯ ವಿನಿಯೋಗದ ಬಗೆಗೆ ಮತಭೇದ ಬಿದ್ದು ಪಕ್ಷದಲ್ಲಿ ಪಂಗಡಗಳು ಏಳುತ್ತವೆ. ಆಗ ಒಂದು ಪಂಗಡದ ನಾಯಕತ್ವದ ವೈಯಕ್ತಿಕ ಸ್ವಾರ್ಥವೇನೇ ಇದ್ದರೂ, ಅದರ ಒಟ್ಟು ನಿಲುಮೆ ಪಕ್ಷದ ಬಹುಸಂಖ್ಯರಿಗೆ ಅವರು ಪ್ರತಿನಿಧಿಸುವ ಜನತೆಗೆ ಪ್ರಗತಿಪರವೆಂದೂ ತಮ್ಮ ಕಲ್ಯಾಣದ್ದೆಂದೂ ಅನಿಸಿದರೆ ಅವರೆಲ್ಲ ದೊಡ್ಡ ಪ್ರಮಾಣದಲ್ಲಿ ಈ ನಾಯಕತ್ವಕ್ಕೆ ಅನುಯಾಯಿಯಾಗುತ್ತಾರೆ-ಇನ್ನೊಂದು ಪಂಗಡದ ನಾಯಕರು ವ್ಯಕ್ತಿಶಃ ಎಷ್ಟೇ ಜ್ಯೇಷ್ಠರಾಗಿದ್ದರೂ!

ಧರ್ಮಕ್ಕೆ ವಿಚಿತ್ರ ಮೂಲ
ಇಂಗ್ಲೆಂಡ್‌ನಲ್ಲಿ ಹಿಂದೆ 8ನೆಯ ಹೆನ್ರಿ ಎಂಬ ಕಾಮುಕ ರಾಜನು ಕುಲೀನಳಲ್ಲದ ಒಬ್ಬ ದಾಸಿಯನ್ನು ಮದುವೆ ಆಗುವ ಹಟಕ್ಕೆ ಬಿದ್ದು ಪೋಪ್‌ರೊಡನೆ ಜಗಳಾಡಿ ಅದರ ರೊಚ್ಚಿನಲ್ಲಿ ಇಂಗ್ಲೆಂಡ್‌ಗೆ ಪೋಪ್‌ರ ಸತ್ತೆ ಇರದ ಪ್ರೊಟೆಸ್ಟಂಟ್ ಪಂಥ ಜಾರಿಗೆ ತಂದನು. ಅವನ ಖಾಸಗಿ ‘ಸ್ಟಂಟು’ ಈ ರಾಷ್ಟ್ರಕ್ಕೆ ಧರ್ಮಕ್ರಾಂತಿಯನ್ನೇ ತಂದು ಇತಿಹಾಸದ ಹೊಸ ಅಧ್ಯಾಯಕ್ಕೆ ಆರಂಭ ಮಾಡಿಕೊಟ್ಟಿತು.

Writer - ಗೌರೀಶ ಕಾಯ್ಕಿಣಿ

contributor

Editor - ಗೌರೀಶ ಕಾಯ್ಕಿಣಿ

contributor

Similar News