ಮೆಕ್‌ಮಹೋನ್ ರೇಖೆಯ ಹಿಂದೆ...

Update: 2020-03-04 18:16 GMT

1962ರಲ್ಲಿ ಚೀನೀಯರ ದಾಳಿಯಾದಾಗ ನಮ್ಮ ಆತ್ಮೀಯತೆಗೆ ಮತ್ತು ರೆ ಎನ್ ಲಾಯಿಯನ್ನು ದೃಢವಾಗಿ ನಂಬಿದ ನಮ್ಮ ನೆಹರೂಜಿ ಅವರ ಸದ್ಭಾವನೆಗೆ ಒಮ್ಮೆಲೇ ಬಲವಾದ ಪೆಟ್ಟು ಬಿತ್ತು. ಕಿನಕಾಪಿನ ಕೈಚೀಲದೊಳಗೆ ಚೀನಿ ಕೈಯ ಉಕ್ಕಿನ ಮುಷ್ಟಿಯು ಕಾಣಿಸಿಕೊಂಡಿತ್ತು. ಆಗ ಪ್ರತಿಭಟನೆಯ ಕರ್ಕಶ ಧ್ವನಿಯಲ್ಲಿ ನಮ್ಮ ಸಂಸತ್ ಸದಸ್ಯರೆಂಬ ರಾಜಕೀಯ ‘ಪುಢಾರಿ’ಗಳು ಹುಚ್ಚಾಪಟ್ಟೆ ಸೂಚನೆಗಳನ್ನು ಮುಂದಿಟ್ಟರು. ಮುಗ್ಧವೋ, ಮೂಢವೋ, ಅಮಾಯಕವೋ, ವಾಗಾಡಂಬರದ ವಲ್ಗನೆಯೋ ಹಲವಾರು ‘ನಹಿ ರಾವಣನಿಗೆ ನೋಟಿಸ್’ ಜಾರಿ ಮಾಡಿದರು. ಅವೆಲ್ಲ ಚೀನಿ ಆಕ್ರಮಣದ ಕಡು ಸತ್ಯಕ್ಕೆ ನಮ್ಮ ಪ್ರತಿಕ್ರಿಯೆಗಳು- ಅತಿರೇಕದ, ಅವಿವೇಕದ, ಅದೂರದರ್ಶಿಯಾದ ಅವಾಸ್ತವ, ಅವ್ಯವಹಾರ್ಯವಾದ ಪ್ರತಿಕ್ರಿಯೆಗಳನ್ನು ಪ್ರಸ್ತಾಪಿಸಿದರು. ಅವುಗಳ ಕೆಲವು ಸ್ಯಾಂಪಲ್‌ಗಳನ್ನು ನೋಡಿರಿ. ‘‘ಚೀನಿ ದಂಡುಗಳಿಗೆ ಹಿಂದಿರುಗಿ ಹೋಗಲಿಕ್ಕೆ ಒಂದು ನಿಶ್ಚಿತ ದಿನಾಂಕವನ್ನು ಕೊಡಬೇಕು’’, ‘‘ನೇತಾಜಿ ಸುಭಾಷ್‌ಚಂದ್ರರ ಮುಖಮುದ್ರೆ ಸ್ಟ್ಯಾಂಪ್‌ಗಳನ್ನು ಜಾರಿಯಲ್ಲಿ ತರಬೇಕು-ಜನತೆಯ ಜವಾನರ ಮನೋಬಲವನ್ನು ಕುದುರಿಸಲಿಕ್ಕೆ’’, ‘‘ಪ್ರಪಂಚದ ಒಂದೊಂದು ಪ್ರಜಾಸತ್ತಾತ್ಮಕ ರಾಷ್ಟ್ರದಿಂದ ಒಂದೊಂದು ಸೈನ್ಯ ಪಡೆಯನ್ನು ನೇರ ಹಿಮಾಲಯದಲ್ಲಿ ಚೀನಿಯರನ್ನು ಎದುರಿಸಲು ರವಾನಿಸಬೇಕು.’’, ‘‘ನಮ್ಮ ಎಂಪಿಗಳನ್ನು ಯುದ್ಧರಂಗಕ್ಕೆ ಅಟ್ಟಬಾರದೇಕೆ?’’, ‘‘ಅವರಿಗೆ ದಂಡಿನಲ್ಲಿ ಮೇಜರ್ ಶ್ರೇಣಿ ನೀಡಿ ಅವರನ್ನು ರಿಕ್ರೂಟಿಂಗ್ ಅಧಿಕಾರಿಗಳನ್ನಾಗಿ ನೇಮಿಸಬೇಕು’’- ಇತ್ಯಾದಿ, ಇತ್ಯಾದಿ. ಅಂದು ನಾವು ಆಕ್ರಮಣದ ಆಘಾತದಿಂದ ಇಷ್ಟು ಧೃತಿಗೆಟ್ಟಿದ್ದೆವೆಂಬುದಕ್ಕೆ ಈ ಅಮೂಲ್ಯ ಸಲಹೆಗಳೇ ಸಾಕ್ಷಿ.

ಇವೆಲ್ಲ ‘ನ್ಯಾಸ’ಗಳ ಅರ್ಥವೇನು? ನೆಹರೂಜಿ ಉದ್ವಿಗ್ನರಾಗಿ ಉದ್ಗರಿಸಿದರು. ‘‘ಒಂದಂಗುಲ ನೆಲ ಬಿಡಬಾರದೆಂಬ ಈ ಮಾತಿನ ಸುಡುಮದ್ದಿನ ಭಾಷೆ ನನಗೆ ಸೇರುವುದಿಲ್ಲ. ಇಲ್ಲಿ ಸಂಸತ್ತನ್ನು ಕುರಿತು ಇದೆಲ್ಲದರ ಅರ್ಥವೇನೆಂಬುದನ್ನು ಅರಿಯದ ಭಾಷೆಯಿದು!’’. ಇದೇ ಚೀನಿ ಆಕ್ರಮಣದ ಸಮಸ್ಯೆಯನ್ನು ಇನ್ನೂ ಆಳದ ಸೆಳವಿಗೆ ಬಳಸಿಕೊಳ್ಳುವ ಹಂಚಿಕೆ ನಡೆದಿತ್ತು- ಈ ಸಂಧಿಯನ್ನು ಸಾಧಿಸಿ ನಮ್ಮ ದೇಶವನ್ನು ತಟಸ್ಥ ನಿಲುಮೆಯಿಂದ ಬೇರ್ಪಡಿಸಿ ಅಮೆರಿಕದ ವಲಯಕ್ಕೆ ಸೆಳೆಯುವ ಹೊಂಚದು. ಅಂದು ನೆಹರೂಜಿ ಅಧ್ಯಕ್ಷ ಕೆನಡಿಯವರಿಂದಲೇ ಅಗತ್ಯವಿದ್ದರೆ ನೆರವು ಕೋರಿದ್ದರು. ಅಮೆರಿಕದ ಏಳನೇ ನೌಕಾದಳ ಬಂಗಾಳ ಉಪ ಸಾಗರದಲ್ಲಿ ಕಾಯುತ್ತಿತ್ತು. ಹೊಂಚುಗಾರರ ಹಂಚಿಕೆಗೆ ಇದೊಂದು ಸರ್ವಣಿಯಾಗಿತ್ತು.

 ಅಂದು ಅಮೆರಿಕ ಚೀನಾವನ್ನು ತೀವ್ರವಾಗಿ ವಿರೋಧಿಸುತ್ತಿತ್ತು. ಭಾರತ-ಚೀನಾಗಳ ನಡುವೆ ವ್ಯಾಜ್ಯವಿತುಷ್ಟವೆದ್ದರೆ ಅದು ಅಮೆರಿಕಕ್ಕೆ ಇಷ್ಟವೇ ಆಗಿತ್ತು. ಇಷ್ಟೇ ಅಲ್ಲ, ಈ ನಿಮಿತ್ತವಾಗಿ ನೆಹರೂಜಿ ಪ್ರಧಾನಿ ಪದಾಧಿಕಾರದಿಂದ ಪದಚ್ಯುತರಾದರೆ ಅದು ಅಮೆರಿಕಕ್ಕೆ ಅಪ್ಯಾಯಮಾನವೇ ಆಗಿತ್ತು. (ಅಮೆರಿಕ ತನ್ನ ಸರಹದ್ದನ್ನು ಏಶ್ಯದಲ್ಲಿ ಕಾಣುತ್ತಿತ್ತು. ಕಮ್ಯುನಿಸಂ ವಿರೋಧದ ಅದರ ಕುರುಡು ಕರ್ಮದ ಧೋರಣೆಯಲ್ಲಿ!)

ಆದರೆ ನೆಹರೂಜಿಗೆ ಇದರ ಇಂಗಿತದ ಅರಿವಿತ್ತು. ಅವರು ತಾಳ್ಮೆಯಿಂದ ಕಾಯ್ದರು. ಚೀನಿ ದಂಡು ಹಿಮಾಲಯದಿಂದ ತಾನಾಗಿಯೇ ಹಿಂದೆ ಸರಿಯಿತು. ಅವರಿಗೆ ತಮ್ಮ ಗಡಿರೇಖೆಯ ಬಗೆಗೆ ತಮ್ಮ ಪ್ರಚಂಡ ಬಲ ಪ್ರದರ್ಶನವನ್ನು ಭಾರತಕ್ಕೆ ಕಾಣಿಸುವುದಿತ್ತು. ಭಾರತ-ಚೀನಾ ಗಡಿ ಸಮಸ್ಯೆಯನ್ನು ಬೆಳಕಿಗೆ ಎತ್ತಿಹಿಡಿಯುವುದು ಬೇಕಾಗಿತ್ತು.

ಈ ಸಮಸ್ಯೆಯ ಇತ್ಯರ್ಥ ಸೈನ್ಯ ಶಕ್ತಿಯ ಮುಖಾಮುಖಿಯಿಂದಲ್ಲ, ಮುತ್ಸದ್ದಿಗಳ ಬುದ್ಧಿಶಕ್ತಿಯಿಂದ ರಾಜಕೀಯ ನಿರ್ಣಯವಾಗಿಯೇ ಬಗೆಹರಿಸಬೇಕು ಎಂದು ಅಂದು ನಮ್ಮ ದಿ. ಜನರಲ್ ತಿಮ್ಮಯ್ಯ ಅಭಿಪ್ರಾಯಪಟ್ಟಿದ್ದರು.

ಮೊನ್ನೆ ತಾನೆ ನಮ್ಮ ಪ್ರಧಾನಿ ಚೀನಾಕ್ಕೆ ಹೊರಡುವ ಒಂದು ವಾರ ಪೂರ್ವದಲ್ಲಿ ‘ಬೀಜಿಂಗ್ ರಿವ್ಯೆ’ ಎಂಬ ಚೀನಿ ಸರಕಾರದ ಅಧಿಕೃತ ಪ್ರಕಟನೆಯ ಸಾಪ್ತಾಹಿಕವು ಒಂದು ವಿಶೇಷ ಲೇಖನದಲ್ಲಿ ತಿಳಿಯ ಪಡಿಸಿದಂತೆ ಈ ಸರಹದ್ದಿನ ಮೆಕ್ ಮಹೋನ್ ರೇಖೆಯು ನಮ್ಮ ಉಭಯ ರಾಷ್ಟ್ರಗಳ ನಡುವೆ ನಿಂತ ಹಿರಿಯ ಸಮಸ್ಯೆ. ಅದು ನಮ್ಮ ಇತಿಹಾಸದ್ದೇ ಬಳುವಳಿ. 1914ರಲ್ಲಿಯೇ ಬ್ರಿಟನ್, ಭಾರತ, ಚೀನಾ, ನೇಪಾಳ ಎಲ್ಲರೂ ಕೂಡಿ ಈ ಮೆಕ್ ಮಹೋನ್ ಗಡಿ ರೇಖೆ (1,700 ಕಿ.ಮೀ.)ಯನ್ನು ಒಪ್ಪಿಕೊಂಡಿದ್ದಾಗಿತ್ತು. ಆದರೆ ಇದು ಒಟ್ಟಿನಲ್ಲಿ ಬ್ರಿಟಿಷರು ಆಳರಸರು ಹೇರಿದ್ದು. ಚೀನಾದ ಸರಕಾರ ಈ ಗಡಿರೇಖೆಯನ್ನು ಎಂದೂ ಒಪ್ಪಿದ್ದಿಲ್ಲವಂತೆ. ಈ ರೇಖೆ ಕಾನೂನಿಗೆ ಬಾಹಿರ ಮತ್ತು ಅಸಿಂಧು ಎಂದೇ ಚೀನಿ ಸರಕಾರ ಪ್ರತಿಪಾದಿಸುತ್ತಾ ಬಂದಿದೆ.

ಆದರೆ ಚೀನಾ ಇದೊಂದು ಸಮಸ್ಯೆಯನ್ನು ಬದಿಗೆ ಇರಿಸಿ ಇತರ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳು ಸಂಬಂಧಗಳನ್ನು ಬೆಳೆಸಬಹುದೆಂದು ಆಗಾಗ ಸೂಚಿಸಿದ್ದುಂಟು. ಆದರೆ ಭಾರತದ ನಿಲುಮೆ ತದ್ವಿರುದ್ಧವಾಗಿತ್ತು. ಆ ಗಡಿ ಸಮಸ್ಯೆಯು ಇತ್ಯರ್ಥವಾಗದಿದ್ದರೆ ಇತರ ಸಂಬಂಧಗಳು ಬೆಳೆಯುವುದು ಶಕ್ಯವಿಲ್ಲ. ಆದರೆ 1981ರಲ್ಲಿ ಗಾಳಿಯ ದಿಕ್ಕು ತುಸು ಬದಲಾಯಿತು. ಅದರ ಉಪಕ್ರಮ ಭಾರತದಿಂದಲೇ ಬಂತು- ಚೀನಾದೊಂದಿಗೆ ಭಾರತದ ಸಂಬಂಧಗಳನ್ನು ವಿಶಾಲಗೊಳಿಸುವ ಕುರಿತು. ಗಡಿ ಮಾತುಕತೆಗಳನ್ನು ಚೀನಾ ಎತ್ತಿಕೊಳ್ಳುವುದರ ಬದಲಾಗಿ ಕಳೆದ ಏಳು ವರ್ಷ ಉಭಯ ರಾಷ್ಟ್ರಗಳ ಸಂಬಂಧಪಟ್ಟ ಅಧಿಕಾರಿಗಳು ಈ ಗಡಿ ಸಮಸ್ಯೆಯ ಕುರಿತಾಗಿ ಕುಶಲ ಮಾತುಕತೆ ನಡೆಸಿದ್ದಾರೆ. ಆದರೆ ಇದರಿಂದ ಹೆಚ್ಚೇನೂ ಪ್ರಗತಿ ಸಾಧ್ಯವಾಗದು. ಆದಾಗ್ಯೂ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಇದರಿಂದ ಸಾಧ್ಯವಾಗಿದೆ. (ಎಷ್ಟು ಏನಂತೆ? ಅಮೆರಿಕ ಮತ್ತು ಚೀನಾಗಳ ನಡುವಿನ ಜಿಡುಕುಗಳನ್ನು ಹಿಂಜಿಕೊಳ್ಳಲು ವರ್ಷದಲ್ಲಿ ಸಾವಿರ ಸುತ್ತು ಮಾತುಕತೆಗಳು ನಡೆದಿದ್ದುಂಟು!.)

ಇಲ್ಲಿ ಒಂದು ಸಂಗತಿಯನ್ನು ಮರೆಯುವಂತಿಲ್ಲ. ಮೂಲತಃ ನಮ್ಮಿಂದ ಒಂದು ತಪ್ಪಾಗಿದೆ. ಮೆಕ್‌ಮಹೋನ್ ಗಡಿರೇಖೆ ಬ್ರಿಟಿಷರ ಕಾಣಿಕೆ. ಅವರ ಆಧಿಪತ್ಯದ ಜರಬಿಗೆ ಚೀನಾವು ಅವರ ಆಳ್ವಿಕೆಯಲ್ಲಿ ಸುಮ್ಮನೆ ಉಳಿಯಿತು. ಆದರೆ ಸ್ವಾತಂತ್ರ್ಯ ಬಂದ ಮೇಲೆಯೂ ಆ ಯಥಾಸ್ಥಿತಿಯನ್ನು ನಾವು ಒಪ್ಪಿಕೊಂಡು ನಡೆದೆವು. ಚೀನಾಕ್ಕೆ ಎಂದೂ ಮಾನ್ಯವಾಗದಿದ್ದ ಈ ಗಡಿರೇಖೆಯನ್ನು ಬ್ರಿಟಿಷರ ಸತ್ತೆ ಮುಗಿದ ಮೇಲೆ ನಾವು ಅವರೊಡನೆ ಪುನಃ ವಿಮರ್ಶಿಸಿ ತಿದ್ದಿಕೊಳ್ಳಬೇಕಿತ್ತು. ಅದು ಊರ್ಜಿತವಾಗಿಯೇ ಉಳಿದಿದೆ. ಉಳಿಯಬೇಕೆಂದು ಭಾವಿಸುವ ಭಾವುಕತನ ತೋರಿಸ ಬಾರದಿತ್ತು. ಚೀನಾದ ಕುರಿತು ನಮ್ಮ ಗುರಿಗಳನ್ನು ಸ್ಪಷ್ಟಗೊಳಿಸಬೇಕಿತ್ತು.

ಬ್ರಿಟಿಷ್ ಆಧಿಪತ್ಯ ಹೋದ ನಂತರ ಚೀನಾದಲ್ಲಿಯೂ ಕಮ್ಯುನಿಸ್ಟ್ ಕ್ರಾಂತಿ ಆದ ನಂತರ ಚೀನಾವು ಟಿಬೆಟನ್ನು ಆಕ್ರಮಿಸಿ ವ್ಯಾಪಿಸಿತು. ಟಿಬೆಟ್ ಚೀನಾದ ಚಕ್ರಾಧಿಪತ್ಯಕ್ಕೆ ನಾಮ ಮಾತ್ರವಾಗಿ ಸೇರಿದ್ದು, ವ್ಯವಹಾರತಃ ದಲಾಯಿಲಾಮಾ ಆಳ್ವಿಕೆಗೆ ಒಳಪಟ್ಟ ಸ್ವಾಯತ್ತ ದೇಶವಾಗಿತ್ತು. ಆದರೆ ಕೆಂಪು ಚೀನಾ ತನ್ನ ಆಧಿರಾಜ್ಯವನ್ನು ಅಲ್ಲಿ ಸ್ಥಾಪಿಸಿತು. ಇದರಿಂದ ಚೀನಾದ ಗಡಿ ಆ ಭಾಗದಲ್ಲಿ ಭಾರತದ ಗಡಿಗಳಿಗೆ ನೇರ ಸಂಧಿಸಿತು. ಎರಡು ಮಹಾರಾಷ್ಟ್ರಗಳ ಗಡಿ ಹೀಗೆ ಒಂದೇ ಆಗಿರುವುದು ಗಂಡಾಂತರದ್ದೇ. ಈ ಗಂಡಾಂತರ ಇನ್ನೂ ಉಲ್ಬಣಿಸಲು ಕಾರಣ ಭಾರತವು ತನ್ನ ಎಂದೆಂದಿನ ಸಂಪ್ರದಾಯದಂತೆ ಟಿಬೆಟ್‌ನ ಪದಚ್ಯುತ, ಪಲಾಯನ ಮಾಡಿ ಬಂದ ದಲಾಯಿಲಾಮಾರಿಗೆ ಆಶ್ರಯ ನೀಡಿತು. ಇದರಿಂದ ಚೀನಾದ ದ್ವೇಷವನ್ನು ತನ್ನ ಮೇಲೆ ಎಳೆದುಕೊಂಡಿತು. ಉದ್ದಕ್ಕೂ ನಮ್ಮ ನಿಲುಮೆ ಆತ್ಮ ಸಂಭಾವಿತತನದ್ದಾಯಿತು. ನಮ್ಮ ಧೋರಣೆಯು ಸುಸ್ಪಷ್ಟ ಹಾಗೂ ನ್ಯಾಯ ಸಮ್ಮತವಿದ್ದು ಅದನ್ನು ಚೀನಾ ಉಭಯ ರಾಷ್ಟ್ರಗಳ ಸರ್ವೋಪರಿ ಸ್ನೇಹಕ್ಕಾಗಿ ಒಪ್ಪಿಕೊಂಡೇ ಬಿಡುವುದೆಂಬ ಸುಖಸ್ವಪ್ನದಲ್ಲಿಯೇ ನಾವು ಉಳಿದೆವು. ನಮ್ಮ ಧೋರಣೆ ನಿಲುವುಗಳನ್ನು ನಾವು ಸಲೀಸಾಗಿ ಸಮಂಜಸವೆಂದು ಸಾಧಿಸಬಲ್ಲೆವೆಂದೇ ನಂಬಿ ಕೆಟ್ಟೆವು. ಕ್ರಾಂತಿಗೊಂಡ ಹೊಸ ಚೀನಾದೊಂದಿಗೆ ಸ್ವತಂತ್ರ ಭಾರತವು ಹೊಸ ಸಂದರ್ಭವನ್ನು ಅನುಲಕ್ಷಿಸಿ ಹೊಸ ತಿಳಿವಳಿಕೆ, ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ‘‘ಭಾಯಿ-ಭಾಯಿ’’ ಎಂದುಕೊಂಡು ಸಂತೋಷ ಪಟ್ಟೆವು. ಆದರೆ ಸೋದರರೇ ದಾಯಾದಿಗಳಾಗುವಾಗ ನಮ್ಮ ಈ ಭಾವ ಬಾಂಧವ್ಯದ ಕನಸು ಕರಗಲಿಕ್ಕೆ ತಡವಾಗಲಿಲ್ಲ.

(1980ರಲ್ಲಿ ಬರೆದ ಲೇಖನ)

Writer - ಗೌರೀಶ ಕಾಯ್ಕಿಣಿ

contributor

Editor - ಗೌರೀಶ ಕಾಯ್ಕಿಣಿ

contributor

Similar News