ಮೀನು ಮಾರುಕಟ್ಟೆಗೆ ತಟ್ಟಿದ ಸುಳ್ಳುಸುದ್ದಿಯ ಬಿಸಿ

Update: 2020-03-18 06:31 GMT

►ಅಪಪ್ರಚಾರಕ್ಕೆ ಕಿವಿಗೊಡದಂತೆ ಮನವಿ

 ಉಡುಪಿ, ಮಾ.17: ಕೊರೋನ ವೈರಸ್ ಸೋಂಕು ಕುರಿತು ಸಾಮಾಜಿಕ ಜಾಲತಾಣ ಗಳಲ್ಲಿ ಹರಡುತ್ತಿರುವ ವದಂತಿಯು ಕುಕ್ಕುಟೋದ್ಯಮದ ನಂತರ ಇದೀಗ ಮತ್ಸೋದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೀನಿಗೆ ಸಂಬಂಧಿಸಿ ಹಬ್ಬುತ್ತಿರುವ ಸುಳ್ಳು ಸುದ್ದಿಗಳಿಂದ ಮಾರುಕಟ್ಟೆಯಲ್ಲಿ ಮೀನು ಖರೀದಿಯ ಪ್ರಮಾಣದ ಇಳಿಕೆಯಾಗುತ್ತಿದೆ. ಕೋಳಿ ತಿಂದರೆ ಕೊರೋನ ವೈರಸ್ ಬರುತ್ತದೆ ಎಂಬ ವದಂತಿಯಂತೆ, ಮೀನುಗಳಲ್ಲೇ ಕೊರೋನ ವೈರಸ್ ಕಂಡುಬಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಇದರಿಂದ ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರಕ್ಕೆ ಯಾವುದೇ ತೊಂದರೆಯಾಗದಿದ್ದರೂ ಇಲ್ಲಿಂದ ಮೀನು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರಿಗೆ ಅದರ ಬಿಸಿ ತಟ್ಟುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಮೀನು ಮಾರಾಟ ಮಾಡುವ ಸುಮಾರು 1,500 ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ‘ಕೆಲವು ಕಿಡಿಗೇಡಿಗಳು ಹಬ್ಬಿಸುತ್ತಿರುವ ಸುಳ್ಳು ವದಂತಿಯಿಂದ ಮಾರುಕಟ್ಟೆಯಲ್ಲಿ ಗ್ರಾಹಕರು ಮೀನು ಖರೀದಿಸುವ ಪ್ರಮಾಣ ಕಡಿಮೆಯಾಗಿದೆ. ಇದೇ ರೀತಿ ಮುಂದುವರಿದರೆ ಮೀನುಗಾರರಿಗೆ ದೊಡ್ಡ ಹೊಡೆತ ಬೀಳಲಿದೆ. ಮೀನುಗಳು ಆಳ ಸಮುದ್ರದಲ್ಲಿ ದೊರೆಯುತ್ತವೆ. ಅದರಲ್ಲಿ ಕೊರೋನ ವೈರಸ್ ಹರಡುತ್ತಿದೆ ಎಂಬುದು ಶುದ್ಧ ಸುಳ್ಳು. ಇಂತಹ ವದಂತಿಗೆ ಗ್ರಾಹಕರು ಕಿವಿಕೊಡಬಾರದು’ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ಮನವಿ ಮಾಡಿದ್ದಾರೆ.

ಮೀನುಗಾರರಲ್ಲಿ ಜಾಗೃತಿ: ಒಂದು ತಿಂಗಳ ಹಿಂದೆ ಕೇರಳದಲ್ಲಿ ಸೋಂಕು ಪತ್ತೆಯಾದ ಸಂದರ್ಭದಲ್ಲೇ ಮಲ್ಪೆ ಮೀನುಗಾರ ಸಂಘದ ಸದಸ್ಯರು ಸೇರಿದಂತೆ ಮೀನುಗಾರರಿಗೆ ಕೊರೋನ ವೈರಸ್ ಬಗ್ಗೆ ಮೀನುಗಾರಿಕಾ ಇಲಾಖೆ, ಕರಾವಳಿ ಕಾವಲು ಪಡೆಯವರು ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.

ಕೇರಳದ ಕಡೆ ಮೀನುಗಾರಿಕೆಗೆ ತೆರಳದಂತೆ ಸೂಚಿಸಿದ್ದು, ಹೋದರು ಕೂಡ ಅಲ್ಲಿನ ಬಂದರುಗಳಿಗೆ ಪ್ರವೇಶಿಸಿದಂತೆ ತಿಳಿಸಲಾಗಿದೆ. ಅದೇರೀತಿ ಸಮುದ್ರದಲ್ಲಿ ಮೀನುಗಾರಿಕೆ ಸಂದರ್ಭ ಹೊರರಾಜ್ಯದ ಬೋಟುಗಳಿಂದ ಅಂತರ ಕಾಯ್ದುಕೊಳ್ಳುವಂತೆ ಇಲಾಖೆಯವರು ಮೀನುಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ‘ಕೊರೋನ ವೈರಸ್ ಕುರಿತು ಹೆಚ್ಚಿನ ಮಾಹಿತಿ ನೀಡುವ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಮಲ್ಪೆ ಮೀನುಗಾರರ ಸಂಘದ ಸಹಯೋಗದೊಂದಿಗೆ ರೋಗ ತಡೆಗಟ್ಟುವ ಹಾಗೂ ಮುಂಜಾಗ್ರತಾ ಕ್ರಮಗಳ ಮಾಹಿತಿಯನ್ನೊಳಗೊಂಡ ಬ್ಯಾನರ್‌ನ್ನು ಬಂದರಿನಲ್ಲಿ ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ಕರಪತ್ರಗಳನ್ನು ಕೂಡ ಮುದ್ರಿಸಿ ವಿತರಿಸಲಾಗುವುದು’ ಎಂದು ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದರು. ಬಂದರುಗಳಲ್ಲಿ ಯಥಾಸ್ಥಿತಿ:

ಕೊರೋನ ಭೀತಿಯ ಮಧ್ಯೆಯೂ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಎಂದಿನಂತೆ ನಡೆಯುತ್ತಿದೆ. ಮೀನುಗಳು ಹೊರರಾಜ್ಯ ಹಾಗೂ ವಿದೇಶಗಳಿಗೆ ರಫ್ತಾಗುತ್ತಿರುವುದರಲ್ಲೂ ಯಾವುದೇ ತೊಡಕಾಗಿಲ್ಲ. ಮಲ್ಪೆ ಬಂದರಿನಲ್ಲಿ ಸುಮಾರು 1,800 ಯಾಂತ್ರೀಕೃತ ಬೋಟುಗಳಿದ್ದು, ಅದರಲ್ಲಿ 900-1,000 ಆಳಸಮುದ್ರ ಬೋಟುಗಳು, 140-150 ಪರ್ಸಿನ್ ಬೋಟುಗಳು, 200-250 ಸಣ್ಣ ಬೋಟುಗಳು ಮತ್ತು 450-500 370ಬೋಟುಗಳಾಗಿವೆ. ಅದೇ ರೀತಿ ಬೇಸಿಗೆಯಲ್ಲಿ ಮೀನುಗಾರಿಕೆ ನಡೆಸುವ 350-400 ನಾಡದೋಣಿಗಳು ಕೂಡ ಇವೆ.

ಕೊರೋನ ಭೀತಿಯಿಂದ ಈವರೆಗೆ ಬೋಟುಗಳು ಮೀನುಗಾರಿಕೆಗೆ ತೆರಳದೆ ಬಂದರಿನಲ್ಲಿ ಲಂಗಾರು ಹಾಕಿಲ್ಲ. ಆದರೆ ಶೇ.35ರಷ್ಟು ಆಳಸಮುದ್ರ, ಪರ್ಸಿನ್, ಸಣ್ಣ ಬೋಟುಗಳು ಹಾಗೂ ನಾಡದೋಣಿಗಳು ಮೀನುಗಾರಿಕೆ ಇಲ್ಲ ಎಂಬ ಕಾರಣಕ್ಕೆ ಬಂದರಿನಲ್ಲಿಯೇ ಉಳಿದುಕೊಂಡಿವೆ. ಮೀನಿಗೆ ಬರ ಬಂದಿರುವು ದರಿಂದ ಮೀನಿನ ಪ್ರಮಾಣ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮ ಮೀನಿನ ಬೆಲೆ ಸಾಕಷ್ಟು ಏರಿಕೆಯಾಗಿದೆ.

ಕೊರೋನ ವೈರಸ್ ಮೀನು ಮತ್ತು ಮೀನುಗಾರಿಕೆ ಉತ್ಪನ್ನಗಳನ್ನು ತಿನ್ನುವುದರಿಂದ ಹರಡುವುದಿಲ್ಲ. ಆದುದರಿಂದ ಮೀನು ಸೇವನೆ ಸುರಕ್ಷಿತವಾಗಿದೆ ಎಂಬುದಾಗಿ ಕೇಂದ್ರ ಮೀನುಗಾರಿಕೆ ಸಚಿವಾಲಯ ಹೇಳಿಕೆ ನೀಡಿದೆ. ಮೀನಿನಿಂದ ಈ ವೈರಸ್ ಹರಡುತ್ತದೆ ಎಂದು ಎಲ್ಲಿಯೂ ಕೂಡ ಸಾಬೀತಾಗಿಲ್ಲ. ಆದುದರಿಂದ ಇಂತಹ ವದಂತಿಗಳಿಗೆ ಯಾರು ಕೂಡ ಕಿವಿಗೊಡಬಾರದು. 

ಗಣೇಶ್ ಕೆ.,

ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ ಉಡುಪಿ

ಮಾರುಕಟ್ಟೆಯಲ್ಲಿ ಜನ ಬಂದು ಮೀನು ಖರೀದಿಸುತ್ತಿದ್ದಾರೆ. ಬಂದವರಿಗೆ ಸುಳ್ಳು ವದಂತಿ ಬಗ್ಗೆ ನಂಬಬೇಡಿ ಎಂಬುದಾಗಿ ಹೇಳುತ್ತಿದ್ದೇವೆ. ಅದೇರೀತಿ ಮೀನಿನಲ್ಲಿ ಯಾವುದೇ ರೀತಿಯ ಸೋಂಕು ಹರಡುತ್ತಿಲ್ಲ ಎಂದು ಗ್ರಾಹಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

 -ಬೇಬಿ ಸಾಲ್ಯಾನ್, 

ಅಧ್ಯಕ್ಷರು,

ಮಹಿಳಾ ಹಸಿಮೀನು ಮಾರಾಟಗಾರರ ಸಂಘ, ಉಡುಪಿ ತಾಲೂಕು.

ಮೀನು ತಿಂದರೆ ಕೊರೋನ ವೈರಸ್ ಹರಡುತ್ತದೆ ಎಂಬುದಾಗಿ ಕೊರೋನ ವೈರಸ್ ಸಾಕಷ್ಟು ಜೀವ ಬಲಿ ತೆಗೆದುಕೊಂಡ ಚೀನಾ ದೇಶವೇ ಈವರೆಗೆ ಹೇಳಿಕೆ ನೀಡಿಲ್ಲ. ಆದುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳನ್ನು ನಂಬಬೇಡಿ. 

ಡಾ.ಶಿವಕುಮಾರ್ ಹರಗಿ,

ಸಹಾಯಕ ಪ್ರೊಫೆಸರ್,

ಕಡಲ ಶಾಸ್ತ್ರ ವಿಭಾಗ, ಕರ್ನಾಟಕ ವಿವಿ, ಕಾರವಾರ

 

 

 

 

 

 

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News