ಕೊರೋನ ವಿರುದ್ಧ ಸಮರ: 130 ಕೋಟಿ ಮಂದಿಗೆ 40 ಸಾವಿರ ವೆಂಟಿಲೇಟರ್!

Update: 2020-03-23 04:11 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮಾ.23: ಕೋವಿಡ್-19 ವಿರುದ್ಧದ ನಿರ್ಣಾಯಕ ಸಮರಕ್ಕೆ ಭಾರತ ಸಜ್ಜಾಗಿರುವ ನಡುವೆಯೇ ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯದ ಬಗ್ಗೆ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಒಟ್ಟು 40 ಸಾವಿರ ವೆಂಟಿಲೇಟರ್‌ಗಳು ಸುಸ್ಥಿತಿಯಲ್ಲಿದ್ದು, ಇದೇ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ನಮ್ಮಲ್ಲಿಲ್ಲ ಎನ್ನುವ ಆತಂಕಕಾರಿ ಅಂಶ ಬಹಿರಂಗವಾಗಿದೆ. ಒಟ್ಟು ಶಂಕಿತರ ಪೈಕಿ ಉಸಿರಾಟ ತೊಂದರೆ ಇರುವ ಶೇಕಡ 5ರಷ್ಟು ಮಂದಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿದರೂ ಸೂಕ್ತ ವ್ಯವಸ್ಥೆ ಇಲ್ಲ ಎಂದು ತಜ್ಞರು ಹೇಳುತ್ತಾರೆ.

ರವಿವಾರ 45 ಹೊಸ ಪ್ರಕರಣಗಳು ವರದಿಯಾಗಿದ್ದು, ಸಾಂಕ್ರಾಮಿಕ ನಿಯಂತ್ರಣ ಕಷ್ಟಸಾಧ್ಯವಾದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೂಡಾ ಸಾಂಕ್ರಾಮಿಕ ಏರುಮುಖವಾಗಿದೆ. ತೀವ್ರ ಸೋಂಕುಪೀಡಿತ ದೇಶಗಳಾದ ಇಟಲಿ ಮತ್ತು ಇರಾನ್‌ನಲ್ಲಿ ಕಂಡುಬಂದ ಏರುಗತಿಯ ಮಾದರಿಯಲ್ಲೇ ಭಾರತದಲ್ಲೂ ಪ್ರಕರಣಗಳು ಏರುತ್ತಿವೆ.

ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್‌ನ ಅಧ್ಯಕ್ಷ ಡಾ.ಧ್ರುವ ಚೌಧರಿಯವರ ಪ್ರಕಾರ ದೇಶದಲ್ಲಿ ಸುಮಾರು 40 ಸಾವಿರ ವೆಂಟಿಲೇಟರ್‌ಗಳಿದ್ದು, ಬಹುತೇಕ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಮೆಟ್ರೊ, ಮಹಾನಗರಗಳು, ರಾಜ್ಯ ರಾಜಧಾನಿಗಳಲ್ಲಿರುವ ಖಾಸಗಿ ಆಸ್ಪತ್ರೆಗಳಿವೆ. ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿದರೆ ಖಚಿತವಾಗಿ ಸಮಸ್ಯೆ ಎದುರಾಗಲಿದೆ.

ದಕ್ಷಿಣ ಕೊರಿಯಾದಲ್ಲಿ ಇರುವ ವೆಂಟಿಲೇಟರ್‌ಗಳ ಶೇಕಡ 20ರಷ್ಟು ಮಾತ್ರ ಭಾರತದಲ್ಲಿದೆ. ಆದ್ದರಿಂದ ತಪಾಸಣೆ ಹಾಗೂ ಸೋಂಕಿತರನ್ನು ಶೀಘ್ರವಾಗಿ ಪತ್ತೆ ಮಾಡಿ ಚಿಕಿತ್ಸೆ ನೀಡುವ ಮೂಲಕ ತೀವ್ರತರ ಸ್ಥಿತಿ ತಲುಪದಂತೆ ಕಾರ್ಯತಂತ್ರ ಅನುಸರಿಸಬೇಕಿದೆ. ಎಚ್‌ಐವಿ ಹಾಗೂ ಏಡ್ಸ್ ಪ್ರಕರಣದಲ್ಲಿ ಇಂಥದ್ದೇ ಕಾರ್ಯತಂತ್ರ ಅನುಸರಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಜಿ ಕಾರ್ಯದರ್ಶಿ ಸುಜಾತಾ ರಾವ್ ಹೇಳುತ್ತಾರೆ.

ಇಡೀ ವಿಶ್ವದಲ್ಲೇ ಕೊರೋನ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದ ದೇಶ ಎಂಬ ಹೆಗ್ಗಳಿಕೆಗೆ ದಕ್ಷಿಣ ಕೊರಿಯಾ ಪಾತ್ರವಾಗಿದೆ. ಚೀನಾದ ಅಂಕಿಅಂಶಗಳನ್ನು ಗಮನಿಸಿದರೆ, ಶೇಕಡ 15ರಷ್ಟು ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ ಹಾಗೂ ಶೇಕಡ 5ರಷ್ಟು ಮಂದಿಗೆ ಕೃತಕ ಉಸಿರಾಟದ ವ್ಯವಸ್ಥೆ ಅಗತ್ಯ. ಆಸ್ಪತ್ರೆಗೆ ದಾಖಲಿಸಲಾದ ರೋಗಿಗಳಿಗೆ ಈ ಸಾಧನ ಸಿಗದಿದ್ದರೆ ಅವರು ಮೃತಪಡುವ ಸಾಧ್ಯತೆ ಅಧಿಕ.

ವೆಂಟಿಲೇಟರ್‌ಗೆ 8-10 ಲಕ್ಷ ರೂ. ವೆಚ್ಚವಾಗುತ್ತದೆ. ಇಷ್ಟು ವೆಚ್ಚ ಹೊಂದಿಸಿ ವೆಂಟಿಲೇಟರ್ ಖರೀದಿಸಿದರೂ, ಅದರ ಕಾರ್ಯನಿರ್ವಹಣೆಗೆ ತರಬೇತಿ ಪಡೆದ ಆಪರೇಟರ್‌ಗಳು ಬೇಕು. ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕಾದರೆ, ಯಂತ್ರಗಳ ಖರೀದಿಗಿಂತ ಆಪರೇಟರ್‌ಗಳನ್ನು ಹೊಂದಿಸುವುದೇ ಸವಾಲು ಎಂದು ತಜ್ಞರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News