ಇಂದು ಮಧ್ಯರಾತ್ರಿಯಿಂದ ದೇಶೀಯ ವಿಮಾನ ಸೇವೆಯೂ ಸಂಪೂರ್ಣ ಬಂದ್
ಹೊಸದಿಲ್ಲಿ: ಮಂಗಳವಾರ ಮಧ್ಯರಾತ್ರಿಯಿಂದ ಮಾರ್ಚ್ 31ರ ಮಧ್ಯರಾತ್ರಿವರೆಗೆ ಎಲ್ಲ ದೇಶೀಯ ವಿಮಾನಯಾನ ಸೇವೆ ಸ್ತಬ್ಧವಾಗಲಿದೆ. ಕೊರೋನ ವೈರಸ್ ಹರಡುವುದನ್ನು ತಡೆಯಲು ಎಲ್ಲ ರಾಜ್ಯಗಳು ಲಾಕ್‌ಡೌನ್ ಘೋಷಿಸಿದ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಭಾರತ ಈಗಾಗಲೇ ಒಂದು ವಾರದ ಮಟ್ಟಿಗೆ ಅಂತರ್ ರಾಷ್ಟ್ರೀಯ ವಿಮಾನಗಳ ಓಡಾಟವನ್ನು ಸ್ಥಗಿತಗೊಳಿಸಿದೆ. ಮಂಗಳವಾರ- ಬುಧವಾರದ ನಡುವಿನ ರಾತ್ರಿಯಿಂದ ದೇಶದಲ್ಲಿ ಯಾವುದೇ ಪ್ರಯಾಣಿಕ ವಿಮಾನಗಳ ಓಡಾಟಕ್ಕೆ ಅವಕಾಶವಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ. ಕೇವಲ ಸರಕು ಸಾಗಾಣಿಕೆ ವಿಮಾನಗಳ ಹಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ನಮ್ಮ ಎಲ್ಲ ದೇಶೀಯ ವಾಣಿಜ್ಯ ವಿಮಾನಯಾನ ಸೇವೆಗಳು ಮಾರ್ಚ್ 24ರಂದು ರಾತ್ರಿ 11.59ರಿಂದ ಸ್ಥಗಿತಗೊಳ್ಳಲಿವೆ. ರಾತ್ರಿ 11.59ಕ್ಕೆ ವಿಮಾನಗಳು ಗಮ್ಯತಾಣ ತಲುಪುವ ರೀತಿಯಲ್ಲಿ ಎಲ್ಲ ವಿಮಾನಯಾನ ಕಂಪನಿಗಳು ತಮ್ಮ ವಿಮಾನಗಳ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳಬೇಕು. ಈ ನಿರ್ಬಂಧಗಳು ಕೇವಲ ಸರಕು ಸಾಗಾಣಿಕೆ ವಿಮಾನಗಳಿಗೆ ಮಾತ್ರ ಅನ್ವಯಿಸುವುದಿಲ್ಲ ಎಂದು ಸಚಿವಾಲಯ ವಿವರಿಸಿದೆ.
ಹಲವು ನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರು, ವಿಮಾನ ಸಿಬ್ಬಂದಿ ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿಗೆ ವಿಮಾನ ನಿಲ್ದಾಣ ಹಾಗೂ ಮನೆ/ ಹೋಟೆಲ್‌ಗಳ ನಡುವಿನ ಪ್ರಯಾಣ ಸಾಧ್ಯವಾಗುತ್ತಿಲ್ಲ.