ಕೊರೋನವೈರಸ್: ಭಾರತದಲ್ಲಿ ಮೃತರ ಸಂಖ್ಯೆ 13ಕ್ಕೇರಿಕೆ

Update: 2020-03-26 17:44 GMT

ಹೊಸದಿಲ್ಲಿ, ಮಾ. 26: ಕೊರೋನವೈರಸ್‌ಗೆ ಇನ್ನೂ ಎರಡು ಜೀವಗಳು ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಈ ಮಾರಣಾಂತಿಕ ಪಿಡುಗಿಗೆ ಬಲಿಯಾದವರ ಸಂಖ್ಯೆ 13ಕ್ಕೇರಿದೆ.

ಎರಡು ದಿನಗಳ ಹಿಂದೆ ಮುಂಬೈನಲ್ಲಿ ಮೃತಪಟ್ಟಿದ್ದ ಮಹಿಳೆಯ ಸಾವಿಗೆ ಕೊರೋನವೈರಸ್ ಕಾರಣವೆನ್ನುವುದು ಗುರುವಾರ ದೃಢಪಟ್ಟಿದ್ದು,ಇದರೊಂದಿಗೆ ಮಹಾರಾಷ್ಟ್ರದಲ್ಲಿ ಸಾವುಗಳ ಸಂಖ್ಯೆ ನಾಲ್ಕಕ್ಕೇರಿದೆ. ತನ್ಮಧ್ಯೆ ಶ್ರೀನಗರದಲ್ಲಿ ಕೊರೋನವೈರಸ್ ದೃಢಪಟ್ಟಿದ್ದ ವ್ಯಕ್ತಿಯೋರ್ವರು ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದು,ಇದು ಜಮ್ಮು-ಕಾಶ್ಮೀರದಲ್ಲಿ ಮೊದಲ ಬಲಿಯಾಗಿದೆ.

 ಶ್ರೀನಗರದ ಹೈದರಪೋರ ಬಡಾವಣೆಯ ನಿವಾಸಿಯೊಬ್ಬರಲ್ಲಿ ಕೊರೋನವೈರಸ್ ಸೋಂಕು ಇರುವುದು ಮೂರು ದಿನಗಳ ಹಿಂದೆ ದೃಢಪಟ್ಟಿದ್ದು,ಇಲ್ಲಿಯ ಸರಕಾರಿ ಎದೆರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಇತ್ತೀಚಿಗೆ ದೇಶಾದ್ಯಂತ ಪ್ರವಾಸ ಕೈಗೊಂಡಿದ್ದ ಅವರು,ಮಾ.16ರಂದು ಮನೆಗೆ ಮರಳುವ ಮುನ್ನ ದಿಲ್ಲಿಯ ಮಸೀದಿಗಳು ಮತ್ತು ಉತ್ತರ ಪ್ರದೇಶದ ದೇವಬಂದ್‌ಗೆ ಭೇಟಿ ನೀಡಿದ್ದರು.

 ಪ್ರಕರಣದ ತಪ್ಪು ನಿರ್ವಹಣೆಯು ಇತರರು ಸೋಂಕಿಗೊಳಗಾಗಲು ಕಾರಣವಾಗಿರಬಹುದು ಎಂಬ ಕಳವಳಗಳ ನಡುವೆಯೇ ನಗರದ ಇಡೀ ಬಡಾವಣೆಯನ್ನು ಸೀಲ್ ಮಾಡಲಾಗಿದ್ದು,ಮೃತವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.

ಮೃತವ್ಯಕ್ತಿಯ ಸಂಪರ್ಕದಲ್ಲಿದ್ದ ಇತರ ನಾಲ್ವರಲ್ಲಿ ಕೊರೋನವೈರಸ್ ಸೋಂಕು ಇರುವುದು ಬುಧವಾರ ಪತ್ತೆಯಾದ ಬಳಿಕ ಅವರನ್ನು ಪ್ರತ್ಯೇಕ ನಿಗಾದಲ್ಲಿರಿಸಲಾಗಿದೆ. ಇದೇ ವೇಳೆ ಏಳು ವೈದ್ಯರು ಸೇರಿದಂತೆ ಇತರ ಶಂಕಿತ 70 ಜನರೂ ಪ್ರತ್ಯೇಕ ನಿಗಾದಲ್ಲಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಈಗ ಸೋಂಕಿತರ ಸಂಖ್ಯೆ 11ಕ್ಕೇರಿದ್ದು, ಚಿಕಿತ್ಸೆಯ ಬಳಿಕ ಓರ್ವ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಲಾಗಿದೆ.

120ಕ್ಕೂ ಅಧಿಕ ಕೊರೋನವೈರಸ್ ಪ್ರಕರಣಗಳೊಂದಿಗೆ ದೇಶದ ಅತ್ಯಂತ ಪೀಡಿತ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಮಾ.24ರಂದು ಮೃತಪಟ್ಟಿದ್ದ ಮಹಿಳೆಯು ಸೋಂಕಿಗೆ ಗುರಿಯಾಗಿದ್ದಳು ಎನ್ನುವುದು ಗುರುವಾರ ದೃಢಪಟ್ಟಿದೆ. ಆಕೆಯ ಬಂಧುಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಮಹಾರಾಷ್ಟ್ರದಲ್ಲಿಯೂ ಚಿಕಿತ್ಸೆಯ ಬಳಿಕ ಓರ್ವ ಸೋಂಕು ಪೀಡಿತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ದೇಶಾದ್ಯಂತ ಕೊರೋನವೈರಸ್ ಪ್ರಕರಣಗಳ ಸಂಖ್ಯೆ 600ನ್ನು ದಾಟಿದ್ದು,ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

                   ಭಿಲ್ವಾಡಾದಲ್ಲಿ ಓರ್ವನ ಸಾವು

ಅತ್ತ ರಾಜಸ್ಥಾನದ ಭಿಲ್ವಾಡಾದಲ್ಲಿ ಕೊರೋನವೈರಸ್ ಸೋಂಕು ದೃಢಪಟ್ಟಿದ್ದ ಮತ್ತು ಮೂತ್ರಪಿಂಡ ವೈಫಲ್ಯದಿಂದಾಗಿ ಕೋಮಾಕ್ಕೆ ಜಾರಿದ್ದ 73ರ ಹರೆಯದ ವೃದ್ಧರೋರ್ವರು ಗುರುವಾರ ಖಾಸಗಿ ಆಸ್ಪತ್ರೆಯೊಂದಲ್ಲಿ ಮೃತಪಟ್ಟಿದ್ದಾರೆ. ಇದೇ ವೇಳೆ ಝುನ್‌ಝುನು ಮತ್ತು ಜೈಪುರಗಳಲ್ಲಿ ಇನ್ನೂ ಇಬ್ಬರಲ್ಲಿ ಕೊರೋನವೈರಸ್ ಇರುವುದು ದೃಢಪಟ್ಟಿದೆ.

ಹೊಸದಾಗಿ ಸೋಂಕು ಪತ್ತೆಯಾಗಿರುವ ಇಬ್ಬರೂ ರೋಗಿಗಳು ಮಧ್ಯ ಪ್ರಾಚ್ಯಕ್ಕೆ ಪ್ರವಾಸದ ದಾಖಲೆ ಹೊಂದಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕುಪೀಡಿತರ ಸಂಖ್ಯೆ 40ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದರು.

ಭಿಲ್ವಾಡಾದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಮೂವರು ವೈದ್ಯರು ಮತ್ತು ಒಂಭತ್ತು ನರ್ಸ್‌ಗಳಲ್ಲಿ ಕೊರೋನವೈರಸ್ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.

ಆದರೆ ವೃದ್ಧನ ಸಾವಿಗೆ ಕೊರೋನವೈರಸ್ ನೇರ ಕಾರಣವಾಗಿದೆ ಎನ್ನುವುದನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಭಿಲ್ವಾಡಾದಲ್ಲಿ ಸೋಂಕು ಹರಡುವ ಮೊದಲೇ ಈ ವ್ಯಕ್ತಿ ಮೂತ್ರಪಿಂಡ ವೈಫಲ್ಯ ಮತ್ತು ಮಧುಮೇಹದಿಂದಾಗಿ ಕೋಮಾದಲ್ಲಿದ್ದರು. ಹೀಗಾಗಿ ಕೊರೋನವೈರಸ್‌ನಿಂದ ಅವರು ಮೃತಪಟ್ಟಿದ್ದಾರೆ ಎನ್ನುವುದು ಸರಿಯಾಗುವುದಿಲ್ಲ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ರೋಹಿತ್ ಕುಮಾರ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News