"ದೇಶ ಕೊರೋನ ವಿರುದ್ಧ ಹೋರಾಡುತ್ತಿರುವಾಗ ಗೃಹಸಚಿವ ಅಮಿತ್ ಶಾ ನಾಪತ್ತೆ''

Update: 2020-03-30 09:48 GMT

ಹೊಸದಿಲ್ಲಿ: ಕೊರೋನ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಕಳೆದ ವಾರ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಲಾಕ್ ಡೌನ್ ಘೋಷಣೆ ಮಾಡಿದ ನಂತರ ಪ್ರತಿ ದಿನ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಮ್ಮ ಸಂದೇಶಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತ್ರ ದೇಶ ಎದುರಿಸುತ್ತಿರುವ ಈ ಸಂಕಷ್ಟಮಯ ಪರಿಸ್ಥಿತಿ ವೇಳೆ ನಾಪತ್ತೆಯಾಗಿದ್ದಾರೆ. ಶಾ ಎಲ್ಲಿದ್ದಾರೆಂಬ ಕುತೂಹಲ ಈಗ ಎಲ್ಲೆಡೆ ಮೂಡಿದೆ. "ವೇರ್ ಈಸ್ ಅಮಿತ್ ಶಾ'' ಎಂಬ ಹ್ಯಾಶ್ ಟ್ಯಾಗ್ ಕೂಡ ಟ್ವಿಟರಿನಲ್ಲಿ ಟ್ರೆಂಡಿಂಗ್ ಆಗಿದೆ.

ಸರಕಾರ ಕೋವಿಡ್-19 ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳನ್ನು ಪ್ರಶಂಸಿಸಿ ಶಾ ಟ್ವೀಟ್ ಮಾಡುತ್ತಿರುವುದನ್ನು ಬಿಟ್ಟರೆ ಮತ್ತಿನ್ನೇನನ್ನೂ ಅವರು ಮಾಡುತ್ತಿಲ್ಲ. ಕೆಲ ಮೂಲಗಳ ಪ್ರಕಾರ ಅಮಿತ್ ಶಾ ಅವರು ದಿಲ್ಲಿಯ ಕೃಷ್ಣ ಮೆನನ್ ಮಾರ್ಗ್ ನಿವಾಸದಿಂದ ಕಾರ್ಯಾಚರಿಸುತ್ತಿದ್ದಾರೆ.

ಆದರೆ ಅಮಿತ್ ಶಾ ಅವರು ಸಾರ್ವಜನಿಕವಾಗಿ ಕಾಣಿಸದೇ ಇರುವುದು ಟ್ವಿಟ್ಟರಿಗರಿಂದ ಸ್ವಾರಸ್ಯಕರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಒಬ್ಬರು "ನಾವು ನಿಮ್ಮನ್ನು ಮಿಸ್ ಮಾಡುತ್ತಿದ್ದೇವೆ,'' ಎಂದು ಬರೆದಿದ್ದರೆ ಇನ್ನೊಬ್ಬರು "ಶಾ ಕೇವಲ ಇಲೆಕ್ಷನ್ ಮೋಡ್‍ ನಲ್ಲಿ ಮಾತ್ರ ಸಕ್ರಿಯರಾಗಿರುತ್ತಾರೆ" ಎಂದು ಬರೆದಿದ್ದಾರೆ.

"ಕೊರೋನ ವಿರುದ್ಧದ ಹೋರಾಟಕ್ಕೆ ಶಾ ಅವರ ಮಾಸ್ಟರ್ ಪ್ಲಾನ್ ಎಲ್ಲಿದೆ" ಎಂದು ಇನ್ನೊಬ್ಬ ಟ್ವಿಟ್ಟರಿಗರು ಪ್ರಶ್ನಿಸಿದ್ದರೆ, ಇನ್ನೊಂದು ಕುತೂಹಲಕಾರಿ ಪ್ರತಿಕ್ರಿಯೆಯಲ್ಲಿ ಟ್ವಿಟ್ಟರಿಗರೊಬ್ಬರು ``ದೇಶ ಕೋವಿಡ್-19 ವಿರುದ್ಧ ಹೋರಾಡಲು ನಿಮ್ಮ ಚಾಣಕ್ಯ ನೀತಿ ಮಿಸ್ ಮಾಡುತ್ತಿದೆ'' ಎಂದು ಬರೆದಿದ್ದಾರೆ.

ಶನಿವಾರ ಶಾ ಟ್ವೀಟ್ ಮಾಡಿದ ಫೋಟೋದಲ್ಲಿ ಅವರು ತಮ್ಮ ಕಿರಿಯ ಸಚಿವರು ಹಾಗೂ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಿರುವುದು ಕಾಣಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News