ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ 10 ಸಿಐಎಸ್‍ಎಫ್ ಸಿಬ್ಬಂದಿಗೆ ಕೊರೋನ ಸೋಂಕು ದೃಢ

Update: 2020-04-04 04:05 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್)ಯ 10 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಶಿಬಿರದಲ್ಲಿ ಜತೆಗೆ ವಾಸವಿದ್ದ ಎಲ್ಲ 152 ಮಂದಿಯ ತಪಾಸಣೆಗೆ ಅರೆ ಮಿಲಿಟರಿ ಪಡೆ ನಿರ್ಧರಿಸಿದೆ.

“ನಮ್ಮ ಜವಾನರ ಪೈಕಿ ಒಬ್ಬರಿಗೆ ಮಾರ್ಚ್ 27ರಂದು ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರ ಜತೆಗೆ 11 ಮಂದಿ ಸಂಪರ್ಕದಲ್ಲಿದ್ದರು. ಮುಂಜಾಗ್ರತಾ ಕ್ರಮವಾಗಿ ಇತರರನ್ನೂ ತಪಾಸಣೆಗೆ ಗುರಿಪಡಿಸಲಾಗಿದ್ದು, ಈ ಪೈಕಿ 9 ಮಂದಿಗೆ ಸೋಂಕು ದೃಢಪಟ್ಟಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಎನ್‍ಡಿಟಿವಿಗೆ ಹೇಳಿದ್ದಾರೆ.

ಈ ಎಲ್ಲರೂ ಕಲಂಬೋಲಿ ಸಿಐಎಸ್‍ಎಫ್ ಶಿಬಿರದಲ್ಲಿದ್ದರು. ಆದ್ದರಿಂದ ಎಲ್ಲ 152 ಮಂದಿಯನ್ನು ತಪಾಸಣೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸೋಂಕಿತ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದವರನ್ನು 14 ದಿನಗಳ ಕಾಲ ಕ್ವಾರಂಟೈನ್‍ನಲ್ಲಿ ಇಡಲಾಗುತ್ತದೆ ಎಂದು ಸಿಐಎಸ್‍ಎಫ್ ಮೂಲಗಳು ಹೇಳಿವೆ.

ಈ ಮಧ್ಯೆ ಮೊದಲು ಪಾಸಿಟಿವ್ ಫಲಿತಾಂಶ ಬಂದ ಸಿಬ್ಬಂದಿಯನ್ನು ಎರಡನೇ ಬಾರಿ ತಪಾಸಣೆ ಮಾಡಿದಾಗ ಋಣಾತ್ಮಕ ಫಲಿತಾಂಶ ಬಂದಿದೆ. ಆದ್ದರಿಂದ ಉಳಿದ 9 ಮಂದಿಯ ಎರಡನೇ ವರದಿಯೂ ಋಣಾತ್ಮಕವಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಶಿಬಿರದ ಎಲ್ಲೆಡೆ ಆರೋಗ್ಯ ಸಚಿವಾಲಯದ ನಿಯಮಾವಳಿಯನ್ನು ಹಂಚಲಾಗಿದ್ದು, ಸಾಮಾಜಿಕ ಅಂತರ ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಶುಕ್ರವಾರದವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 423 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 235 ಪ್ರಕರಣಗಳು ಮುಂಬೈನಲ್ಲಿವೆ. ಇದಕ್ಕೂ ಮುನ್ನ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಸೇನೆ ನಡೆಸುವ ಕ್ವಾರಂಟೈನ್ ವ್ಯವಸ್ಥೆಯಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News