ತಾಯಿಯ ಉತ್ತರಕ್ರಿಯೆ ಕಾರ್ಯಕ್ರಮ ನಡೆಸಿದ ವ್ಯಕ್ತಿಗೆ ಕೊರೋನ: 1500 ಮಂದಿ ಕ್ವಾರಂಟೈನ್ ನಲ್ಲಿ

Update: 2020-04-04 18:16 GMT

ಮಧ್ಯಪ್ರದೇಶ: ರಾಜ್ಯದ ಮೊರೆನಾ ಜಿಲ್ಲೆಯಲ್ಲಿ ತಾಯಿಯ ಉತ್ತರಕ್ರಿಯೆ ಅಂಗವಾಗಿ 1,500 ಮಂದಿಗೆ ಊಟ ಹಾಕಿದ ದುಬೈಯಿಂದ ವಾಪಸಾದ ವ್ಯಕ್ತಿ ಮತ್ತಾತನ 11 ಮಂದಿ ಕುಟುಂಬ ಸದಸ್ಯರಿಗೆ ಕೊರೋನ ಸೋಂಕು ತಗಲಿರುವುದು  ದೃಢಪಟ್ಟಿದೆ. ಈ ಸಮಾರಂಭ ನಡೆದ ಇಡೀ ಕಾಲನಿಯನ್ನು ಅಲ್ಲಿನ ಅಧಿಕಾರಿಗಳು ಸೀಲ್ ಮಾಡಿದ್ದಾರೆ.

ದುಬೈಯಲ್ಲಿ ವೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಎಂಬಾತ ಮಾರ್ಚ್ 17ರಂದು ವಾಪಸಾಗಿದ್ದ. ಉತ್ತರಕ್ರಿಯೆ ಸಮಾರಂಭ ಮಾರ್ಚ್ 20ರಂದು ನಡೆದಿತ್ತು. ಸುಮಾರು 1500 ಮಂದಿ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಊಟ ಮಾಡಿದ್ದರು.

ಸುರೇಶ್‍ ಗೆ ಕೊರೋನ ಲಕ್ಷಣಗಳು ಮಾರ್ಚ್ 25ರಂದೇ ಕಾಣಿಸಿಕೊಂಡಿದ್ದರೂ ಆತ ನಾಲ್ಕು ದಿನಗಳ ನಂತರ ಆಸ್ಪತ್ರೆಗೆ ಭೇಟಿ ನೀಡಿದ್ದ. ಆತ ಹಾಗೂ ಆತನ ಪತ್ನಿಯನ್ನು ನಂತರ ಐಸೊಲೇಶನ್ ವಾರ್ಡ್‍ ನಲ್ಲಿರಿಸಲಾಗಿತ್ತು. ಗುರುವಾರ ಇಬ್ಬರಿಗೂ ಕೊರೋನ ಸೋಂಕು ತಗಲಿರುವುದು ಗಂಟಲು ದ್ರವ ಪರೀಕ್ಷೆ ವರದಿಯಿಂದ ತಿಳಿದು ಬಂದಿದೆ. ನಂತರ ಆತನ 23 ಮಂದಿ ಸಂಬಂಧಿಕರನ್ನು ತಪಾಸಣೆಗೆ ಗುರಿಪಡಿಸಿದಾಗ ಅವರಲ್ಲಿ 10 ಮಂದಿ ಕೊರೋನ ಪಾಸಿಟಿವ್ ಆಗಿದ್ದಾರೆ. ಅವರನ್ನೆಲ್ಲಾ ಆಸ್ಪತ್ರೆಯ ಐಸೊಲೇಶನ್ ವಾರ್ಡ್‍ ನಲ್ಲಿರಿಸಲಾಗಿದ್ದರೆ ಉಳಿದವರನ್ನು ಮನೆಯಲ್ಲಿಯೇ ಕ್ವಾರಂಟೈನ್‍ ನಲ್ಲಿರಿಸಲಾಗಿದೆ.

ಸರಕಾರದ ಆದೇಶ ಉಲ್ಲಂಘಿಸಿ ಔತಣಕೂಟ

ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮಕ್ಕೂ 50ಕ್ಕಿಂತ ಹೆಚ್ಚಿನ ಜನರನ್ನು ಆಹ್ವಾನಿಸಬಾರದು ಎಂದು ಸರಕಾರ ಆದೇಶ ಹೊರಡಿಸಿದ ಬಳಿಕ ಈ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 2,000 ಜನರ ಬಗ್ಗೆ ಮಾಹಿತಿ ನೀಡಲು ಔತಣಕೂಟ ಏರ್ಪಡಿಸಿದ ಇಷ್ಟವಿರಲಿಲ್ಲ. ಆದರೆ ಮತ್ತಷ್ಟು ಒತ್ತಡ ಹೇರಿದಾಗ ಮನೆಯಲ್ಲಿರುವ ಡೈರಿಯಲ್ಲಿ ಆಹ್ವಾನಿತರ ಹೆಸರು ನಮೂದಿಸಿರುವುದನ್ನು ತಿಳಿಸಿದ್ದಾರೆ. ಡೈರಿಯಲ್ಲಿದ್ದ ಮಾಹಿತಿಯಂತೆ ಗ್ರಾಮದ 5 ಬ್ಲಾಕ್‌ಗಳಿಗೆ ತಂಡವನ್ನು ಕಳಿಸಲಾಗಿದೆ. ಕೆಲವರು ಸ್ವಯಂಪ್ರೇರಿತರಾಗಿ ತಪಾಸಣೆಗೆ ಒಳಗಾಗಿದ್ದಾರೆ. ರೋಗ ಲಕ್ಷಣ ಕಂಡುಬಂದವರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ಇತರರನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ದಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News