ಶಾವಿಗೆಯ ದಶಾವತಾರ

Update: 2020-04-06 17:40 GMT

ಬಾಲ್ಯದ ಬಹು ಇಷ್ಟದ ತಿಂಡಿಗಳಲ್ಲಿ ಶಾವಿಗೆಯೂ ಒಂದು. ಶಾವಿಗೆ ಎಂದರೆ ಕಣ್ಣು, ಕಿವಿ ನಿಮಿರಿ ಮೂಗು ಗಮಗುಡುವ ಬೆಲ್ಲದ ಕಾಯಿಹಾಲು ಅಥವಾ ನಾಟಿಕೋಳಿ ಸಾರನ್ನು ಹುಡುಕುತ್ತಿದ್ದವು. ಆಧುನಿಕತೆಯು ತಂದೊಡ್ಡಿದ ‘ವಿಸ್ಮತಿ’ಯೊಂದಿರದಿದ್ದರೆ ಇವತ್ತಿಗೂ ಅದು ನಮ್ಮ ಮನೆಗಳಲ್ಲಿ ಆಗಾಗ್ಗೆ ಘಮಿಸುತ್ತಿತ್ತು. ಈಗಲೂ ಅದು ಸಂಪೂರ್ಣವಾಗಿ ನಶಿಸಿ ಹೋಗಿಲ್ಲ ಬದಲಿಗೆ ಹತ್ತಾರು ಅವತಾರಗಳಲ್ಲಿ ನಮ್ಮ ಸುತ್ತಲೂ ಸುತ್ತುತ್ತಲೇ ಇದೆ. ಈಗ ಅದಕ್ಕೆ ನಾನಾ ಹೆಸರು, ನಾನಾ ಬಣ್ಣ, ನಾನಾ ರುಚಿ ಮತ್ತು ನಾನಾ ವಿಧಿಯ ಉಪಚಾರಗಳು. ಈಗಾಗಲೇ ಇದ್ದ ವೈವಿಧ್ಯತೆಯನ್ನು ಜಾಗತೀಕರಣ ಮತ್ತಷ್ಟು ವೈವಿಧ್ಯಗೊಳಿಸಿತು. (ಈ ಮಾತು ಎಲ್ಲದಕ್ಕೂ ಅನ್ವಯಿಸುವುದಿಲ್ಲ ಎಂಬುದು ನೆನಪಿರಲಿ) ಖಂಡಾಂತರ ಅಡುಗೆ ಕ್ರಮಗಳು ಭಾರತೀಯ ಆಹಾರ ಕ್ರಮಗಳೊಂದಿಗೆ ಬೆರೆತು ಹೊಸಹೊಸ ತಳಿಯ ಕ್ರಮಗಳು ಹುಟ್ಟಿಕೊಂಡವು. ಇದೊಂದು ರೀತಿಯ ಹೊಸ ಸಂಕರವು ಹಲವು ಹಳೆಯ ಅಡುಗೆಗಳನ್ನು ರೆಸಿಪಿಗಳನ್ನು ಮೂಲೆಗುಂಪು ಮಾಡಿ ಹೊಸತಾದ ಅಡುಗೆಗಳನ್ನು ಪರಿಚಯಿಸುವ ಮೂಲಕ ವೈಭವದಿಂದ ಮಾರುಕಟ್ಟೆಯನ್ನು ವಶಪಡಿಸಿಕೊಂಡಿತು.

ಶಾವಿಗೆ ಎಂದರೆ ಯಾವುದು? ನಾವು ಅಂಗಡಿಗಳಲ್ಲಿ ಕೊಂಡುತಂದು ಪಾಯಸಕ್ಕೆ ಬಳಸುವ ವರ್ಮಿಸಿಲಿಯೇ? ಗಟ್ಟಿಯಾದ ಸಣ್ಣನೆಯ ಒಣಗಿದ ಉದ್ದದ ಕಡ್ಡಿಗಳು ಅಥವಾ ಮುರಿದ ಕಡ್ಡಿಗಳ ರೂಪದ್ದೇ?. ನಮಗೆಲ್ಲ ಇವಾಗ ಗೊಂದಲ. ಯಾವುದು ಶಾವಿಗೆ ಅಂತ. ಯಾಕೆಂದರೆ 90ರ ದಶಕದ ಈಚೆಗೆ ನಮಗೆ ಗೊತ್ತಿರುವುದು ಈ ಒಣ ಶಾವಿಗೆಯೇ ಪರಂತು ಹಸಿಯಾದ ಮೆದುವಾದ ಆಗಷ್ಟೇ ಒತ್ತುಮಣೆಯಿಂದ ನೂಲಿನಂತೆ ನಾದಿ ತೆಗೆದ ಶಾವಿಗೆಯ ಪರಿಚಯ ಬಹಳ ಜನಕ್ಕೆ ಇರಲಾರದು. ಸಿದ್ಧ ಒಣ ಶಾವಿಗೆಯು ಮಾರುಕಟ್ಟೆಗೆ ಬರುವ ಮೊದಲು ಇದ್ದದ್ದೇ ಈ ಒತ್ತುಮಣೆಯ ಶಾವಿಗೆ. ಬಯಲು ಸೀಮೆ, ಮಲೆನಾಡು, ಕರಾವಳಿ ಎಲ್ಲ ಕಡೆಯೂ ತನ್ನ ಏಕಮುಖ ಅಸ್ತಿತ್ವವನ್ನು ಹರಡಿಕೊಂಡಿದ್ದ ಶಾವಿಗೆ ಆಯಾ ಪ್ರದೇಶದ ಜನರ ಆದ್ಯತೆಯ ಸಾರು, ಹಾಲು ಮೊದಲಾದವುಗಳೊಂದಿಗೆ ಯಾವುದೇ ತಗಾದೆಗಳಿಲ್ಲದೆಯೇ ಒಗ್ಗಿಕೊಂಡಿತ್ತು. ನಮ್ಮಲ್ಲಿ ಬಳಕೆಯಲ್ಲಿ ಇದ್ದದ್ದು ಅಕ್ಕಿಯ ಶಾವಿಗೆ ಮಾತ್ರ. ಗೋಧಿಯ ಬೆಳೆ ಮತ್ತು ಬಳಕೆ ಅಷ್ಟು ಇರದ ಕಾರಣ ಗೋಧಿ ಹಿಟ್ಟಿನ ಮಿಶ್ರಣ ಕೂಡ ಇರಲಿಲ್ಲ. ಅಕ್ಕಿಯ ಹಿಟ್ಟನ್ನು ಗಂಟು ಬರದ ಹಾಗೆ ಬೇಯಿಸಿಕೊಂಡು (ರುಚಿಗೆ ಅಗತ್ಯವಾದ ಕನಿಷ್ಟ ಪ್ರಮಾಣದ ಉಪ್ಪನ್ನು ಸೇರಿಸಿ) ಒತ್ತುಮಣೆಯಲ್ಲಿ ಹಾಕಿ ಒತ್ತಿದರೆ ಕೆಳಗೆ ಬೀಳುವ ಶಾವಿಗೆಯನ್ನು ಆತುಕೊಂಡು ಬಿಳಿಯ ಬಟ್ಟೆಯ ಮೇಲೆ ಸಂಗ್ರಹಿಸಿಟ್ಟುಕೊಂಡು ನಮ್ಮ ಆದ್ಯತೆಯ ಸಾರು, ಸೂಪಿನ ಜೊತೆಗೆ ಕಲಸಿಕೊಂಡು ತಿನ್ನುವುದು ರೂಢಿ.

ಕಾಯಿಹಾಲು

ತೆಂಗಿನ ಹಾಲು, ಬೆಲ್ಲ ಮತ್ತು ಏಲಕ್ಕಿ ಬೆರೆಸಿದರೆ ಕಾಯಿಹಾಲು ಸಿದ್ಧ್ದ. ಇದಕ್ಕೆ ಹೆಚ್ಚು ಪದಾರ್ಥ ಸಿದ್ಧ್ದತೆ ಬೇಕಿಲ್ಲ ಮತ್ತು ಇದನ್ನು ಬೇಯಿಸುವ, ಹುರಿಯುವ ಅಗತ್ಯ ಕೂಡ ಇಲ್ಲ. ಇದು ಸಂಪೂರ್ಣ ಹಸಿ ಪದಾರ್ಥದಿಂದ ಮಾಡುವಂತಹದ್ದು. ಇದನ್ನು ಬೇಳೆಯಿಂದ ಮಾಡಿದ ಹೋಳಿಗೆ/ ಒಬ್ಬಟ್ಟು ಅಥವಾ ಅಕ್ಕಿ ಶಾವಿಗೆಗೆ ಜೊತೆಗೆ ತಿನ್ನಲು ಬಳಸಲಾಗುತ್ತದೆ. ಇದನ್ನು ಹಾಗೆಯೇ ಕುಡಿಯಲು ಕೂಡ ಚೆನ್ನಾಗಿರುತ್ತದೆ. ಆದರೆ ತುರಿದ ತೆಂಗಿನ ಕಾಯನ್ನು ರುಬ್ಬಿಕೊಂಡು ಹಾಲನ್ನು ಮಾತ್ರ ಹಿಂಡಿಕೊಂಡು ಬಳಸಿಕೊಳ್ಳಬೇಕು.

ಕೋಳಿಸಾರು

ಅಕ್ಕಿ ಶಾವಿಗೆಗೆ ಜೊತೆಯಾಗುವ ಮತ್ತೊಂದು ಅಡುಗೆ ‘ಕೋಳಿಸಾರು’ ಅದರಲ್ಲೂ ನಾಟಿಕೋಳಿ. ಫಾರಂ ಕೋಳಿ ಮಾಂಸವನ್ನು ಇದಕ್ಕೆ ಬಳಸುವುದು ಅಷ್ಟು ಸೂಕ್ತವಲ್ಲ. ಹುಚ್ಚೆಳ್ಳು ಹುರಿದು ಅದನ್ನು ಮಸಾಲೆಯೊಂದಿಗೆ ರುಬ್ಬಿಕೊಂಡು ಹೆಚ್ಚು ಮಾಂಸ ಮತ್ತು ಕೊಬ್ಬು ಇಲ್ಲದ ನಾಟಿಕೋಳಿ ಮಾಂಸದ ಜೊತೆಗೆ ಹುರಿದು ಬೇಯಿಸಿಕೊಂಡು ಮಾಡಿದ ಸಾರು ಬಹಳ ಚೆಂದ. ಈ ಸಾರಿನಲ್ಲಿ ರಾಗಿಮುದ್ದೆ, ಅನ್ನ, ರೊಟ್ಟಿ, ಚಪಾತಿ ಯಾವುದಿದ್ದರೂ ನಡೆಯುತ್ತೆ. ಆದರೆ ಅಕ್ಕಿ ಶಾವಿಗೆಗೆ ಅದರದೇ ಆದ ಕಲಾತ್ಮಕತೆ ಮತ್ತು ಪರಂಪರೆ ಇದೆ. ಉಳಿದೆಲ್ಲಕ್ಕಿಂತ ಈ ಜೋಡಿ ಗ್ರಾಮೀಣ ಭಾಗದಲ್ಲಿ ಹೆಚ್ಚು ವಿಶೇಷ ಅನಿಸಿಕೊಳ್ಳುತ್ತೆ. ಬದಲಾದ ಕಾಲದಲ್ಲಿ ಮಾಡುವ ವಿಧಾನ ಮತ್ತು ವ್ಯವಧಾನಗಳಲ್ಲಿ ಉಂಟಾದ ವ್ಯತ್ಯಾಸಗಳು, ಮಾಡುವ ಜನರ ಆದ್ಯತೆಗಳು ಬದಲಾಗಿ ಹೆಚ್ಚು ವರ್ಮಿಸಿಲಿ ಆವರಿಸಿಕೊಂಡು ಅಕ್ಕಿಶಾವಿಗೆಯು ಒಣಗಿದ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಯಾವಾಗ ಬೇಕು ಅವಾಗ ಲಭ್ಯವಾಗುವ ಮತ್ತು ಬಳಸಬಹುದಾದ ಹೆಚ್ಚು ಶ್ರಮವಿಲ್ಲದ ವರ್ಮಿಸಿಲಿ ಜನಪ್ರಿಯವಾಗಿ ಬಿಟ್ಟಿತು. ಶಾವಿಗೆಯ ಪಾಯಸ,ಉಪ್ಪಿಟ್ಟು, ಬಾತು ಮೊದಲಾದ ತಿಂಡಿಗಳು ಕೂಡ ಹುಟ್ಟಿಕೊಂಡವು.

ವರ್ಮಿಸಿಲಿ, ನೂಡಲ್ಸ್ ಮತ್ತು ಶಾವಿಗೆ: ಎತ್ತಿಂದೆತ್ತಣ ಸಂಬಂಧವಯ್ಯ! ಇವು ಮೂರು ಆಹಾರ ಪದಾರ್ಥಗಳು ಮೂರು ದಿಕ್ಕಿನವು. ನಮ್ಮ ಎಡಕ್ಕೆ ವರ್ಮಿಸಿಲಿ, ಬಲಕ್ಕೆ ನೂಡಲ್ಸ್ ಇದ್ದರೆ ಮಧ್ಯೆ ನಮ್ಮಲ್ಲಿ ಶಾವಿಗೆ ಇದೆ. ಇವು ಆಕಾರ, ಮಾಡುವ ಕ್ರಮ ಮತ್ತು ತಿನ್ನುವ ಕ್ರಮ ಎಲ್ಲದರಲ್ಲೂ ಭಿನ್ನವಾಗಿಯೇ ಇವೆ. ಆದರೂ ಇವೆಲ್ಲಾ ಶಾವಿಗೆಯದೇ ಅಪರವತಾರಗಳು. ಇದರ ಬಳಕೆ ಸುಮಾರು 14ನೇ ಶತಮಾನದಿಂದ ಇರಬಹುದು. ಅಲ್ಲಿಂದ ಹಲವು ದಾಖಲೆಗಳಲ್ಲಿ ಇದರ ಹೆಸರು, ಬಳಕೆ ಇತ್ಯಾದಿಯ ಉಲ್ಲೇಖ ಸಿಕ್ಕಿದೆ. ವರ್ಮಿಸಿಲಿ, ಪಾಸ್ತಾ, ಸ್ಪಗಟ್ಟಿ ಅಂತಹ ಹಲವು ಹೆಸರುಗಳಲ್ಲಿ ಕಂಡು ಬರುವ ಇಟಾಲಿಯನ್ ಮೂಲದ ಶಾವಿಗೆಯು ಉದ್ದ, ಸಣ್ಣ ಇತ್ಯಾದಿ ಗಾತ್ರದ ಮೇಲೆ ಅವಲಂಬಿತವಾಗಿದೆ. ದುಂಡನೆಯ, ಆಯತಾಕಾರದ ಉದ್ದನೆಯ ಎಳೆಗಳು, ಮುರಿದ ತುಂಡುಗಳು ಹಸಿಯಾಗಿ ಮತ್ತು ಒಣಗಿಸಿದ ಎರಡು ರೀತಿಯಲ್ಲೂ ಲಭ್ಯವಿವೆ. ಅರೆ ಹುರಿದ ಅಥವಾ ಅವೆಯಿಸಿದ ತರಕಾರಿ, ಸಾಸ್‌ಗಳ ಜೊತೆಗೆ ಬೇಯಿಸಿದ ವರ್ಮಿಸಿಲಿ ಅಥವಾ ಪಾಸ್ತಾಗಳು ಸಿದ್ಧವಾಗುತ್ತವೆ. ಇವುಗಳಿಂದ ನೂರಾರು ಬಗೆಯ ತಿಂಡಿಗಳನ್ನು ಇಟಾಲಿಯನ್ ಆಹಾರ ಕ್ರಮದಲ್ಲಿ ಮಾಡಬಹುದು. ನೂಡಲ್ಸ್ ಅನ್ನುವುದು ಜರ್ಮನ್ ಮೂಲದ ಪದವಾದರೂ ಅದರ ಹೃದಯ ಇರುವುದು ಚೀನಾದಲ್ಲಿ. ಕ್ರಿ.ಪೂ. 25-220ರವರೆಗೆ ಆಳಿದ ಹಾನ್ ಸಾಮ್ರಾಜ್ಯದಲ್ಲಿಯೇ ನೂಡಲ್ಸ್ ಬಳಕೆಯಲ್ಲಿ ಇದ್ದ ಮಾಹಿತಿಯು ದೊರಕುತ್ತದೆ.

ಕ್ರಿ.ಶ. 600ರ ಸುಮಾರಿಗೆ ತಾಂಗ್ ಸಾಮ್ರಾಜ್ಯ ಸ್ಥಾಪನೆಯಗುವರೆಗೂ ನೂಡಲ್ಸ್ ಅನ್ನು ಕಿರುಧಾನ್ಯಗಳಲ್ಲಿ ಮಾಡಲಾಗುತ್ತಿತ್ತು. ತಾಂಗ್ ಸಾಮ್ರಾಜ್ಯ ಬಂದ ಮೇಲಷ್ಟೇ ಚೀನಾದಲ್ಲಿ ಗೋಧಿಯನ್ನು ಎಲ್ಲ ಕಡೆಗಳಲ್ಲೂ ಬೆಳೆಯಲು ಶುರುವಾಗಿದ್ದು. ಇದರ ಇತಿಹಾಸ ಬೆಳವಣಿಗೆ ಮುಂತಾದ ಕುರಿತು ಪ್ರತ್ಯೇಕವೇ ಬರೆಯಬೇಕು. ಶಾವಿಗೆ ಸಂಬಂಧವಾಗಿ ಮಾತ್ರ ಇಲ್ಲಿ ಈ ಉಲ್ಲೇಖ ಮಾಡಬೇಕಾಗಿದೆ. ಮುಂದೆ ಶತಮಾನಗಳ ಕಾಲ ಬೆಳೆಯುತ್ತಲೇ ಬಂದ ನೂಡಲ್ಸ್ ಕೊರಿಯಾ, ಜಪಾನ್, ಥಾಯ್ಲೆಂಡ್, ವಿಯೆಟ್ನಾಂ, ಫಿಲಿಪ್ಪೀನ್ಸ್ ಸೇರಿದಂತೆ ಹಲವು ದೇಶಗಳಿಗೆ ಹರಡಿಕೊಂಡು ಪೂರ್ವ ದೇಶಗಳಲ್ಲಿ ಅಡುಗೆಯ ಅರಸನಾಗಿಬಿಟ್ಟಿತು. ಮಾತ್ರವಲ್ಲ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಎಲ್ಲವನ್ನು ಎದುರಿಸಿ ಆಯಾ ಕಾಲದ ಅಗತ್ಯಗಳಿಗೆ ಹೊಂದಿಕೊಂಡು ತನ್ನ ಸಾರ್ವಭೌಮತೆಯನ್ನು ಉಳಿಸಿಕೊಂಡಿತು. ಇದು ಪಶ್ಚಿಮದತ್ತ ವಲಸೆ ಹೋದದ್ದು ಮತ್ತೂ ಆಸಕ್ತಿಕರವಾಗಿದೆ. ಇಟಾಲಿಯನ್ ಮತ್ತು ಭಾರತದ ಶಾವಿಗೆಗಿಂತಲೂ ಚೀನಾದ ನೂಡಲ್ಸ್ ಬಹಳ ಜನಪ್ರಿಯ. ಇದೀಗ ಪ್ರಪಂಚದ ಎಲ್ಲ ದೇಶಗಳಲ್ಲೂ ಲಭ್ಯವಿರುವ ಸಿದ್ಧ್ದ ಆಹಾರ. ನೂಡಲ್ಸ್ ಕೂಡ ಹುಟ್ಟಿನಲ್ಲಿ ಹಸಿಯಾದ ಶಾವಿಗೆ. ನಂತರದಲ್ಲಿ ಅದನ್ನು ಒಣಗಿಸಿ ಬಳಸುವ ಕ್ರಮಗಳು ರೂಢಿಗೆ ಬಂದವು. ಇವುಗಳಲ್ಲಿ ಗೋಧಿ ಮತ್ತು ಅಕ್ಕಿಯ ನೂಡಲ್ಸ್ ಹೆಚ್ಚು ಬಳಕೆಯಲ್ಲಿವೆ. ಇಲ್ಲೂ ಕೂಡ ಉದ್ದನೆಯ ದುಂಡಾದ ಅಥವಾ ಆಯತಾಕಾರದ, ಹೊಸೆದ ಅಥವಾ ಒತ್ತಿದ, ಹಲವಾರು ಬಗೆಯ ನೂಡಲ್ಸ್‌ಗಳು ಉಂಟು.

ಕುದಿವ ನೀರಿನಲ್ಲಿ ಪ್ರತ್ಯೇಕವಾಗಿ ಬೇಯಿಸಿಕೊಂಡು ಸಿದ್ಧವಾಗಿರುವ ಸೂಪು, ಮಾಂಸ, ಮಸಾಲೆ, ತರಕಾರಿಗಳೊಂದಿಗೆ ಬಟ್ಟಲಿನಲ್ಲಿ ಹಾಕಿಕೊಂಡು ಸೇವಿಸುವುದು ರೂಢಿ. ಇಟಾಲಿಯಲ್ಲಿ ದ್ರವ ರೂಪದ ಸೂಪ್ ಬಳಸುವುದಿಲ್ಲ. ಆದರೆ ಚೀನಾ, ಕೊರಿಯ, ಜಪಾನ್ ಸೇರಿದಂತೆ ಎಲ್ಲ ಪೌರಾತ್ಯ ದೇಶಗಳು ನೂಡಲ್ಸ್ ಅನ್ನು ಸೂಪ್, ರೇಮನ್ ಅಥವಾ ಸಾರಿನ ಜೊತೆಗೆ ಸೇವಿಸಲು ಬಳಸುತ್ತವೆ. ಸಮುದ್ರದ ಮೀನು, ಸಿಗಡಿ, ಕೋಳಿ ಮಾಂಸವನ್ನು ಯೇಥೆಚ್ಛವಾಗಿ ಬಳಸುತ್ತಾರೆ, ಇದಲ್ಲದೆ ಮೊಟ್ಟೆ, ಸೋಯಾ ಕಾಳುಗಳಿಂದ ಮಾಡಿದ ಟೋಫುಗಳನ್ನು ಕೂಡ ಬಳಸುವರು. ವರ್ಮಿಸಿಲಿ, ಪಾಸ್ತಾ ಮತ್ತು ನೂಡಲ್ಸ್‌ಗಳ ಇತಿಹಾಸ, ಬಳಸುವ ಪದಾರ್ಥ (ಅಕ್ಕಿ ಅಥವಾ ಗೋಧಿ), ಅದರ ಸ್ವರೂಪ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಶಾವಿಗೆಯು ಮನುಷ್ಯನ ಆಹಾರದ ಆವಿಷ್ಕಾರ ಹಾಗೂ ಬಳಕೆಯಲ್ಲಿ ಹಲವು ಜನಾಂಗ, ಪ್ರದೇಶಗಳೊಂದಿಗೆ ಕೊಡುಕೊಳ್ಳುವಿಕೆ ಮತ್ತು ವಲಸೆಯ ಆಯಾಮದ ಚರ್ಚೆಗಳು ಇರುವುದನ್ನ್ನು ಕಾಣಬಹುದು. ಅದು ಒಂದು ಪ್ರದೇಶಕ್ಕೆ ನೆಲೆ ನಿಲ್ಲದೆ ಹಲವು ಪ್ರದೇಶಗಳಲ್ಲಿ ಹಲವು ಸ್ವರೂಪಗಳಲ್ಲಿ ಮತ್ತೆ ಮತ್ತೆ ಮೈದಾಳುತ್ತ ಮುನ್ನಡೆಗೆ ಬಂದಿರುವುದನ್ನು ನಾವೀಗ ಭಾರತದಲ್ಲೇ ಮ್ಯಾಗಿಯ ನಿದರ್ಶನದಲ್ಲಿ ಕಾಣುತ್ತಿದ್ದೇವೆ.

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News