ಭೀಮಾ-ಕೋರೆಗಾಂವ್ ಪ್ರಕರಣ: ಶರಣಾಗಲು ಸಮಯಾವಕಾಶ ಕೋರಿ ಸುಪ್ರೀಂ ಗೆ ನವ್ಲಾಖಾ, ತೇಲ್ತುಂಬ್ಡೆ ಮೊರೆ

Update: 2020-04-08 16:19 GMT

ಹೊಸದಿಲ್ಲಿ,ಎ.8: ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ತಾವು ಶರಣಾಗಲು ಸಮಯಾವಕಾಶ ನೀಡಬೇಕು ಎಂದು ಕೋರಿ ಸಾಮಾಜಿಕ ಹೋರಾಟಗಾರರಾದ ಗೌತಮ್ ನವ್ಲಾಖಾ ಮತ್ತು ಆನಂದ ತೇಲ್ತುಂಬ್ಡೆ ಅವರು ಸಲ್ಲಿಸಿರುವ ಅರ್ಜಿಯನ್ನು ಬುಧವಾರ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದೆ.

2018,ಜ.1ರಂದು ಪುಣೆ ಸಮೀಪದ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಐಪಿಸಿಯ ವಿವಿಧ ಕಲಮ್‌ಗಳಡಿ ಆರೋಪಗಳನ್ನು ಹೊರಿಸಲಾಗಿದೆ. ಪುಣೆ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ನವ್ಲಾಖಾ ಮತ್ತು ತೇಲ್ತುಂಬ್ಡೆ ಅವರು ಮಾವೋವಾದಿಗಳ ಸಂಪರ್ಕ ಹೊಂದಿದ್ದಾ ರೆಂದು ಆರೋಪಿಸಲಾಗಿದ್ದು,ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಪ್ರಕರಣವನ್ನು ವಹಿಸಿಕೊಂಡಿದೆ.

ಮಾ.16ರಂದು ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಶರಣಾಗಲು ಎ.6ವರೆಗೆ ಸಮಯಾವಕಾಶ ನೀಡಿತ್ತು. ನವ್ಲಾಖಾ ಮತ್ತು ತೇಲ್ತುಂಬ್ಡ್ಡೆೆ ಅವರ ಅರ್ಜಿಯನ್ನು ವಿರೋಧಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಇದು ಕೇವಲ ವಿಳಂಬ ತಂತ್ರವಾಗಿದೆ,ಅವರಿಬ್ಬರ ವಿರುದ್ಧ ಗಂಭೀರ ಆರೋಪಗಳಿವೆ ಎಂದು ಹೇಳಿದರು.

ತನ್ನ ಕಕ್ಷಿದಾರರಿಗೆ 65 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದು,ಈಗಾಗಲೇ ಕಾಯಿಲೆಗಳಿಂದ ಬಳಲುತ್ತಿದ್ದಾರೆ, ಹೀಗಾಗಿ ಅವರಿಗೆ ಶರಣಾಗಲು ಹೆಚ್ಚಿನ ಸಮಯಾವಕಾಶವನ್ನು ನೀಡಬೇಕು ಎಂದು ಹೇಳಿದ ನವ್ಲಾಖಾ ಮತ್ತು ತೇಲ್ತುಂಬ್ಡ್ಡೆ ಪರ ವಕೀಲರು,ಕೊರೋನ ವೈರಸ್ ಸೋಂಕು ವ್ಯಾಪಿಸಿರುವ ಈ ಸಂದರ್ಭದಲ್ಲಿ ಅವರನ್ನು ಜೈಲಿಗೆ ಕಳುಹಿಸುವುದು ಮರಣದಂಡನೆಗೆ ಸಮನಾಗುತ್ತದೆ ಎಂದು ನ್ಯಾಯಾಲಯಕ್ಕೆ ನಿವೇದಿಸಿಕೊಂಡರು.

ನವ್ಲಾಖಾ ಮತ್ತು ತೇಲ್ತುಂಬ್ಡ್ಡೆೆ ಅವರ ಬಂಧನವನ್ನು ವಿಳಂಬಿಸುವಂತೆ ಕಳೆದ ವಾರ ವಿಶ್ವಾದ್ಯಂತದ 5,000ಕ್ಕೂ ಅಧಿಕ ಜನರು ಮತ್ತು 150ಕ್ಕೂ ಅಧಿಕ ಸಂಸ್ಥೆಗಳು ಸಹ ಕೇಂದ್ರವನ್ನು ಆಗ್ರಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News