ಕೊರೋನ-ಆರ್ಥಿಕತೆ ಕುರಿತ ವೈರಲ್ ಪೋಸ್ಟ್ ಬಗ್ಗೆ ರತನ್ ಟಾಟಾ ಪ್ರತಿಕ್ರಿಯೆ
ಹೊಸದಿಲ್ಲಿ, ಎ.11: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿರುವ, ಭಾರೀ ಆರ್ಥಿಕ ಹಿಂಜರಿತಕ್ಕೂ ಕೊರೋನ ವೈರಸ್‌ಗೂ ತಳುಕು ಹಾಕಿರುವ ತನ್ನ ಹೆಸರಿನಲ್ಲಿಯ ಪೋಸ್ಟ್ ನಕಲಿ ಎಂದು ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಸ್ಪಷ್ಟಪಡಿಸಿದ್ದಾರೆ.
‘ಈ ಪೋಸ್ಟ್‌ನ್ನು ನಾನು ಹೇಳಿಲ್ಲ, ಬರೆದೂ ಇಲ್ಲ. ವಾಟ್ಸ್‌ಆ್ಯಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಪೋಸ್ಟ್‌ನ್ನು ದೃಢಪಡಿಸಿಕೊಳ್ಳುವಂತೆ ನಾನು ಆಗ್ರಹಿಸುತ್ತಿದ್ದೇನೆ. ನನಗೇನಾದರೂ ಹೇಳಬೇಕಿದ್ದರೆ ಅದನ್ನು ನಾನು ನನ್ನ ಅಧಿಕೃತ ಚಾನೆಲ್‌ಗಳಲ್ಲಿ ಹೇಳುತ್ತೇನೆ ’ಎಂದು ಟಾಟಾ ಶನಿವಾರ ಮಧ್ಯಾಹ್ನ ಟ್ವೀಟಿಸಿದ್ದಾರೆ.
‘ನಕಲಿ ಸುದ್ದಿಗಳು ನಮಗೆಲ್ಲರಿಗೂ ಹಾನಿಕಾರಕವಾಗಿವೆ ಮತ್ತು ಅವುಗಳನ್ನು ಯಾವಾಗಲೂ ದೃಢಪಡಿಸಿಕೊಳ್ಳಬೇಕು ’ಎಂದು ಇನ್‌ಸ್ಟಾಗ್ರಾಮ್‌ನಲ್ಲಿಯ ಸ್ಟೇಟಸ್ ಮೆಸೇಜ್‌ನಲ್ಲಿ ಅವರು ಹೇಳಿದ್ದಾರೆ.
‘ಈ ಘಳಿಗೆಯಲ್ಲಿ ಅತ್ಯಂತ ಪ್ರೇರಣಾದಾಯಕ ’ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ‘ಕೊರೋನ ವೈರಸ್‌ನಿಂದ ಭಾರೀ ಆರ್ಥಿಕ ಕುಸಿತವುಂಟಾಗಲಿದೆ ಎಂದು ತಜ್ಞರು ಭವಿಷ್ಯ ಹೇಳುತ್ತಿದ್ದಾರೆ. ಈ ತಜ್ಞರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ ಮಾನವೀಯ ಪ್ರೇರಣೆ ಮತ್ತು ನಿರ್ಣಾಯಕ ಪ್ರಯತ್ನಗಳ ಮೌಲ್ಯದ ಬಗ್ಗೆ ಅವರಿಗೆ ಏನೇನೂ ಗೊತ್ತಿಲ್ಲ ಎನ್ನುವುದು ನನಗೆ ಖಂಡಿತವಾಗಿಯೂ ತಿಳಿದಿದೆ” ಎಂದು ಟಾಟಾರನ್ನು ಉಲ್ಲೇಖಿಸಿ ಹೇಳಿದೆ.
ಪೋಸ್ಟ್‌ನಲ್ಲಿ ದ್ವಿತೀಯ ಮಹಾಯುದ್ಧದ ಬಳಿಕ ಜಪಾನಿನ ಮರುಹುಟ್ಟು,ಕೇಂದ್ರದಲ್ಲಿ ಇಸ್ರೇಲ್ ಜೊತೆಗಿನ ಅಂತರರಾಷ್ಟ್ರೀಯ ರಾಜಕೀಯ ಮತ್ತು 1983ರ ವಿಶ್ವಕಪ್ ಕ್ರಿಕೆಟ ಪಂದ್ಯಾವಳಿಯಲ್ಲಿ ಭಾರತದ ಗೆಲುವು ಇತ್ಯಾದಿಗಳ ಉದಾಹರಣೆಗಳನ್ನು ನೀಡಲಾಗಿದೆ. ಭಾರತೀಯ ಆರ್ಥಿಕತೆಯು ಅತ್ಯಂತ ದೊಡ್ಡ ರೀತಿಯಲ್ಲಿ ಪುಟಿದೇಳಲಿದೆ ಎಂಬ ಸಂದೇಶದೊಂದಿಗೆ ಹಲವಾರು ವ್ಯಾಕರಣ ತಪ್ಪುಗಳಿಂದ ಕೂಡಿದ ಈ ಪೋಸ್ಟ್ ಅಂತ್ಯಗೊಂಡಿದೆ.