ಅಮೆರಿಕದಲ್ಲಿ ಕನಿಷ್ಠ 40 ಭಾರತೀಯರು ಕೊರೋನಗೆ ಬಲಿ: 1500ಕ್ಕೂ ಅಧಿಕ ಎನ್‌ಆರ್‌ಐಗಳಿಗೆ ಸೋಂಕು

Update: 2020-04-11 15:37 GMT

ಹೊಸದಿಲ್ಲಿ, ಎ.11: ಕೊರೋನ ವೈರಸ್ ಆರ್ಭಟದಿಂದ ತತ್ತರಿಸಿರುವ ಅಮೆರಿಕದಲ್ಲಿ ಈವರೆಗೆ 40ಕ್ಕೂ ಅಧಿಕ ಮಂದಿ ಭಾರತೀಯ ಮೂಲದ ಅಮೆರಿಕನ್ನರು ಹಾಗೂ ಭಾರತೀಯ ಪ್ರಜೆಗಳು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಹಾಗೆಯೇ ಸೋಂಕು ತಗಲಿರುವ ಭಾರತೀಯರ ಸಂಖ್ಯೆ 1,500ರ ಗಡಿಯನ್ನು ದಾಟಿರುವ ಸಾಧ್ಯತೆಯಿದೆ ಎಂದು ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ ಸಮುದಾಯದ ಪ್ರಮುಖರು ತಿಳಿಸಿದ್ದಾರೆ.

 ಕಳೆದ 24 ತಾಸುಗಳಲ್ಲಿ ಅಮೆರಿಕದಲ್ಲಿ ಒಟ್ಟು 2108 ಮಂದಿ ಕೊರೋನಗೆ ಬಲಿ ಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5 ಲಕ್ಷವನ್ನು ದಾಟಿದೆ.

ಅಮೆರಿಕದಲ್ಲಿ ಕೋವಿಡ್-19 (ಕೊರೋನ) ಸಾಂಕ್ರಾಮಿಕದ ಕೇಂದ್ರಸ್ಥಾನವೆನಿಸಿರುವ ನ್ಯೂಯಾರ್ಕ್ ಹಾಗೂ ಅದರ ನೆರೆಯ ರಾಜ್ಯ ನ್ಯೂಜೆರ್ಸಿಯಲ್ಲಿ ಅತ್ಯಧಿಕ ಸಾವಿನ ಪ್ರಕರಣಗಳು ವರದಿಯಾಗಿವೆ. ಈ ಎರಡೂ ರಾಜ್ಯಗಳಲ್ಲಿಯೂ ಭಾರತೀಯರು ಅತ್ಯಧಿಕ ಸಂಖ್ಯೆಯಲ್ಲಿ ನೆಲೆಸಿದ್ದಾರೆ.

ಅಮೆರಿಕದಲ್ಲಿ ಕೊರೋನ ವೈರಸ್‌ಗೆ ಬಲಿಯಾದ ಭಾರತೀಯರಲ್ಲಿ ಕನಿಷ್ಠ 17 ಮಂದಿ ಕೇರಳೀಯರು. ಗುಜರಾತ್‌ನ 10 ಮಂದಿ, ಪಂಜಾಬ್‌ನ ನಾಲ್ವರು ಹಾಗೂ ಆಂಧ್ರಪ್ರದೇಶದ ಇಬ್ಬರು ಹಾಗೂ ಒಡಿಶಾದ ಓರ್ವ ಸೇರಿದ್ದಾರೆ. ಇವರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಒಬ್ಬಾತ ಮಾತ್ರ 21 ವರ್ಷ ವಯಸ್ಸಿನವನೆಂದು ತಿಳಿದುಬಂದಿದೆ.

ಅಮೆರಿಕದಲ್ಲಿ ಕೊರೋನದಿಂದ ಮೃತಪಟ್ಟ ಭಾರತೀಯರಲ್ಲಿ 12 ಮಂದಿ ಭಾರತದ ಪೌರತ್ವವನ್ನು ಹೊಂದಿದವರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ನ್ಯೂಯಾರ್ಕ್- ನ್ಯೂಜೆರ್ಸಿ ರಾಜ್ಯಗಳ ನಿವಾಸಿಗಳಾಗಿದ್ದಾರೆ.

ಅಮೆರಿಕದ ಇನ್ನೆರಡು ರಾಜ್ಯಗಳಾದ ಪೆನ್ಸಿಲ್ವೇನಿಯಾ ಹಾಗೂ ಫ್ಲೊರಿಡಾಗಳಲ್ಲಿಯೂ ನಾಲ್ವರು ಭಾರತೀಯ ಮೂಲದ ಅಮೆರಿಕನ್ನರು ಸಾವನ್ನಪ್ಪಿರುವ ಬಗ್ಗೆ ವರದಿಗಳು ಬಂದಿವೆ.

ಖ್ಯಾತ ಐಟಿ ಕಂಪೆನಿ ಸನ್ನೊವಾ ಆ್ಯನಾಲಿಟಕಲ್ ಕಂಪೆನಿ ಸಿಇಓ ಹನುಮಂತ ಧವೆ, ಅಮೆರಿಕದಲ್ಲಿ ಕೊರೋನ ವೈರಸ್‌ಗೆ ಬಲಿಯಾವ ಭಾರತೀಯರಲ್ಲೊಬ್ಬರು. ಅವರು ನ್ಯೂಜೆರ್ಸಿಯ ಎಡಿಸನ್‌ನಲ್ಲಿ ಸೋಂಕಿನಿಂದ ಅಸುನೀಗಿದ್ದಾರೆ. ನ್ಯೂಜೆರ್ಸಿಯ ಇನ್ನೋರ್ವ ಜನಪ್ರಿಯ ಉದ್ಯಮಿ, 75 ವರ್ಷ ವಯಸ್ಸಿನ ಚಂದ್ರಕಾಂತ್ ಅಮೀನ್ ಕೂಡಾ ಕೊರೋನದಿಂದಾಗಿ ಸಾವನ್ನಪ್ಪಿದ್ದಾರೆ.

ನ್ಯೂಯಾರ್ಕ್‌ನಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಹಾಗೂ ನ್ಯೂಜೆರ್ಸಿಯಲ್ಲಿ ಸುಮಾರು 400 ಮಂದಿ ಭಾರತೀಯರಿಗೆ ಕೊರೋನ ಸೋಂಕು ತಗಲಿದೆ ಎಂದುಎ ಅಲ್ಲಿನ ಅನಿವಾಸಿ ಭಾರತೀಯ ಸಮುದಾಯದ ಮುಖಂಡರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News