ಹೊಸ ಸೆಟ್-ಟಾಪ್ ಬಾಕ್ಸ್ ಖರೀದಿಸದೆ ಡಿಟಿಎಚ್ ಆಪರೇಟರ್ ಬದಲಾವಣೆಗೆ ಅನುಮತಿ ನೀಡಲು ಟ್ರಾಯ್ ಶಿಫಾರಸು

Update: 2020-04-11 16:36 GMT

ಹೊಸದಿಲ್ಲಿ, ಎ.11: ಗ್ರಾಹಕರಿಗೆ ಒದಗಿಸಲಾಗಿರುವ ಎಲ್ಲ ಡಿಟಿಎಚ್ ಮತ್ತು ಸೆಟ್-ಟಾಪ್ ಬಾಕ್ಸ್(ಎಸ್‌ಟಿಬಿ)ಗಳು ಪರಸ್ಪರ ಕಾರ್ಯಸಾಧ್ಯತೆಯನ್ನು ಬೆಂಬಲಿಸಬೇಕು ಎಂದು ಶನಿವಾರ ಶಿಫಾರಸು ಮಾಡಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು,ಅಗತ್ಯ ನಿಯಮಗಳನ್ನು ತರುವ ಮೂಲಕ ಇದನ್ನು ಕಡ್ಡಾಯಗೊಳಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವನ್ನು ಆಗ್ರಹಿಸಿದೆ.

ಪರಸ್ಪರ ಕಾರ್ಯಸಾಧ್ಯತೆ ಸೌಲಭ್ಯ ಹೊಂದಿರುವ ಎಸ್‌ಟಿಬಿ ಗಳಿಂದಾಗಿ ಗ್ರಾಹಕರು ಹೊಸ ಸೆಟ್-ಟಾಪ್ ಬಾಕ್ಸ್ ಖರೀದಿಸದೆ ತಮ್ಮ ಡಿಟಿಎಚ್ ಆಪರೇಟರ್‌ನ್ನು ಬದಲಿಸಲು ಸಾಧ್ಯವಾಗುತ್ತದೆ. ಈಗ ಕೇಬಲ್ ಟಿವಿ ಜಾಲಗಳಲ್ಲಿ ಬಳಸಲಾಗುತ್ತಿರುವ ಎಸ್‌ಟಿಬಿಗಳು ಪರಸ್ಪರ ಕಾರ್ಯಸಾಧ್ಯತೆಯನ್ನು ಹೊಂದಿಲ್ಲ,ಅಂದರೆ ಗ್ರಾಹಕರು ತಮ್ಮ ಡಿಟಿಎಚ್ ಆಪರೇಟರ್‌ನ್ನು ಬದಲಿಸಬೇಕಿದ್ದರೆ ಹೊಸ ಎಸ್‌ಟಿಬಿಯನ್ನು ಖರೀದಿಸುವುದು ಅನಿವಾರ್ಯವಾಗಿದೆ.

ಭಾರತದಲ್ಲಿಯ ಎಲ್ಲ ಡಿಜಿಟಲ್ ಟಿವಿ ಸೆಟ್‌ಗಳಿಗೆ ಯುಎಸ್‌ಬಿ ಪೋರ್ಟ್ ಆಧಾರಿತ ಏಕರೂಪ ಇಂಟರ್‌ಫೇಸ್‌ನ್ನು ಕಡ್ಡಾಯ ಗೊಳಿಸುವಂತೆಯೂ ಟ್ರಾಯ್ ಶಿಫಾರಸು ಮಾಡಿದೆ.

ಡಿಟಿಎಚ್ ಮತ್ತು ಕೇಬಲ್ ಟವಿ ವಿಭಾಗಕ್ಕಾಗಿ ಪರಿಷ್ಕೃತ ಎಸ್‌ಟಿಬಿ ಮಾನದಂಡಗಳ ಜಾರಿಯ ಉಸ್ತುವಾರಿಗಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸಮನ್ವಯ ಸಮಿತಿಯೊಂದನ್ನು ರಚಿಸಬೇಕು ಎಂದೂ ಟ್ರಾಯ್ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News