ಕೊರೋನ ಸೋಂಕಿಗೆ ಸ್ವಯಂ ಚಿಕಿತ್ಸೆ: ಔಷಧ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲು

Update: 2020-04-13 16:28 GMT

ಚಂಡೀಗಢ, ಎ.13: ಕೊರೋನ ಸೋಂಕಿಗೆ ಒಳಗಾಗಿರುವುದು ತಿಳಿದಿದ್ದರೂ ಯಾರಿಗೂ ತಿಳಿಸದೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದ ಔಷಧ ವ್ಯಾಪಾರಿಯ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಹರ್ಯಾನದ ಫರೀದಾಬಾದ್‌ನಲ್ಲಿ ನಡೆದಿದೆ. ಔಷಧ ವ್ಯಾಪಾರಿಯನ್ನು ಆಸ್ಪತ್ರೆಯ ಕ್ವಾರಂಟೈನ್ ವಾರ್ಡ್‌ಗೆ ದಾಖಲಿಸಲಾಗಿದೆ . ಅಲ್ಲದೆ ಈತನ ಔಷಧ ಅಂಗಡಿಗೆ ಇತ್ತೀಚೆಗೆ ಭೇಟಿ ನೀಡಿದ್ದವರು ಹಾಗೂ ಈತನೊಂದಿಗೆ ನಿಕಟ ಸಂಪರ್ಕದಲ್ಲಿದ್ದವರು ತಮ್ಮ ಮಾಹಿತಿ ಒದಗಿಸಬೇಕು ಎಂದು ಸೂಚಿಸಿ ಪೊಲೀಸರು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ. ಔಷಧ ವ್ಯಾಪಾರಿಯಲ್ಲಿ ಎಪ್ರಿಲ್ 4ರಂದು ಕೊರೋನ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರೂ ಈತ ವೈದ್ಯರನ್ನು ಸಂಪರ್ಕಿಸದೆ ಸ್ವಯಂ ಚಿಕಿತ್ಸೆಗೆ ಮುಂದಾಗಿ ರೋಗನಿರೋಧಕ ಔಷಧವನ್ನು ಸೇವಿಸುತ್ತಿದ್ದ. ಆದರೆ ಯಾವುದೇ ಪ್ರಯೋಜನ ಕಂಡು ಬಾರದಿದ್ದಾಗ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಭೇಟಿಯಾಗಿದ್ದು ಈತನನ್ನು ಪರೀಕ್ಷೆಗೆ ಒಳಪಡಿಸಿದಾಗ ಪೊಸಿಟಿವ್ ವರದಿ ಬಂದಿದೆ ಎಂದು ಫರೀದಾಬಾದ್ ಪೊಲೀಸ್ ಆಯುಕ್ತ ಕೆಕೆ ರಾವ್ ಹೇಳಿದ್ದಾರೆ.

ಈ ವಿಷಯವನ್ನು ಆಸ್ಪತ್ರೆಯವರು ಜಿಲ್ಲಾಡಳಿತ ಮತ್ತು ಪೊಲೀಸರ ಗಮನಕ್ಕೆ ತಂದಿದ್ದು ತಕ್ಷಣ ಔಷಧ ವ್ಯಾಪಾರಿ, ಆತನೊಂದಿಗೆ ನಿಕಟ ಸಂಪರ್ಕದಲ್ಲಿದ್ದವರು ಮತ್ತು ಆತನ ಅಂಗಡಿಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕಳೆದ 10 ದಿನದಲ್ಲಿ 100ಕ್ಕೂ ಹೆಚ್ಚು ಮಂದಿ ಔಷಧ ವ್ಯಾಪಾರಿಯ ಅಂಗಡಿಗೆ ಭೇಟಿ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಔಷಧ ಅಂಗಡಿಯಿರುವ ಸೆಕ್ಟರ್ 28 ಪ್ರದೇಶವನ್ನು ಸೀಲ್ ಮಾಡಲಾಗಿದೆ. ವ್ಯಾಪಾರಿಯ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News