ಅತ್ತ ಪಾಕ್ ಶೆಲ್ ದಾಳಿ; ಇತ್ತ ಕೊರೋನ ದಾಳಿ: ಗಡಿಗ್ರಾಮಸ್ಥರ ಬದುಕು ಅತಂತ್ರ

Update: 2020-04-14 05:30 GMT

ಶ್ರೀನಗರ, ಎ.14: ಒಂದೆಡೆ ಪಾಕಿಸ್ತಾನಿ ಸೈನಿಕರ ಗುಂಡಿನ ಮಳೆಯಾದರೆ, ಇನ್ನೊಂದೆಡೆ ಕೋವಿಡ್-19 ಸಾಂಕ್ರಾಮಿಕದ ದಾಳಿಯಿಂದಾಗಿ ಜಮ್ಮು ಕಾಶ್ಮೀರದ ಕುಪ್ವಾರ ಪ್ರದೇಶದ ಗಡಿಗ್ರಾಮಗಳ ಜನತೆಯ ಬದುಕು ಅತಂತ್ರವಾಗಿದೆ. ಗಡಿಪ್ರದೇಶದಲ್ಲಿ ಪಾಕಿಸ್ತಾನದ ಶೆಲ್ ದಾಳಿ ನಡೆಯುತ್ತಿದ್ದರೂ, ಎಲ್ಲೂ ಹೋಗಲಾಗದೇ ಗ್ರಾಮಸ್ಥರು ಸಿಕ್ಕಿಹಾಕಿಕೊಂಡಿದ್ದಾರೆ.

ಶೆಲ್ಲಿಂಗ್ ನಿಂತ ಬಳಿಕ ಸೋಮವಾರ ಗ್ರಾಮಸ್ಥರು ತಮ್ಮ ಧ್ವಂಸಗೊಂಡ ಮನೆಗಳಿಗೆ ಮರಳಿದರು. ಶೆಲ್ ದಾಳಿಯಿಂದ ಹಲವು ಮನೆಗಳಿಗೆ ಹಾನಿಯಾಗಿದೆ. ಮತ್ತೆ ಯಾವಾಗ ಶೆಲ್ ದಾಳಿ ನಡೆಯುತ್ತದೆ ಎಂಬ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.

ಕುಪ್ವಾರ ಜಿಲ್ಲೆಯ ತೀರಾ ಒಳಪ್ರದೇಶಗಳ ಮೇಲೂ ಶೆಲ್ ದಾಳಿ ನಡೆದಿರುವುದು ಇದೇ ಮೊದಲು. ಒಂದು ಮಗು ಸೇರಿದಂತೆ ಮೂವರು ಪಾಕಿಸ್ತಾನಿ ಶೆಲ್ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದು, ಐದು ಮಂದಿ ಗಾಯಗೊಂಡಿದ್ದಾರೆ, ಕೊರೋನ ವೈರಸ್ ಹರಡುವಿಕೆಯ ಹೈರಿಸ್ಕ್ ಪ್ರದೇಶ ಎಂದು ಈ ಪ್ರದೇಶವನ್ನು ಗುರುತಿಸಿರುವುದರಿಂದ ಗ್ರಾಮಸ್ಥರಿಗೆ ಪರ್ಯಾಯ ಮಾರ್ಗವೇ ಇಲ್ಲವಾಗಿದೆ.

ಕೊರೋನ ಸಾಂಕ್ರಾಮಿಕದ ಭೀತಿಯಿಂದ ನೆರೆ ಗ್ರಾಮಗಳ ಜನ, ಇತರರಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕುಪ್ವಾರ ಜಿಲ್ಲೆಯ ಹಲವು ಗ್ರಾಮಗಳನ್ನು ಕೆಂಪು ವಲಯಗಳಾಗಿ ವರ್ಗೀಕರಿಸಲಾಗಿದೆ. ಶೆಲ್ ದಾಳಿ ಆರಂಭವಾದಾಗ ಚಪ್ಪಲಿಯೂ ಹಾಕದೇ ಮನೆಗಳಿಂದ ಓಡಿಬಂದೆವು. ಪಕ್ಕದ ಗ್ರಾಮದ ಬಳಿ ಬಂದಾಗ ಪೊಲೀಸರು ನಮ್ಮನ್ನು ತಡೆದು, ನೀವು ರೆಡ್ ಝೋನ್ ಪ್ರವೇಶಿಸುತ್ತಿದ್ದೀರಿ ಎಂದು ಎಚ್ಚರಿಕೆ ನೀಡಿದರು ಎಂದು ಗ್ರಾಮಸ್ಥರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಕೊರೋನ ಸೋಂಕಿನ ಭೀತಿಯಿಂದ ಪಕ್ಕದ ಗ್ರಾಮಗಳಲ್ಲಿ ಕೂಡಾ ಇವರಿಗೆ ಆಶ್ರಯ ನೀಡುತ್ತಿಲ್ಲ. ಈ ಬಗ್ಗೆ ಮಹಿಳೆಯೊಬ್ಬರು ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೋಡಿಕೊಂಡಿದ್ದಾರೆ.

ನಮ್ಮ ಸಾಮಾಜಿಕ ಅಂತರ ನಿಯಮ ಏನಾಗುತ್ತಿದೆ? ಕೋವಿಡ್ ಹರಡುವುದು ತಡೆಯಲು ನಾವು ಮನೆಯಲ್ಲೂ ಕೂರುವಂತಿಲ್ಲ. ನಾವು ಜೀವಭಯದಿಂದ ಎಲ್ಲರೂ ಜತೆಯಾಗಿ ಮನೆಗಳಿಂದ ಓಡಿಬಂದಿದ್ದೇವೆ ಎಂದು ಮಹಿಳೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News