"ನಮಗೆ ಹೊಗಳಿಕೆ ಮಾತ್ರವಲ್ಲ, ಹಣಕಾಸಿನ ನೆರವು ಬೇಕು": ಪ್ರಧಾನಿ ಭಾಷಣಕ್ಕೆ ಕೇರಳ ಹಣಕಾಸು ಸಚಿವ ಪ್ರತಿಕ್ರಿಯೆ

Update: 2020-04-14 14:56 GMT

ತಿರುವನಂತಪುರ, ಎ.14:  ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಯಾವುದೇ ಹೆಚ್ಚುವರಿ ಹಣಕಾಸು ಪ್ಯಾಕೇಜ್ ಘೋಷಿಸದ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿರುವ ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ನಮಗೆ ಕೇವಲ  ಹೊಗಳಿಕೆ ಬೇಕಾಗಿಲ್ಲ, ಹಣಕಾಸಿನ ನೆರವು ಬೇಕು ಎಂದು ಹೇಳಿದ್ದಾರೆ.

ಕಷ್ಟಕರ ಪರಿಸ್ಥಿತಿಯನ್ನು ಎದುರಿಸಲು ವಿವಿಧ ರಾಜ್ಯಗಳು ಕೇಂದ್ರದ ಸಹಾಯ ಕೇಳಿತ್ತು. ಆ ಬಗ್ಗೆ ಪ್ರಧಾನಿಯವರು ಮೌನ ವಹಿಸಿದ್ದಾರೆ. ಈಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾಂಕುಗಳು ಹೆಚ್ಚಿನ ಬಡ್ಡಿ ವಿಧಿಸುತ್ತಿವೆ ಮತ್ತು ರಾಜ್ಯಗಳು ಕೇಂದ್ರದಿಂದ ಹಣಕಾಸಿನ ನೆರವು ನಿರೀಕ್ಷಿಸುತ್ತಿವೆ ಮತ್ತು ಕೇವಲ ಪ್ರಶಂಸೆ  ಅಗತ್ಯವಿಲ್ಲ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

"ಧಾನಿ ಇಂದು ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಕೊರೋನ ವೈರಸ್ ಸೋಂಕು ತಡೆಗಟ್ಟಲು ರಾಜ್ಯಗಳು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಆದರೆ ರಾಜ್ಯಗಳಿಗೆ ಈ ಶ್ಲಾಘನೆಯೊಂದೇ ಸಾಲದು, ಆರ್ಥಿಕ ಸಹಾಯವೂ ಬೇಕು. ನಾವು ಸಾಲಕ್ಕಾಗಿ ಬ್ಯಾಂಕುಗಳನ್ನು ಸಂಪರ್ಕಿಸಿದಾಗ  ಶೇ 9ರಷ್ಟು ಬಡ್ಡಿ ದರವಿದೆ. ಹೆಚ್ಚಿನ ರಾಜ್ಯಗಳು  ಸಾಲ ಪಡೆಯುವುದನ್ನು ರೂ. 500 ಕೋಟಿಯಿಂದ ರೂ. 1000 ಕೋಟಿಗೆ ಸೀಮಿತಗೊಳಿಸಿವೆ ಹಾಗೂ  ವೇತನಗಳಲ್ಲಿ ಕಡಿತಗೊಳಿಸಿ ಅಥವಾ ಅಭಿವೃದ್ಧಿ ಚಟುವಟಿಕೆಗಳನ್ನು ನಿಲ್ಲಿಸುವಂತಾಗಿದೆ,'' ಎಂದು ಅವರು ಹೇಳಿದರು.

ಲಾಕ್ ಡೌನ್ ವಿಸ್ತರಣೆಯು ಮಾರಕ ಕೊರೋನ  ವೈರಸ್  ಹರಡುವುದನ್ನು ನಿಯಂತ್ರಿಸುತ್ತದೆ ಎಂದು  ಹೇಳಿ ಸಚಿವ ಐಸಾಕ್ ಅವರು  ಕೋವಿಡ್ -19 ಸಂಬಂಧಿಸಿದ  ಪರೀಕ್ಷೆಯನ್ನು ತ್ವರಿತಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು.

ಬುಧವಾರ ಎರಡನೇ ಹಂತದ ಲಾಕ್‌ಡೌನ್ ಸಮಯದಲ್ಲಿ ಕೇಂದ್ರವು ಮಾರ್ಗಸೂಚಿಗಳನ್ನು ನೀಡಿದ ನಂತರ ರಾಜ್ಯ ಸಚಿವ ಸಂಪುಟ ನಿರ್ಬಂಧಗಳ  ಕುರಿತು  ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಐಸಾಕ್ ಹೇಳಿದ್ದಾರೆ.

ಕೇರಳದ ಪರಿಸ್ಥಿತಿ ಸುಧಾರಿಸುತ್ತಿದ್ದರೂ, ದೇಶದ ಇತರ ಭಾಗಗಳಲ್ಲಿ ಈ ರೀತಿಯಾಗಿಲ್ಲ ಎಂದು ಸಚಿವರು ಹೇಳಿದರು.

ಪ್ರತಿ ನಾಲ್ಕು ದಿನಗಳಿಗೊಮ್ಮೆ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿರುವಂತೆ ತೋರುತ್ತಿದೆ. ರೋಗ ಹರಡುವುದನ್ನು ತಡೆಯುವ ಏಕೈಕ ಮಾರ್ಗವೆಂದರೆ ಲಾಕ್‌ಡೌನ್. ಕಳೆದ ಮೂರು ವಾರಗಳಿಂದ  ಲಾಕ್ ಡೌನ್ ನಲ್ಲಿ  ಏನಾಗಿದೆ ಎಂದು  ಕೇಂದ್ರ  ಸರಕಾರ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು  ಐಸಾಕ್ ಹೇಳಿದ್ದಾರೆ.

ಸರಕಾರ ಲಾಕ್ ಡೌನ್ ನ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕು. ಆದಾಯ ಬೆಂಬಲವಿಲ್ಲದೆ ಲಾಕ್‌ಡೌನ್ ಪರಿಣಾಮಕಾರಿಯಾಗುವುದಿಲ್ಲ . ದೇಶಾದ್ಯಂತದ ವಲಸೆ ಕಾರ್ಮಿಕರು ಲಾಕ್‌ಡೌನ್ ಪ್ರೋಟೋಕಾಲ್ ಅನ್ನು ಅನುಸರಿಸಲು ನಿರಾಕರಿಸುತ್ತಿದ್ದಾರೆ ಎಂದು ಐಸಾಕ್ ಹೇಳಿದರು.

ಕೇಂದ್ರವು ಕಳೆದ ವರ್ಷದ ಕನಿಷ್ಠ ಅರ್ಧದಷ್ಟು ವೇತನವನ್ನು ಕನಿಷ್ಠ ಪ್ರತಿ ನೋಂದಾಯಿತ ಕಾರ್ಮಿಕರ ಖಾತೆಗಳಿಗೆ ವರ್ಗಾಯಿಸಬೇಕು. ಅದು ಕೆಲಸದ ದಿನಗಳನ್ನು 150 ಕ್ಕೆ ಹೆಚ್ಚಿಸಬೇಕು ಎಂದು ಅವರು ಹೇಳಿದರು.

ಕೇಂದ್ರವು ರಿಸರ್ವ್ ಬ್ಯಾಂಕಿನಿಂದ ಸಾಲ ಎರವಲು ಪಡೆಯುವ ಮೂಲಕ ಆರ್ಥಿಕ ನೆರವು ನೀಡಬೇಕು ಮತ್ತು ಅದನ್ನು ರಾಜ್ಯಗಳಿಗೆ ಒದಗಿಸಬೇಕು ಎಂದು ಸಚಿವರು ಹೇಳಿದರು.

ಕೇರಳದಲ್ಲಿ ರೋಗಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಹೊಸ ಪ್ರಕರಣಗಳಿಲ್ಲದ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಬಹುದು ಎಂದು ಅವರು ಹೇಳಿದರು.

ಕೃಷಿ, ಸಣ್ಣ-ಪ್ರಮಾಣದ ಕೈಗಾರಿಕೆಗಳು, ನಿರ್ಮಾಣ ಕ್ಷೇತ್ರ ಮುಖ್ಯವಾಗಿ ರಸ್ತೆ ನಿರ್ಮಾಣ ಮತ್ತು ದುರಸ್ತಿ, ರಫ್ತು ಕ್ಷೇತ್ರಗಳು ಆದ್ಯತೆಯ ಕ್ಷೇತ್ರಗಳಾಗಿವೆ. ಲಾಕ್ ಡೌನ್  ಮುಂದುವರಿದರೆ ಈ ಕ್ಷೇತ್ರಗಳಿಗೆ ಹಾನಿಯಾಗಲಿದೆ. ಈ ನಿಟ್ಟಿನಲ್ಲಿ ನಾಳೆ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಐಸಾಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News