ಲಾಕ್‌ಡೌನ್: ತುರ್ತು ಚಿಕಿತ್ಸೆಗಳಿಗೆ ರಕ್ತದ ಕೊರತೆ
ಮಂಗಳೂರು, ಎ.15: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ದೇಶ ದೆಲ್ಲೆಡೆ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ಆಸ್ಪತ್ರೆಗಳ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಸಮಸ್ಯೆ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸರಕಾರಿ ಹೆರಿಗೆ ಆಸ್ಪತ್ರೆಯಾಗಿರುವ ಲೇಡಿಗೋಶನ್ ಸೇರಿದಂತೆ ನಗರದ ಇತರ ಖಾಸಗಿ ಆಸ್ಪತ್ರೆಗಳಿಗೂ ತುರ್ತು ರಕ್ತ ಪೂರೈಕೆ ಮಾಡುವ ರೆಡ್‌ಕ್ರಾಸ್‌ನಲ್ಲೂ ರಕ್ತ ಸಂಗ್ರಹದ ಅಭಾವ ಕಾಡುತ್ತಿದೆ. ಲಾಕ್‌ಡೌನ್‌ನ ಕಾರಣ ಇದೀಗ ಬೃಹತ್ ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಜತೆಗೆ, ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಿರುವುದರಿಂದ ಸ್ವಯಂಪ್ರೇರಿತ ರಕ್ತದಾನಿಗಳನ್ನೂ ಕಟ್ಟಿಹಾಕಿದಂತಾಗಿದೆ. ಸದ್ಯ ಕೊರೋನ ನಿಯಂತ್ರಣ ಅತೀ ಅಗತ್ಯವಾಗಿದ್ದರೂ, ಇದೇ ಸಂದರ್ಭದಲ್ಲಿ ಇತರ ತೀವ್ರ ಕಾಯಿಲೆಗಳ ಬಗ್ಗೆಯೂ ನಾವು ಎಚ್ಚರದಿಂದ ಇರಬೇಕಾಗಿದೆ. ಆಸ್ಪತ್ರೆಗಳಲ್ಲಿ ಹೆರಿಗೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅದರಲ್ಲೂ ನಗರದ ಲೇಡಿಗೋಶನ್ ಆಸ್ಪತ್ರೆ ಮುಖ್ಯವಾಗಿ ಹೆರಿಗೆ ಆಸ್ಪತ್ರೆಯಾಗಿಯೇ ಕಾರ್ಯಾಚರಿಸುತ್ತಿದೆ. ಇದಲ್ಲದೆ ನಗರದ ಇತರ ಖಾಸಗಿ ಆಸ್ಪತ್ರೆಗಳಲ್ಲೂ ಕ್ಯಾನ್ಸರ್ ಚಿಕಿತ್ಸೆ (ಕಿಮೋಥೆರಪಿ), ತಲ್ಸೇಮಿಯಾ, ತುರ್ತು ಶಸ್ತ್ರಚಿಕಿತ್ಸೆ ಸೇರಿದಂತೆ ಯಾವುದೇ ರೀತಿಯ ರಕ್ತಸ್ರಾವದ ಚಿಕಿತ್ಸೆಗಳಿಗೆ ರಕ್ತ ಅತ್ಯಗತ್ಯವಾಗಿ ಬೇಕಾಗುತ್ತದೆ. ರೆಡ್‌ಕ್ರಾಸ್ ನೇತೃತ್ವದಲ್ಲಿ ಸೇರಿದಂತೆ ಇತರ ಸಂಘಸಂಸ್ಥೆಗಳ ಮೂಲಕ ಸಾರ್ವಜನಿಕ ರಕ್ತದಾನ ಶಿಬಿರಗಳು ಅಲ್ಲಲ್ಲಿ ನಡೆಯುತ್ತಿದ್ದ ಕಾರಣ ಹಿಂದೆ ರಕ್ತದ ಕೊರತೆ ಜಿಲ್ಲೆಯನ್ನು ಬಾಧಿಸುತ್ತಿರಲಿಲ್ಲ. ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ, ಬಹು ಮುಖ್ಯವಾಗಿ ರೆಡ್‌ಕ್ರಾಸ್‌ನಿಂದ ರಕ್ತವನ್ನು ಪಡೆಯಲಾಗುತ್ತದೆ. ಆದರೆ ಸದ್ಯ ರೆಡ್‌ಕ್ರಾಸ್‌ನಲ್ಲೂ ರಕ್ತದ ಕೊರತೆ ಕಾಣಿಸಿಕೊಂಡಿದ್ದು, ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗುವವರನ್ನು ಎದುರು ನೋಡಲಾಗುತ್ತಿದೆ. ‘‘ಕೊರೋನ ಹಾವಳಿಯ ನಡುವೆಯೂ ಇತರ ಹಲವಾರು ರೀತಿಯ ರೋಗಗಳು ಮನುಷ್ಯರನ್ನು ಬಾಧಿಸುತ್ತಲೇ ಇವೆ. ಅವುಗಳ ತುರ್ತು ಚಿಕಿತ್ಸೆಗೆ ರಕ್ತ ಅತ್ಯಗತ್ಯ. ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಹೊರ ಆವರಣದಲ್ಲಿ ಕಾರ್ಯಾಚರಿಸುವ ರೆಡ್‌ಕ್ರಾಸ್ ಬ್ಲಡ್‌ಬ್ಯಾಂಕ್‌ನಲ್ಲಿ ರಕ್ತದ ಕೊರತೆ ಉಂಟಾಗಿದೆ. ಹಾಗಾಗಿ ನಗರದಲ್ಲಿ ರಕ್ತದಾನಿಗಳು ಕಾಲ್ನಡಿಗೆಯ ಮೂಲಕ (ಸಮೀಪದವರು) ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸ ಮಾಡಬೇಕಾಗಿದೆ. ನಗರದೊಳಗೆ ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ರಕ್ತದಾನ ಮಾಡಲಿಚ್ಛಿಸುವವರಿಗೆ ರೆಡ್‌ಕ್ರಾಸ್ ವ್ಯವಸ್ಥೆ ಮಾಡಲಿದೆ’’ ಎನ್ನು ತ್ತಾರೆ ರೆಡ್‌ಕ್ರಾಸ್‌ನ ಸದಸ್ಯರಲ್ಲೊಬ್ಬರಾಗಿರುವ ಮೂಡುಬಿದಿರೆಯ ರಾಜೇಂದ್ರ ಪೈ. ‘‘ಎ ಪಾಸಿಟಿವ್, ಒ ಹಾಗೂ ಎ ನೆಗೆಟಿವ್ ರಕ್ತದ ಕೊರತೆ ತೀವ್ರವಾಗಿದೆ. ಇದರಿಂದ ರೋಗಿಗಳು ಹಾಗೂ ಅವರ ಕುಟುಂಬಸ್ಥರು ತೀವ್ರ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಇದೆ. ರೆಡ್‌ಕ್ರಾಸ್‌ನಿಂದ ಬೃಹತ್ ಶಿಬಿರಗಳ ಮೂಲಕ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಲಾಗುತ್ತಿತ್ತು. ಸದ್ಯ ಅಂತಹ ಶಿಬಿರಗಳನ್ನು ನಡೆಸಲು ಸಾಧ್ಯವಿಲ್ಲ. ಹಿಂದೆ ರೆಡ್‌ಕ್ರಾಸ್‌ನಲ್ಲಿ 250ರಿಂದ 300 ಯುನಿಟ್‌ಗಳಷ್ಟು ರಕ್ತದ ಸಂಗ್ರಹವಿರುತ್ತಿತ್ತು’’ ಎನ್ನುತ್ತಾರೆ ರೆಡ್‌ಕ್ರಾಸ್‌ನ ಸಂಯೋಜಕ ಪ್ರವೀಣ್. ‘‘ಲಾಕ್‌ಡೌನ್ ಆಗಿದ್ದರೂ ರೆಡ್‌ಕ್ರಾಸ್‌ನಿಂದ ನಿರಂತರವಾಗಿ ಲೇಡಿಗೋಶನ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಆಸ್ಪತ್ರೆಗಳಿಗೆ ರಕ್ತ ಪೂರೈಕೆ ಮಾಡಬೇಕಾಗುತ್ತದೆ. ರೆಡ್‌ಕ್ರಾಸ್‌ನ ಸಿಬ್ಬಂದಿ ಒತ್ತಡದ ನಡುವೆಯೂ ತುರ್ತು ಸೇವೆ ನೀಡಬೇಕಾಗಿದೆ. ಹಾಗಾಗಿ ಸಣ್ಣಪುಟ್ಟ ಶಿಬಿರಗಳನ್ನು ನಡೆಸಿ ನಾವು ಸದ್ಯ ರಕ್ತದ ಕೊರತೆಯನ್ನು ನೀಗಿಸಲು ಪ್ರಯತ್ನಿಸುತ್ತಿದ್ದೇವೆ. ಇಂದು ಕೂಡಾ ಎ ಪಾಸಿಟಿವ್, ಒ ನೆಗೆಟಿವ್ ರಕ್ತ ಸಂಗ್ರಹವಿಲ್ಲದೆ ಸಾಕಷ್ಟು ಒದ್ದಾಡಬೇಕಾಯಿತು. ಹೆರಿಗೆ, ಸಾಮಾನ್ಯವಾಗಿರಲಿ ಅಥವಾ ಸಿಸೇರಿಯನ್ ಆಗಿರಲಿ ರಕ್ತದ ಆವಶ್ಯಕತೆ ಬರುತ್ತದೆ. ಲೇಡಿಗೋಶನ್ ಒಂದಕ್ಕೆ ದಿನವೊಂದಕ್ಕೆ ಕನಿಷ್ಠ 15ರಿಂದ 25 ಯುನಿಟ್ ರಕ್ತದ ಅಗತ್ಯವಿರುತ್ತದೆ. ಕೆಲವು ಸಮಾಜ ಸೇವಾ ಸಂಘಟನೆಗಳು ತಮ್ಮ ಸ್ವಯಂಸೇವಕರ ಮೂಲಕ ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಸಹಕರಿಸಿದ್ದಾರೆ. ಹಾಗಿದ್ದರೂ ರಕ್ತದ ಬೇಡಿಕೆ ಬಹಳಷ್ಟಿದೆ. ಇದಕ್ಕಾಗಿ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕಾಗಿದೆ’’ ಎಂದು ಪ್ರವೀಣ್ ಹೇಳುತ್ತಾರೆ.
ರಕ್ತದಾನ ಮಾಡಬಯಸುವವರಿಗೆ ರೆಡ್‌ಕ್ರಾಸ್‌ನಿಂದ ವ್ಯವಸ್ಥೆ
‘‘ಮಂಗಳೂರು ನಗರದಲ್ಲಿ ಯಾವುದಾದರೂ ಒಂದು ಜಾಗದಲ್ಲಿ ಏಳೆಂಟು ಜನ ರಕ್ತದಾನಕ್ಕೆ ಮುಂದಾದರೆ ಅಂತಹ ಸ್ಥಳಗಳಿಗೆ ರೆಡ್‌ಕ್ರಾಸ್‌ನ ಬಸ್ ಕಳುಹಿಸಿ ರಕ್ತ ಸಂಗ್ರಹಿಸಲಾಗುವುದು. ರೆಡ್‌ಕ್ರಾಸ್‌ಗೆ ಸಮೀಪದವರು ಕೂಡಾ ಕಾಲ್ನಡಿಗೆಯಲ್ಲಿ ಬಂದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ರಕ್ತ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ದಾನಿಗಳಿಂದ ಸಂಗ್ರಹಿಸಲಾಗುವ ರಕ್ತವನ್ನು ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೆ ರೆಡ್‌ಕ್ರಾಸ್‌ನಿಂದ ಉಚಿತವಾಗಿ ನೀಡಲಾಗುತ್ತದೆ. ಹೊರಗಿನ ಆಸ್ಪತ್ರೆಗಳಿಗೆ ಕನಿಷ್ಠ ವೆಚ್ಚ (ಟೆಸ್ಟಿಂಗ್ ಚಾರ್ಜ್) ಮಾತ್ರವೇ ರೆಡ್‌ಕ್ರಾಸ್‌ನಿಂದ ಪಡೆಯಲಾಗುತ್ತದೆ.’’
ಸಿಎ ಶಾಂತಾರಾಮ ಶೆಟ್ಟಿ, ಅಧ್ಯಕ್ಷರು, ರೆಡ್‌ಕ್ರಾಸ್, ದ.ಕ.
ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ರಕ್ತ ಸಂಗ್ರಹ
‘‘ಕೊರೋನ ಸೋಂಕು ರಕ್ತದ ಮೂಲಕ ಹರಡುವುದಿಲ್ಲ ಎಂಬುದು ಎಲ್ಲರಿಗೂ ಸಮಾಧಾನಕರ ಸಂಗತಿ. ಹಾಗಾಗಿ ರಕ್ತದಾನಕ್ಕೆ ಸಂಬಂಧಿಸಿ ಯಾರೂ ಭಯ ಪಡಬೇಕಾಗಿಲ್ಲ. ಮಾತ್ರವಲ್ಲದೆ, ರೆಡ್‌ಕ್ರಾಸ್‌ನಲ್ಲಿ ರಕ್ತ ಸಂಗ್ರಹದ ಸಂದರ್ಭ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗುತ್ತದೆ. ದಾನಿಯ ಓರಲ್ ತಪಾಸಣೆಯ ಬಳಿಕವೇ ರಕ್ತ ಸಂಗ್ರಹಿಸಲಾಗುತ್ತದೆ. ರಕ್ತದಾನಕ್ಕೆ ಮುಂದಾಗುವರಲ್ಲಿ, ಹಿಮೋಗ್ಲೋಬಿನ್ ಕೊರತೆಯಾಗಲಿ ಅಥವಾ ಯಾವುದೇ ರೀತಿಯ ರೋಗ ಲಕ್ಷಣಗಳ ಅನುಮಾನವಿದ್ದರೂ ರಕ್ತ ಸಂಗ್ರಹಿಸಲಾಗುವುದಿಲ್ಲ’’.
ಪ್ರವೀಣ್, ಸಂಯೋಜಕರು, ರೆಡ್‌ಕ್ರಾಸ್, ದ.ಕ
ರಕ್ತದಾನ ಮಾಡಲಿಚ್ಛಿಸುವವರು ಮೊ.9916262459 (ಪ್ರವೀಣ್) ಅಥವಾ ರೆಡ್‌ಕ್ರಾಸ್ ಕಚೇರಿ ಸಂಖ್ಯೆ (0824- 2410787, 2424788)ಯನ್ನು ಸಂಪರ್ಕಿಸಬಹುದು.