ದ್ವೇಷಪೂರಿತ ಟ್ವೀಟ್: ಕಂಗನಾ ಸೋದರಿ ರಂಗೋಲಿಯ ಟ್ವಿಟರ್ ಖಾತೆ ಸಸ್ಪೆಂಡ್

Update: 2020-04-16 14:00 GMT
ರಂಗೋಲಿ ಚಂಡೇಲ್ (Photo: Facebook)

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಸೋದರಿ, ಮ್ಯಾನೇಜರ್ ಹಾಗೂ ವಕ್ತಾರೆಯಾಗಿರುವ ರಂಗೋಲಿ ಚಂಡೇಲ್ ಅವರ ಟ್ವಿಟರ್ ಖಾತೆಯನ್ನು ದ್ವೇಷಪೂರಿತ ಕೋಮುಭಾವನೆ ಕೆರಳಿಸುವಂತಹ ಟ್ವೀಟ್ ಮಾಡಿದ್ದಕ್ಕಾಗಿ ಸಸ್ಪೆಂಡ್ ಮಾಡಲಾಗಿದೆ.

ಕಳೆದ ಕೆಲ ದಿನಗಳಿಂದ ಕೊರೋನವೈರಸ್ ಕುರಿತಂತೆ ಟ್ವೀಟ್ ಮಾಡುತ್ತಿದ್ದ ರಂಗೋಲಿ, ತಬ್ಲೀಗಿ ಜಮಾತ್ ಕುರಿತಂತೆಯೂ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ತಮ್ಮ ಟ್ವೀಟ್ ನಲ್ಲಿ 'ಮುಲ್ಲಾಗಳು' ಹಾಗೂ 'ಸೆಕ್ಯುಲರ್ ಮಾಧ್ಯಮ'ವನ್ನು ಗುಂಡಿಕ್ಕಿ ಸಾಯಿಸಬೇಕೆಂದು ಬರೆದಿದ್ದರು. ಎಪ್ರಿಲ್ 15ರಂದು ರಂಗೋಲಿ ಪೋಸ್ಟ್ ಮಾಡಿದ್ದ ಆಕ್ಷೇಪಾರ್ಹ ಟ್ವೀಟ್‍ನ ಕನ್ನಡಾನುವಾದ ಹೀಗಿದೆ- "ಒಬ್ಬ ಜಮಾತಿ ಕೊರೋನದಿಂದ ಸತ್ತ ಹಾಗೂ ಪೊಲೀಸರು ಮತ್ತು ವೈದ್ಯರು ಅವರ ಕುಟುಂಬಗಳ ತಪಾಸಣೆಗೆ ಹೋದಾಗ ಅವರ ಮೇಲೆ ದಾಳಿ ನಡೆಸಿ ಕೊಲ್ಲಲಾಯಿತು, ಈ ಮುಲ್ಲಾಗಳು+ ಸೆಕ್ಯುಲರ್ ಮಾಧ್ಯಮವನ್ನು ಒಂದೇ  ಸಾಲಿನಲ್ಲಿ ನಿಲ್ಲಿಸಿ ಗುಂಡಿಕ್ಕಿ ಸಾಯಿಸಬೇಕು... ಇತಿಹಾಸ, ಅವರು ನಮ್ಮನ್ನು ನಾಝಿ ಎಂದು ಕರೆಯಬಹುದು, ಏನಾದರೇನು, ನಕಲಿ ಚಿತ್ರಕ್ಕಿಂತ ಜೀವನ ಬಹಳ ಮುಖ್ಯ.'' ಈ ಟ್ವೀಟ್ ಕುರಿತಂತೆ ಹಲವು ಟ್ವಿಟರಿಗರು ಕಿಡಿ ಕಾರಿದ್ದರು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ರಂಗೋಲಿಯ ಟ್ವೀಟ್ ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ ಬುಧವಾರ ವೈದ್ಯಕೀಯ ತಂಡವೊಂದು ಕೊರೋನ ಸೋಂಕಿತನನ್ನು ಕರೆದುಕೊಂಡು ಹೋಗುತ್ತಿದ್ದಾಗ ನಡೆದ ಗುಂಪು ದಾಳಿಯ ಕುರಿತಾಗಿತ್ತು. ಈ ಘಟನೆಯಲ್ಲಿ ನಾಲ್ಕು ಮಂದಿಗೆ ಗಾಯಗಳಾಗಿದ್ದರೂ ಯಾರೂ ಮೃತಪಟ್ಟಿರಲಿಲ್ಲ.

ಇದೀಗ ಆಕೆಯ ಆಕ್ಷೇಪಾರ್ಹ ಟ್ವೀಟ್ ತೆಗೆದು ಹಾಕಲಾಗಿದ್ದು ಆಕೆಯ ಖಾತೆಯನ್ನೇ ಸಸ್ಪೆಂಡ್‍ಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News