ಮಧ್ಯಪ್ರದೇಶದಲ್ಲಿ ಒಂದೇ ದಿನ 361 ಹೊಸ ಕೋವಿಡ್-19 ಪ್ರಕರಣ ಪತ್ತೆ

Update: 2020-04-17 04:10 GMT

ಹೊಸದಿಲ್ಲಿ, ಎ.17: ಮಧ್ಯಪ್ರದೇಶದಲ್ಲಿ ಗುರುವಾರ ಒಂದೇ ದಿನ 361 ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಯಾವುದೇ ರಾಜ್ಯದಲ್ಲಿ ಒಂದೇ ದಿನ ಇಷ್ಟೊಂದು ಸಂಖ್ಯೆಯ ಪ್ರಕರಣ ಬೆಳಕಿಗೆ ಬಂದಿರುವುದು ಇದೇ ಮೊದಲು. ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲೂ ಪರಿಸ್ಥಿತಿ ಕೈಮೀರುತ್ತಿದ್ದು, ದೊಡ್ಡ ಸಂಖ್ಯೆಯ ಪ್ರಕರಣಗಳು ಪತ್ತೆಯಾಗುತ್ತಿವೆ. ದೇಶಾದ್ಯಂತ ಗುರುವಾರ 1,260 ಹೊಸ ಪ್ರಕರಣಗಳು ವರದಿಯಾಗಿವೆ.

ಮಧ್ಯಪ್ರದೇಶ ಹಾಗೂ ಗುಜರಾತ್ ತೀವ್ರ ಸಂಕಷ್ಟಕ್ಕೆ ಸಿಲುಕಿದ ರಾಜ್ಯಗಳಾಗಿದ್ದು, ಗುಜರಾತ್‌ನಲ್ಲಿ 163 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಧ್ಯಪ್ರದೇಶದ ಇಂಧೋರ್ ನಗರದಲ್ಲಿ ಒಂದೇ ದಿನ 244 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 1,299 ಪ್ರಕರಣಗಳೊಂದಿಗೆ ಮಧ್ಯಪ್ರದೇಶ ಗರಿಷ್ಠ ಸೋಂಕಿತರ ರಾಜ್ಯಗಳ ಪೈಕಿ ಮೂರನೇ ಸ್ಥಾನದಲ್ಲಿದೆ.

ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 13,500ನ್ನು ಮೀರಿದ್ದು, ಮಹಾರಾಷ್ಟ್ರದಲ್ಲಿ 286 ಹೊಸ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ 1,000 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,000 ಗಡಿ ದಾಟಿದೆ. ಮುಂಬೈ ಮಹಾನಗರದಲ್ಲಿ 2,073 ಪ್ರಕರಣಗಳು ವರದಿಯಾಗಿದ್ದು, ಕೇವಲ ಆರು ದಿನಗಳಲ್ಲಿ ಸಂಖ್ಯೆ ದುಪ್ಪಟ್ಟಾಗಿದೆ.

ದಿಲ್ಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಆರು ಸಾವು ಸಂಭವಿಸಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 62ಕ್ಕೇರಿದೆ. ಮಹಾರಾಷ್ಟ್ರದಲ್ಲಿ 7, ಗುಜರಾತ್‌ನಲ್ಲಿ 3, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 2, ತಮಿಳುನಾಡು, ಕರ್ನಾಟಕ ಹಾಗೂ ಪಂಜಾಬ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ದೇಶಾದ್ಯಂತ ಒಟ್ಟು 449 ಮಂದಿ ಸೋಂಕಿಗೆ ಬಲಿಯಾದಂತಾಗಿದೆ.

ಗುಜರಾತ್‌ನಲ್ಲಿ 163 ಹೊಸ ಪ್ರಕರಣಗಳು ಗುರುವಾರ ವರದಿಯಾಗಿವೆ. ಕೋವಿಡ್ ಹಾಟ್‌ಸ್ಪಾಟ್ ಎನಿಸಿದ ಅಹ್ಮದಾಬಾದ್‌ನಲ್ಲಿ 95 ಹೊಸ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಒಟ್ಟು 36 ಮಂದಿ ಬಲಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 929 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News