ಲಾಕ್‌ಡೌನ್: ತಲೆ ಎತ್ತಿದ ತರಕಾರಿ ಕಳ್ಳರ ಜಾಲ!

Update: 2020-04-17 04:48 GMT

ಬೆಂಗಳೂರು, ಎ.16: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರಕಾರ ಲಾಕ್‌ಡೌನ್ ಜಾರಿಗೊಳಿಸಿರುವ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ದುಷ್ಕರ್ಮಿಗಳು, ರೈತರು ಮಾರುಕಟ್ಟೆಗೆ ಸಾಗಿಸುವ ತರಕಾರಿ ಮೂಟೆಗಳನ್ನು ಕಳವು ಮಾಡುತ್ತಿರುವ ಆರೋಪ ದಿನೇ ದಿನೇ ಹೆಚ್ಚಾಗುತ್ತಿವೆ.

 ರಾಜ್ಯಧಾನಿ ಬೆಂಗಳೂರು ವ್ಯಾಪ್ತಿಯೊಳಗಿನ ಮಾರುಕಟ್ಟೆಗಳಿಗೆ ಹೊರವಲಯದಿಂದ ರೈತರು ತರಕಾರಿಗಳನ್ನು ಸಾಗಿಸಿಕೊಂಡು ಬರುತ್ತಿದ್ದು, ರಾತ್ರಿ ವೇಳೆ ದುಷ್ಕರ್ಮಿಗಳು ಮೂಟೆಗಳನ್ನು ಕಳವು ಮಾಡುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ತರಕಾರಿಗಳಿಗೆ ಬೇಡಿಕೆ ಇರುವ ಕಾರಣಕ್ಕೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ ಎನ್ನುವುದು ರೈತರು ಆರೋಪ.

ಇಲ್ಲಿನ ಸಿಂಗೇನ ಅಗ್ರಹಾರ ಮಾರುಕಟ್ಟೆಯಲ್ಲಿ ಮೂರು ದಿನಗಳ ಹಿಂದೆ, ಬರೋಬ್ಬರಿ 15 ಮೂಟೆ ಕೆಂಪು ಮೂಲಂಗಿ ಕಳವು ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಕಾರಣ ಕೇಳಿದರೆ, ಒಂದೆರಡು ದಿನಕ್ಕಾಗಿ ಬೆಂಗಳೂರಿಗೆ ಬರುವ ನಾವು, ಪೊಲೀಸರಿಗೆ ದೂರು ನೀಡಿದರೆ ನಮಗೆ ತೊಂದರೆ ಆಗುತ್ತದೆ ಎನ್ನುತ್ತಾರೆ ರೈತರು.

ಅದೇ ರೀತಿ, ದಾಸನಪುರ ತರಕಾರಿ ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆಯಲ್ಲೂ ಇಂತಹ ಪ್ರರಕಣಗಳು ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಮಾರುಕಟ್ಟೆ ಮುಖಸ್ಥರಿಗೆ, ಭದ್ರತಾ ಸಿಬ್ಬಂದಿಗೆ ದೂರು ನೀಡಿದರೂ, ನೀವೇ ಜಾಗೃತಿ ವಹಿಸಬೇಕು ಎಂದು ಸಬೂಬು ಹೇಳುತ್ತಾರೆ ಎಂದು ದೊಡ್ಡಬಳ್ಳಾಪುರ ಮೂಲದ ರೈತ ಮಂಜನಾಥ್ ಗೌಡ ನುಡಿದರು.

ಸೌಲಭ್ಯ ಇಲ್ಲ: ಕೊರೋನ ಹಿನ್ನೆಲೆ ಕಲಾಸಿಪಾಳ್ಯದಿಂದ ಬೇರೆ ಕಡೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಇಲ್ಲಿ ಬಂದ ಮೇಲೆ ನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಎಪಿಎಂಸಿಯಿಂದ ಪ್ರತಿ ದಿನ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೂ ಇಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಇಲ್ಲಿ ಕೆಲ ಮಳಿಗೆಗಳಿಗೆ ದೀಪದ ವ್ಯವಸ್ಥೆಯೇ ಇಲ್ಲ. ಇದರ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಮಾರಾಟಗಾರರ ಆಗ್ರಹವಾಗಿದೆ.

ತರಕಾರಿ ಕಳವು

ಸಿಂಗೇನ ಅಗ್ರಹಾರ ಮಾರುಕಟ್ಟೆಯಲ್ಲಿ ಎರಡು ದಿನಗಳ ಹಿಂದೆ 15 ಚೀಲ ಕ್ಯಾರೆಟ್, 10 ಚೀಲ ಸೇರಿ ಹಲವು ತರಕಾರಿ ಚೀಲ ಕಳ್ಳತನವಾಗಿದೆ. ಬಹುತೇಕ ವರ್ತಕರು ಬೆಂಗಳೂರಿನಿಂದ ಬಂದು ವಹಿವಾಟು ನಡೆಸುತ್ತಿದ್ದಾರೆ. ಮೈದಾನದಲ್ಲಿ ಕೇವಲ ಪೆಂಡಾಲ್ ಹಾಕಿ ಮಾರಾಟಕ್ಕೆ ಅವಕಾಶ ಮಾಡಿ ಕೊಟ್ಟಿರುವುದು ಬಿಟ್ಟರೆ ಯಾವುದೇ ಸೌಕರ್ಯಗಳನ್ನು ಒದಗಿಸಿಲ್ಲ. ಪೊಲೀಸರು ಯಾವುದೋ ಒಂದು ಸಮಯದಲ್ಲಿ ಬಂದು ಹೋಗುತ್ತಾರೆ. ಸಿಸಿ ಕ್ಯಾಮರಾ ವ್ಯವಸ್ಥೆಯೂ ಇಲ್ಲಿಲ್ಲ ಎಂದು ವರ್ತಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಚಾಲಕರ ಸೋಗಿನಲ್ಲಿ ಕಳ್ಳರು

ತರಕಾರಿ ಮೂಟೆಗಳನ್ನು ಮಾರುಕಟ್ಟೆಗೆ ಬಂದ ತಕ್ಷಣ ಮಾರಾಟ ಆಗುವುದಿಲ್ಲ. ಇದಕ್ಕಾಗಿ ಜಾಸ್ತಿ ಸಮಯವೇ ಹಿಡಿಯುತ್ತದೆ.ಇನ್ನೂ, ರಾತ್ರಿ ವೇಳೆಯೇ ಕಳ್ಳತನ ಹೆಚ್ಚಾಗುತ್ತದೆ. ನಾವು ನಿದ್ರೆಗೆ ಜಾರಿದಾಗ ವಾಹನ ಚಾಲಕರ ಸೋಗಿನಲ್ಲಿರುವ ಕಳ್ಳರೇ ನಮ್ಮ ಮೂಟೆಗಳನ್ನು ಕಳ್ಳತನ ಮಾಡುತ್ತಾರೆ ಎಂದು ರೈತ ನಾಗೇಶ್ ದೂರಿದರು.

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News