ಕೊರೋನ ವೈರಸ್ ಪಿಡುಗಿನ ಮಧ್ಯೆ ಕಂಪನಿಗಳಿಗೆ ರಕ್ಷಣೆ ನೀಡಲು ಎಫ್‌ಡಿಐ ನೀತಿಯಲ್ಲಿ ಪರಿಷ್ಕರಣೆ

Update: 2020-04-18 16:15 GMT

 ಹೊಸದಿಲ್ಲಿ,ಎ.18: ಭಾರತದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಯಾವುದೇ ರಾಷ್ಟ್ರದಲ್ಲಿಯ ಕಂಪನಿಗಳು ಭಾರತದಲ್ಲಿ ಹೂಡಿಕೆಗಳನ್ನು ಮಾಡಲು ಸ್ವಯಂಚಾಲಿತ ಮಾರ್ಗವನ್ನು ಅನುಸರಿಸುವಂತಿಲ್ಲ ಮತ್ತು ಇದಕ್ಕಾಗಿ ಸರಕಾರದ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಶನಿವಾರ ನೆರೆಯ ರಾಷ್ಟ್ರಗಳಿಗಾಗಿ ತನ್ನ ಪರಿಷ್ಕೃತ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಯಲ್ಲಿ ತಿಳಿಸಿದೆ.

 ಭಾರತದಲ್ಲಿ ಎಫ್‌ಡಿಐಗೆ ಎರಡು ವಿಧಗಳಲ್ಲಿ ಅವಕಾಶ ನೀಡಲಾಗುತ್ತಿತ್ತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಕಂಪನಿಗಳು ಸರಕಾರದ ಅನುಮತಿಯನ್ನು ಪಡೆದುಕೊಂಡು ಹೂಡಿಕೆಯನ್ನು ಮಾಡಬೇಕಿದ್ದರೆ,ಚೀನಾ ಸೇರಿದಂತೆ ಇತರ ನೆರೆಯ ದೇಶಗಳ ಕಂಪನಿಗಳು ಸ್ವಯಂಚಾಲಿತ ವಿಧಾನದಲ್ಲಿ ಅಂದರೆ ಸರಕಾರದ ಅನುಮತಿ ಪಡೆದುಕೊಳ್ಳದೆ ಹೂಡಿಕೆಯನ್ನು ಮಾಡಬಹುದಿತ್ತು.

ಪರಿಷ್ಕೃತ ನೀತಿಯು ಕೊರೋನ ವೈರಸ್ ಪಿಡುಗಿನಿಂದಾಗಿ ಭಾರತೀಯ ಕಂಪನಿಗಳ ಅವಕಾಶವಾದಿ ಸ್ವಾಧೀನವನ್ನು ತಡೆಯುವುದು ಪರಿಷ್ಕೃತ ಎಫ್‌ಡಿಐ ನೀತಿಯ ಉದ್ದೇಶವಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ಯಾವುದೇ ನೆರೆಯ ದೇಶ,ವಿಶೇಷವಾಗಿ ಚೀನಾ ಕೋವಿಡ್-19ರ ಬಿಕ್ಕಟ್ಟಿನ ಅನುಚಿತ ಲಾಭ ಪಡೆಯದಂತೆ ನೋಡಿಕೊಳ್ಳಲು ಎಫ್‌ಡಿಐ ನೀತಿಯನ್ನು ಪರಿಷ್ಕರಿಸಲು ಸರಕಾರವು ನಿರ್ಧರಿಸಿದೆ ಎಂದು ಸಚಿವಾಲಯದಲ್ಲಿನ ಮೂಲಗಳು ತಿಳಿಸಿದವು.

 ಯಾವುದೇ ನೆರೆಯ ದೇಶಕ್ಕೆ ಲಾಭವನ್ನುಂಟು ಮಾಡುವ ಎಫ್‌ಡಿಐ ಒಪ್ಪಂದದಲ್ಲಿ ಮಾಲಿಕತ್ವದ ವರ್ಗಾವಣೆಗೂ ಸರಕಾರದ ಅನುಮತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ಸಚಿವಾಲಯವು ಹೇಳಿದೆ.

ಚೀನಾದ ಪೀಪಲ್ಸ್ ಬ್ಯಾಂಕ್ ಆಫ್ ಚೀನಾದಿಂದ ಇತ್ತೀಚಿಗೆ ಎಚ್‌ಡಿಡಿಎಫ್‌ಸಿಯ ಶೇ.1.01 ಶೇರುಗಳ ಖರೀದಿಗೆ ಪರಿಷ್ಕೃತ ನೀತಿಯು ಅನ್ವಯವಾಗುವುದಿಲ್ಲ. ಶೇರುಗಳ ಖರೀದಿ ಪ್ರಮಾಣ ಶೇ.10ಮತ್ತು ಅದಕ್ಕಿಂತ ಹೆಚ್ಚಿದ್ದರೆ ನೀತಿಯು ಅನ್ವಯಗೊಳ್ಳುತ್ತದೆ ಎಂದು ಸಚಿವಾಲಯದಲ್ಲಿನ ಮೂಲಗಳು ತಿಳಿಸಿದವು.

ರಕ್ಷಣೆ,ದೂರಸಂಪರ್ಕ ಮತ್ತು ಔಷಧಿ ಸೇರಿದಂತೆ 17 ಕ್ಷೇತ್ರಗಳಲ್ಲಿ ನಿಗದಿತ ಶೇಕಡಾವಾರು ಮಿತಿಗಿಂತ ಹೆಚ್ಚಾಗಿ ಹೂಡಿಕೆ ಮಾಡಲು ಬಯಸುವ ವಿದೇಶಿ ಕಂಪನಿಗಳು ಸರಕಾರದ ಅನುಮತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ.

ಕೊರೋನ ವೈರಸ್ ಬಿಕ್ಕಟ್ಟಿನಿಂದ ದುರ್ಬಲಗೊಂಡಿರುವ ಭಾರತೀಯ ಕಂಪನಿಗಳಿಗೆ ಸಂಭಾವ್ಯ ಬೆದರಿಕೆಗಳ ಬಗ್ಗೆ ತನ್ನ ಎ.12ರ ಎಚ್ಚರಿಕೆಯನ್ನು ಪರಿಗಣಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News