ಕೊರೋನ ಹೆಸರಲ್ಲಿ ದ್ವೇಷದ ಟ್ವೀಟ್: ಬಬಿತಾ ಫೋಗಟ್ ವಿರುದ್ಧ ಪ್ರಕರಣ ದಾಖಲು

Update: 2020-04-18 16:37 GMT

ಹೊಸದಿಲ್ಲಿ, ಎ.18: ಕೊರೋನ ವೈರಸ್ ಬಗ್ಗೆ ದ್ವೇಷಪೂರಿತ ಟ್ವೀಟ್ ಮಾಡಿದ ಆರೋಪದಲ್ಲಿ ಕುಸ್ತಿಪಟು, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿರುವ ಬಬಿತಾ ಫೋಗಟ್ ವಿರುದ್ಧ ಔರಂಗಾಬಾದ್‌ನ ಸಿಟಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೋಗಟ್ ಮಾಡಿರುವ ಟ್ವೀಟ್‌ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಭಾರತದಲ್ಲಿ ಕೊರೋನ ವೈರಸ್ ಎರಡನೇ ಸಮಸ್ಯೆಯಾಗಿದ್ದು ‘ಅನಾಗರಿಕ ಜಮಾಅತ್’ ಮೊದಲನೇ ಸಮಸ್ಯೆ ಎಂದು ಫೋಗಟ್ ಟ್ವೀಟ್ ಮಾಡಿದ್ದರು. ಹಿಂದಿ ಸಿನೆಮಾ ನಟಿ ಕಂಗನಾ ರಣೌತರ ಸಹೋದರಿ ರಂಗೋಲಿ ಚಾಂದೇಲ್ ವಿರುದ್ಧವೂ ದ್ವೇಷಪೂರಿತ ಟ್ವೀಟ್ ಮಾಡಿದ ಆರೋಪ ದಾಖಲಾಗಿದೆ. ಇವರಿಬ್ಬರು ಮಾಡಿರುವ ಟ್ವೀಟ್ ಸಮುದಾಯದ ನಡುವಿನ ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ಕೂಡಿದೆ ಎಂದು ಜಮಾಅತ್‌ಗೆ ಸಂಬಂಧಪಟ್ಟ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದು ಇದನ್ನು ಫೋಗಟ್ ಮತ್ತು ರಂಗೋಲಿ ಚಾಂದೇಲ್ ವಾಸಿಸುತ್ತಿರುವ ಸ್ಥಳದ ಠಾಣೆಗೆ ಕಳುಹಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ಆದರೆ ತಾನು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಫೋಗಟ್ ಹೇಳಿದ್ದಾರೆ. ಕೊರೋನ ವೈರಸ್ ಸೋಂಕು ಹರಡಿರುವ ವ್ಯಕ್ತಿಗಳ ಬಗ್ಗೆ ಬರೆದಿದ್ದೇನೆ. ದೇಶದಲ್ಲಿ ದೃಢಪಟ್ಟಿರುವ ಕೊರೋನ ಸೋಂಕು ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣ ತಬ್ಲೀಗಿ ಜಮಾಅತ್‌ಗೆ ಸಂಬಂಧಿಸಿದ್ದಲ್ಲವೇ? ಅವರು ಸೋಂಕು ಹರಡಿರದಿದ್ದಲ್ಲಿ ಈ ವೇಳೆಗಾಗಲೇ ಕೊರೋನ ವೈರಸ್ ನಿರ್ಮೂಲವಾಗಿ ಲಾಕ್‌ಡೌನ್ ಕೊನೆಯಾಗುತ್ತಿತ್ತು ಎಂದು ಬಬಿತಾ ಫೋಗಟ್ ಸಮರ್ಥಿಸಿಕೊಂಡಿದ್ದಾರೆ.

ತಾನು ಮಾಡಿರುವ ಟ್ವೀಟ್‌ನ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವರು ಸಾಮಾಜಿಕ ಮಾಧ್ಯಮಗಳ ಮೂಲಕ ತನಗೆ ಆಕ್ಷೇಪಾರ್ಹ ಸಂದೇಶ ರವಾನಿಸಿ ನಿಂದಿಸುತ್ತಿದ್ದಾರೆ. ಕೆಲವರು ಫೋನ್ ಮಾಡಿ ಬೆದರಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ತಾನು ಅಂಜುವುದಿಲ್ಲ ಎಂದಿರುವ ಫೋಗಟ್, ನಿಮ್ಮ ಬೆದರಿಕೆಗೆ ಅಂಜಿ ಕೂರಲು ತಾನು ಝೈರಾ ವಾಸಿಂ ಅಲ್ಲ ಎಂದು ಮತ್ತೊಂದು ಹೇಳಿಕೆ ನೀಡಿದ್ದಾರೆ. “ನಿಮ್ಮ ಬೆದರಿಕೆ ನನ್ನ ಮೇಲೆ ಯಾವ ಪರಿಣಾಮವೂ ಬೀರದು. ನಾನು ಬಬಿತಾ ಫೋಗಟ್ ಮತ್ತು ಯಾವಾಗಲೂ ದೇಶಕ್ಕಾಗಿ ಹೋರಾಡುವವಳು. ಮುಂದಕ್ಕೂ ಇದನ್ನೇ ಮಾಡಿ ನನ್ನ ದೇಶಕ್ಕಾಗಿ ಮಾತನಾಡುತ್ತೇನೆ” ಎಂದು ಬಬಿತಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ, ದೇಶದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣ ಹೆಚ್ಚಲು ತಬ್ಲೀಗಿ ಜಮಾಅತ್ ಕಾರಣ ಎಂದು ಹಿರಿಯ ಬಿಜೆಪಿ ಮುಖಂಡ, ಹರ್ಯಾಣದ ಸಚಿವ ಅನಿಲ್ ವಿಜ್ ಅವರೂ ಆರೋಪಿಸಿದ್ದಾರೆ. ತಬ್ಲೀಗಿ ಜಮಾಅತ್‌ನ ಸದಸ್ಯರಿಂದ ಸೋಂಕು ಹರಡದಿದ್ದಲ್ಲಿ ದೇಶದಲ್ಲಿ ಈಗ ವಿಭಿನ್ನ ಪರಿಸ್ಥಿತಿ ನೆಲೆಸುತ್ತಿತ್ತು ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News