ಲಾಕ್‌ಡೌನ್ ಉಲ್ಲಂಘಿಸಿ ಮಗನನ್ನು ಕೋಟಾದಿಂದ ಕರೆತಂದ ಬಿಹಾರ ಬಿಜೆಪಿ ಶಾಸಕ

Update: 2020-04-20 04:35 GMT

ಪಾಟ್ನಾ, ಎ.20: ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಕೋಟಾದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕರೆತರಲು ಬಿಹಾರ ಸರ್ಕಾರ ನಿರಾಕರಿಸಿದ್ದರೂ, ಬಿಜೆಪಿ ಶಾಸಕ ಅನಿಲ್ ಸಿಂಗ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಮಗನನ್ನು ಕರೆತಂದಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಹಿಸೂವಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅನಿಲ್ ಸಿಂಗ್, ತಮ್ಮ ವೈಯಕ್ತಿಕ ವಾಹನದಲ್ಲಿ ಕೋಟಾಗೆ ತೆರಳಿ ಮಗ ಹಾಗೂ ಪತ್ನಿಯನ್ನು ಕರೆತಂದಿದ್ದಾರೆ. ಪತ್ನಿ ಹಾಗೂ ಮಗನನ್ನು ಕರೆತರಲು ವಾಹನಕ್ಕೆ ನವಾಡ ಎಸ್‌ಡಿಎಂನಿಂದ ವಿಶೇಷ ಪಾಸ್ ಪಡೆದಿದ್ದರು ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗಳನ್ನು ಕೋಟಾದಿಂದ ಕರೆ ತರುವುದು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಅಣಕವಾಗುತ್ತದೆ ಎಂದು ಶನಿವಾರವರೆಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಾದಿಸುತ್ತಿದ್ದರು. ಬಿಹಾರ ಶಾಸಕರ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ನಿತೀಶ್ ಕುಮಾರ್ ಅವರ ಮಾಜಿ ಆಪ್ತ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಟ್ವಿಟ್ಟರ್‌ನಲ್ಲಿ ನಿತೀಶ್ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಕೋಟಾದಲ್ಲಿ ಸಿಕ್ಕಿಹಾಕಿಕೊಂಡಿರುವ ನೂರಾರು ವಿದ್ಯಾರ್ಥಿಗಳಿಗೆ ನೆರವಾಗುವಂತೆ ಮಾಡಿಕೊಂಡಿದ್ದ ಮನವಿಯನ್ನು ನಿತೀಶ್ ತಿರಸ್ಕರಿಸಿದ್ದರು. ಇದೀಗ ಸರ್ಕಾರ ಬಿಜೆಪಿ ಶಾಸಕನಿಗೆ ಪಾಸ್ ನೀಡಿದೆ. ನಿಮ್ಮ ಘನತೆ ಏನಾಯಿತು? ಎಂದು ಪ್ರಶಾಂತ್ ಕಿಶೋರ್ ಮಾತಿನ ಚಾಟಿ ಬೀಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದ ವಿದ್ಯಾರ್ಥಿಗಳನ್ನು ಕೋಟಾದಿಂದ ಕರೆ ತಂದ ಬಳಿಕ ಅಂಥದ್ದೇ ಕ್ರಮಕ್ಕೆ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಒತ್ತಡ ತಂದಿದ್ದವು. ಆದರೆ ಅದು ಲಾಕ್‌ಡೌನ್‌ನ ಅಣಕವಾಗುತ್ತದೆ ಎಂದು ನಿತೀಶ್ ಮನವಿಯನ್ನು ತಿರಸ್ಕರಿಸಿದ್ದರು.

ಸರ್ಕಾರಿ ಅಂಕಿಅಂಶಗಳ ಪ್ರಕಾರ 149 ವಿದ್ಯಾರ್ಥಿಗಳು ಕೋಟಾದಿಂದ ಬಿಹಾರದ ವಿವಿಧ ಜಿಲ್ಲೆಗಳಿಗೆ ತಾವಾಗಿಯೇ ವಾಪಸ್ಸಾಗಿದ್ದು, ಎಲ್ಲರೂ ಕ್ವಾರಂಟೈನ್‌ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News