ಲಾಕ್‌ಡೌನ್ ಸಂಕಷ್ಟ: ರೈತರ ಕೈ ಹಿಡಿಯದ ಆನ್‌ಲೈನ್ ಸಂಸ್ಥೆಗಳು!
ಬೆಂಗಳೂರು: ಕೊರೋನ ಸೋಂಕು ಹರಡುವ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಜಾರಿಗೊಳಿಸಿರುವ ಲಾಕ್‌ಡೌನ್ ಪರಿಣಾಮ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಸರಿಯಾಗಿ ವಹಿವಾಟು ನಡೆಯದೇ ರೈತರು ಬೆಳೆದ ತರಕಾರಿ, ಹೂವು, ಹಣ್ಣುಗಳ ಬೆಲೆ ನೆಲಕಚ್ಚಿದೆ.
ಆದರೆ, ರೈತರಿಗೆ ಮತ್ತೊಂದು ಪ್ರಮುಖ ವೇದಿಕೆ ಎಂದೇ ನಂಬಿದ್ದ ಆನ್‌ಲೈನ್ ಮಾರಾಟ ಸಂಸ್ಥೆಗಳಾದ ರಿಲಯನ್ಸ್ ಫ್ರೆಶ್, ಬಿಗ್ ಬಾಸ್ಕೆಟ್, ಬಿಗ್ ಬಜಾರ್, ಉಡಾನ್ ಸೇರಿ ಬಹುತೇಕ ಸಂಸ್ಥೆಗಳು ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಲು ಮುಂದೆ ಬರದೆ ರೈತರು ಕಷ್ಟಕರ ಪರಿಸ್ಥಿತಿಗೆ ಸಿಲುಕುವಂತೆ ಆಗಿದೆ.
ಸಾವಿರಾರು ಟನ್ ನಿತ್ಯ ವಹಿವಾಟು ನಡೆಸುತ್ತಿದ್ದ ಸಂಸ್ಥೆಗಳೇ ಈಗ ವ್ಯಾಪಾರವಿಲ್ಲದೇ ರೈತರ ಬಳಿ ಖರೀದಿಸಲು ಹಿಂದೇಟು ಹಾಕುತ್ತಿವೆ. ಅಷ್ಟೇ ಅಲ್ಲದೆ, ವಾಹನ ಸಂಚಾರ ಸಂಪೂರ್ಣ ನಿಂತಿದೆ ಎನ್ನುವ ಕಾರಣ ಹೇಳಿ, ತರಕಾರಿ ಖರೀದಿ ಮಾಡದೇ ಜಾರಿಕೊಳ್ಳುತ್ತಿದ್ದಾರೆಂದು ಆರೋಪಗಳು ಕೇಳಿಬರುತ್ತಿವೆ. ತರಕಾರಿ ಹಾಗೂ ಹಣ್ಣುಗಳನ್ನು ನೇರ ರೈತರಿಂದ ಅಂದಿನ ಮಾರುಕಟ್ಟೆ ದರದಲ್ಲಿ ಖರೀದಿಸಿ ರೈತರ ಬಳಿ ಯಾವುದೇ ಕಮಿಷನ್ ಪಡಿಯದೇ ವಹಿವಾಟು ನಡೆಸುತ್ತಿದ್ದ ಸಂಸ್ಥೆಗಳು ಇಂದು ವ್ಯಾಪಾರವಿಲ್ಲದೆ, ರೈತರ ಬಳಿ ಖರೀದಿಸುತ್ತಿಲ್ಲ. ಇದರೊಂದಿಗೆ ತರಕಾರಿ ಹಾಗೂ ಹಣ್ಣುಗಳಿಗೆ ಬೆಲೆ ಇಲ್ಲದಂತಾಗಿದೆ.
ಬೆಲೆ ಇಲ್ಲ: ಉತ್ತಮ ಗುಣಮಟ್ಟದ ಟೊಮ್ಯಾಟೊ 14 ಕೆ.ಜಿ ಬಾಕ್ಸ್‌ಗೆ 50 ರಿಂದ 60 ರೂ.ಗೆ ಮಾರಾಟವಾಗುತ್ತಿದೆ. ಕೆಲವೆಡೆ ಕೆ.ಜಿ.ಗೆ ಕನಿಷ್ಠ 3 ರೂ.ಯಿಂದ 5 ರೂ.ವರೆಗೂ ಮಾರುಕಟ್ಟೆ ಸಗಟು ದರದಲ್ಲಿ ಮಾರಾಟವಾಗುತ್ತಿದೆ.
ಉತ್ತಮ ಗುಣಮಟ್ಟದ ಕ್ಯಾಪ್ಸಿಕಂ ಕೆ.ಜಿ.ಗೆ 6 ರಿಂದ 10 ರೂ.ಗೆ ಮಾರಾಟವಾಗಿದೆ. ಆನ್‌ಲೈನ್ ಮಾರಾಟ ಸಂಸ್ಥೆಗಳು ಇದನ್ನು ಖರೀದಿಸಲು ಮುಂದೆಬರುತ್ತಿಲ್ಲ ಎಂದು ಮಾಲೂರಿನ ರೈತ ವೆಂಕಟಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ತರಕಾರಿಗೆ ಎಂಆರ್‌ಪಿ ಇಲ್ಲ: ಸೋಪು, ಬ್ರಷ್ ಸೇರಿದಂತೆ ಇತರ ಪದಾರ್ಥಗಳಿಗೆ ಎಂಆರ್‌ಪಿ (ಗರಿಷ್ಠ ಚಿಲ್ಲರೆ ದರ) ಎಂದು ಇರುತ್ತದೆ. ಆದರೆ, ತರಕಾರಿ, ಹೂವು, ಹಣ್ಣುಗಳಿಗೆ ಈ ವ್ಯವಸ್ಥೆ ಇಲ್ಲ. ರೈತರಿಂದ ಖರೀದಿಸಿದ ಬೆಲೆ ಮೇಲೆ ಇಂತಿಷ್ಟು ಶೇಕಡ ದರದಲ್ಲಿ ಮಾರಾಟ ಮಾಡುವಂತೆ ಆಗಬೇಕು. ರೈತರಿಗೂ ಒಂದು ನಿಗದಿತ ಬೆಲೆ ಸಿಗುತ್ತದೆ. ರೈತರಿಂದ 5 ರೂ.ಗೆ ಖರೀದಿಸಿ 50 ರೂ.ವರೆಗೂ ಕೆಲವರು ಮಾರಾಟ ಮಾಡುತ್ತಾರೆ. ಇದನ್ನು ಸರಕಾರದಿಂದಲೇ ಸರಿಪಡಿಸಬೇಕಿದೆ ಎನ್ನುತ್ತಾರೆ ದೇವನಹಳ್ಳಿ ರೈತ ಕುಮಾರ್.
ಕೊರೋನ ಸೋಂಕು ಹಿನ್ನೆಲೆಯಲ್ಲಿ ಯಾವುದೇ ಸಮಾರಂಭಗಳು ನಡೆಯುತ್ತಿಲ್ಲ. ತರಕಾರಿಗಳು ರಫ್ತು ಆಗುತ್ತಿಲ್ಲ. ಆನ್‌ಲೈನ್ ಸಂಸ್ಥೆಗಳಿಗೂ ವ್ಯಾಪಾರವಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
- ಅರುಣ್, ರೈತ
ಆನ್ ಲೈನ್ ರೈತರ ಪರ
ಆನ್‌ಲೈನ್ ಸಂಸ್ಥೆ ರಿಲಯನ್ಸ್ ಫ್ರೆಶ್, ಬಿಗ್‌ಬಾಸ್ಕೆಟ್, ಬಿಗ್ ಬಜಾರ್, ಉಡಾನ್ ಸೇರಿ ಹಲವು ಸಂಸ್ಥೆಗಳು ರೈತರಿಂದ ಖರೀದಿಸಿದ ತರಕಾರಿ ಹಣ್ಣುಗಳಿಗೆ ಕಮಿಷನ್ ಪಡೆಯುವುದಿಲ್ಲ. ಖರೀದಿಸಿ ಒಂದು ವಾರದೊಳಗೆ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಇದರಿಂದ ಅನೇಕ ರೈತರಿಗೆ ಅನುಕೂಲವಾಗುತ್ತದೆ. ರೈತರಿಂದ ಖರೀದಿಸುವ ತರಕಾರಿ, ಹಣ್ಣುಗಳನ್ನು ಪ್ರತ್ಯೇಕವಾಗಿ 2 ಕೆಜಿ ಅಥವಾ 3 ಕೆಜಿ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸಾಗಾಣಿಕೆ ವೆಚ್ಚ ಹಾಗೂ ಮತ್ತಿತರ ಖರ್ಚುಗಳನ್ನು ಸೇರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತೇವೆ ಎಂದು ತರಕಾರಿ ಹಾಗೂ ಹಣ್ಣು ಸಂಗ್ರಹಣಾ ವಿಭಾಗದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.