ಕೇರಳದಲ್ಲಿ ಲಾಕ್‌ಡೌನ್ ಸಡಿಲಿಕೆಗೆ ಕೇಂದ್ರದ ಆಕ್ಷೇಪ: ರಾಜ್ಯದಿಂದ ಉಲ್ಲಂಘನೆಯ ನಿರಾಕರಣೆ

Update: 2020-04-20 15:50 GMT

ಹೊಸದಿಲ್ಲಿ, ಎ.20: ನಗರಗಳಲ್ಲಿ ಬಸ್‌ಗಳ ಸಂಚಾರಕ್ಕೆ,ನಗರಸಭಾ ಪ್ರದೇಶಗಳಲ್ಲಿ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳು ತೆರೆಯಲು ಅವಕಾಶ ಕಲ್ಪಿಸುವ ಮೂಲಕ ರಾಜ್ಯದಲ್ಲಿ ಲಾಕ್‌ಡೌನ್ ಮಾರ್ಗಸೂಚಿಗಳನ್ನು ದುರ್ಬಲಗೊಳಿಸಲಾಗಿದೆ ಎಂದು ಆಕ್ಷೇಪಿಸಿ ಕೇಂದ್ರವು ಕೇರಳ ಸರಕಾರಕ್ಕೆ ಪತ್ರವನ್ನು ಬರೆದಿದೆ. ಆದರೆ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಕೇರಳ ಸರಕಾರವು ನಿರಾಕರಿಸಿದೆ.

ಕೇರಳ ಸರಕಾರವು ಎ.17ರಂದು ಕೆಲವು ಪರಿಷ್ಕೃತ ಮಾರ್ಗಸೂಚಿ ಗಳನ್ನು ಹೊರಡಿಸಿ ಎ.15ರಂದು ಕೇಂದ್ರವು ಹೊರಡಿಸಿದ್ದ ಲಾಕ್‌ಡೌನ್ ನಿಯಮಗಳಡಿ ನಿಷೇಧಿಸಲಾಗಿರುವ ಚಟುವಟಿಕೆ ಗಳಿಗೆ ಅವಕಾಶ ಕಲ್ಪಿಸಿದೆ ಎಂದು ಪತ್ರದಲ್ಲಿ ತಿಳಿಸಿರುವ ಕೇಂದ್ರ ಗೃಹ ಸಚಿವಾಲಯವು,ರಾಜ್ಯ ಸರಕಾರವು ತನ್ನ ಪರಿಷ್ಕೃತ ಮಾರ್ಗಸೂಚಿ ಗಳನ್ನು ತಿದ್ದುಪಡಿಗೊಳಿಸಬೇಕು ಮತ್ತು ಲಾಕ್‌ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.

ಕಳೆದ ವಾರ ಕೇರಳ ಸರಕಾರವು ರಾಜ್ಯವನ್ನು ರೆಡ್,ಆರೆಂಜ್ ಎ,ಆರೆಂಜ್ ಬಿ ಮತ್ತು ಗ್ರೀನ್ ಹೀಗೆ ನಾಲ್ಕು ವಲಯಗಳಲ್ಲಿ ವಿಭಜಿಸಿತ್ತು. ಆರೆಂಜ್ ಎ ಮತ್ತು ಬಿ ವಲಯಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು.

ಕೇಂದ್ರದ ಎ.15ರ ಮಾರ್ಗಸೂಚಿಯಂತೆ ರಾಜ್ಯಗಳು ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಹೇರಬಹುದು,ಆದರೆ ಇರುವ ನಿರ್ಬಂಧಗಳನ್ನು ಸಡಿಲಿಸಲು ಅವುಗಳಿಗೆ ಅವಕಾಶವಿಲ್ಲ.

ಕೇಂದ್ರವು ಕೆಲವು ತಪ್ಪು ತಿಳುವಳಿಕೆಗಳಿಂದಾಗಿ ವಿವರೆ ಯನ್ನು ಕೇಳಿರಬಹುದು ಎಂದು ಹೇಳಿರುವ ಕೇರಳದ ಸಚಿವ ಕೆ.ಸುರೇಂದ್ರನ್ ಅವರು,‘ಕೇಂದ್ರದ ನಿರ್ದೇಶಗಳಿಗೊಳಪಟ್ಟು ನಾವು ಸಡಿಲಿಕೆಗಳನ್ನು ನೀಡಿದ್ದೇವೆ. ನಮ್ಮ ವಿವರಣೆಯ ಬಳಿಕ ವಿಷಯವು ಬಗೆಹರಿಯುತ್ತದೆ ಎಂದು ಆಶಿಸಿದ್ದೇನೆ. ನಾವು ಕೇಂದ್ರವು ನಿಗದಿಗೊಳಿಸಿರುವ ಎಲ್ಲ ನಿಯಮಗಳನ್ನು ಪಾಲಿಸಿದ್ದೇವೆ’ ಎಂದಿದ್ದಾರೆ.

ಕೇಂದ್ರವು ರಾಜ್ಯಕ್ಕೆ ಪತ್ರ ಬರೆದಿರುವುದನ್ನು ಒಪ್ಪಿಕೊಂಡಿರುವ ಕೇರಳ ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ಅವರು,‘ಏನು ಮಾಡಬಹುದು ಎಂಬ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ. ಅಗತ್ಯವಾದರೆ ಕೆಲವು ಪರಿಷ್ಕರಣೆಗಳನ್ನು ಮಾಡಲಾಗುವುದು ’ಎಂದು ತಿಳಿಸಿದ್ದಾರೆ.

ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಯಾವುದೇ ಸಡಿಲಿಕೆಯಿಲ್ಲದೆ ಅವುಗಳ ಅನುಷ್ಠಾನವನ್ನು ಖಚಿತಪಡಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಅವರು ಪ್ರತ್ಯೇಕ ಪತ್ರವೊಂದರಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News