ಉಚಿತ ಕೊರೋನ ವೈರಸ್ ಪರೀಕ್ಷೆ, ಚಿಕಿತ್ಸೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

Update: 2020-04-21 16:11 GMT

ಹೊಸದಿಲ್ಲಿ, ಎ.21: ಕೋವಿಡ್-19 ಪಿಡುಗು ನಿಯಂತ್ರಣಕ್ಕೆ ಬರುವವರೆಗೆ ದೇಶದ ಎಲ್ಲ ಪ್ರಜೆಗಳಿಗೆ ಕೊರೋನ ವೈರಸ್ ಸೋಂಕಿಗೆ ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುವಂತೆ ಕೇಂದ್ರ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶ ಕೋರಿ ದಿಲ್ಲಿಯ ನ್ಯಾಯವಾದಿ ಅಮಿತ್ ದ್ವಿವೇದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.

“ಯಾರಿಗೆ ಉಚಿತ ಚಿಕಿತ್ಸೆಯನ್ನು ಒದಗಿಸಬೇಕು ಎನ್ನುವುದನ್ನು ಸರಕಾರವು ನಿರ್ಧರಿಸಬೇಕು. ನಮ್ಮ ಬಳಿ ಯಾವುದೇ ಹಣವಿಲ್ಲ” ಎಂದು ನ್ಯಾ.ಎನ್.ವಿ.ರಮಣ ನೇತೃತ್ವದ ಪೀಠವು ತಿಳಿಸಿತು.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಯನ್ನು ನಡೆಸಿದ ಪೀಠವು, ‘ಪ್ರಚಾರ ಹಿತಾಸಕ್ತಿ ಅರ್ಜಿ’ಯನ್ನು ಸೃಷ್ಟಿಸಬೇಡಿ ಎಂದು ಅರ್ಜಿದಾರರಿಗೆ ತಿಳಿಸಿತಲ್ಲದೆ,ದೇಶಾದ್ಯಂತ ಸರಕಾರಿ ಆಸ್ಪತ್ರೆಗಳು ಕೊರೋನ ವೈರಸ್ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿವೆ ಎಂದು ಹೇಳಿತು.

ಕೋವಿಡ್-19 ನಿಯಂತ್ರಣಕ್ಕೆ ಬರುವವರೆಗೆ ಎಲ್ಲ ಆಸ್ಪತ್ರೆಗಳು ಮತ್ತು ಸಂಬಂಧಿತ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡುವಂತೆ ಕೇಂದ್ರ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶ ನೀಡುವಂತೆ ದ್ವಿವೇದಿ ಅರ್ಜಿಯಲ್ಲಿ ಮಾಡಿಕೊಂಡಿದ್ದ ಮನವಿಯನ್ನೂ ಈ ಮೊದಲು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News