ದ್ವೇಷ ವೈರಸ್‌ಗಿಂತಲೂ ಅತಿ ಅಪಾಯಕಾರಿ: ಅಂತಾರಾಷ್ಟ್ರೀಯ ಇತಿಹಾಸಕಾರ ಯುವಾಲ್ ನೋಹ ಹರಾರಿ

Update: 2020-04-24 16:20 GMT
ಫೋಟೊ ಕೃಪೆ: facebook.com/Prof.Yuval.Noah.Harari

ಹೊಸದಿಲ್ಲಿ,ಎ.24: ಜಗತ್ತನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಹಾವಳಿಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸಲು ವಿವಿಧ ದೇಶಗಳು ಹಾಗೂ ಜನರು ಒಗ್ಗಟ್ಟಿನಿಂದ ಶ್ರಮಿಸುವ ಬಲು ಪರಸ್ಪರ ದ್ವೇಷವನ್ನು ವ್ಯಕ್ತಪಡಿಸುತ್ತಿದ್ದಾರೆ, ಇತರ ದೇಶಗಳನ್ನು ನಿಂದಿಸುತ್ತಿದ್ದಾರೆ ಮತ್ತು ಜನಾಂಗೀಯ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರನ್ನು ದೂಷಿಸುತ್ತಿದ್ದಾರೆ. ಇದು ತನಗೆ ಆತಂಕವುಂಟು ಮಾಡಿದೆ ಎಂದು ಖ್ಯಾತ ಅಂತಾರಾಷ್ಟ್ರೀಯ ಇತಿಹಾಸತಜ್ಞ ಹಾಗೂ ಚಿಂತಕ ಯುವಾಲ್ ನೋಹ ಹರಾರಿ ವಿಷಾದಿಸಿದ್ದಾರೆ.

www.dw.com   ಸುದ್ದಿಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇಂದು ಮನುಕುಲಕ್ಕೆ ಅತಿ ದೊಡ್ಡ ಅಪಾಯ ಎದುರಾಗಿರುವುದು ಕೊರೋನ ವೈರಸ್‌ನಿಂದಾಗಿ ಅಲ್ಲ. ಯಾಕೆಂದರೆ ವೈರಸ್‌ನ್ನು ಸೋಲಿಸಲು ಮಾನವರಿಗೆ ಎಲ್ಲಾ ರೀತಿಯ ವೈಜ್ಞಾನಿಕ ಜ್ಞಾನ ಹಾಗೂ ತಂತ್ರಜ್ಞಾನದ ಸಲಕರಣೆಗಳಿವೆ. ಆದರೆ ಮಾನವರು , ದೇಶಗಳ ನಡುವಿನ ದ್ವೇಷ, ದುರಾಸೆ ಹಾಗೂ ಅವಗಣನೆ ಇವು ಕೊರೋನಾಗಿಂತಲೂ ಅತಿ ದೊಡ್ಡ ಸಮಸ್ಯೆಯಾಗಿದೆ ಎಂದವರು ಹೇಳಿದ್ದಾರೆ..

   ಕೊರೋನ ವೈರಸ್ ಸೋಂಕಿನ ವಿರುದ್ಧ ಜನರು ಜಾಗತಿಕವಾಗಿ ಏಕತೆಯೊಂದಿಗೆ ಪ್ರತಿಕ್ರಿಯಿಸಬೇಕಾಗಿದೆ. ಇದರಿಂದಾಗಿ ಅಗತ್ಯವುಳ್ಳವರಿಗೆ ನೆರವಾಗುವಂತಹ ಔದಾರ್ಯವನ್ನು ನಾವು ಬೆಳೆಸಿಕೊಳ್ಳುತ್ತೇವೆ ಎಂದು ಹರಾರಿ ಸಂದರ್ಶನದಲ್ಲಿ ಅಭಿಪ್ರಾಯಿಸಿದ್ದಾರೆ. ಒಂದು ವೇಳೆ ಹಾಗೆ ಮಾಡಲು ಸಾಧ್ಯವಾದಲ್ಲಿ ಕೊರೋನ ವೈರಸ್ ಬಿಕ್ಕಟ್ಟಿನ ಸುಳಿಯಿಂದ ಮಾನವಕುಲ ಹೊರಬರುವುದರಲ್ಲಿ ಸಂದೇಹವಿಲ್ಲವೆಂದು ಅವರು ಹೇಳಿದ್ದಾರೆ.

  ಇತ್ತೀಚಿನ ವರ್ಷಗಳಲ್ಲಿ ವಿವಿಧ ಜನಮರುಳು ರಾಜಕಾರಣಿಗಳು ವಿಜ್ಞಾನದ ಮೇಲೆ ದಾಳಿ ನಡೆಸುತ್ತಿರುವುದು ಸಾಮಾನ್ಯವಾಗಿದೆ ಮತ್ತು ವಿಜ್ಞಾನಿಗಳು ಜನಸಂಪರ್ಕವಿಲ್ಲದವರೆಂದು ಲೇವಡಿ ಮಾಡುತ್ತಾರೆ. ಆದರೆ ಜಗತ್ತಿನಾದ್ಯಂತ ಬಿಕ್ಕಟ್ಟಿನ ವಾತಾವರಣ ತಲೆದೋರಿರುವ ಈ ಸಂದರ್ಭದಲ್ಲಿ ಜನರು, ಉಳಿದೆಲ್ಲದ್ದಕ್ಕಿಂತಲೂ ವಿಜ್ಞಾನದ ಮೇಲೆ ನಂಬಿಕೆಯಿರಿಸಿದ್ದಾರೆ ಎಂವರು ಹೇಳಿದ್ದಾರೆ.

     ಕೊರೋನ ವೈರಸ್ ಹರಡುವುದನ್ನು ತಡೆಯಲು ಸಾರ್ವಜನಿಕರ ಡಿಜಿಟಲ್ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೊಳಿಸಿರುವ ಜೊತೆಗೆ ಸರಕಾರದ ಮೇಲೂ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಸರಕಾರಗಳು ಕೊರೋನಾ ವೈರಸ್ ವಿರುದ್ಧ ಕಾರ್ಯಾಚರಣೆಯ ಹೆಸರಿನಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿವೆ. ಅಮೆರಿಕದಲ್ಲಿ 2 ಟ್ರಿಲಿಯನ್ ಡಾಲರ್, ಜರ್ಮನಿಯಲ್ಲಿ ನೂರಾರು ಶತಕೋಟಿ ಡಾಲರ್ ಯುರೋ ಹಣವನ್ನು ವ್ಯಯಿಸಲಾಗಿದೆ. ಆದರೆ ಕೊರೋನ ಹಾವಳಿಗೆ ಮುನ್ನವೇ ತಮ್ಮ ಆಡಳಿತಾಧಿಕಾರಿಗಳು ಎಸಗಿದ ಅಕ್ರಮದಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಬೃಹತ್ ಕಾರ್ಪೊರೇಟ್‌ ಕಂಪೆನಿಗಳನ್ನು ಪಾರು ಮಾಡಲು ಈ ಹಣ ಬಳಕೆಯಾಗುತ್ತಿದೆಯೇ ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದು ಯುವಾಲ್ ನೋಹ ಹರಾರಿ ಹೇಳುತ್ತಾರೆ.

ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಉದ್ಯೋಗರಹಿತ ವರ್ಗವು ನಾಟಕೀಯ ರೀತಿಯಲ್ಲಿ ಹೆಚ್ಚಲಿದೆ. ಮುಂಬರುವ ದಿನಗಳಲ್ಲಿ ಉದ್ಯೋಗಗಳು ಹೆಚ್ಚುಹೆಚ್ಚು ಯಾಂತ್ರೀಕರಣಗೊಳ್ಳಲಿದೆ. ಮಾನವರ ಜಾಗವನ್ನು ರೊಬೊಟ್‌ಗಳು ಹಾಗೂ ಕಂಪ್ಯೂಟರ್‌ಗಳು ಅಕ್ರಮಿಸಿಕೊಳ್ಳಲಿವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಗಣನೀಯ ಸಂಖ್ಯೆಯ ಉದ್ಯೋಗಗಳು ಯಾಂತ್ರೀಕರಣಗೊಳ್ಳಲಿದ್ದು ಹಾಗೂ ಬೇರೆಡೆ ವರ್ಗಾವಣೆಗೊಳ್ಳಲಿರುವದರಿಂದ ಅಲ್ಲಿ ಉದ್ಯೋಗಗಳನ್ನು ಕಳೆದುಕೊಂಡಿರುವ ದೊಡ್ಡ ಸಂಖ್ಯೆಯ ಜನಸಮೂಹವನ್ನು ಕಾಣಲಿದ್ದೇವೆ ಎಂದು ಯುವಾಲ್ ಆತಂಕ ವ್ಯಕ್ತಪಡಿಸುತ್ತಾರೆ

ಮುಂದಿನ ದಿನಗಳಲ್ಲಿ ಜನರು ಹೆಚ್ಚುಹೆಚ್ಚಾಗಿ ಮನೆಯಲ್ಲೇ ಉದ್ಯೋಗಗಳನ್ನು (ವರ್ಕ್‌ಫ್ರಂ ಹೋಮ್)ನಿರ್ವಹಿಸಸಲಿದ್ದಾರೆ. ಆನ್‌ಲೈನ್ ಮೂಲಕ ಉದ್ಯೋಗ ನಿರ್ವಹಣೆಯೂ ಅಧಿಕವಾಗಲಿದ್ದು, ಇದರೊಂದಿಗೆ ಕೆಲವು ಕೈಗಾರಿಕಾ ಕ್ಷೇತ್ರಗಳಲ್ಲಿಯಾದರೂ ಸಂಘಟಿತ ಕಾರ್ಮಿಕ ವಲಯವು ಶಿಥಿಲಗೊಳ್ಳಲಿದೆ ಎಂದು ಯುವಾಲ್ ನೋಹ ಹಾರೀರಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News