ಮಾರಾಟದ ಮೇಲಿನ ನಿಷೇಧ ತೆರವುಗೊಳಿಸದಿದ್ದಲ್ಲಿ 4 ಕೋಟಿ ಭಾರತೀಯರ ಬಳಿ ಫೋನ್ ಇರಲ್ಲ

Update: 2020-04-25 12:48 GMT

ಹೊಸದಿಲ್ಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ ಮಾರಾಟಕ್ಕೆ ಇರುವ ನಿರ್ಬಂಧಗಳನ್ನು ಮೇ ಅಂತ್ಯದೊಳಗೆ  ತೆರವುಗೊಳಿಸದೇ ಇದ್ದಲ್ಲಿ ಮೊಬೈಲ್ ‍ಗಳಲ್ಲಿ ದೋಷ ಮತ್ತಿತರ ಸಮಸ್ಯೆಗಳಿಂದಾಗಿ ಅಂದಾಜು ನಾಲ್ಕು ಕೋಟಿ ಮೊಬೈಲ್ ಫೋನ್ ಬಳಕೆದಾರರ ಬಳಿ ಫೋನ್ ಇರುವುದಿಲ್ಲ ಎಂದು ಇಂಡಿಯಾ ಸೆಲ್ಯುಲರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಅಸೋಸಿಯೇಶನ್ ಹೇಳಿದೆ.

ಸದ್ಯ 2.5 ಕೋಟಿ ಮೊಬೈಲ್ ಗ್ರಾಹಕರ ಫೋನ್ ‍ಗಳು ಲಾಕ್ ಡೌನ್‍ ನಿಂದ ಮಳಿಗೆಗಳು ಮುಚ್ಚಿರುವುದರಿಂದ ಹಾಗೂ ಮಾರಾಟಕ್ಕೆ ಇರುವ ನಿರ್ಬಂಧಗಳಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಂಸ್ಥೆ  ಹೇಳಿದೆ. ಈಗಾಗಲೇ ಐದನೇ ವಾರಕ್ಕೆ ಕಾಲಿಟ್ಟಿರುವ ಲಾಕ್ ಡೌನ್ ವೇಳೆ ಸರಕಾರ ಟೆಲಿಕಾಂ, ಅಂತರ್ಜಾಲ, ಪ್ರಸಾರ ಮತ್ತು ಐಟಿ ಸೇವೆಗಳನ್ನು ಅನುಮತಿಸಿದೆಯಾದರೂ ಹೆಚ್ಚಿನ ಸೇವೆಗಳನ್ನು ಪಡೆಯಲು ಅಗತ್ಯವಿರುವ ಮೊಬೈಲ್ ಸಾಧನಗಳ ಮಾರಾಟಕ್ಕೆ ಅನುಮತಿಸಿಲ್ಲ.

ಸಂಸ್ಥೆಯ ಸದಸ್ಯರ ಪೈಕಿ ಖ್ಯಾತ ಮೊಬೈಲ್ ಫೋನ್ ತಯಾರಕಾ ಸಂಸ್ಥೆಗಳಾದ ಆ್ಯಪಲ್, ಶಿಯೋಮಿ ಸೇರಿವೆ. ಮೊಬೈಲ್ ಫೋನ್ ‍ಗಳನ್ನೂ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸುವಂತೆ ಕೋರಿ ಸಂಸ್ಥೆ ಈಗಾಗಲೇ ಪ್ರಧಾನಿ ಸಹಿತ ಹಲವಾರು ಪ್ರಾಧಿಕಾರಗಳಿಗೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News