ಗಡಿಯಲ್ಲಿ ನಡೆಸುತ್ತಿರುವ ಚಟುವಟಿಕೆ ನಿಲ್ಲಿಸಿ, ಆ ಹಣದಿಂದ ಆಸ್ಪತ್ರೆ ನಿರ್ಮಿಸಿ: ಅಖ್ತರ್ ಗೆ ಕಪಿಲ್ ಪ್ರತಿಕ್ರಿಯೆ

Update: 2020-04-25 17:07 GMT

ಹೊಸದಿಲ್ಲಿ, ಎ.25: ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸುವ ಕುರಿತ ಚರ್ಚೆಗಿಂತಲೂ ಹೆಚ್ಚಿನ ಆದ್ಯತೆ ಶಾಲೆ ಕಾಲೇಜುಗಳ ಪುನರಾರಂಭದ ಬಗ್ಗೆ ನೀಡಬೇಕಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

 “ಕ್ರಿಕೆಟ್ ಬಗ್ಗೆ ಮಾತ್ರ ನಾವು ಮಾತನಾಡಬೇಕೇ?, ಶಾಲೆಗೆ ಹೋಗಲು ಅನುಕೂಲವಿಲ್ಲದ ಮಕ್ಕಳ ಬಗ್ಗೆ ನನಗೆ ಚಿಂತೆಯಿದೆ. ಯಾಕೆಂದರೆ ಇವರೇ ದೇಶದ ಭವಿಷ್ಯ. ಕ್ರಿಕೆಟ್, ಫುಟ್‌ಬಾಲ್ ಎಲ್ಲಾ ಆ ಬಳಿಕ ಕ್ರಮೇಣ ಮುಂದೆ ಸಾಗುತ್ತಿರುತ್ತದೆ” ಎಂದು ‘ಸ್ಪೋರ್ಟ್ಸ್ ತಕ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಪಿಲ್ ಅಭಿಪ್ರಾಯಪಟ್ಟರು.

ಕೊರೋನ ವೈರಸ್ ವಿರುದ್ಧದ ಕಾರ್ಯಾಚರಣೆಗೆ ನಿಧಿ ಸಂಗ್ರಹಿಸಲು ಭಾರತ-ಪಾಕ್ ನಡುವೆ ಕ್ರಿಕೆಟ್ ಟೂರ್ನಿ ನಡೆಸುವ ಸಂಭಾವ್ಯತೆಯನ್ನು ತಳ್ಳಿ ಹಾಕಿದ ಅವರು, “ನಿಧಿ ಸಂಗ್ರಹಕ್ಕೆ ಇನ್ನೂ ಹಲವಾರು ಮಾರ್ಗಗಳಿವೆ” ಎಂದರು.

ಭಾರತ-ಪಾಕ್ ನಡುವೆ ಕ್ರಿಕೆಟ್ ಪಂದ್ಯ ನಡೆಯಬೇಕು ಎಂದು ಪಾಕಿಸ್ತಾನದ ಕ್ರಿಕೆಟರ್ ಶೋಯಬ್ ಅಖ್ತರ್ ಸಲಹೆ ನೀಡಿದ್ದರು. “ಭಾರತ ಪಾಕ್ ನಡುವೆ ಕ್ರಿಕೆಟ್ ಸರಣಿ ಪುನರಾರಂಭವಾಗಬೇಕು ಎಂದು ಭಾವನಾತ್ಮಕವಾಗಿ ಹೇಳಬಹುದು. ಆದರೆ ಪಂದ್ಯ ಆಡುವುದಕ್ಕೆ ಈ ಸಮಯದಲ್ಲಿ ಆದ್ಯತೆ ನೀಡಬೇಕಿಲ್ಲ. ನಿಮಗೆ ಹಣ ಬೇಕಿದ್ದರೆ ಗಡಿಯಲ್ಲಿ ನಡೆಸುತ್ತಿರುವ ಚಟುವಟಿಕೆ ನಿಲ್ಲಿಸಿ, ಅದಕ್ಕೆ ವ್ಯಯಿಸುವ ಹಣವನ್ನು ಆಸ್ಪತ್ರೆ ಕಟ್ಟಲು ಬಳಸಿಕೊಳ್ಳಿ” ಎಂದು ಪರೋಕ್ಷವಾಗಿ ಅಖ್ತರ್ ಹೆಸರೆತ್ತದೆ ಪ್ರತಿಕ್ರಿಯೆ ನೀಡಿದರು.

ಹಣ ಬೇಕಾದರೆ ಹಲವು ಧಾರ್ಮಿಕ ಸಂಘಟನೆಗಳು ಮುಂದೆ ಬರಬಹುದು. ಅದು ಅವರ ಜವಾಬ್ದಾರಿ ಕೂಡಾ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿದಾಗ ನಾವು ಅಲ್ಲಿ ಕಾಣಿಕೆ ಹಾಕುತ್ತೇವೆ. ಆದ್ದರಿಂದ ಅವರೂ ಕೂಡಾ ಸರಕಾರಕ್ಕೆ ಸಹಾಯ ಮಾಡಬೇಕು ಎಂದು ಕಪಿಲ್ ಹೇಳಿದರು. ಕಪಿಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಖ್ತರ್, “ಕಪಿಲ್ ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಈಗ ಎಲ್ಲರೂ ಜತೆಗೂಡಿ ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ನಿಧಿ ಸಂಗ್ರಹಿಸುವ ಕಾಲ ಬಂದಿದೆ. ಭಾರತ-ಪಾಕ್ ನಡುವೆ ಒಂದೇ ಒಂದು ಪಂದ್ಯ ನಡೆದರೂ ವಿಶ್ವದೆಲ್ಲೆಡೆಯಿಂದ ವೀಕ್ಷಕರು ಹರಿದು ಬರುತ್ತಾರೆ ಎಂಬುದು ತನ್ನ ಮಾತಿನ ತಾತ್ಪರ್ಯವಾಗಿತ್ತು” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News