ಈ ರಮಝಾನನ್ನು ತಾಳ್ಮೆ, ಸೌಹಾರ್ದದ ಸಂಕೇತವಾಗಿಸೋಣ: ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ

Update: 2020-04-26 15:09 GMT

ಹೊಸದಿಲ್ಲಿ,ಎ.26: ಈದ್‌ಗೆ ಮುನ್ನ ವಿಶ್ವವು ಕೊರೋನ ವೈರಸ್ ಪಿಡುಗಿನಿಂದ ಮುಕ್ತವಾಗಲಿ ಎಂದು ರವಿವಾರ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ ಅವರು, ರಮಝಾನ್‌ನ ಪವಿತ್ರ ಮಾಸವನ್ನು ಆಚರಿಸುತ್ತಿರುವ ಮುಸ್ಲಿಮರು ಈ ಪಿಡುಗಿನಿಂದಾಗಿ ಈ ವರ್ಷ ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು. ಮನೆಗಳಲ್ಲಿಯೇ ಉಳಿಯುವಂತೆ ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಜನರನ್ನು ಆಗ್ರಹಿಸಿದ ಅವರು,ಕೊರೋನ ವೈರಸ್ ಕುರಿತು ಜಾಗ್ರತಿಯನ್ನು ಮೂಡಿಸುತ್ತಿರುವುದಕ್ಕಾಗಿ ಸಮುದಾಯ ನಾಯಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ತನ್ನ ಮಾಸಿಕ ರೇಡಿಯೊ ಭಾಷಣ ‘ಮನ್ ಕಿ ಬಾತ್’ನಲ್ಲಿ ಮಾತನಾಡುತ್ತಿದ್ದ ಮೋದಿ, ‘ಪವಿತ್ರ ರಮಝಾನ್ ತಿಂಗಳು ಆರಂಭಗೊಂಡಿದೆ. ಹಿಂದಿನ ಸಲ ರಮಝಾನ್ ಆಚರಿಸಲ್ಪಟ್ಟಿದ್ದಾಗ ಈ ವರ್ಷ ಇಷ್ಟೊಂದು ತೊಂದರೆಗಳು ಎದುರಾಗುತ್ತವೆ ಎಂದು ನಾವೆಂದೂ ಯೋಚಿಸಿರಲಿಲ್ಲ. ನಾವೀಗ ಆಳವಾದ ಬಿಕ್ಕಟ್ಟಿನಲ್ಲಿ ಸಿಲುಕಿದ್ದು,ಪವಿತ್ರ ಮಾಸವನ್ನು ಸಂಯಮ,ಸಂವೇದನೆ ಮತ್ತು ನಿಸ್ವಾರ್ಥಗಳೊಂದಿಗೆ ಆಚರಿಸಲು ನಮಗೆ ಅವಕಾಶವಿದೆ. ಈದ್‌ಗೆ ಮೊದಲು ವಿಶ್ವವು ಕೊರೋನ ವೈರಸ್ ಪಿಡುಗಿನಿಂದ ಮುಕ್ತವಾಗುವಂತಾಗಲು,ಹಬ್ಬವನ್ನು ಹಿಂದಿನಂತೆ ಸಂಭ್ರಮದಿಂದ ಆಚರಿಸುವಂತಾಗಲು ಈ ವರ್ಷ ನಾವು ಹಿಂದಿನ ಸಲಕ್ಕಿಂತ ಹೆಚ್ಚು ಪ್ರಾರ್ಥಿಸಬೇಕಿದೆ ’ಎಂದು ಹೇಳಿದರು.

‘ರಮಝಾನ್ ಮಾಸದ ಈ ದಿನಗಳಲ್ಲಿ ಸ್ಥಳೀಯಾಡಳಿತಗಳ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ನಾವು ಕೊರೋನ ವೈರಸ್ ವಿರುದ್ಧದ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆ ಎಂಬ ವಿಶ್ವಾಸ ನನಗಿದೆ. ರಸ್ತೆಗಳು, ಮಾರುಕಟ್ಟೆಗಳು ಮತ್ತು ನೆರೆಹೊರೆಗಳಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳೋಣ. ಜನರಲ್ಲಿ ಅರಿವು ಮೂಡಿಸುತ್ತಿರುವ ಮತ್ತು ಅವರನ್ನು ಮನೆಗಳಲ್ಲಿಯೇ ಇರುವಂತೆ ಆಗ್ರಹಿಸುತ್ತಿರುವ ಎಲ್ಲ ಸಮುದಾಯ ನಾಯಕರಿಗೆ ನಾನು ಆಭಾರಿಯಾಗಿದ್ದೇನೆ ’ಎಂದು ಪ್ರಧಾನಿ ನುಡಿದರು.

ಲಾಕ್‌ಡೌನ್‌ನಿಂದಾಗಿ ಈ ವರ್ಷ ಎಲ್ಲ ಹಬ್ಬಗಳನ್ನು ಮನೆಗಳಲ್ಲಿಯೇ ಆಚರಿಸಲಾಗುತ್ತಿದೆ ಎಂದ ಅವರು,ಇತ್ತೀಚಿಗೆ ಬಿಹು, ಬೈಸಾಖಿಯಂತಹ ಹಲವಾರು ಹಬ್ಬಗಳನ್ನು ನಾವು ಆಚರಿಸಿದ್ದೇವೆ. ಸಾಮಾನ್ಯವಾಗಿ ಜನರು ಬಂಧುಮಿತ್ರರೊಂದಿಗೆ ಸೇರಿಕೊಂಡು ಸಂಭ್ರಮದಿಂದ ಹಬ್ಬಗಳನ್ನು ಆಚರಿಸುತ್ತಿದ್ದರು. ಆದರೆ ಈ ಸಲ ಪ್ರತಿಯೊಬ್ಬರೂ ತಾಳ್ಮೆಯನ್ನು ಪ್ರದರ್ಶಿಸಿದ್ದಾರೆ ಮತ್ತು ಲಾಕ್‌ಡೌನ್ ನಿಯಮಗಳನ್ನು ಪಾಲಿಸಿದ್ದಾರೆ. ನಮ್ಮ ಕ್ರೈಸ್ತ ಬಾಂಧವರು ಈ ಸಲ ಈಸ್ಟರ್‌ನ್ನು ತಮ್ಮ ಮನೆಗಳಲ್ಲಿಯೇ ಆಚರಿಸಿದ್ದಾರೆ. ಇಂದು ನಮ್ಮ ದೇಶ ಮತ್ತು ಸಮಾಜದತ್ತ ನಮ್ಮ ಕರ್ತವ್ಯಗಳಿಗೆ ಬದ್ಧರಾಗಿರುವ ಅಗತ್ಯವಿದೆ. ಆಗ ಮಾತ್ರ ನಾವು ಕೊರೋನ ವೈರಸ್ ಪಿಡುಗನ್ನು ಹಿಮ್ಮೆಟ್ಟಿಸಬಹುದು ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News