ಅಡುಗೆ ಎಣ್ಣೆಯ ಸಮಾಚಾರ

Update: 2020-04-27 17:32 GMT

ಪಾರಂಪರಿಕವಾಗಿ ಹಳ್ಳಿಗಳು, ನಗರಗಳು ಮೊದಲಿಂದಲೂ ಗಾಣಗಳಿಂದ ನಂತರದ ಯಂತ್ರ ನಾಗರಿಕತೆಯು ಬಂದ ಮೇಲೆ ಎಣ್ಣೆ ಗಿರಣಿಗಳಿಂದ ಅಡುಗೆ ಎಣ್ಣೆಯನ್ನು ಪಡೆದುಕೊಳ್ಳುತ್ತಿದ್ದವು. ಭಾರತದ ಹಲವು ವೃತ್ತಿ ಜಾತಿಗಳಂತೆ ಗಾಣ ನಡೆಸುವ ಪರಿಣತಿಯುಳ್ಳ ಗಾಣಿಗ ಸಮುದಾಯವು ಹಲವು ಬಗೆಯ ಬೀಜ, ಹರಳು, ಎಳ್ಳುಗಳನ್ನು ಸಂಗ್ರಹಿಸಿ ಎಣ್ಣೆ ತೆಗೆದು ಮಾರುತ್ತಿದ್ದರು. ಮಾರುವುದು ಕೂಡ ವಿನಿಮಯ ಪದ್ಧತಿಯನ್ನು ಅನುಸರಿಸುತ್ತಿತ್ತು. ಇಷ್ಟು ಪ್ರಮಾಣದ ಎಣ್ಣೆಗೆ ಬದಲಿಯಾಗಿ ಭತ್ತ, ರಾಗಿ ಕಾಳು ಕೊಡಬೇಕಾಗಿತ್ತು. ಕಾಲಕ್ರಮೇಣ ಅದು ಹಣಕ್ಕೆ ಪರಿವರ್ತನೆಯಾಯಿತು.


ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಬಾರದು, ಊಟದಲ್ಲಿ ಎಣ್ಣೆ ಅಧಿಕವಾಗಬಾರದು, ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಅಧಿಕ, ಅದು ಆರೋಗ್ಯಕ್ಕೆ ಹಾನಿಕಾರಕ ಎಂದೆಲ್ಲಾ ಸುದ್ದಿಗಳು ಶುರುವಾದ ಮೇಲೆ ಜನ ಹೆಚ್ಚಿನ ಬೆಲೆ ತೆತ್ತು ಕಡಿಮೆ ಕೊಲೆಸ್ಟ್ರಾಲ್ ಅಂಶದ ಜಾಹೀರಾತು ತೋರುವ ಕಂಪೆನಿಯ ಉತ್ಪನ್ನಗಳನ್ನು ಕೊಳ್ಳಲು ಮುಗಿಬಿದ್ದವರು, ಇನ್ನೂ ಕೂಡ ಎದ್ದಿಲ್ಲ. ಹಾಗೆ ಬಿದ್ದೇ ಇದ್ದಾರೆ. ಆ ಕೊಲೆಸ್ಟ್ರಾಲ್ ಅನ್ನುವುದೇ ಒಂಥರಾ ಮರೀಚಿಕೆ. ಅದು ಸಾಮಾನ್ಯ ಜನರಿಗಂತೂ ಅರ್ಥವಾಗುವ ಬದಲು ಭಯವಾಯಿತು. ಹೆಚ್ಚಿನ ಬಂಡವಾಳ ಹೂಡಿ ವ್ಯಾಪಾರ ಮಾಡುವ ಕಾರ್ಪೊರೇಟ್ ಕಂಪೆನಿಗಳು ಯಾವಾಗ ಆಹಾರ ಉತ್ಪನ್ನಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿದವೋ ಅಲ್ಲಿಂದಲೇ ನಮ್ಮ ಅರೋಗ್ಯ ಕೆಡಲು ಶುರುವಾಗಿದ್ದು. ಈ ಕಂಪೆನಿಗಳು ಹೈಜಿನ್ ಹೆಸರಲ್ಲಿ, ಕ್ಯಾಲೊರಿ ಹೆಸರಲ್ಲಿ ಬೇಕಾಬಿಟ್ಟಿ ಅರೋಗ್ಯ ಬೆದರಿಕೆಯ ಜಾಹೀರಾತುಗಳನ್ನು, ಕಾರ್ಯಕ್ರಮಗಳನ್ನು ಆಯೋಜಿಸಿ ಅದಕ್ಕೆ ಅಗತ್ಯವಾದ ವೈದ್ಯರು ಮತ್ತು ವಿಜ್ಞಾನಿಗಳನ್ನು ನೇಮಿಸಿ ಅಧಿಕೃತ ವಿಜ್ಞಾನದ ಮುದ್ರೆಯನ್ನು ಒತ್ತಿಸಿಕೊಂಡು ಸರಕಾರಗಳ ಮೂಲಕ ಸನದು ಪಡೆದು ಮಾರುಕಟ್ಟೆಗೆ ಕಾಲಿಟ್ಟವು. ಹಾಗೆ ಕಾಲಿಟ್ಟು ಅವಸಾನಗೊಳಿಸಿದ ಒಂದು ಉತ್ಪನ್ನ ‘ಅಡುಗೆ ಎಣ್ಣೆ’.

ಪಾರಂಪರಿಕವಾಗಿ ಹಳ್ಳಿಗಳು, ನಗರಗಳು ಮೊದಲಿಂದಲೂ ಗಾಣಗಳಿಂದ ನಂತರದ ಯಂತ್ರ ನಾಗರಿಕತೆಯು ಬಂದ ಮೇಲೆ ಎಣ್ಣೆ ಗಿರಣಿಗಳಿಂದ ಅಡುಗೆ ಎಣ್ಣೆಯನ್ನು ಪಡೆದುಕೊಳ್ಳುತ್ತಿದ್ದವು. ಭಾರತದ ಹಲವು ವೃತ್ತಿಜಾತಿಗಳಂತೆ ಗಾಣ ನಡೆಸುವ ಪರಿಣತಿಯುಳ್ಳ ಗಾಣಿಗ ಸಮುದಾಯವು ಹಲವು ಬಗೆಯ ಬೀಜ, ಹರಳು, ಎಳ್ಳುಗಳನ್ನು ಸಂಗ್ರಹಿಸಿ ಎಣ್ಣೆ ತೆಗೆದು ಮಾರುತ್ತಿದ್ದರು. ಮಾರುವುದು ಕೂಡ ವಿನಿಮಯ ಪದ್ಧತಿಯನ್ನು ಅನುಸರಿಸುತ್ತಿತ್ತು. ಇಷ್ಟು ಪ್ರಮಾಣದ ಎಣ್ಣೆಗೆ ಬದಲಿಯಾಗಿ ಭತ್ತ, ರಾಗಿ ಕಾಳು ಕೊಡಬೇಕಾಗಿತ್ತು. ಕಾಲಕ್ರಮೇಣ ಅದು ಹಣಕ್ಕೆ ಪರಿವರ್ತನೆಯಾಯಿತು. ಗಾಣದ ಮನೆಗಳಲ್ಲಿ, ಸಂತೆಗಳಲ್ಲಿ ಮಾತ್ರವಲ್ಲದೆ ಬುಟ್ಟಿಯಲ್ಲಿ ಹೊತ್ತು ಎಣ್ಣೆ ಮಾರುತ್ತಿದ್ದ ಜನರೂ ಇದ್ದರು. 2005ನೇ ವರ್ಷದವರೆಗೂ ನಮ್ಮ ಮನೆಗೆ ಗಾಣಿಗರ ಅಜ್ಜಿಯೊಬ್ಬರು ಎರಡು-ಮೂರು ಬಗೆಯ ಎಣ್ಣೆಯನ್ನು ತಂದು ಕೊಡುತ್ತಿದ್ದರು. ತಲೆಗೂದಲಿಗೆ ಬಳಸುವ ಹರಳೆಣ್ಣೆ. ಬಾಣಂತಿ ಆರೈಕೆಗೆ ಹುಚ್ಚೆಳ್ಳು ಎಣ್ಣೆ. ದೇವರ ದೀಪಕ್ಕಾಗಿ ಕರಿಎಳ್ಳಿನ ಎಣ್ಣೆ. ಮನೆಯವರಿಗೆ ಅಂಗಡಿಯಲ್ಲಿ ಕೊಳ್ಳುವುದು ಸುತರಾಂ ಇಷ್ಟವಾಗುತ್ತಿರಲಿಲ್ಲ. ಆದರೆ ಆ ಪೀಳಿಗೆಯ ಜನ ಕಣ್ಮರೆಯಾದ ಮೇಲೆ ಮತ್ಯಾರು ಗಾಣವನ್ನು ಕಟ್ಟಲಿಲ್ಲ, ಅರೆಯಲಿಲ್ಲ ತಂದು ಮಾರಲಿಲ್ಲ. ಯಾಕೆಂದರೆ ಹೋದ ಕಾಲದ ಬದುಕಿಗೆ ಬೇಕಾದ ಹಣ ಅದರಲ್ಲಿ ಹುಟ್ಟುತ್ತಿರಲಿಲ್ಲ ಮತ್ತು ಪ್ಯಾಕೇಟ್ ಎಣ್ಣೆಯ ದರಕ್ಕೆ ಪೈಪೋಟಿ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಿಗೆ ಇಂತಹ ಪಾರಂಪರಿಕವಾದ ಪದ್ಧತಿಯನ್ನು ನೆಚ್ಚಿಕೊಂಡಿದ್ದ ತಯಾರಕ ಮತ್ತು ಗ್ರಾಹಕ ಪೀಳಿಗೆಗಳು ಬದಲಾಗಿಬಿಟ್ಟವು.

ಕೊಲೆಸ್ಟ್ರಾಲ್ ಅನ್ನುವ ಮಿಥ್ ಶುರುವಾಗುವ ಮುನ್ನ ನಾವೇನು ದಂಡಿ ದಂಡಿಯಾಗಿ ಎಣ್ಣೆಯನ್ನು ಬಳಸುತ್ತಿರಲಿಲ್ಲ. ಅಸಲಿಗೆ ನಮ್ಮ ಆಹಾರ ಪದ್ಧತಿಯಲ್ಲಿ ಎಣ್ಣೆಗಿಂತ ಮುಖ್ಯಸ್ಥಾನ ಇರುವುದು ತುಪ್ಪಕ್ಕೆ. ತುಪ್ಪದಲ್ಲಿ ಮಾಡಿದ ತಿನಿಸು ಎಂದರೆ ಸಾಕು ನಮ್ಮ ಕಣ್ಣು ಅರಳಿ ಬಿಡುತ್ತದೆ. ಹೋಳಿಗೆ ತುಪ್ಪ, ತುಪ್ಪದ ಚಕ್ಕುಲಿ, ತುಪ್ಪದನ್ನ, ತುಪ್ಪದಲ್ಲಿ ಕರಿದ ಕಜ್ಜಾಯ ಇವೆಲ್ಲ ನಮ್ಮನ್ನು ಉದ್ರೇಕಿಸುವ ಆಹಾರಗಳು. ತುಪ್ಪವನ್ನು ಹಸು ಅಥವಾ ಎಮ್ಮೆಯಾವುದರ ಹಾಲಿನಿಂದಾದರೂ ತೆಗಿದಿರಬಹುದು. (ಈಚೆಗೆ ಶುದ್ಧ ಹಸುವಿನ ತುಪ್ಪ ಎಂಬ ಮಾರುಕಟ್ಟೆ ಗುಮ್ಮ ಬಂದಿದೆ). ಅದಕ್ಕೆ ಅಂತಹ ವ್ಯತ್ಯಾಸವಿಲ್ಲ. ಎಮ್ಮೆಯ ತುಪ್ಪವಾದರೆ ಸ್ವಲ್ಪ ಹೆಚ್ಚು ಗಟ್ಟಿಯಾಗಿ, ಹೆಚ್ಚಾಗಿ ಸಿಗುತ್ತದೆ. ಆದರೆ ಸಾಮಾನ್ಯ ಜನರು ಎಣ್ಣೆಯನ್ನಾಗಲಿ, ತುಪ್ಪವನ್ನಾಗಲಿ ಅಷ್ಟಾಗಿ ಬಳಸುತ್ತಿರಲಿಲ್ಲ. ಅದೊಂದು ದುಬಾರಿ ಅಡುಗೆ ಪದಾರ್ಥವಾಗಿತ್ತು. ಎಷ್ಟೋ ಮನೆಗಳಲ್ಲಿ ಸಾರಿಗೆ ಒಗ್ಗರಣೆ ಕೂಡ ಹಾಕುತ್ತಿರಲಿಲ್ಲ. ಹಬ್ಬದ ದಿನವಷ್ಟೇ ಸಾರಿಗೆ ಒಗ್ಗರಣೆ ಬೀಳುತ್ತಿತ್ತು. ದನಕರುಗಳನ್ನು ಸಾಕಿದ ಮನೆಯಲ್ಲಿ ಮಾತ್ರ ತುಪ್ಪದ ಲಭ್ಯತೆ ಇತ್ತು ಮತ್ತು ಅದನ್ನು ತಿನ್ನುವುದಕ್ಕೂ ಜಾತಿಯ ತೊಡಕು ಇತ್ತು. (ದಲಿತರು ತುಪ್ಪ ತಿಂದ ಕಾರಣಕ್ಕೆ ಹಲ್ಲೆಯಾದ ಒಂದು ಘಟನೆಯ ಬಗ್ಗೆ ಅಂಬೇಡ್ಕರ್ ಬರೆದಿದ್ದಾರೆ) ಎಣ್ಣೆ-ತುಪ್ಪಗಳೇ ಇಲ್ಲದ ನೂರಾರು ತರಹದ ಅಡುಗೆಗಳು ಬಡವರ ಮನೆಯಲ್ಲಿ ಇದ್ದವು.

ಹಲವು ನೀರೆಸರು (ನೀರು ಸಾರು), ಹಸಿ ಸಾರು (ಬೇಯಿಸದೆ ಮಾಡಿದ ಸಾರು), ರೊಟ್ಟಿಗಳು, ಸುಟ್ಟು ತಿನ್ನುವ ಕಾಳು, ಬೀಜ, ಹಪ್ಪಳ ಮುಂತಾದವು ಇದ್ದುವು. ಇದೆಲ್ಲದರ ಅರ್ಥ ಅಡುಗೆ ಎಣ್ಣೆ ಮತ್ತು ತುಪ್ಪ ಉಳ್ಳವರ, ಮೇಲ್ಜಾತಿಯವರ ಸ್ವತ್ತಾಗಿದ್ದವು. ಅದನ್ನು ತಯಾರಿಸುತ್ತಿದ್ದುದು ಗಾಣಿಗರು, ಗೋಪಾಲಕರು. ಇದೊಂತರ ಕ್ಲಿಷ್ಟವಾದ ಸಮಾಜ ವ್ಯವಸ್ಥೆ. ಅದರೊಳಗೆ ಮತ್ತೆ ಭಾಗ ವಿಭಾಗವಾಗುತ್ತಲೇ ಹೋಗುವ ಆಹಾರ ವ್ಯವಸ್ಥೆ ಕೂಡ. ನಮ್ಮ ಸುತ್ತಮುತ್ತಲಿನ ಭಾಗಗಳಲ್ಲಿ ಹೆಚ್ಚು ನೆಲಗಡಲೆಯನ್ನು (ಶೇಂಗಾ) ಬೆಳೆಯುತ್ತಿದ್ದುರಿಂದ ಅಡುಗೆ ಎಣ್ಣೆಯ ಪ್ರಮುಖ ಕಚ್ಚಾ ಪದಾರ್ಥ ಕಡಲೆ ಕಾಯಿಯೇ ಆಗಿತ್ತು. ಎಣ್ಣೆ ತೆಗೆದ ಮೇಲೆ ಉಳಿಯುವ ಹಿಂಡಿ ಪಶುಗಳಿಗೆ ಒಳ್ಳೆಯ ಆಹಾರ. ಇದು ಗಾಣದ ಮನೆಗಳನ್ನು ಮೀರಿ ಬೆಳೆದು ದೊಡ್ಡ ದೊಡ್ಡ ಗಿರಣಿಗಳನ್ನು (Oil Mill) ಹುಟ್ಟಿಸಿತು. ಉತ್ಪಾದನೆಯಾದ ಎಣ್ಣೆ ಟಿನ್ ಡಬ್ಬಗಳಲ್ಲಿ ಕಿರಾಣಿಗಳಲ್ಲೂ ಸಿಗುವಂತೆ ಆಯಿತು. ಎಣ್ಣೆಗೆ ಜಾತಿ ನಿರ್ಬಂಧಗಳಿಂದ ಮೋಕ್ಷ ಸಿಕ್ಕಿತು. ಆದರೆ ಅದು ಬಂಡವಾಳಗಾರರ ಬಲೆಗೆ ಬಿತ್ತು. ಹಾಗೆಯೇ ಬೆಳೆಯುತ್ತಾ ಇಂದು ಕಾರ್ಪೊರೇಟ್ ಸಂಕೋಲೆಗಳಲ್ಲಿ ಸಿಕ್ಕಿ ದಿನಕ್ಕೊಂದು ಸಂಶೋಧನೆ ಆವಿಷ್ಕಾರದ ನೆಪದಲ್ಲಿ ಗ್ರಾಹಕ ಸೃಷ್ಟಿ, ಬೇಡಿಕೆ, ಪೂರೈಕೆಗಳಲ್ಲಿ ದಣಿದು ಹೋಗಿ ಮೂಲೆ ಗುಂಪಾಗಿಬಿಟ್ಟಿತು. ಅರುವತ್ತರ ದಶಕಗಳಲ್ಲಿ ಬಣ್ಣದ ಕಾರ್ಖಾನೆಗಳಿಗೆ ಬಳಸುತ್ತಿದ್ದ ಸೂರ್ಯಕಾಂತಿ ಎಣ್ಣೆ ಏಕಾಏಕಿ ಹೊಸ ವೇಷ ತೊಟ್ಟು ಮಾರುಕಟ್ಟೆಯಲ್ಲಿ ನಿಂತ ಮೇಲೆ ಉಳಿದ ಅಡುಗೆ ಎಣ್ಣೆಗಳ ಮಾರುಕಟ್ಟೆ ಕುಸಿದು ಬಿಟ್ಟಿತು.

ತಿಳಿ ಅರಿಶಿನ ಬಣ್ಣದ ಕಡಲೆಕಾಯಿ ಎಣ್ಣೆ ಒಂದು ಕಾಲದ ಎಲ್ಲ ಮನೆಗಳ ಅಡುಗೆ ಎಣ್ಣೆ. ಸಾರಿನ ಒಗ್ಗರಣೆಯಿಂದ ಹಿಡಿದು ಕಜ್ಜಾಯದವರೆಗೆ, ಮೀನು-ಕೋಳಿ ಮಾಂಸದ ಸಾರಿನವರೆಗೆ ಸಾಮ್ರಾಜ್ಯ ಸ್ಥಾಪಿಸಿಕೊಂಡಿತ್ತು. ಅದಕ್ಕೆ ತಕ್ಕಂತೆ ದರವು ಕೂಡ ಅಧಿಕ. ಸರಕಾರದ ಪ್ರೋತ್ಸಾಹದ ಜೊತೆಗೆ ತಾಳೆ ಎಣ್ಣೆ ಮಾರುಕಟ್ಟೆಗೆ ಬಂತು. ಬಡವರ ಅಡುಗೆ ಎಣ್ಣೆ ಎಂದು ಹೆಸರು ಮಾಡಿತು. ನ್ಯಾಯ ಬೆಲೆ ಅಂಗಡಿಗಳಲ್ಲಿ ಜನಕ್ಕೆ ಸುಲಭ ದರಕ್ಕೆ ಸಿಗತೊಡಗಿತು. ತಾಳೆ ಎಣ್ಣೆ, ಬೇಸಗೆಯಲ್ಲಿ ತಿಳಿಹಳದಿ ಬಣ್ಣದಲ್ಲಿ ಕಾಣುವ ಎಣ್ಣೆ. ಚಳಿಗಾಲದಲ್ಲಿ ತಿಳಿ ಗೋಧಿಬಣ್ಣದ ವನಸ್ಪತಿ (ಡಾಲ್ಡ) ರೀತಿಯಲ್ಲಿ ಕಾಣತ್ತೆ. ತಾಳೆ ಎಣ್ಣೆಯ ಮೂಲಕ ನಮ್ಮ ಅಡುಗೆಯ ಪದಾರ್ಥಗಳು ಹೆಚ್ಚು ಹೆಚ್ಚು ಕರಿಯಲು, ಕಪ್ಪಗಾಗಲು ಶುರುವಾದುವು. ಚೂರು ಅಗ್ಗದ ಎಣ್ಣೆಯು ತಿನ್ನುವ ಬಯಕೆಯಲ್ಲಿ ಬೇಯಿಸುವ ಅಡುಗೆಯನ್ನು ಹೆಚ್ಚು ಕರಿದು ತಿನ್ನಲು ಪ್ರೇರೇಪಿಸಿತು. ಜನ ಹೆಚ್ಚು ತಾಳೆ ಎಣ್ಣೆಗೆ ಹೊಂದಿಕೊಂಡರು ಎನ್ನುವಷ್ಟರಲ್ಲಿ ಸೂರ್ಯಕಾಂತಿ ಎಣ್ಣೆಯು ಮಾರುಕಟ್ಟೆ ವೈಭವದ ಪ್ರವೇಶ ಪಡೆಯಿತು. ಜೊತೆಗೆ ಕೊಲೆಸ್ಟ್ರಾಲ್ ಎಂಬ ಭಯದ ಜಾಹೀರಾತು ಹೊತ್ತು ತಂದಿತು. ಈ ವೇಳೆಗಾಗಲೇ ಎಣ್ಣೆಯ ಅಡುಗೆಗಳಿಗೆ ಅಂಟಿಕೊಂಡಿದ್ದ ಜನ ಈಗ ಆರೋಗ್ಯದ ಕಡೆಗೆ ವಿಪರೀತ ಗನಮ ಕೊಡಲು ಶುರು ಮಾಡಿದರು. ಸೂರ್ಯಕಾಂತಿ ಎಣ್ಣೆಯ ಗಿರಣಿಗಳು ಹುಟ್ಟಿಕೊಂಡವು, ಇವೂ ಕೂಡ ‘ಪರಿಶುದ್ಧ’ ಎನ್ನುವ ತಲೆಪಟ್ಟಿ ಹಾಕಿಕೊಂಡವು. ತಾಳೆ ಮತ್ತು ಸೂರ್ಯಕಾಂತಿ ಮತ್ತೆ ಎರಡು ವರ್ಗಗಳನ್ನು ಸೃಷ್ಟಿಸಿಬಿಟ್ಟವು.

ಕಳೆದ ಒಂದು ದಶಕದಲ್ಲಿ ಅಡುಗೆ ಎಣ್ಣೆ ಉದ್ಯಮವು ಬೇಕಾದಷ್ಟು ನಷ್ಟ, ಲಾಭ ಮಾಡಿದೆ. ದರ ನಡುವೆ ಗ್ರಾಹಕನ ಅರೋಗ್ಯ ಕಾಳಜಿ ಮಾಡಿದ ಯಾವ ಕಂಪೆನಿ/ಉತ್ಪನ್ನಗಳೂ ಇಲ್ಲ. ಕಾಳು /ಬೀಜಗಳ ಸಗಟು ದರಕ್ಕಿಂತ ಎಣ್ಣೆಯ ದರ ಕಡಿಮೆ ಇರುವುದು, ಅತಿಯಾದ ಕಲಬೆರಕೆ ಸಾಧ್ಯತೆ ಇತ್ಯಾದಿ ಅನುಮಾನಗಳಿಗೆ ಸ್ಪಷ್ಟವಾದ ಉತ್ತರಗಳು ಸಿಕ್ಕುತ್ತಿಲ್ಲ, ಸಿಕ್ಕರೂ ಅವೆಲ್ಲ ಹಾರಿಕೆ ಉತ್ತರಗಳು. ನಾವೀಗ ಮತ್ತೆ ಪಾರಂಪರಿಕವಾದ ಅಡುಗೆ ಎಣ್ಣೆ ಬಳಕೆಗೆ ಮುಂದಾಗುವುದು ನಮ್ಮ ಸುಸ್ಥಿರ ಬದುಕಿಗೆ ಬಹಳ ಮುಖ್ಯ ಎಂದು ಅರಿವಾಗಲು ಶುರುವಾಗಿದೆ. ನಮ್ಮ ಅಡುಗೆ ಎಣ್ಣೆಗಳು ಎಲ್ಲ ಭೌಗೋಳಿಕ ಪ್ರದೇಶಗಳಲ್ಲೂ ಒಂದೇ ಆಗಿಲ್ಲ, ಬೆಳೆಯುವ ಬೆಳೆ, ಸಿಗುವ ಸಂಪನ್ಮೂಲ, ಸ್ಥಳೀಯ ಆಹಾರ ಸಂಸ್ಕೃತಿ ಮೇಲೆ ಅವಲಂಬಿತವಾಗಿದೆ. ಉತ್ತರ ಭಾರತೀಯರು ಹೆಚ್ಚು ಸಾಸುವೆ ಎಣ್ಣೆ ಬಳಸುತ್ತಾರೆ. ದಕ್ಷಿಣದಲ್ಲಿ ನಾವು ಕಡಲೆಕಾಯಿ ಎಣ್ಣೆ ಬಳಸುತ್ತೇವೆ. ಕರಾವಳಿಯ ಜನ ತೆಂಗಿನ ಎಣ್ಣೆ ಬಳಸುತ್ತಾರೆ. ಈ ನಡುವೆ ಸ್ಥಳೀಯವಾಗಿ ದೊರಕುವ ಹತ್ತು ಹಲವು ತರಹ ಎಣ್ಣೆಗಳನ್ನು ವಿಶೇಷ ಅಡುಗೆಗಳಲ್ಲಿ ಬಳಸುತ್ತಾರೆ. ಕಡಲೆಕಾಯಿ/ಸೂರ್ಯಕಾಂತಿ/ಸೋಯಾಬೀನ್ ಎಣ್ಣೆಗಳನ್ನೂ ನಿತ್ಯದ ಆಹಾರ ತಯಾರಿಸಲು ಬಳಸಿದರೆ, ಹುಚ್ಚೆಳ್ಳು ಎಣ್ಣೆಯನ್ನು ಶೀತದಿಂದ ಅರೋಗ್ಯ ಕಾಪಾಡಿಕೊಳ್ಳಲು ಮೆಣಸು, ಉಪ್ಪು, ಬಿಸಿಬಿಸಿ ಅನ್ನದ ಜೊತೆಗೆ ತಿನ್ನುತ್ತಾರೆ. ಹಾಗೆಯೇ ನಾಟಿ ಕೋಳಿ ಸಾರು ಮಾಡಲು ಬಳಸುತ್ತಾರೆ, ಅದು ವಿಶೇಷವಾದ ಘಮ ಮತ್ತು ರುಚಿಯನ್ನು ಒದಗಿಸುತ್ತದೆ.

ಎಳ್ಳು ಎಣ್ಣೆಯನ್ನು ವಿಶೇಷವಾದ ತಿಂಡಿಗಳನ್ನು ಕರಿಯಲು, ದೈವಿಕ ಪ್ರಸಾದ ತಯಾರಿಗೆ ಮತ್ತು ನಿತ್ಯದ ಆಡುಗೆಗೂ ಬಳಸುವರು. ಬಂಗಾಳಿಗಳಂತೂ ಮೀನನ್ನು ಕರಿಯಲು ಸಾಸುವೆ ಎಣ್ಣೆಯನ್ನೇ ಬಳಸುವರು. ಗುಜರಾತಿನ ಕಡೆಯಲ್ಲಿ ಹತ್ತಿ ಬೀಜದ ಎಣ್ಣೆಯನ್ನು ಬಳಸುತ್ತಾರೆ. ಅಕ್ಕಿ ತರಿಯ ಎಣ್ಣೆ (Rice bran Oil)ಯನ್ನು ಬಳಸುತ್ತಾರೆ. ತರಕಾರಿ ಮತ್ತು ಸೊಪ್ಪುಗಳ ಸಲಾಡ್ ತಯಾರಿಕೆಗೆ ಆಲಿವ್ ಎಣ್ಣೆ ಉತ್ತಮ. ಕರಿಯದೇ, ಬಿಸಿ ಮಾಡದೇ ಬಳಸಬಹುದಾದ ಎಣ್ಣೆ ಇದು. ಹಾಗೆಯೇ ಜೋಳದ ಎಣ್ಣೆ ಕೂಡ ಬಳಸಬಹುದು. (ನನಗೆ ತಿಳಿದಂತೆ ನಮ್ಮಲ್ಲಿ ಇದು ಬಳಕೆಯಲ್ಲಿ ಇಲ್ಲ) ಬಾದಾಮಿ ಬೀಜದ ಎಣ್ಣೆ, ಗೋಡಂಬಿಯ ಎಣ್ಣೆ, ಕುಂಬಳ ಬೀಜದ ಎಣ್ಣೆ, ನುಗ್ಗೆ ಬೀಜದ ಎಣ್ಣೆ, ದ್ರಾಕ್ಷಿ ಬೀಜದ ಎಣ್ಣೆ ಸೇರಿದಂತೆ ನೂರಾರು ಬಗೆಯ ಬೀಜಗಳಿಂದ ತೆಗೆದ ಎಣ್ಣೆ ವಿಶೇಷವಾದ ಅಡುಗೆ, ಔಷಧಗಳಿಗೆ ಬಳಕೆಯಾಗುತ್ತವೆ.

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News