ಲಾಕ್‌ಡೌನ್ ವಿಸ್ತರಣೆಗೆ ಮೇಘಾಲಯ, ಒಡಿಶಾ, ಗೋವಾ ಆಗ್ರಹ

Update: 2020-04-27 17:50 GMT

ಹೊಸದಿಲ್ಲಿ, ಎ.27: ಮೇ 3ರ ಬಳಿಕವೂ ಲಾಕ್‌ಡೌನ್ ವಿಸ್ತರಿಸಬೇಕೆಂಬ ಆಗ್ರಹಕ್ಕೆ ಮೇಘಾಲಯದ ಜೊತೆಗೆ ಒಡಿಶಾ ಮತ್ತು ಗೋವಾ ರಾಜ್ಯಗಳೂ ಧ್ವನಿಗೂಡಿಸಿವೆ. ದೇಶದಲ್ಲಿ ಈಗ ಕೊರೋನ ಸೋಂಕಿನ ಪರಿಸ್ಥಿತಿ ಬಗ್ಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಜೊತೆ ನಡೆಸಿದ ವೀಡಿಯೊ ಕಾನ್ಫರೆನ್ಸ್ ಸಂದರ್ಭ ಈ ಬೇಡಿಕೆ ಮುಂದಿರಿಸಲಾಗಿದೆ.

ಒಡಿಶಾದಲ್ಲಿ ಲಾಕ್‌ಡೌನ್ ಮುಂದುವರಿಯದಿದ್ದಲ್ಲಿ ಪರಿಸ್ಥಿತಿ ನಿಭಾಯಿಸಲು ಅಸಾಧ್ಯವಾಗಿದೆ. ಒಂದು ತಿಂಗಳು ಬೇಕಾದರೂ ಮುಂದುವರಿಯಲಿ. ಏನಾಗುತ್ತದೆ ನೋಡೋಣ ಎಂದು ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್‌ದಾಸ್ ಹೇಳಿದ್ದಾರೆ. ಪ್ರಧಾನಿಯೊಂದಿಗೆ ನಡೆದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ದಾಸ್ ಹಾಗೂ ಮುಖ್ಯಮಂತ್ರಿ ನವೀನ್ ಪಟ್ಣಾಯಕ್ ಭಾಗವಹಿಸಿದ್ದರು.

 ರಾಜ್ಯದೊಳಗೆ ಕೆಲವು ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಿ ಲಾಕ್‌ಡೌನ್ ಅನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಗಡಿಗಳನ್ನು ಸೀಲ್ ಮಾಡಿ, ರಾಜ್ಯದೊಳಗೆ ಸೀಮಿತವಾಗಿ ಕೆಲವು ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಿ ಲಾಕ್‌ಡೌನ್ ವಿಸ್ತರಿಸುವಂತೆ ಕೋರಿ ಪ್ರಧಾನಿಗೆ ಶೀಘ್ರ ಪತ್ರ ಬರೆಯುವುದಾಗಿ ಸಾವಂತ್ ಹೇಳಿದ್ದಾರೆ.

ವೀಡಿಯೊ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡ ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಸಿರು ವಲಯ, ಕೊರೋನ ಸೋಂಕಿನ ಪ್ರಭಾವವಿಲ್ಲದ ಜಿಲ್ಲೆಗಳಲ್ಲಿ ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಿ ಲಾಕ್‌ಡೌನ್ ಮುಂದುವರಿಸಬೇಕು ಎಂದವರು ಆಗ್ರಹಿಸಿದ್ದಾರೆ.

ದೇಶದಲ್ಲಿನ ಕೊರೋನ ಪರಿಸ್ಥಿತಿಯ ಬಗ್ಗೆ ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News