ಮುಂಬೈನಿಂದ ಉತ್ತರಪ್ರದೇಶಕ್ಕೆ 14 ದಿನಗಳಲ್ಲಿ ಕಾಲ್ನಡಿಗೆಯಲ್ಲಿ ತಲುಪಿದ ವ್ಯಕ್ತಿ ಸಾವು

Update: 2020-04-29 06:21 GMT
ಸಾಂದರ್ಭಿಕ ಚಿತ್ರ

ಲಕ್ನೊ,ಎ.29: ಮುಂಬೈನಿಂದ ಉತ್ತರಪ್ರದೇಶದ ಶ್ರಾವಸ್ತಿ ಜಿಲ್ಲೆ ತಲುಪಲು 1,500 ಕಿ.ಮೀ.ದೂರವನ್ನು 14 ದಿನಗಳ ಕಾಲ ಕಾಲ್ನಡಿಗೆಯಲ್ಲಿ ತಲುಪಿದ್ದ ಇನ್ಸಾಫ್ ಅಲಿ ತನ್ನ ಗ್ರಾಮವನ್ನು ಸೋಮವಾರ ಬೆಳಗ್ಗೆ ತಲುಪಿದ್ದರು. ಆದರೆ,ಅವರನ್ನು ತಕ್ಷಣ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದ್ದು, ಸೋಮವಾರ ಮಧ್ಯಾಹ್ನ ಅವರು ಮೃತಪಟ್ಟಿದ್ದಾರೆ.

35ರ ಹರೆಯದ ಅಲಿ ಮುಂಬೈನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಲಾಕ್‌ಡೌನ್ ಘೋಷಣೆಯಾದ ಬಳಿಕ ತನ್ನ ಕೈಯಲ್ಲಿದ್ದ 5,000 ರೂ. ಹಿಡಿದುಕೊಂಡು, ತನ್ನ ಸ್ನೇಹಿತರ ಜೊತೆಗೂಡಿ ಹಳ್ಳಿಯತ್ತ ಮುಖ ಮಾಡಿದ್ದರು. ಕಷ್ಟಪಟ್ಟು ಹಳ್ಳಿ ತಲುಪಿದ ಕೆಲವೇ ಗಂಟೆಯಲ್ಲಿ ಅವರು ಮೃತಪಟ್ಟಿದ್ದು, ಅವರ ಕುಟುಂಬ ಸದಸ್ಯರಿಗೆ ಸಾವಿಗೆ ನಿಖರ ಕಾರಣ ಗೊತ್ತಾಗದೆ ಕಂಗಾಲಾಗಿದ್ದಾರೆ.

ಅಲಿ ಅವರ ಕೊರೋನ ವೈರಸ್ ಪರೀಕ್ಷೆಯ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ. ಅಲಿ ಪರೀಕ್ಷೆಯಲ್ಲಿ ಕೊರೋನ ಇಲ್ಲದಿದ್ದರೆ ಮಾತ್ರ ಅವರ ಶವಪರೀಕ್ಷೆ ನಡೆಯಲಿದೆ. ಅಲಿ ಅವರ ಪತ್ನಿ ಸಲ್ಮಾ ಬೇಗಂ ಹಾಗೂ ಅವರ ಕುಟುಂಬ ಅಲಿ ಸಾವಿಗೆ ಕಾರಣ ಗೊತ್ತಾಗದೆ ಗೊಂದಲದಲ್ಲಿದೆ.

ಅಲಿ ಅವರ ಮೊಬೈಲ್ ಬ್ಯಾಟರಿ ಖಾಲಿಯಾಗುವ ಮೊದಲು ತನ್ನೊಂದಿಗೆ ಮಾತನಾಡಿದ್ದರು. ಕೇವಲ ಬಿಸ್ಕಿಟ್ ತಿಂದು ಬದುಕಿದ್ದಾಗಿ ತಿಳಿಸಿದ್ದರು. ನನಗೆ ನನ್ನ ಪತಿಯನ್ನು ನೋಡಲು ಸಾಧ್ಯವಾಗಲಿಲ್ಲ. ಅವರು ಹಳ್ಳಿಗೆ ಬಂದಾಗ ನಾನು ತವರು ಮನೆಯಲ್ಲಿದ್ದೆ. ನಾನು ಬರುವ ಮೊದಲೇ ಪತಿಯ ಮೃತದೇಹವನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರು ಎಂದು ಸಲ್ಮಾ ಬೇಗಂ ಹೇಳಿದ್ದಾರೆ.

ಅಲಿಗೆ 6 ವರ್ಷದ ಪುತ್ರನಿದ್ದಾನೆ. ಅಲಿಯ ಹೆತ್ತವರು ಹಾಗೂ ಸಹೋದರರ ಕುಟುಂಬವನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಅಲಿ ಅವರ ಇಬ್ಬರು ಸಹೋದರರು ವಲಸೆ ಕಾರ್ಮಿಕರಾಗಿದ್ದು, ಪಂಜಾಬ್‌ನಲ್ಲಿ ಸಿಲುಕಿಕೊಂಡಿದ್ದಾರೆ.

"ಅಲಿ ಎ.13ರಂದು ಮುಂಬೈನ್ನು ತೊರೆದಿದ್ದರು. ನನ್ನ ಬಳಿ ಹಣವೆಲ್ಲಾ ಖಾಲಿಯಾಗಿದೆ ಎನ್ನುತ್ತಿದ್ದರು. ಅವರಿಗೆ ಕೆಲಸವಿಲ್ಲದೆ ವಾರಗಳೇ ಕಳೆದಿದ್ದವು. ಹಳ್ಳಿಯಲ್ಲಾದರೆ ಹೇಗಾದರೂ ಕೆಲಸ ಗಿಟ್ಟಿಸಿಕೊಳ್ಳಬಹುದು ಎನ್ನುತ್ತಿದ್ದರು. ನಡೆದುಕೊಂಡು ಬರುವ ದಾರಿಯುದ್ದಕ್ಕೂ ಅವರು ನನಗೆ ಫೋನ್ ಕರೆ ಮಾಡುತ್ತಿದ್ದರು. ಅವರು ಇತರ 10 ಮಂದಿ ಸ್ನೇಹಿತರೊಂದಿಗೆ 3,000 ರೂ.ಖರ್ಚು ಮಾಡಿಕೊಂಡು ಟ್ರಕ್ ಮುಖಾಂತರ ಜಾನ್ಸಿಗೆ ತಲುಪಿದ್ದರು. ಅವರನ್ನು ರವಿವಾರ ಬೆಳಗ್ಗೆ ಪೊಲೀಸರು ಹಿಡಿದು ವಾಪಸ್ ತೆರಳುವಂತೆ ಹೇಳಿದ್ದರು. ತನ್ನ ಸ್ನೇಹಿತರ ಸಂಪರ್ಕ ಕಳೆದುಕೊಂಡಿದ್ದ ನನ್ನ ಪತಿ ರಾತ್ರಿ ವೇಳೆ ಘಾಟ್‌ನಲ್ಲಿ ಕಳೆದಿದ್ದರು. ಮೊಬೈಲ್ ಬ್ಯಾಟರಿ ಖಾಲಿಯಾದ ನಂತರ ಅವರು ನನ್ನ ಸಂಪರ್ಕಕ್ಕೆ ಸಿಗಲಿಲ್ಲ. ಅವರೊಂದಿಗೆ ಪ್ರಯಾಣಿಸಿದ್ದ ಎಲ್ಲರಿಗೂ ಫೋನ್ ಮಾಡಿದೆ. ಯಾರಿಗೂ ನನ್ನ ಪತಿಯ ಸುಳಿವು ಸಿಕ್ಕಿರಲಿಲ್ಲ. ಸೋಮವಾರ ಬೆಳಗ್ಗೆ ನನ್ನ ಪತಿ ಫೋನ್ ಮಾಡಿ ತನ್ನ ಹಳ್ಳಿ ತಲುಪಿದ್ದಾಗಿ ತಿಳಿಸಿದ್ದರು. ಆದರೆ, ಅವರನ್ನು ನೋಡಲು ನನ್ನಿಂದ ಸಾಧ್ಯವಾಗಲಿಲ್ಲ'' ಎಂದು ಬೇಗಂ ಹೇಳಿದ್ದಾರೆ.

"ನನಗೆ ಹಳ್ಳಿಗೆ ಬರಬೇಕೆಂಬ ಆಸೆ ಇದೆ ಎಂದು ಪತಿ ಹೇಳುತ್ತಿದ್ದರು. ಆದರೆ,ಅವರು ಹಳ್ಳಿಗೆ ವಾಪಸಾದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ'' ಎಂದು ಬೇಗಂ ಹೇಳಿದ್ದಾರೆ.

"ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದ ಬಳಿಕ ಅಲಿ ಮೃತಪಟ್ಟಿದ್ದಾರೆ. ಶವಾಗಾರದಲ್ಲಿ ಅವರ ಮೃತದೇಹ ಇಡಲಾಗಿದೆ. ಅವರ ಸ್ಯಾಂಪಲ್‌ನ್ನು ಕೋವಿಡ್-19 ಪರೀಕ್ಷೆಗಾಗಿ ಲಕ್ನೋಗೆ ಕಳುಹಿಸಿಕೊಡಲಾಗಿದೆ. ಅಲಿ ಸತ್ತ ಬಳಿಕ ಅವರ ಮೃತದೇಹವನ್ನು ಸ್ಪರ್ಶಿಸಿರುವ ಅವರ ಕುಟುಂಬ ಸದಸ್ಯರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಕೊರೋನವೈರಸ್ ಟೆಸ್ಟ್ ನೆಗೆಟಿವ್ ಬಂದರೆ ಮಾತ್ರ ಶವಪರೀಕ್ಷೆ ನಡೆಸಲಾಗುವುದು. ಅಲಿ ಸಾವಿಗೆ ಈ ತನಕ ಸ್ಪಷ್ಟ ಕಾರಣ ಗೊತ್ತಾಗಿಲ್ಲ''ಎಂದು ಶ್ರಾವಸ್ತಿ ಪೊಲೀಸ್ ಎಸ್ಪಿ ಅನೂಪ್ ಕುಮಾರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News