‘ಹೂವುಗಳ ಬದಲು ಆಸ್ಪತ್ರೆಗಳ ಮೇಲೆ ಪಿಪಿಇ ಕಿಟ್ ಗಳನ್ನು ಸುರಿಯಿರಿ’

Update: 2020-05-02 14:38 GMT

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗಾಗಿ ರವಿವಾರ ಸಶಸ್ತ್ರ ಪಡೆಗಳು ಹೂಮಳೆಗರೆಯಲಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ ಬೆನ್ನಿಗೆ, ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ನಿಜಕ್ಕೂ ಬೇಕಾಗಿರುವುದು ಕಿಟ್ ಗಳು, ರಕ್ಷಣಾ ಸಲಕರಣೆಗಳು ಹೊರತು ಹೂವಿನ ಎಸಳುಗಳಲ್ಲ ಎಂದು ಹಲವು ಟ್ವಿಟರಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಪಿಪಿಇ, ಆಹಾರದ ಪ್ಯಾಕೆಟ್ ಗಳು ಮತ್ತು ಇತರ ಅಗತ್ಯ ಸಾಮಗ್ರಿಗಳು ಆದ್ಯತೆಯಾಗಿರದ ಕಾರಣ ಸರ್ಕಸ್ ಶೋಗೆ ಸಿದ್ಧರಾಗಿ. ಹೂವಿನ ಎಸಳುಗಳು ಬೇಕೇ ಬೇಕು. ಏಕೆಂದರೆ ಇದು ನಮ್ಮ ದೇಶದ ಅಂತ್ಯಸಂಸ್ಕಾರ” ಎಂದು ಶ್ರುತಿ ಜೈನ್ ಎಂಬವರು ಟ್ವೀಟ್ ಮಾಡಿದ್ದಾರೆ.

“ಹೂವಿನ ಎಸಳುಗಳನ್ನು ಸುರಿಯುವ ಬದಲು ಪಿಪಿಇ ಕಿಟ್ ಗಳನ್ನು ಸುರಿದರೆ ಹೇಗೆ?, ಇದು ಕೋವಿಡ್ 19 ಹೋರಾಟಗಾರರಿಗೆ ಉತ್ತಮ ಧನ್ಯವಾದದ ವಿಧಾನ. ದೇಶದ ಹಣವನ್ನು ಸೂಕ್ಷ್ಮ ವಿಚಾರಗಳಿಗೆ ಬಳಸೋಣ” ಎಂದು ನಮಿತಾ ಹಂಡಾ ಟ್ವೀಟ್ ಮಾಡಿದ್ದಾರೆ.

“ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಸೂಕ್ತ ಯೋಜನೆಗಳ ಬದಲು ಸಿಡಿಎಸ್ ಬಿಪಿನ್ ರಾವತ್ ಹೂಗಳ ಶೋನಲ್ಲಿ ಬ್ಯುಸಿಯಾಗಿದ್ದಾರೆ” ಎಂದು ಆಮಿರ್ ಖಾನ್ ಎನ್ನುವ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಮೇ 3ರಂದು ವಿಶೇಷ ಕೃತಜ್ಞತೆಯ ಸೂಚಕವಾಗಿ ಕೆಲವು ವಿಶೇಷ ಚಟುವಟಿಕೆಗಳು ನಡೆಯಲಿವೆ. ವಾಯುಪಡೆಯು ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಫ್ಲೈ ಪಾಸ್ಟ್‌ ಗಳನ್ನು ನಡೆಸಲಿದೆ. ದೇಶದ ಉದ್ದಗಲದಲ್ಲಿ ಈಶಾನ್ಯದ ಅಸ್ಸಾಂನಿಂದ ಗುಜರಾತ್‌ನ ಕಛ್ ತನಕ ಫ್ಲೈ ಪಾಸ್ಟ್ ನಡೆಸಲಾಗುವುದು. ರಾಷ್ಟ್ರವು ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಆಸ್ಪತ್ರೆಗಳನ್ನು ಗೌರವಿಸಲು ಹೆಲಿಕಾಪ್ಟರ್‌ಗಳು ಆಸ್ಪತ್ರೆಗಳ ಮೇಲೆ ಹೂದಳಗಳನ್ನು ಸುರಿಸಲಿವೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿನ ಕಟ್ಟಡಗಳ ಹೊರಗೆ ಸೇನಾ ಬ್ಯಾಂಡ್‌ಗಳು ಮೊಳಗಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿಪಿನ್ ರಾವತ್ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News