ಮಗಳು ಮೃತಪಟ್ಟ ಎರಡೇ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾದ ಕೋವಿಡ್ ವಿರುದ್ಧದ ಯೋಧೆ

Update: 2020-05-03 03:50 GMT

ಭುವನೇಶ್ವರ : ಅಪ್ರಾಪ್ತ ವಯಸ್ಸಿನ ಮಗಳು ಮೃತಪಟ್ಟು ಎರಡೇ ದಿನಗಳಲ್ಲಿ ಕೋವಿಡ್-19 ವಿರುದ್ಧದ ಸಮರಕ್ಕೆ ಧುಮುಕಿದ ಗೃಹರಕ್ಷಕ ದಳದ ಗೌರಿ ಬೆಹೆರಾ ಎಂಬ ಮಹಿಳೆ ದೇಶದ ಗಮನ ಸೆಳೆದಿದ್ದಾರೆ.

ಬೆಹೆರಾ ಅವರಿಗೆ ಜೀವಮಾನದ ಅತ್ಯಂತ ಆಘಾತಕಾರಿ ಘಟನೆ ಎನಿಸಿದ 13 ವರ್ಷದ ಮಗಳ ಸಾವು ಎಪ್ರಿಲ್ 24ರಂದು ಸಂಭವಿಸಿತ್ತು. ಈ ಆಘಾತದಿಂದ ಚೇತರಿಸಿಕೊಳ್ಳಲು ಇವರಿಗೆ ವರ್ಷಗಳೇ ಬೇಕು, ಆದರೂ ಕರ್ತವ್ಯದ ಕರೆಗೆ ಓಗೊಟ್ಟು ಎ. 26ರಂದೇ ಪುರಿ ಜಿಲ್ಲೆಯ ಪಿಪಿಲಿ ಪೊಲೀಸ್ ಠಾಣೆ ಮುಂದೆ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದರು. ಇವರ ಪುತ್ರಿ ಒಂದು ವರ್ಷದಿಂದ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಳು.
ಪುತ್ರಿಯ ಸಾವಿಗೆ ಶೋಕ ವ್ಯಕ್ತಪಡಿಸಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತಾಯಿಯ ತ್ಯಾಗವನ್ನು ಶ್ಲಾಘಿಸಿದ್ದಾರೆ. ಇವರು ಇತರರಿಗೆ ಸ್ಫೂರ್ತಿ. 13 ವರ್ಷದ ಮಗಳ ಸಾವಿನ ನಡುವೆಯೂ, ಕರ್ತವ್ಯದಿಂದ ವಿಮುಖರಾಗಲಿಲ್ಲ. ಅವರ ತ್ಯಾಗ ಶ್ಲಾಘನೀಯ ಎಂದು ಅವರು ಟ್ವೀಟ್ ಮಾಡಿದ್ದಾರೆ.

43 ವರ್ಷದ ಗೌರಿ ರಸ್ತೆಯಲ್ಲಿ ಲಾಕ್‌ಡೌನ್ ಕರ್ತವ್ಯದಲ್ಲಿದ್ದಾಗ ಎ 24ರಂದು, ಮಗಳ ಸ್ಥಿತಿ ಗಂಭೀರವಾಗಿದೆ ಎಂಬ ಕರೆ ಬಂತು. ತಕ್ಷಣ ಸೈಕಲ್‌ನಲ್ಲಿ ಮನೆಗೆ ತೆರಳಿದರು. ಪೊಲೀಸ್ ಠಾಣೆಯಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿದ್ದ ಮನೆಗೆ ತೆರಳಿದಾಗ ಮಗಳು ಲೋಪಮುದ್ರಾ (13) ಕೊನೆಯುಸಿರೆಳೆದಿದ್ದಳು. ಜಗತ್ತೇ ಕುಸಿದಂತಾಯಿತು ಎಂದು ಒತ್ತರಿಸಿ ಬರುತ್ತಿದ್ದ ದುಃಖ ಹತ್ತಿಕ್ಕಿಕೊಂಡು ಗೌರಿ ನುಡಿದರು. 1998ರಿಂದ ಇವರು ಗೃಹರಕ್ಷಕ ದಳದಲ್ಲಿ ಕರ್ತವ್ಯದಲ್ಲಿದ್ದಾರೆ.

ಪತಿ ಹಲವು ವರ್ಷಗಳ ಹಿಂದೆ ಮೃತಪಟ್ಟ ಹಿನ್ನೆಲೆಯಲ್ಲಿ ವೃದ್ಧ ತಂದೆ- ತಾಯಿಯನ್ನು ನೋಡಿಕೊಳ್ಳುವ ಹೊಣೆಯೂ ಇವರ ಹೆಗಲೇರಿತ್ತು. ಜತೆಗೆ ಮಾನಸಿಕ ಅಸ್ವಸ್ಥ ತಮ್ಮನ ಜವಾಬ್ದಾರಿಯೂ ಇದ್ದ ಕಾರಣ ಜೀವನಾಧಾರಕ್ಕಾಗಿ ಉದ್ಯೋಗ ಅನಿವಾರ್ಯವಾಗಿತ್ತು. ಎ. 26ರಿಂದ ಮತ್ತೆ ಕೆಲಸಕ್ಕೆ ಹೋಗುತ್ತಿದ್ದೇನೆ. ಸರ್ಕಾರ ಒಂದಷ್ಟು ಹಣಕಾಸು ನೆರವು ನೀಡಬೇಕು ಎಂದು ಅವರು ಹೇಳಿದರು.

ಪುರಿ ಎಸ್ಪಿ ಉಮಾ ಶಂಕರ್ ದಾಸ್ ಕೂಡಾ ಗೌರಿಯವರ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿ, ಇತರರಿಗೆ ಮಾದರಿ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News