1200 ಕಿ.ಮೀ. ಸೈಕಲ್ ಸವಾರಿ ಹೊರಟ ವಲಸೆ ಕಾರ್ಮಿಕನ ದುರಂತ ಅಂತ್ಯ

Update: 2020-05-03 04:23 GMT
ಫೈಲ್ ಚಿತ್ರ

ಶಹಜಹಾನ್‌ಪುರ: ದೆಹಲಿಯಿಂದ 1200 ಕಿಲೋಮೀಟರ್ ದೂರದಲ್ಲಿರುವ ಬಿಹಾರದ ಖಗಾರಿಯಾಗೆ ಸೈಕಲ್ ನಲ್ಲಿ ಹೊರಟಿದ್ದ ವಲಸೆ ಕಾರ್ಮಿಕನೊಬ್ಬ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ದೆಹಲಿಯಿಂದ ಹುಟ್ಟೂರಿಗೆ ಈ ಸಾಹಸ ಯಾತ್ರೆ ಕೈಗೊಂಡಿದ್ದ ಏಳು ಮಂದಿಯ ತಂಡ ಗುರುವಾರ ರಾತ್ರಿ ಶಹಜಹಾನ್‌ಪುರ ತಲುಪಿ ಅಲ್ಲೇ ರಾತ್ರಿಯನ್ನು ಕಳೆದಿತ್ತು. ಆದರೆ ಮರುದಿನ ಬೆಳಗ್ಗೆ ಈ ತಂಡದಲ್ಲಿದ್ದ ಧರ್ಮವೀರ ಎಂಬಾತ ದಿಢೀರನೇ ಕುಸಿದು ಬಿದ್ದ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಆತ ಮಾರ್ಗ ಮಧ್ಯೆ ಮೃತಪಟ್ಟ ಎನ್ನಲಾಗಿದೆ. ಈತನ ಕೋವಿಡ್-19 ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದರೂ, ಅಟಾಪ್ಸಿ ವರದಿ ಪ್ರಕಾರ ತೀವ್ರತರದ ಶ್ವಾಸಕೋಶದ ಕಾಯಿಲೆಯಿಂದ ಈತ ಮೃತಪಟ್ಟಿದ್ದಾನೆ. 

ನಾಲ್ಕು ದಿನಗಳ ಹಿಂದೆ ದೆಹಲಿಯಿಂದ ಸೈಕಲ್‌ನಲ್ಲಿ ಹೊರಟಿದ್ದೆವು. ರಾತ್ರಿ ಊಟದ ಬಳಿಕ ನಿದ್ದೆ ಮಾಡಿದ್ದೆವು. ಮುಂಜಾನೆವರೆಗೂ ಮಾತನಾಡುತ್ತಿದ್ದ. ಬಳಿಕ ಏನಾಯಿತು ಎನ್ನುವುದು ಗೊತ್ತಿಲ್ಲ ಎಂದು ಆತನ ಜತೆಗಿದ್ದ ಸೈಕಲ್ ಸವಾರ ವಿವರಿಸಿದರು.

ಧರ್ಮವೀರನ ಮೃತದೇಹವನ್ನು ಹುಟ್ಟೂರಿಗೆ ಒಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವುದಾಗಿ ಮತ್ತು ಇತರ ಆರು ಮಂದಿ ತೆರಳಲು ಪ್ರತ್ಯೇಕ ವಾಹನ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News