ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಲ್ಯಾಬ್ ಸ್ಥಾಪಿಸಲು ಮೂಲಭೂತ ಸೌಕರ್ಯಗಳೇ ಇಲ್ಲ!
ಉಡುಪಿ, ಮೇ 2: ಕೋವಿಡ್-19 ಸಂಬಂಧ ಸದ್ಯ ಹಸಿರು ವಲಯದಲ್ಲಿರುವ ಉಡುಪಿ ಜಿಲ್ಲೆಗೆ ಅತಿ ಅಗತ್ಯವಾಗಿರುವ ಕೊರೋನ ವೈರಸ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲು ಬೇಡಿಕೆ ಹೆಚ್ಚಾಗಿದೆ. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಶೀಘ್ರವೇ ಲ್ಯಾಬ್ ಸ್ಥಾಪಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ನೀಡಿದ್ದರೂ, ಇಲ್ಲಿ ಇದಕ್ಕೆ ಬೇಕಾದ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಈ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಕೊರೋನ ಭೀತಿ ಆರಂಭವಾದ ದಿನದಿಂದಲೂ ಉಡುಪಿ ಜಿಲ್ಲೆಗೆ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಮಂಜೂರು ಮಾಡಬೇಕೆಂಬ ಕೂಗು ಕೇಳಿಬರುತ್ತಿತ್ತು. ಈ ಸಂಬಂಧ ಸಂಸದರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಾಕಷ್ಟು ಬಾರಿ ಭರವಸೆಗಳನ್ನು ನೀಡಿದ್ದರು. ಅದೇ ರೀತಿ ಮೇ 23ರಂದು ಉಡುಪಿ ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಎಸ್‌ಡಿಆರ್ ನಿಧಿಯಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಶೀಘ್ರವೇ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಆಶ್ವಾಸನೆ ನೀಡಿದ್ದರು. ಸದ್ಯ ಇವರೆಲ್ಲರ ಮಾತುಗಳು, ಆಶ್ವಾಸನೆಗಳು ಕೇವಲ ಬಾಯಿಮಾತಿನ ಭರವಸೆಯಾಗಿಯೇ ಉಳಿದಿವೆ. ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿ ಈಗಾಗಲೇ 10 ದಿನ ಕಳೆದಿವೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಲ್ಯಾಬ್ ಸ್ಥಾಪಿಸಲು ಬೇಕಾದ ಯಾವುದೇ ವ್ಯವಸ್ಥೆಗಳು ಇಲ್ಲದ ಕಾರಣ ಈ ಸಂಬಂಧ ಯಾವುದೇ ಕಾರ್ಯ ಆರಂಭವಾಗಿಲ್ಲ. ಎಲ್ಲ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಇನ್ನಷ್ಟೇ ಸಿದ್ಧಪಡಿಸಬೇಕಾಗಿರುವುದರಿಂದ ಇದಕ್ಕೆಲ್ಲ ಇನ್ನು ಕನಿಷ್ಠ ಒಂದು ತಿಂಗಳ ಸಮಯಾವಕಾಶವಾದರೂ ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮಾದರಿ ಪರೀಕ್ಷೆಯಲ್ಲಿ ಮುಂದೆ: ಎ.17ರಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಮಾಹಿತಿಯಲ್ಲಿ ಕೊರೋನ ವೈರಸ್ ಪತ್ತೆಗಾಗಿ ಸ್ಯಾಂಪಲ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿತ್ತು.
ಜಿಲ್ಲೆಯ ಒಟ್ಟು ಜನಸಂಖ್ಯೆ 11,77,361ರ ಪೈಕಿ ಮೇ 1ರವರೆಗೆ ಒಟ್ಟು 1,113 ಮಂದಿಯ ಕೊರೋನ ಮಾದರಿ ಪರೀಕ್ಷೆಯನ್ನು ನಡೆಸಲಾಗಿದೆ. ಜಿಲ್ಲೆಯ ಪ್ರತಿ ಒಂದು ಲಕ್ಷ ಮಂದಿಯ ಪೈಕಿ 100ಕ್ಕೂ ಅಧಿಕ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಮೂಲಕ ಜಿಲ್ಲೆ ಮಾದರಿ ಪರೀಕ್ಷೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಇದೇ ರೀತಿ ಇನ್ನಷ್ಟು ವೇಗದಲ್ಲಿ ಮಾದರಿ ಪರೀಕ್ಷೆಯನ್ನು ಮಾಡಬೇಕಾದರೆ ಜಿಲ್ಲೆಗೆ ಪರೀಕ್ಷಾ ಪ್ರಯೋಗಾಲಯ ಅತಿ ಅಗತ್ಯವಾಗಿದೆ ಎನ್ನುತ್ತಾರೆ ಆರೋಗ್ಯಾಧಿಕಾರಿಗಳು.
ಅದೇ ರೀತಿ ಲಾಕ್‌ಡೌನ್ ಸಡಿಲಿಕೆಯಾದ ನಂತರ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ಸಾವಿರಾರು ಸಂಖ್ಯೆಯ ಜನ ಬರುವವರಿದ್ದಾರೆ. ಅಂತಹ ಸಂದರ್ಭದಲ್ಲಿ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಸದ್ಯ ಜಿಲ್ಲೆಯ ಎಲ್ಲ ಮಾದರಿಗಳನ್ನು ಮಂಗಳೂರು ಲ್ಯಾಬ್‌ನಲ್ಲಿ ಪರೀಕ್ಷೆ ಮಾಡುತ್ತಿರುವುದರಿಂದ ಪ್ರತಿ ವರದಿ ಬರಬೇಕಾದರೆ 3-4 ದಿನಗಳು ಬೇಕಾಗುತ್ತದೆ. ಇದರಿಂದ ಸಮಯ, ಹಣ ವ್ಯಯವಾಗುವುದಲ್ಲದೆ, ರೋಗಿಯ, ಶಂಕಿತರ ಮಾನಸಿಕ ಆರೋಗ್ಯದ ಮೇಲೂ ಹೊಡೆತ ಬೀಳುತ್ತಿದೆ.
1.25ಕೋಟಿ ರೂ. ಖರ್ಚು:
ಕೋವಿಡ್ ಪರೀಕ್ಷೆಯ ಉಪಕರಣಗಳು ಸಾಕಷ್ಟು ವೆಚ್ಚದಾಯಕ ವಾಗಿರುವುದರಿಂದ ಪ್ರಯೋಗಾಲಯ ಸ್ಥಾಪಿಸಲು ಸುಮಾರು 1.25 ಕೋಟಿ ರೂ. ಅನುದಾನ ಬೇಕಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದು, ಈ ಸಂಬಂಧ ಉಪಕರಣಗಳನ್ನು ಖರೀದಿಸಲು ಮುಂದಾಗಿದೆ. ಅದೇ ರೀತಿ ಜಿಲ್ಲಾಸ್ಪತ್ರೆಯಲ್ಲಿ ಈ ಪ್ರಯೋಗಾಲಯಕ್ಕಾಗಿ ಪ್ರತ್ಯೇಕ ಕೋಣೆ ಯೊಂದನ್ನು ಈಗಾಗಲೇ ಗುರುತಿಸಲಾ ಗಿದ್ದು, ಅದರ ದುರಸ್ತಿ ಕಾರ್ಯವನ್ನು ನಡೆಸಲಾಗುತ್ತಿದೆ. ಈ ಉಪಕರಣಗಳು ಬರಲು ಸುಮಾರು ಒಂದು ತಿಂಗಳ ಸಮಯವಾದರೂ ಬೇಕು. ಅಲ್ಲದೆ ಪ್ರಯೋಗಾಲಯಕ್ಕೆ ಬೇಕಾದ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಸಬೇಕಾಗುತ್ತದೆ ಮತ್ತು ಅವರಿಗೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ತರಬೇತಿ ನೀಡಬೇಕಾಗುತ್ತದೆ. ಹೀಗೆ ಪ್ರಕ್ರಿಯೆ ಮುಗಿಸಿ ಪ್ರಯೋಗಾಲಯ ಸಜ್ಜುಗೊಳಿ ಸಲು 30ರಿಂದ 40 ದಿನಗಳು ಬೇಕಾಗುತ್ತವೆ ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ. ಈಗಾಗಲೇ ಕೊರೋನ ಭೀತಿ ಆವರಿಸಿ ಎರಡು ತಿಂಗಳುಗಳು ಕಳೆದರೂ ಉಡುಪಿ ಜಿಲ್ಲೆ ಮಾದರಿ ಪರೀಕ್ಷೆಗೆ ಇನ್ನು ಕೂಡ ಶಿವಮೊಗ್ಗ, ಹಾಸನದ ಬಳಿಕ ಇದೀಗ ಮಂಗಳೂರಿನ ಪ್ರಯೋಗಾಲಯವನ್ನೇ ಅವಲಂಬಿಸ ಬೇಕಾಗಿದೆ. ಈ ಮಧ್ಯೆ ಎಲ್ಲ ರೀತಿಯ ಸ್ಯಾಂಪಲ್‌ಗಳ ಪರೀಕ್ಷೆಗೆ ಬೇಕಾಗುವ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯವನ್ನು ಮಣಿಪಾಲ ಮಾಹೆ ಹಾಗೂ ಕೆಎಂಸಿ ಆಸ್ಪತ್ರೆ ಹೊಂದಿದ್ದರೂ, ಇಲ್ಲಿಗೆ ಈ ಸೌಕರ್ಯವನ್ನು ಮಂಜೂರು ಮಾಡಲು ಕೇಂದ್ರ ಸರಕಾರ ‘ಯಾವುದೋ ಕಾರಣಕ್ಕೆ’ ಮೀನಮೇಷ ಎಣಿಸುತ್ತಿದೆ. ಮಣಿಪಾಲಕ್ಕೆ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ಮಂಜೂರು ಮಾಡುವುದಕ್ಕೆ ತಾನು ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಜಿಲ್ಲೆಗೆ ಬಂದಾಗಲೆಲ್ಲಾ ದೊಡ್ಡ ಸ್ವರದಲ್ಲಿ ಹೇಳುತಿದ್ದರೂ, ಪ್ರಯತ್ನ ಮಾತ್ರ ನಡೆದ ಯಾವ ಸೂಚನೆಗಳು ಸಿಗುತ್ತಿಲ್ಲ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಲ್ಯಾಬ್ ಸ್ಥಾಪಿಸುವ ಸಂಬಂಧ ಈಗಾಗಲೇ ಜಾಗವನ್ನು ಗುರುತಿಸಿ, ಅದರ ದುರಸ್ತಿ ಕಾರ್ಯ ಮಾಡಲಾಗುತ್ತದೆ. ಅದೇ ರೀತಿ ಉಪಕರಣಗಳ ಖರೀದಿಗೂ ತಯಾರಿ ನಡೆಸಲಾಗಿದೆ. ಈ ಉಪಕರಣ ಬರಲು ಸುಮಾರು ಮೂರು ವಾರಗಳು ಬೇಕಾಗುತ್ತದೆ. ಅದೇ ರೀತಿ ಸಿಬ್ಬಂದಿ ನೇಮಕಾತಿ ಪ್ರತ್ರಿಯೆ ನಡೆಸಿ ಅಗತ್ಯ ತರಬೇತಿ ಕೂಡ ನೀಡಬೇಕು. ಇದಕ್ಕೆಲ್ಲ ಕನಿಷ್ಠ ಒಂದು ತಿಂಗಳ ಸಮಯ ಬೇಕಾಗುತ್ತದೆ. ಇದರ ಜೊತೆ ಮಣಿಪಾಲ ಕೆಎಂಸಿಗೆ ಲ್ಯಾಬ್ ಮಂಜೂರಾತಿಗೂ ಪ್ರಯತ್ನಗಳು ನಡೆಯುತ್ತಿದೆ.
-ಜಿ.ಜಗದೀಶ್,
ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ
ಮೃತರ ಅಂತ್ಯಕ್ರಿಯೆ ವಿಳಂಬ
‘ನಮ್ಮ ಕುಟುಂಬದಲ್ಲಿ ವೃದ್ಧರೊಬ್ಬರು ಶ್ವಾಸಕೋಶದ ತೊಂದರೆಯಿಂದ ಮೃತ ಪಟ್ಟಿದ್ದರು. ಕೊರೋನ ವೈರಸ್ ಲಕ್ಷಣದ ಹಿನ್ನೆಲೆಯಲ್ಲಿ ಮೃತದೇಹದ ಮಾದರಿ ಯನ್ನು ಸಂಗ್ರಹಿಸಲಾಗಿತ್ತು. ಜಿಲ್ಲೆಯಲ್ಲಿ ಲ್ಯಾಬ್ ಇಲ್ಲದ ಕಾರಣ ಈ ಮಾದರಿ ಯನ್ನು ಮಂಗಳೂರು ಲ್ಯಾಬ್‌ಗೆ ಕಳುಹಿಸಲಾಗಿತ್ತು. ಆ ವರದಿ ಬರಲು ನಾವು ನಾಲ್ಕು ದಿನ ಕಾಯಬೇಕಾಯಿತು. ನಿನ್ನೆಯಷ್ಟೆ ವರದಿ ಬಂದಿದ್ದು, ಮೃತದೇಹ ವನ್ನು ಪಡೆದು ಅಂತ್ಯಕ್ರಿಯೆ ನಡೆಸಲಾ ಗಿದೆ. ಹೀಗೆ ವಿಳಂಬವಾಗುವುದರಿಂದ ನೋವಿನಲ್ಲಿರುವ ಕುಟುಂಬಕ್ಕೆ ಮತ್ತಷ್ಟು ನೋವು ಕೊಟ್ಟಂತೆ ಆಗುತ್ತದೆ. ಆದುದ ರಿಂದ ಸರಕಾರ ಕೂಡಲೇ ಉಡುಪಿ ಜಿಲ್ಲೆಯಲ್ಲಿಯೇ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವ ಕೆಲಸ ಅಗತ್ಯವಾಗಿ ಮಾಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ ಒತ್ತಾಯಿಸಿದ್ದಾರೆ.