ಕೊರೋನ ವೈರಸ್: ಸರಕಾರದ ನಿರಾಸಕ್ತಿ ವಿರುದ್ಧ ಎಚ್ಚರಿಕೆ ಗಂಟೆ ಬಾರಿಸಿದ ಏಮ್ಸ್ ವೈದ್ಯರು

Update: 2020-05-03 06:40 GMT

ಹೊಸದಿಲ್ಲಿ, ಮೇ 3: ವೃತ್ತಿಪರ ಆರೋಗ್ಯ ಪಾಲನ ಕಾರ್ಯಕರ್ತರಲ್ಲಿ ಕೊರೋನ ವೈರಸ್ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, ಅವರು ಕೂಡ ಬಲವಂತವಾಗಿ ಕ್ವಾರಂಟೈನ್‌ಗೆ ಹೋಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಉದ್ಭವಿಸಿದೆ. ಇದು ಇತರ ಆರೋಗ್ಯ ಪಾಲನ ಕಾರ್ಯಕರ್ತರಿಗೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಲು ಹಿಂದೇಟು ಹಾಕುವಂತೆ ಮಾಡಿದೆ. ಅವರಿಗೆ ಸ್ವತಃ ತಮ್ಮ ಜೀವದ ಬಗ್ಗೆಯೇ ಚಿಂತೆ ಮಾಡುವಂತಾಗಿದೆ.

ವೈದ್ಯರು ಕಾಯಿಲೆಗೆ ಒಳಗಾಗುತ್ತಿರುವುದು ಹೆಚ್ಚುತ್ತಿರುವುದರಿಂದ ಆತಂಕಕ್ಕೀಡಾಗಿರುವ ದಿಲ್ಲಿ ಸರಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಪದ್ಮನಿ ಸಿಂಗ್, ವಿವಿಧ ಸರಕಾರಿ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕರಲ್ಲಿ, ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವ ವೈದ್ಯರಿಂದ ಲಿಖಿತ ವಿವರಣೆ ಪಡೆಯುವಂತೆ ತಿಳಿಸಿದ್ದಾರೆ. ಅಗತ್ಯವಿರುವ ರಕ್ಷಣಾ ಕವಚಗಳು, ದೈಹಿಕ ಅಂತರ ಹಾಗೂ ಆರೋಗ್ಯ ಪಾಲನ ಕಾರ್ಯಕರ್ತರಿಗೆ ಇರುವ ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸಿದ ಹೊರತಾಗಿಯೂ ಸೋಂಕು ತಗಲಿರುವುದು ಹೇಗೆಂಬ ಕುರಿತು ತಿಳಿಸುವಂತೆಯೂ ಪದ್ಮನಿ ಸಿಂಗ್ ಆದೇಶಿಸಿದ್ದಾರೆ.

 ದಿಲ್ಲಿ ಸರಕಾರದ ಈ ಹೆಜ್ಜೆ ಅಸೂಕ್ಷ್ಮ ಎಂದು ಹೇಳಿರುವ ವೈದ್ಯರು ಆರೋಗ್ಯ ಅಧಿಕಾರಿಗಳ ಕ್ರಮವನ್ನು ವಿರೋಧಿಸಿದ್ದಾರೆ.

 ಈಗಿನ ವಿದ್ಯಮಾನ ತುಂಬಾ ಚಿಂತಾಜನಕವಾಗಿದೆ ಎಂದು ಹೇಳಿರುವ ಏಮ್ಸ್‌ನ ಸ್ಥಾನೀಯ ವೈದ್ಯರ ಅಸೋಸಿಯೇಶನ್‌ನ ಅಧ್ಯಕ್ಷ ಡಾ. ಆದರ್ಶ್ ಸಿಂಗ್, ಹಲವು ಆಸ್ಪತ್ರೆಗಳಲ್ಲಿ ವೃತ್ತಿಪರ ಆರೋಗ್ಯ ಪಾಲನ ಕಾರ್ಯಕರ್ತರಿಗೆ ಮೂಲಭೂತ ಸೌಲಭ್ಯಗಳು ಹಾಗೂ ಸೇವೆಗಳನ್ನು ನೀಡಲು ಸರಕಾರ ವಿಫಲವಾಗಿದೆ ಎಂದು ದೂಷಿಸಿದ್ದಾರೆ.

ಆರೋಗ್ಯ ಪಾಲನ ಕಾರ್ಯಕರ್ತರಿಗೆ ಇಂತಹ ಸಮಸ್ಯೆ ಎದುರಾಗುವುದನ್ನು ತಡೆಗಟ್ಟಲು ಸರಕಾರಿ ಆರೋಗ್ಯ ಏಜೆನ್ಸಿಗಳು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯು ಗಮನ ನೀಡಬೇಕು ಎಂದು ಸಿಂಗ್ ಹೇಳಿದರು.

ಸಿಂಗ್ ಹಾಗೂ ಇತರ ವೈದ್ಯರು 10 ಬೇಡಿಕೆಗಳ ಪಟ್ಟಿಯನ್ನು ಸಿದ್ದಪಡಿಸಿದ್ದು ಸರಕಾರ ತುರ್ತಾಗಿ ಹೆಜ್ಜೆಗಳನ್ನು ಇಡಬೇಕೆಂದು ಆಗ್ರಹಿಸಿದ್ದಾರ.

ಅಸಮರ್ಪಕ ಹಾಗೂ ಕಳಪೆ ಗುಣಮಟ್ಟದ ಪಿಪಿಇ ಪೂರೈಕೆ: ಹಲವು ಕೋವಿಡ್-19 ಆಸ್ಪತ್ರೆಗಳಲ್ಲಿ ವೃತ್ತಿಪರ ಆರೋಗ್ಯ ಪಾಲನ ಕಾರ್ಯಕರ್ತರಲ್ಲಿ ಸಂಪೂರ್ಣ ವೈಯಕ್ತಿಕ ರಕ್ಷಣೆಯ ಸಲಕರಣೆ(ಪಿಪಿಇ)ಇಲ್ಲ. ಇದು ಅವರು ಸೋಂಕಿಗೆ ಗುರಿಯಾಗುವಂತೆ ಮಾಡಿದೆ. ಕೆಲವು ಆಸ್ಪತ್ರೆಗಳಲ್ಲಿ ಪಿಪಿಇ ಗುಣಮಟ್ಟ ಕೂಡ ಕಳಪೆಯಾಗಿದ್ದು, ಇದು ಉದ್ದೇಶವನ್ನು ವಿಫಲಗೊಳಿಸುತ್ತಿದೆ.

ಕೋವಿಡ್‌ರಹಿತ ರೋಗಿಗಳ ಆರೈಕೆ ಮಾಡುವ ವೈದ್ಯರಿಗೆ ಪಿಪಿಇ ಕಿಟ್ ಅಲಭ್ಯ: ಇಂತಹ ರೋಗಿಗಳು ಕೋವಿಡ್-19ರಹಿತ ವಾರ್ಡ್‌ಗಳಿಗೆ ಗೊತ್ತಿಲ್ಲದೆ ಸೋಂಕನ್ನು ತರುತ್ತಾರೆ. ಇಂದಿನ ದಿನಗಳಲ್ಲಿ ಪಿಪಿಇ ಎಲ್ಲ ವೈದ್ಯರಿಗೆ ಅಗತ್ಯವಿದೆ. ಹಾಟ್‌ಸ್ಪಾಟ್‌ಗಳ ಸಂಖ್ಯೆಯು ಹೆಚ್ಚಾಗುತ್ತಿದೆ.ಕೋವಿಡ್-19 ಪಾಸಿಟಿವ್ ರೋಗಿಗಳಲ್ಲಿ ಲಕ್ಷಣ ಕೂಡ ಗೋಚರಿಸುವುದಿಲ್ಲ.

ವೈದ್ಯರುಗಳಿಗೆ ಸುರಕ್ಷಿತ ವಸತಿ ಅಗತ್ಯವಿದೆ: ಹೆಚ್ಚಿನ ಆರೋಗ್ಯ ಪಾಲನ ಕಾರ್ಯಕರ್ತರು ಅಪಾಯದಲ್ಲಿದ್ದಾರೆ. ಹೆಚ್ಚಿನವರು ಮನೆಯಿಂದ ಬರುತ್ತಾರೆ. ಹೆಚ್ಚಿನ ಪ್ರಕರಣಗಳಲ್ಲಿ ಸಾಮೂಹಿಕವಾಗಿ ಸೋಂಕಿಗೆ ಒಳಗಾಗುತ್ತಾರೆ. ಇವರಿಗೆ ಸುರಕ್ಷಿತಸ್ಥಳಗಳಲ್ಲಿ, ಆಸ್ಪತ್ರೆಗಳ ಸಮೀಪ ವಸತಿ ಕಲ್ಪಿಸುವ ಅಗತ್ಯವಿದೆ.

ಕಡಿಮೆ ಪ್ರಮಾಣದ ಟೆಸ್ಟಿಂಗ್: ಹೆಚ್ಚಿನ ಪ್ರಮಾಣದ ಪರೀಕ್ಷೆಯು ಹೆಚ್ಚು ಸೋಂಕಿತ ಜನರನ್ನು ಪ್ರತ್ಯೇಕಿಸುತ್ತದೆ. ಇದು ವೈದ್ಯರಿಗೆ ಕನಿಷ್ಟ ಅಪಾಯವನ್ನುಂಟು ಮಾಡುತ್ತದೆ.

ಕೋವಿಡ್-19 ರೋಗಿಗಳೊಂದಿಗೆ ದೀರ್ಘಕಾಲದ ತನಕ ಇರುವುದು: ಆರೋಗ್ಯ ಪಾಲನ ಕಾರ್ಯಕರ್ತರು ಸಮರ್ಪಕ ಸಂಖ್ಯೆಯಲ್ಲ್ಲಿಲ್ಲದ ಕಾರಣ ಅವರು ಕೋವಿಡ್-19 ರೋಗಿಗಳೊಂದಿಗೆ ದೀರ್ಘ ಸಮಯ ಕೆಲಸ ಮಾಡಬೇಕಾಗುತ್ತದೆ. ಇದು ವೈರಸ್ ಅವರ ದೇಹದೊಳಗೆ ಹೊಕ್ಕಿ, ಅನಾರೋಗ್ಯವನ್ನಾಗಿಸುತ್ತದೆ.

ಅಸಮರ್ಪಕ ಸೋಂಕು ತಡೆಗಟ್ಟುವಿಕೆ, ನಿಯಂತ್ರಣ ತರಬೇತಿ: ಹೆಚ್ಚಿನ ಜಿಲ್ಲೆಗಳಲ್ಲಿರುವ ಆರೋಗ್ಯ ಪಾಲನ ಕಾರ್ಯಕರ್ತರಲ್ಲಿ ತರಬೇತಿಯ ಕೊರತೆ ಇರುವ ಕಾರಣ ಈ ಸೋಂಕಿತ ಕಾಯಿಲೆಯನ್ನು ನಿಭಾಯಿಸಲು ಸೋಲುತ್ತಿದ್ದಾರೆ. ಆರೋಗ್ಯಕಾರ್ಯಕರ್ತರಿಗೆ ನೀಡುವ ಕ್ಷಿಪ್ರಗತಿಯ ತರಬೇತಿಯು ಅವರನ್ನು ರಕ್ಷಿಸಲು ಸಹಾಯವಾಗಬಲ್ಲದು.

ಕೆಲಸದ ಒತ್ತಡ,ಆತಂಕದಲ್ಲಿ ಹೆಚ್ಚಳ: ಸರಿಯಾದ ವ್ಯವಸ್ಥೆಗಳಿಲ್ಲದೆ, ಮಾರಣಾಂತಿಕ ವಾತಾವರಣದಲ್ಲಿ ಕೆಲಸ ಮಾಡುವುದರಿಂದ ಆರೋಗ್ಯ ಕಾರ್ಯಕರ್ತರು ಒತ್ತಡಕ್ಕೆ ಒಳಗಾಗುತ್ತಾರೆ.

ಖಾಸಗಿ ವೈದ್ಯರನ್ನು ಮತ್ತೆ ಕೆಲಸಕ್ಕೆ ಕರೆತನ್ನಿ: ಖಾಸಗಿ ವೈದ್ಯರು ತಮ್ಮ ಚಿಕಿತ್ಸಾಲಯವನ್ನು ಮುಚ್ಚಿರುವುದರಿಂದ ಸರಕಾರಿ ಆರೋಗ್ಯ ಕಾರ್ಯಕರ್ತರಿಗೆ ಕೆಲಸದ ಹೊರೆ ಜಾಸ್ತಿಯಾಗಿದೆ. ಸರಕಾರದ ಆಸ್ಪತ್ರೆಗಳಲ್ಲಿನ ಕೆಲಸ ಭಾರ ತಗ್ಗಿಸಲು ಖಾಸಗಿ ವೈದ್ಯರಲ್ಲೂ ಕೆಲಸ ಮಾಡಲು ಸೂಚಿಸಬೇಕು.

ಸಾಮಾಜಿಕ ಬಹಿಷ್ಕಾರ, ಕಿರುಕುಳ,ಆಕ್ರಮಣ: ಆರೋಗ್ಯ ಕಾರ್ಯಕರ್ತರಿಗೆ ರಕ್ಷಣೆ ನೀಡುವ ಕಾನೂನುರೂಪಿಸಿರುವ ಹೊರತಾಗಿಯೂ ಸಾಮಾಜಿಕ ಬಹಿಷ್ಕಾರವು ಅಡೆತಡೆಯಿಲ್ಲದೆ ಮುಂದುವರಿಯುತ್ತಿದೆ.ಅವರನ್ನು ಯೋಧರಂತೆ ಪರಿಗಣಿಸುವ ಬದಲು ಅವರನ್ನು ಬೆದರಿಕೆಯಾಗಿ ನೋಡಲಾಗುತ್ತಿದೆ,ಕಿರುಕುಳ ನೀಡಲಾಗುತ್ತಿದೆ ಎಂದು ಸಿಂಗ್ ತಮ್ಮ ಬೇಡಿಕೆಯ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News