ಆರೋಗ್ಯ ಸೇತು ಆ್ಯಪ್ 'ನಾಜೂಕಿನ ಕಣ್ಗಾವಲು ವ್ಯವಸ್ಥೆ' : ರಾಹುಲ್‍ಗಾಂಧಿ

Update: 2020-05-03 05:37 GMT

ಹೊಸದಿಲ್ಲಿ: ಕೊರೋನ ವಿರುದ್ಧದ ಹೋರಾಟದ ಭಾಗವಾಗಿ ಕೇಂದ್ರ ಸರ್ಕಾರ ಕಡ್ಡಾಯಪಡಿಸಿರುವ ಆರೋಗ್ಯಸೇತು ಆ್ಯಪ್, “ನಾಜೂಕಿನ ಕಣ್ಗಾವಲು ವ್ಯವಸ್ಥೆ” ಎಂದು ಕಾಂಗ್ರೆಸ್ ಸಂಸದ ರಾಹುಲ್‍ ಗಾಂಧಿ ಕಿಡಿ ಕಾರಿದ್ದಾರೆ.

ಎಪ್ರಿಲ್‍ನಲ್ಲಿ ಬಿಡುಗಡೆಯಾದ ಆ್ಯಪ್ ಇದೀಗ ಖಾಸಗಿ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಕಡ್ಡಾಯ. ಒಬ್ಬ ಖಾಸಗಿ ಕಂಪನಿಯ ಉದ್ಯೋಗಿ ತನ್ನ ಮೊಬೈಲ್‍ನಲ್ಲಿ ಈ ಆ್ಯಪ್ ಹೊಂದಿರದಿದ್ದರೆ, ಆ ಕಂಪನಿಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

“ಆರೋಗ್ಯಸೇತು ಆ್ಯಪ್ ನಯವಾದ ಕಣ್ಗಾವಲು ವ್ಯವಸ್ಥೆಯಾಗಿದ್ದು, ಇದನ್ನು ಖಾಸಗಿ ಕಂಪನಿಗೆ ಹೊರಗುತ್ತಿಗೆ ನೀಡಲಾಗಿದೆ. ಇದಕ್ಕೆ ಯಾವುದೇ ಸಾಂಸ್ಥಿಕ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲ. ಇದು ಮಾಹಿತಿ ಸುರಕ್ಷೆ ಮತ್ತು ಖಾಸಗಿತನದ ಬಗ್ಗೆ ಗಂಭೀರ ಆತಂಕಕ್ಕೆ ಕಾರಣವಾಗಿದೆ. ನಾವು ಸುರಕ್ಷಿತವಾಗಿರಲು ತಂತ್ರಜ್ಞಾನ ನೆರವಾಗುತ್ತದೆ. ಆದರೆ ನಾಗರಿಕರ ಒಪ್ಪಿಗೆ ಇಲ್ಲದೇ ಅವರ ಜಾಡು ಹಿಡಿಯುವ ಸಾಧನವಾಗಬಾರದು” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಈ ಆ್ಯಪ್‍ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು, ಇತರ ದೇಶಗಳಲ್ಲಿ ಸಂಪರ್ಕ ಟ್ರ್ಯಾಕ್ ಮಾಡಲು ನಿಗದಿಪಡಿಸಿದ ಮಾನದಂಡಕ್ಕಿಂತ ಕಳಪೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ರಾಹುಲ್ ವಿವರಿಸಿದ್ದಾರೆ. ಜಿಪಿಎಸ್ ಆಧರಿತ ಲೊಕೇಶನ್ ಡಾಟಾ ಬಳಕೆ ದೊಡ್ಡ ಆತಂಕಕಾರಿ ಅಂಶ ಎನ್ನುವುದು ತಜ್ಞರ ಅಭಿಮತ ಎಂದಿದ್ದಾರೆ.

ನೀತಿ ಆಯೋಗ ಇದರ ಬಳಕೆಯನ್ನು ಸಮರ್ಥಿಸಿಕೊಂಡಿದೆ ಮತ್ತು ಹೊಸ ಹಾಟ್‍ಸ್ಪಾಟ್ ಪತ್ತೆಗೆ ಸಹಕಾರಿ ಎಂದು ಸರ್ಕಾರ ಹೇಳುತ್ತಿದೆ. ಜತೆಗೆ ಡಾಟಾ ಲೊಕೇಶ್ ವಿವರವನ್ನು ವೈಯಕ್ತಿಕ ಆಧಾರದ ಬದಲಾಗಿ ಸರಾಸರಿ ಆಧಾರದಲ್ಲಿ ಬಳಸಲಾಗುತ್ತಿದೆ ಎನ್ನುವುದು ಸರ್ಕಾರದ ಸಮರ್ಥನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News