ಐಟಿಬಿಪಿಯ 45 ಸಿಬ್ಬಂದಿಗಳಲ್ಲಿ ಕೋವಿಡ್-19: ಮಾಜಿ ಅಧಿಕಾರಿಯಿಂದ ಸೋಂಕು ಹರಡಿರುವ ಶಂಕೆ

Update: 2020-05-05 16:03 GMT

ಹೊಸದಿಲ್ಲಿ,ಮೇ 5: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಮಂಗಳವಾರ 45ಕ್ಕೇರಿದ್ದು, ರವಿವಾರ ಕೋವಿಡ್-19ನಿಂದಾಗಿ ಮೃತಪಟ್ಟ ಮಾಜಿ ಅಧಿಕಾರಿಯಿಂದ ಸೋಂಕು ಇತರರಿಗೆ ಹರಡಿರಬಹುದು ಎಂದು ಶಂಕಿಸಲಾಗಿದೆ.

ಐಟಿಬಿಪಿಯ ತಿಗರಿ ಕ್ಯಾಂಪ್‌ನ್ನು ಸೀಲ್ ಮಾಡಲಾಗಿದ್ದು,1,000ಕ್ಕೂ ಅಧಿಕ ಸಿಬ್ಬಂದಿಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಐಟಿಬಿಪಿಯಲ್ಲಿ ಮೊದಲ ಕೋರೋನ ವೈರಸ್ ಸೋಂಕು ಪ್ರಕರಣ ಎ.28ರಂದು ವರದಿಯಾಗಿತ್ತು. ಸೋಮವಾರ ಸೋಂಕಿತರ ಸಂಖ್ಯೆ 21ಕ್ಕೆ ತಲುಪಿತ್ತು. ಮಂಗಳವಾರ ಇದು ದುಪ್ಪಟ್ಟಿಗೂ ಹೆಚ್ಚಾಗಿ 45ಕ್ಕೇರಿದೆ. ಈ ಪೈಕಿ 43 ಸಿಬ್ಬಂದಿಗಳು ರಾಜಧಾನಿಯಲ್ಲಿ ಆಂತರಿಕ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರೆ, ಇತರ ಇಬ್ಬರು ದಿಲ್ಲಿ ಪೊಲೀಸರೊಂದಿಗೆ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯದಲ್ಲಿದ್ದರು ಎಂದು ಐಟಿಬಿಪಿ ಹೇಳಿಕೆಯಲ್ಲಿ ತಿಳಿಸಿದೆ.

ಪಡೆಯಲ್ಲಿ ಸೋಂಕಿನ ಮೂಲವನ್ನು ಗುರುತಿಸಲು ಐಟಿಬಿಪಿ ಪ್ರಯತ್ನಿಸುತ್ತಿದೆ. ಆದರೆ ತಿಗರಿ ಕ್ಯಾಂಪ್ ನಲ್ಲಿ ವಾಸವಿದ್ದು ಕೊರೋನ ವೈರಸ್‌ನಿಂದ ರವಿವಾರ ಮೃತಪಟ್ಟಿರುವ ಮಾಜಿ ಐಟಿಬಿಪಿ ಅಧಿಕಾರಿಯಿಂದ ಇತರರಿಗೆ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ ಸಿಬ್ಬಂದಿಗಳು ದಿಲ್ಲಿಯ ವಿವಿಧೆಡೆಗಳಲ್ಲಿ ಪೊಲೀಸರೊಂದಿಗೆ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸೋಂಕಿಗೆ ಗುರಿಯಾಗಿರುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

 ಕೋವಿಡ್-19 ರೋಗಿಗಳಿಗಾಗಿಯೇ ಮೀಸಲಾಗಿರುವ ಗ್ರೇಟರ್ ನೋಯ್ಡದಲ್ಲಿರುವ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ರೆಫರಲ್ ಆಸ್ಪತ್ರೆಗೆ ಐಟಿಬಿಪಿಯ ಸೋಂಕಿತ ಸಿಬ್ಬಂದಿಗಳನ್ನು ದಾಖಲಿಸಲಾಗಿದೆ.

 ಐಟಿಬಿಪಿ ತನ್ನ ಛಾವ್ಲಾ ನೆಲೆಯಲ್ಲಿನ 91 ಸಿಬ್ಬಂದಿಗಳನ್ನೂ ಕ್ವಾರಂಟೈನ್‌ಗೆ ಒಳಪಡಿಸಿದ್ದು,ಅವರ ಪರೀಕ್ಷಾ ವರದಿಗಳಿಗಾಗಿ ಕಾಯಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News