​ದೇಶದಲ್ಲಿ ನಾಲ್ಕು ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರೆಷ್ಟು ಗೊತ್ತೇ ?

Update: 2020-05-06 03:47 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ದೇಶದಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ಸಮಸ್ಯೆ ತೀವ್ರವಾಗುತ್ತಿದ್ದು, ಆರ್ಥಿಕತೆಯ ಹಲವು ಪ್ರಮುಖ ವಲಯಗಳಲ್ಲಿ ಉದ್ಯೋಗ ನಷ್ಟ ಉಂಟಾಗುತ್ತಿದೆ. ಇದರಿಂದಾಗಿ ಬಹಳಷ್ಟು ಮಂದಿ ಬಡತನಕ್ಕೆ ತಳ್ಳಲ್ಪಡುವ ಸಾಧ್ಯತೆ ಇದ್ದು, ಔಪಚಾರಿಕ ಹಾಗೂ ಅನೌಪಚಾರಿಕ ಕ್ಷೇತ್ರಗಳ ನಡುವಿನ ಕಾರ್ಮಿಕರ ಅಂತರ ಮತ್ತಷ್ಟು ಹೆಚ್ಚುವ ಅಪಾಯವಿದೆ.

ಆರ್ಥಿಕ ಚಿಂತನಾ ಸಂಸ್ಥೆಯಾದ ಸಿಎಂಐಇ ಬಿಡುಗಡೆ ಮಾಡಿದ ಮಾಸಿಕ ಅಂಕಿ ಅಂಶಗಳಿಂದ ತಿಳಿದು ಬರುವಂತೆ, ಎಪ್ರಿಲ್ ತಿಂಗಳಲ್ಲಿ ನಿರುದ್ಯೋಗ ದರ ಶೇಕಡ 23.5ಕ್ಕೇರಿದೆ. ತಮಿಳುನಾಡು, ಜಾರ್ಖಂಡ್ ಮತ್ತು ಬಿಹಾರದಲ್ಲಿ ನಿರುದ್ಯೋಗ ಪ್ರಮಾಣ ಅತ್ಯಧಿಕವಾಗಿದ್ದು, ಕ್ರಮವಾಗಿ 49.8%, 47.1% ಮತ್ತು 46.6%ದಷ್ಟಿದೆ.ಪಂಜಾಬ್, ಛತ್ತೀಸ್‌ಗಢ, ತೆಲಂಗಾಣದಲ್ಲಿ ಕ್ರಮವಾಗಿ ಶೇಕಡ 2.9, 3.4 ಮತ್ತು 6.2ರಷ್ಟು ನಿರುದ್ಯೋಗ ಪ್ರಮಾಣ ದಾಖಲಾಗಿದ್ದು, ಇದು ದೇಶದಲ್ಲೇ ಕನಿಷ್ಠ ಎಂದು ಸಿಎಂಐಇ ಸಮೀಕ್ಷೆಯ ಫಲಿತಾಂಶ ಹೇಳಿದೆ.

ಮೇ 3ರಂದು ಕೊನೆಗೊಂಡ ವಾರಾಂತ್ಯಕ್ಕೆ ದೇಶದಲ್ಲಿ ನಿರುದ್ಯೋಗ ಪ್ರಮಾಣ ಮತ್ತಷ್ಟು ಹೆಚ್ಚಿ 27.1%ಗೇರಿದೆ. ಮಾರ್ಚ್‌ನಿಂದ ಎಪ್ರಿಲ್ ತಿಂಗಳ ಅವಧಿಯಲ್ಲಿ ಕನಿಷ್ಠ 114 ದಶಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದಲ್ಲಿ 400 ದಶಲಕ್ಷ ಉದ್ಯೋಗಿಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, 114 ದಶಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆಂದರೆ ಪ್ರತಿ ನಾಲ್ಕು ಮಂದಿಯ ಪೈಕಿ ಒಬ್ಬರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಮಹೇಶ್ ವ್ಯಾಸ್ ಹೇಳಿದ್ದಾರೆ.

ಉದ್ಯೋಗ ಕ್ಷೇತ್ರದ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳುತ್ತಾರೆ. ಆರ್ಥಿಕತೆಯಲ್ಲಿ ಕಾರ್ಮಿಕ ಪಾಲ್ಗೊಳ್ಳುವಿಕೆ ದರ ಎಪ್ರಿಲ್ ತಿಂಗಳಲ್ಲಿ ಕನಿಷ್ಠ ಅಂದರೆ 35.6%ಗೆ ಕುಸಿದಿದೆ. ಲಾಕ್‌ಡೌನ್ ವಿಸ್ತರಣೆಯಾದಲ್ಲಿ ಪರಿಸ್ಥಿತಿ ಮತ್ತಷ್ಟು ಕುಸಿಯಲಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News