ಕೋವಿಡ್-19 ವಿರುದ್ಧ 30 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿ: ಪ್ರಧಾನಿಗೆ ಭಾರತೀಯ ವಿಜ್ಞಾನಿಗಳ ಮಾಹಿತಿ

Update: 2020-05-06 16:51 GMT

ಹೊಸದಿಲ್ಲಿ, ಮೇ 6: ಕೋವಿಡ್-19 ವಿರುದ್ಧ 30ಕ್ಕೂ ಅಧಿಕ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಅವುಗಳಲ್ಲಿ ಪ್ರಾಯೋಗಿಕ ಹಂತದಲ್ಲಿದೆ ಎಂದು ವಿಜ್ಞಾನಿಗಳು, ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದಾರೆ.

ಕೊರೋನ ವೈರಸ್ ಸೋಂಕಿನ ವಿರುದ್ಧ ಹೋರಾಡಲು ರಚನೆಯಾದ ವಿಶೇಷ ಕಾರ್ಯಪಡೆಯ ಸಭೆಯಲ್ಲಿ ಈ ವಿಷಯ ತಿಳಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕೋವಿಡ್-19 ವಿರುದ್ಧ ಔಷಧಿ ಅಭಿವೃದ್ಧಿ, ಪಡಿಸಲು ಮೂರು ವಿಧಾನಗಳನ್ನು ಅನುಸರಿಸಲಾಗುವುದೆಂದು ಪ್ರಧಾನಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಮೊದಲನೆಯ ವಿಧಾನವಾಗಿ ಈಗ ಅಸ್ತಿತ್ವದಲ್ಲಿರುವ ಔಷಧಿಗಳನ್ನು ಪುನರ್‌ರೂಪಿಸಲಾಗುತ್ತದೆ. ಈ ಶ್ರೇಣಿಯಲ್ಲಿ ಕನಿಷ್ಠ ನಾಲ್ಕು ಔಷಧಿಗಳನ್ನು ಸಮನ್ವಯಗೊಳಿಸಲಾಗುವುದು ಹಾಗೂ ಪರಿಶೀಲನೆಗೊಳಪಡಿಸಲಾಗುತ್ತದೆ. ಎರಡನೆಯದಾಗಿ ಪ್ರಯೋಗಾಲಯದ ದೃಢೀಕರಣದೊಂದಿಗೆ ನೂತನ ಔಷಧಿಗಳನ್ನು ಅಭಿವೃದ್ಧಿಪಡಿಸಲಾಗುವುದು, ಮೂರನೆದಾಗಿ ಸೋಂಕುರೋಗ ನಿರೋಧಕ ಅಂಶಗಳನ್ನು ಒಳಗೊಂಡಿರುವ ಗಿಡಮೂಲಿಕೆಗಳ ಸಾರಗಳು ಹಾಗೂ ಉತ್ಪನ್ನಗಳನ್ನು ಪರೀಕ್ಷಿಸಲಾಗುವುದು ಎಂದವರು ಹೇಳಿದರು.

ಕೊರೋನ ವೈರಸ್ ಸೋಂಕಿನ ಪ್ರತಿಕಾಯಗಳ (ಆ್ಯಂಟಿಬಾಡೀಸ್) ಪತ್ತೆಹಚ್ಚುವಿಕೆ ಹಾಗೂ ಆರ್‌ಟಿ-ಪಿಸಿಆರ್ ಎಂಬ ನೂತನ ವಿಧಾನದ ತಪಾಸಣೆಯನ್ನು ನಡೆಸಲು ಹಲವರು ಶೈಕ್ಷಣಿಕ ಸಂಶೋಧನಾ ಸಂಸ್ಥೆಗಳು ಹಾಗೂ ಸ್ಟಾರ್ಟ್‌ಅಪ್ ಕಂಪೆನಿಗಳು ಮುಂದೆ ಬಂದಿರುವುದಾಗಿ ಪ್ರಧಾನಿ ತಿಳಿಸಿದರು. ದೇಶಾದ್ಯಂತ ಎಲ್ಲಾ ಪ್ರಯೋಗಾಲಯಗಳನ್ನು ಪರಸ್ಪರ ಜೋಡಿಸುವ ಮೂಲಕ ಇಂತಹ ಪರೀಕ್ಷೆಗಳನ್ನು ಅಧಿಕಗೊಳಿಸಬಹುದಾಗಿದೆ’’ ಎಂದು ಸಭೆಯ ಬಳಿಕ ಬಿಡುಗಡೆಗೊಳಿಸಲಾದ ಹೇಳಿಕೆಯು ತಿಳಿಸಿದೆ.

ಕೊರೋನ ವೈರಸ್ ಸೋಂಕಿನ ಪರೀಕ್ಷೆಗೆ ಬೇಕಾದ ಕಾರಕ (ರೀಏಜೆಂಟ್)ಗಳ ಆಮದಿಗೆ ಇರುವ ಸಮಸ್ಯೆಗಳಿರುವುದನ್ನು ತಾನು ಗಮನಕ್ಕೆ ತೆಗೆದುಕೊಂಡಿರುವುದಾಗಿ ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಕೊರೋನ ವೈರಸ್‌ಗೆ ಹೊಸ ಔಷಧಿಯನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಜೀವರಸಾಯನಶಾಸ್ತ್ರ ಹಾಗೂ ಕಂಪ್ಯೂಟರ್ ವಿಜ್ಞಾನ ಸೇರಿದಂತೆ ವಿವಿಧ ಅಧ್ಯಯನ ಕ್ಷೇತ್ರಗಳ ತಜ್ಞರು ಒಗ್ಗೂಡಿ ಶ್ರಮಿಸುತ್ತಿರುವುದನ್ನು ತಾನು ಅಭಿನಂದಿಸುವುದಾಗಿ ಪ್ರಧಾನಿ ಕಾರ್ಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News