ಕಾಶ್ಮೀರದ ಫೋಟೋ ಜರ್ನಲಿಸ್ಟ್‌ಗಳಿಗೆ ಪುಲಿಟ್ಝರ್: ಸಂಬಿತ್ ಪಾತ್ರಾ ಅಸಮಾಧಾನ

Update: 2020-05-06 18:18 GMT

ಹೊಸದಿಲ್ಲಿ, ಮೇ 6: ಕಾಶ್ಮೀರದ ಮೂವರು ಫೋಟೋಜರ್ನಲಿಸ್ಟ್‌ಗಳಿಗೆ ಪುಲಿಟ್ಝರ್ ಪ್ರಶಸ್ತಿ ದೊರೆತಿರುವುದು ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಜಮ್ಮುಕಾಶ್ಮೀರದಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ತೆಗೆದಿದ್ದ ಅಭೂತಪೂರ್ವ ಛಾಯಾಚಿತ್ರಗಳಿಗಾಗಿ ಜಮ್ಮುಕಾಶ್ಮೀರದ ಫೋಟೋಜರ್ನಲಿಸ್ಟ್‌ಗಳಾದ ಚನ್ನಿ ಆನಂದ್, ಕಾಶ್ಮೀರದ ದಾರ್ ಯಾಸಿನ್ ಹಾಗೂ ಮುಖ್ತಾರ್ ಖಾನ್ ಅವರಿಗೆ ಮಂಗಳವಾರ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಲಭಿಸಿತ್ತು.

‘‘ಸ್ವಾತಂತ್ರ್ಯ ರದ್ದುಗೊಂಡ ಹಾಗೂ ಸಂವಹನ ನಿಷೇಧಿಸಲ್ಪಟ್ಟ ವಿವಾದಿತ ಪ್ರಾಂತವಾದ ಕಾಶ್ಮೀರದ ಜನಜೀವನದ ಆಘಾತಕಾರಿ ಛಾಯಾಚಿತ್ರಗಳನ್ನು ತೆಗೆದಿರುವುದಕ್ಕಾಗಿ ಈ ಮೂವರು ಫೋಟೋಜರ್ನಲಿಸ್ಟ್‌ಗಳನ್ನು ಅಭಿನಂದಿಸುತ್ತೇವೆ’’ ಎಂದು ಪುಲಿಟ್ಝರ್ ಪ್ರಶಸ್ತಿ ಮಂಡಳಿ ಹೇಳಿಕೆ ನೀಡಿರುವುದು ವಿವಾದದ ಕಿಡಿಯನ್ನು ಹೊತ್ತಿಸಿದೆ.

ಪ್ರಶಸ್ತಿ ವಿಜೇತ ಕಾಶ್ಮೀರದ ಫೋಟೋಜರ್ನಲಿಸ್ಟ್‌ಗಳನ್ನು ಪ್ರಶಂಶಿಸಿದ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ವಿರುದ್ಧ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ವಾಗ್ದಾಳಿ ನಡೆಸಿದ್ದಾರೆ. ಈ ಮೂವರು ಫೋಟೋಜರ್ನಲಿಸ್ಟ್‌ಗಳ ಪ್ರಶಸ್ತಿ ಪುರಸ್ಕೃತ ಚಿತ್ರಗಳು ಕಾಶ್ಮೀರದ ಜನತೆಯ ಭಾರತ ವಿರೋಧಿ ಭಾವನೆಗಳನ್ನು ಬಿಂಬಿಸುತ್ತವೆ ಎಂದು ಪಾತ್ರಾ ಕಿಡಿಕಾರಿದ್ದಾರೆ.

‘‘ಆತ್ಮೀಯ ರಾಹುಲ್ ಗಾಂಧೀಜೀ, ನೀವು ಛಾಯಾಚಿತ್ರಕ್ಕಾಗಿ ಪುಲಿಟ್ಝರ್ ಪ್ರಶಸ್ತಿ ಪಡೆದ ಧಾರ್ ಅವರನ್ನು ನೀವು ಅಭಿನಂದಿಸಿದ್ದೀರಿ. ಅಂತಹ ಒಂದು ಛಾಯಾಚಿತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ. ಅದರ ಚಿತ್ರಬರಹದಲ್ಲಿ ಭಾರತ ಆಕ್ರಮಿತ ಕಾಶ್ಮೀರ ಎಂದು ಉಲ್ಲೇಖಿಸಲಾಗಿದೆ. ಶ್ರೀಮಾನ್ ರಾಹುಲ್, ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ತಾನೇ?’’ ಎಂದವರು ಪಾತ್ರಾ ಪ್ರಶ್ನಿಸಿದ್ದಾರೆ

ಆದರೆ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರಾದ ಚನ್ನಿ ಆನಂದ್ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಈ ಬಗ್ಗೆ ಮಾತನಾಡುವುದು ನನಗೆ ಬೇಕಾಗಿಲ್ಲ. ನಾವು ಪತ್ರರ್ತರು ಹಾಗೂ ನಮ್ಮ ವೃತ್ತಿಪರ ಉದ್ಯೋಗವನ್ನು ನಡೆಸಿಕೊಂಡು ಹೋಗುವುದಷ್ಟೇ ನಮ್ಮ ಕೆಲಸ’’ ಎಂದವರು ಹೇಳಿದ್ದಾರೆ. ಪ್ರಶಸ್ತಿ ದೊರೆತಿರುವುದಕ್ಕೆ ನನಗೆ ಸಂತಸ ಹಾಗೂ ರೋಮಾಂಚನವಾಗಿದೆ. ನನ್ನ ಕುಟುಂಬಕ್ಕೂ ಸಂತೋಷವಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News