ಮಹಾರಾಷ್ಟ್ರ: ಗೂಡ್ಸ್ ರೈಲು ಹರಿದು 16 ವಲಸೆ ಕಾರ್ಮಿಕರ ಸಾವು

Update: 2020-05-08 16:53 GMT

ಮುಂಬೈ, ಮೇ 8: ತಮ್ಮ ಮನೆಗಳಿಗೆ ವಾಪಸ್ ತೆರಳಲು ನಡೆದು ಸುಸ್ತಾಗಿ ರೈಲ್ವೆ ಹಳಿಗಳ ಮೇಲೆಯೇ ನಿದ್ರಿಸಿದ್ದ ವಲಸೆ ಕಾರ್ಮಿಕರ ಮೇಲೆ ಸರಕು ಸಾಗಣೆ ರೈಲು ಹರಿದ ಘೋರ ದುರಂತ ಶುಕ್ರವಾರ ಬೆಳಗಿನ ಜಾವ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಸಂಭವಿಸಿದೆ.

ಪರ್ಭನಿ-ಮನ್ಮಾಡ್ ವಿಭಾಗದ ಬದ್ನಾಪುರ-ಕರ್ಮಾಡ್ ರೈಲು ನಿಲ್ದಾಣಗಳ ನಡುವೆ ಸಂಭವಿಸಿದ ಈ ಭೀಕರ ಅವಘಡದಲ್ಲಿ 16 ಕಾರ್ಮಿಕರು ಮೃತಪಟ್ಟಿದ್ದಾರೆ. ಗುಂಪಿನಲ್ಲಿದ್ದ 20 ಜನರ ಪೈಕಿ ಬದುಕುಳಿದವರಲ್ಲಿ ಮೂವರು ತೀವ್ರ ಆಘಾತಕ್ಕೊಳಗಾಗಿದ್ದರೆ,ಗಂಭೀರವಾಗಿ ಗಾಯಗೊಂಡಿರುವ ಇನ್ನೋರ್ವನನ್ನು ಔರಂಗಾಬಾದ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 ತವರು ರಾಜ್ಯ ಮಧ್ಯಪ್ರದೇಶಕ್ಕೆ ಕಾಲ್ನಡಿಗೆಯಿಂದ ಮರಳುತ್ತಿದ್ದ ಈ ಕಾರ್ಮಿಕರು ಜಾಲ್ನಾದ ಸ್ಟೀಲ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೊದಲು ಭುಸಾವಳ ತಲುಪಲು ಉದ್ದೇಶಿಸಿದ್ದ ಈ ವಲಸೆ ಕಾರ್ಮಿಕರು 157 ಕಿ.ಮೀ.ದೂರದ ಜಾಲ್ನಾದಿಂದ ಅಲ್ಲಿಗೆ ನಡೆದುಕೊಂಡು ಹೊರಟಿದ್ದರು. ರೈಲು ಹಳಿಯಲ್ಲಿ ನಡೆದು ಸುಸ್ತಾಗಿದ್ದ ಅವರು ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ರೈಲುಗಳ ಸಂಚಾರವಿರುವುದಿಲ್ಲ ಎಂದು ಭಾವಿಸಿ ಹಳಿಗಳ ಮೇಲೆಯೇ ಮಲಗಿ ನಿದ್ರೆಗೆ ಜಾರಿದ್ದರು. ನಾಲ್ವರು ಮಾತ್ರ ಸಮೀಪದ ಬಯಲು ಜಾಗದಲ್ಲಿ ಮಲಗಿದ್ದರು. ನಸುಕಿನ 5:15ರ ಸುಮಾರಿಗೆ ಸರಕು ಸಾಗಣೆ ರೈಲು ಬಂದಿದ್ದನ್ನು ನೋಡಿದ ಬಯಲಿನಲ್ಲಿದ್ದವರು ಹಳಿಗಳ ಮೇಲಿದ್ದವರನ್ನು ಎಬ್ಬಿಸಲು ಪ್ರಯತ್ನಿಸಿದ್ದರು. ಆದರೆ ಗಾಢನಿದೆಯಲ್ಲಿದ್ದ 16 ದುರ್ದೈವಿಗಳಿಗೆ ಅವರ ಕೂಗು ಕೇಳಿಸಿರಲಿಲ್ಲ. ರೈಲು ಅವರ ಮೇಲೆಯೇ ಹರಿದಿದೆ.

ಮೃತರ ಛಿದ್ರವಿಚ್ಛಿದ್ರ ಶವಗಳು,ಚಪ್ಪಲಿಗಳು ಮತ್ತು ಸೊತ್ತುಗಳು ಎಲ್ಲೆಂದರಲ್ಲಿ ಹರಡಿ ಬಿದ್ದಿದ್ದವು. ಅವರು ತಮ್ಮೊಂದಿಗೆ ತಂದಿದ್ದ ರೊಟ್ಟಿಗಳು ಹಳಿಗಳ ಮೇಲೆ ಚದುರಿ ಬಿದ್ದಿದ್ದವು. ಈ ಗುಂಪಿನಲ್ಲಿ ಮಕ್ಕಳು ಇದ್ದಿರಲಿಲ್ಲ ಎನ್ನಲಾಗಿದೆ.

‘ಹಳಿಗಳಲ್ಲಿ ವಲಸೆ ಕಾರ್ಮಿಕರು ಮಲಗಿದ್ದನ್ನು ಗಮನಿಸಿದ್ದ ರೈಲು ಚಾಲಕ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದ್ದನಾದರೂ ಅದು ಸಾಧ್ಯವಾಗಿರಲಿಲ್ಲ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ’ಎಂದು ರೈಲ್ವೆ ಸಚಿವಾಲಯವು ಟ್ವೀಟಿಸಿದೆ.

ಈ ದುರಂತದ ಬಗ್ಗೆ ಸಂತಾಪವನ್ನು ವ್ಯಕ್ತಪಡಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತನಾಡಿ,ಮೃತ ಕಾರ್ಮಿಕರ ಕುಟುಂಬಗಳಿಗೆ ನೆರವು ಕೋರಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ಐದು ಲ.ರೂ. ಪರಿಹಾರವನ್ನು ಅವರು ಘೋಷಿಸಿದ್ದಾರೆ.

ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಇಂದರಲಾಲ್ ಧುರ್ವೆ(20),ಉಮರಿಯಾ ಜಿಲ್ಲೆಯ ವೀರೇಂದ್ರ ಸಿಂಗ್(27) ಮತ್ತು ಶಹದೋಳ್ ಜಿಲ್ಲೆಯ ಶಿವಮಾನ ಸಿಂಗ್(27) ತೀವ್ರ ಆಘಾತಕ್ಕೊಳಗಾಗಿದ್ದರೆ,ಗಾಯಾಳುವನ್ನು ಖಜೇರಿ ಜಿಲ್ಲೆಯ ಸಜ್ಜನ ಸಿಂಗ್ ಎಂದು ಗುರುತಿಸಲಾಗಿದೆ.

ಗಾಯಾಳು ಕಾರ್ಮಿಕರ ಚಿಕಿತ್ಸೆಗೆ ಸಂಬಂಧಿಸಿದಂತೆ ವ್ಯವಸ್ಥೆಗಳಿಗಾಗಿ ಚೌಹಾಣ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ಸಂಪರ್ಕದಲ್ಲಿದ್ದಾರೆ ಎಂದು ಮಧ್ಯಪ್ರದೇಶದಲ್ಲಿ ಅಧಿಕಾರಿಗಳು ತಿಳಿಸಿದರು.

ಹಲವಾರು ರಾಜ್ಯಗಳು ತುರ್ತು ಕಾರಣಗಳಿಂದಾಗಿ ತಮ್ಮ ಮನೆಗೆ ಮರಳುವ ಅಗತ್ಯವಿರುವ ವಲಸೆ ಕಾರ್ಮಿಕರಿಗಾಗಿ ‘ಶ್ರಮಿಕ್’ ವಿಶೇಷ ರೈಲುಗಳನ್ನು ಓಡಿಸುತ್ತಿವೆಯಾದರೂ,ಹಲವಾರು ಕಾರ್ಮಿಕರು ನಡೆದುಕೊಂಡೇ ಹೋಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News