1000 ವಲಸೆ ಕಾರ್ಮಿಕರು - ಪೊಲೀಸರ ನಡುವೆ ಸಂಘರ್ಷ

Update: 2020-05-09 17:34 GMT
file photo (PTI)

ಸೂರತ್: ವಾಪಾಸು ಮನೆಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಕನಿಷ್ಠ 1000 ಮಂದಿ ವಲಸೆ ಕಾರ್ಮಿಕರು ಶನಿವಾರ ಪೊಲೀಸರ ಜತೆ ಸಂಘರ್ಷಕ್ಕೆ ಇಳಿದ ಘಟನೆ ಗುಜರಾತ್‌ನ ಸೂರತ್ ನಗರದಲ್ಲಿ ಸಂಭವಿಸಿದೆ.

ಗಲಭೆ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ 60 ಮಂದಿಯನ್ನು ಬಂಧಿಸಲಾಗಿದ್ದು, ಮತ್ತೆ 60ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಈ ವಾರದ ಆರಂಭದಲ್ಲೂ ನಗರದಲ್ಲಿ ಇಂಥದ್ದೇ ಘರ್ಷಣೆ ನಡೆದಿತ್ತು. ಪೊಲೀಸರತ್ತ ಉದ್ರಿಕ್ತ ವಲಸೆ ಕಾರ್ಮಿಕರು ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು.

ಶನಿವಾರ ಹಜೀರಾ ಕೈಗಾರಿಕಾ ಪ್ರದೇಶದ ಬಳಿಯ ಮೋರಾ ಗ್ರಾಮದಲ್ಲಿ ಜಮಾಯಿಸಿದ ಸಾವಿರಾರು ಮಂದಿ ವಲಸೆ ಕಾರ್ಮಿಕರು, ಉತ್ತರ ಪ್ರದೇಶ, ಬಿಹಾರ, ಒಡಿಶಾ ಸೇರಿದಂತೆ ತಮ್ಮ ತಮ್ಮ ತವರು ರಾಜ್ಯಗಳಿಗೆ ವಾಪಾಸು ತೆರಳು ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಬೆಳಿಗ್ಗೆ 8 ಗಂಟೆಯ ಸುಮಾರಿಗೆ 1000ಕ್ಕೂ ಹೆಚ್ಚು ಕಾರ್ಮಿಕರು ಜಮಾಯಿಸಿದ್ದರು. ಅವರನ್ನು ಚದುರಿಸಲು ಲಘು ಪ್ರಹಾರ ನಡೆಸಬೇಕಾಯಿತು ಎಂದು ಸೂರತ್ ಜಂಟಿ ಪೊಲೀಸ್ ಆಯುಕ್ತ ಡಿ.ಎನ್.ಪಟೇಲ್ ಹೇಳಿದ್ದಾರೆ.

ಗುಜರಾತ್‌ನಲ್ಲಿ ಸೂರತ್ ವಲಸೆ ಕಾರ್ಮಿಕರ ಕೇಂದ್ರವಾಗಿದ್ದು, ಜವಳಿ, ವಿದ್ಯುತ್ ಮಗ್ಗ ಮತ್ತು ನಿರ್ಮಾಣ ಸ್ಥಳಗಳಲ್ಲಿ ಬಹುತೇಕ ಮಂದಿ ಉದ್ಯೋಗದಲ್ಲಿದ್ದಾರೆ. ದೇಶಾದ್ಯಂತ ಕೊರೋನಾ ವಿರುದ್ಧದ ಹೋರಾಟದ ಅಂಗವಾಗಿ ಮಾರ್ಚ್ 25ರಂದು ಲಾಕ್‌ಡೌನ್ ಘೋಷಿಸಲಾಗಿದ್ದು, ಮೇ 17ರವರೆಗೆ ಅದನ್ನು ವಿಸ್ತರಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ. ಈ ಪೈಕಿ ಹಲವು ಮಂದಿ ಕಾಲ್ನಡಿಗೆಯಲ್ಲೇ ಹುಟ್ಟೂರಿಗೆ ಪಯಣ ಆರಂಭಿಸಿದ್ದಾರೆ. ಕೆಲವರು ಮಾರ್ಗಮಧ್ಯದಲ್ಲೇ ಮೃತಪ್ಟಟಿದ್ದು, ರಾಜ್ಯಗಳ ಗಡಿಗಳು ಮುಚ್ಚಿರುವುದರಿಂದ ಮತ್ತೆ ಕೆಲವರ ಸ್ಥಿತಿ ಅತಂತ್ರವಾಗಿದೆ.

ವಲಸೆ ಕಾರ್ಮಿಕರು ಮನೆಗಳಿಗೆ ತೆರಳಲು ಅನುವಾಗುವಂತೆ ಕೇಂದ್ರ ಸರ್ಕಾರ ಶ್ರಮಿಕ್ ಸ್ಪೆಷಲ್ ರೈಲುಗಳನ್ನು ಓಡಿಸಿದೆ. ಆದಾಗ್ಯೂ ಹಲವು ಮಂದಿ ಮನೆಗೆ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದಾರೆ. ಶುಕ್ರವಾರ ಮಹಾರಾಷ್ಟ್ರದಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದ 16 ಕಾರ್ಮಿಕರು ರೈಲು ಹಳಿ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾಗ ಸರಕು ಸಾಗಾಣಿಕೆ ರೈಲು ಇವರ ಮೇಲೆ ಹರಿದು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News